ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರದಲ್ಲಿ ಅರಳಿದ ಮಂಡಗದ್ದೆ ಸರ್ಕಾರಿ ಶಾಲೆ

Last Updated 24 ಜನವರಿ 2018, 7:12 IST
ಅಕ್ಷರ ಗಾತ್ರ

ಶಿವಮೊಗ್ಗ: ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವ ದಿನಮಾನಗಳಲ್ಲಿ ಇಲ್ಲೊಂದು ಸರ್ಕಾರಿ ಶಾಲೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೇ ಸವಾಲೊಡ್ಡುವಂತಿದೆ. ಪೋಷಕರು ಹಾಗೂ ವಿದ್ಯಾರ್ಥಿಗಳು ಇಲ್ಲಿನ ಶೈಕ್ಷಣಿಕ ವಾತಾವರಣಕ್ಕೆ ಮಾರು ಹೋಗಿದ್ದಾರೆ.

ಒಂದು ಕಾಲದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ ಮೂಲಸೌಕರ್ಯಗಳಿಂದ ವಂಚಿತವಾಗಿದ್ದ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಸರ್ಕಾರಿ ಪ್ರೌಢಶಾಲೆ ಇದೀಗ ಖಾಸಗಿ ಶಾಲೆ ಮೀರಿಸುತ್ತಿದೆ. ಖಾಸಗಿ ಶಾಲೆಗಳ ಮೊರೆಹೋಗುತ್ತಿರುವ ಮಕ್ಕಳು, ಪಾಲಕರು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಬದಲಾಗಿದೆ. ಸರ್ಕಾರಿ ಶಾಲೆ ಅಂದ್ರೆ ಇದಪ್ಪಾ ಅನ್ನೋ ರೀತಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಸುತ್ತಲೂ ಇರುವ ಪ್ರಕೃತಿಯ ಮಡಿಲು ಶಾಲೆಯ ಅಂದ ಹೆಚ್ಚಿಸಿದೆ. ಶಾಲೆ ಆವರಣಕ್ಕೆ ತಂತಿ ಬೇಲಿ, ನಡುವೆ ಸುಸಜ್ಜಿತ ಕ್ರೀಡಾಂಗಣ, 50 ಜಾತಿಯ 500ಕ್ಕೂ ಹೆಚ್ಚು ಹೂ–ಹಣ್ಣಿನ ಗಿಡಗಳನ್ನು ನೆಡಲಾಗಿದೆ. ನಿರಂತರ ನೀರಿನ ವ್ಯವಸ್ಥೆ, ಹಸಿರು ಹುಲ್ಲು, ಕೈತೋಟ, ಶಾಲೆ ಕಟ್ಟಡಕ್ಕೆ ಸುಣ್ಣ ಬಣ್ಣ, ಸುಸಜ್ಜಿತ ಗ್ರಂಥಾಲಯ, ಊಟದ ಕೊಠಡಿ, ಕಂಪ್ಯೂಟರ್ ಮೇಜು, ಅಲ್ಲಲ್ಲಿ ನಿಸರ್ಗದ ಪೇಂಟಿಂಗ್ ಹೀಗೆ ಹತ್ತು ಹಲವು ರೀತಿಯ ಬದಲಾವಣೆಗಳು ಶಾಲೆಯ
ಅಂದವನ್ನು ಹೆಚ್ಚಿಸಿವೆ. ಶಾಲೆಯಲ್ಲಿ ಉಂಟಾಗಿರುವ ಬದಲಾವಣೆಗಳು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸಂಚಲನ ಮೂಡಿಸಿದೆ.

ಬದಲಾವಣೆಯ ಹಿಂದೆ ಸಾಮಾನ್ಯ ವ್ಯಕ್ತಿ: ಇಷ್ಟೆಲ್ಲಾ ಬದಲಾವಣೆಗೆ ಕಾರಣವಾಗಿದ್ದು ಒಬ್ಬ ಸಾಮಾನ್ಯ ವ್ಯಕ್ತಿ. ತೀರ್ಥಹಳ್ಳಿ ತಾಲ್ಲೂಕು ಮಂಡಗದ್ದೆ ಸಮೀಪ ಕುಳ್ಳುಂಡೆ ಗ್ರಾಮದ ನಾಗರಾಜ್‌ ಸರ್ಕಾರಿ ಶಾಲೆಗಳಿಗೆ ಜೀವ ತುಂಬುತ್ತಿರುವ ವ್ಯಕ್ತಿ. ಪ್ರಚಾರದ ಹಂಗಿಲ್ಲದೇ ತೆರಮರೆಯಲ್ಲೇ ಸ್ವಂತ ಹಣದಿಂದ ಶಾಲೆಯ ಜೀರ್ಣೋದ್ಧಾರಕ್ಕೆ ಶ್ರಮಿಸಿದ್ದಾರೆ. ಶಾಲೆಯ ಬದಲಾವಣೆ ಗಮನಿಸಿದ ಇಲ್ಲಿನ ವಿಶ್ವನಾಥ ಭಟ್‌ ಶಾಲೆಗೆ ವಿದ್ಯುತ್ ಸೌಲಭ್ಯ ಕಲ್ಪಿಸಿದ್ದಾರೆ.

ಕೇವಲ ಮಂಡಗದ್ದೆ ಸರ್ಕಾರಿ ಪ್ರೌಢಶಾಲೆ ಅಷ್ಟೇ ಅಲ್ಲ. ಹಳಗ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಂಡಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಣನಗದ್ದೆಯ ಅಂಗನವಾಡಿ, ಮತ್ತಿಗಾರು ಸರ್ಕಾರಿ ಪ್ರೌಢಶಾಲೆ ನಾಗರಾಜ್ ಅವರ ಇಚ್ಛಾಶಕ್ತಿಯಿಂದ ಮರುಜೀವ ಪಡೆದುಕೊಂಡಿವೆ.

ಮಂಡಗದ್ದೆ ಸರ್ಕಾರಿ ಆಸ್ಪತ್ರೆ ಸುತ್ತಮುತ್ತ ಅಂಜೂರ, ಮಾವು, ಹಲಸು, ಪೇರಲೆ, ಕಿತ್ತಲೆ, ಮೂಸಂಬಿ, ನಿಂಬೆ ಹೀಗೆ ಹತ್ತು ಹಲವು ಗಿಡಗಳನ್ನು ನೆಡಲಾಗಿದೆ. ಈಗ ಕೆಲ ಮರಗಳು ಫಲ ನೀಡಲಾರಂಭಿಸಿವೆ. ಇಷ್ಟೆಲ್ಲಾ ಕಾರ್ಯ ಮಾಡುವ ಇವರು ಎಂದಿಗೂ ತಮ್ಮ ಹೆಸರು ಮುನ್ನೆಲೆಗೆ ತರಲು ಬಯಸುವುದಿಲ್ಲ. ಕೆಲವು ಗ್ರಾಮಸ್ಥರು, ಶಿಕ್ಷಕರು ಹೆಸರು ಹಾಕಲು ಪ್ರಯತ್ನಿಸಿದರೂ ಕುಳ್ಳುಂಡೆ ನಾಗರಾಜ್‌ ವಿರೋಧಿಸುತ್ತಾರೆ. ಇನ್ನೂ ಇವರ ಕಾರ್ಯಕ್ಕೆ ಪತ್ನಿ, ಮಕ್ಕಳು ಸದಾ ಬೆನ್ನೆಲುಬಾಗಿ ನಿಲ್ಲುತ್ತಾರೆ. ಇಷ್ಟೆಲ್ಲಾ ಕೆಲಸಗಳನ್ನು ಮಾಡುವ ಅವರು ಎಂದಿಗೂ ಕೆಲಸಗಾರರಿಗೆ ಹಣ ನೀಡಿ ಸುಮ್ಮನಾಗುವುದಿಲ್ಲ. ಯಾವುದೇ ಕೆಲಸ ಮಾಡಿದರೂ ಕಾರ್ಮಿಕರೊಂದಿಗೆ ಅವರೂ ಕೆಲಸಗಾರರಾಗುತ್ತಾರೆ. ಇದಕ್ಕಾಗಿ ಗುದ್ದಲಿ, ಪಿಕಾಸಿ ಹಿಡಿದು ಬೆವರು ಹರಿಸುತ್ತಾರೆ.

‘ಅವರ ಈ ಕಾರ್ಯ ಇಲ್ಲಿನ ಶಿಕ್ಷಕರ ಮೇಲೂ ಪ್ರಭಾವ ಬೀರಿದೆ. ಮಕ್ಕಳಿಗೆ ಪಾಠ-ಪ್ರವಚನವಲ್ಲದೇ ಸಮಯ ಪ್ರಜ್ಞೆ, ಪರಿಸರ ಕಾಳಜಿ ತುಂಬಿ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕು ಎನ್ನುವ ಮನೋಭಾವ ಶಿಕ್ಷಕರಲ್ಲಿ ವೃದ್ಧಿಯಾಗಿದೆ. ಕಳೆದ ವರ್ಷ ಶಾಲೆಯ ಇತಿಹಾಸದಲ್ಲೇ ಅತಿಹೆಚ್ಚು ಶೇ 92.30 ಫಲಿತಾಂಶ ಬಂದಿದೆ. ಈ ಬಾರಿ ಶೇ 100 ಫಲಿತಾಂಶ ಬರುವ ವಿಶ್ವಾಸವಿದೆ’ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಕೊಟ್ರಪ್ಪ ಜಿ. ಹಿರೇಮಾಗಡಿ.

ಅನಿಲ್‌ ಸಾಗರ್

* * 

ವಿದ್ಯಾರ್ಥಿ ಜೀವನದಲ್ಲಿ ರಾಮಕೃಷ್ಣ ಆಶ್ರಮ ಹಾಗೂ ಆನಂದಮಾರ್ಗದಿಂದ ಆದ ಪ್ರಭಾವವೇ ಈ ಕಾರ್ಯಕ್ಕೆ ಪ್ರೇರಣೆ.
ಕುಳ್ಳುಂಡೆ ನಾಗರಾಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT