ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದಲ್ಲಿ ಬಲಗೊಳ್ಳುತ್ತಿರುವ ಜಾತಿವ್ಯವಸ್ಥೆ

Last Updated 24 ಜನವರಿ 2018, 7:09 IST
ಅಕ್ಷರ ಗಾತ್ರ

ಸಾಗರ: ಆಧುನಿಕತೆಯ ಇಂದಿನ ಯುಗದಲ್ಲೂ ಸಮಾಜದಲ್ಲಿ ಜಾತಿ ವ್ಯವಸ್ಥೆ ಬಲಗೊಳ್ಳುತ್ತಿರುವುದು ವಿಷಾದದ ಸಂಗತಿ. ಜಾತಿ ವ್ಯವಸ್ಥೆಯ ಬದಲಾವಣೆಗೆ ಶಿವಯೋಗಿ ಸಿದ್ಧರಾಮೇಶ್ವರ, ಅಂಬಿಗರ ಚೌಡಯ್ಯ ಅವರಂತಹ ದಾರ್ಶನಿಕರ ಚಿಂತನೆಗಳು ದಾರಿದೀಪವಾಗಿವೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಇಲ್ಲಿನ ಸಾಮರ್ಥ್ಯಸೌಧದಲ್ಲಿ ತಾಲ್ಲೂಕು ಆಡಳಿತ ಮಂಗಳವಾರ ಏರ್ಪಡಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಕಾರಣಕ್ಕೆ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನೂ ಬಲವಾಗಿದೆ. ಇಂತಹ ವೈವಿಧ್ಯವನ್ನು ಪ್ರಪಂಚದ ಯಾವ ರಾಷ್ಟ್ರದಲ್ಲೂ ಕಾಣಲು ಸಿಗುವುದಿಲ್ಲ. ಹೀಗೆ ನಾವು ವೈವಿಧ್ಯತೆ ಕಾಪಾಡಿಕೊಳ್ಳುವಲ್ಲಿ ಬಸವಣ್ಣ, ಬುದ್ದ, ಅಂಬೇಡ್ಕರ್ ಸೇರಿದಂತೆ ಹಲವು ದಾರ್ಶನಿಕರ ಕೊಡುಗೆ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ಶಿವಯೋಗಿ ಸಿದ್ದರಾಮೇಶ್ವರ ಅವರ ಕುರಿತು ಉಪನ್ಯಾಸ ನೀಡಿದ ಆನಂದಪುರಂನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಹಾ.ಉಮೇಶ್ ಸೊರಬ, ‘ಸಮಾಜ ಸುಧಾರಣೆಯೇ ಸಿದ್ದರಾಮೇಶ್ವರ ಅವರ ವಚನಗಳ ಮೂಲ ಆಶಯವಾಗಿದೆ. ಅವರು ರಚಿಸಿರುವ 68 ಸಾವಿರ ವಚನಗಳ ಪೈಕಿ 1378 ವಚನಗಳು ಮಾತ್ರ ಬೆಳಕಿಗೆ ಬಂದಿವೆ. ಉಳಿದ ವಚನಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ’ ಎಂದರು.

ಅಂಬಿಗರ ಚೌಡಯ್ಯ ಅವರ ಕುರಿತು ಉಪನ್ಯಾಸ ನೀಡಿದ ಇತಿಹಾಸ ತಜ್ಞ ಡಾ.ಕೆಳದಿ ವೆಂಕಟೇಶ್‌ ಜೋಯಿಸ್, ‘ಧರ್ಮ ಎಂದರೆ ದಯೆ ಎಂದು ಜಗತ್ತಿಗೆ ಸಾರಿದ ಅಂಬಿಗರ ಚೌಡಯ್ಯ ಧರ್ಮದ ಕುರಿತು ಇದ್ದ ಸಂಕುಚಿತ ಭಾವನೆಯನ್ನು ಹೋಗಲಾಡಿಸಿ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಶ್ರಮಿಸಿದ ವ್ಯಕ್ತಿ’ ಎಂದು ಬಣ್ಣಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ನಗರಸಭೆ ಅಧ್ಯಕ್ಷೆ ಬೀಬಿ ಫಸಿಯಾ, ಉಪಾಧ್ಯಕ್ಷೆ ಸರಸ್ವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್‌, ಸದಸ್ಯರಾದ ಪರಿಮಳ, ಗಣಾಧೀಶ್‌, ರವಿ ಜಂಬಗಾರು, ಗಂಗಾಮತ ಸಮಾಜದ ಅಧ್ಯಕ್ಷ ಜಿ.ಧರ್ಮರಾಜ್‌, ಭೋವಿ
ಸಮಾಜದ ಅಧ್ಯಕ್ಷ ಎಲ್‌.ಚಂದ್ರಪ್ಪ, ತಹಶೀಲ್ದಾರ್ ತುಷಾರ್‌ ಬಿ.ಹೊಸೂರು ಹಾಜರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಲಿಂಗಪ್ಪ ಸ್ವಾಗತಿಸಿದರು. ನಗರಸಭೆ ಪೌರಾಯುಕ್ತ ಎಸ್‌.ರಾಜು ವಂದಿಸಿದರು. ವಿ.ಟಿ.ಸ್ವಾಮಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT