ಸಕ್ರಿಯಗೊಂಡ ಸಾಮಾಜಿಕ ಜಾಲತಾಣ..!

7

ಸಕ್ರಿಯಗೊಂಡ ಸಾಮಾಜಿಕ ಜಾಲತಾಣ..!

Published:
Updated:

ವಿಜಯಪುರ: ಮೈಕೊರೆವ ಚಳಿ ತೀವ್ರತೆಯ ಏರಿಳಿತದ ನಡುವೆಯೂ ಚುನಾವಣಾ ಕಾವು ಆರಂಭಗೊಂಡಿದೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಖಾಡ ಸಜ್ಜಾಗುತ್ತಿದೆ.

ಮತದಾರ ಪ್ರಭು ಸೇರಿದಂತೆ ಪ್ರಮುಖ ಪಕ್ಷಗಳ ಕಾರ್ಯಕರ್ತರ ಪಡೆ ಚುನಾವಣೆ ಗುಂಗಿನಿಂದ ಹೊರಗಿದೆ. ಟಿಕೆಟ್‌ ಆಕಾಂಕ್ಷಿಗಳು, ಅವರ ಬೆಂಬಲಿಗ ಪಡೆ ಮಾತ್ರ ಮಕರ ಸಂಕ್ರಮಣ ಮುಗಿಯುತ್ತಿದ್ದಂತೆ, ಮುಖಂಡರ ಮನವೊಲಿಕೆಗೆ ಬೆನ್ನತ್ತಿದೆ.

ಬೆಂಗಳೂರು, ನವ ದೆಹಲಿಯಲ್ಲಿ ರಾಷ್ಟ್ರೀಯ ಪಕ್ಷದ ಮುಖಂಡರ ಭೇಟಿಗೆ ಬಿಜೆಪಿ, ಕಾಂಗ್ರೆಸ್‌ ಮುಖಂಡರು ಮುಂದಾಗಿದ್ದಾರೆ. ಸ್ವವಿವರದ ಮಾಹಿತಿಯನ್ನೊಳಗೊಂಡ ಬಯೋಡಾಟಾವನ್ನು ಪ್ರಮುಖ ನೇತಾರರ ಕಚೇರಿಗೆ, ಟಿಕೆಟ್‌ ಹಂಚಿಕೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿರ್ಣಾಯಕರಿಗೆ, ತಳ ಹಂತದಲ್ಲಿ ಸಮೀಕ್ಷೆ ನಡೆಸುತ್ತಿರುವ ತಂಡಗಳಿಗೆ ತಲುಪಿಸಿ, ತಮ್ಮ ಹೆಸರು ಪ್ರಸ್ತಾಪವಾಗುವಂತೆ ನೋಡಿಕೊಳ್ಳುವ ಚಾಣಾಕ್ಷ್ಯ ನಡೆಯನ್ನು ಅನುಸರಿಸಿದ್ದಾರೆ.

ಕೇಂದ್ರ–ರಾಜ್ಯ ಗುಪ್ತದಳದ ಅಧಿಕಾರಿಗಳು ಆಗಾಗ್ಗೆ ಸಿದ್ಧಗೊಳಿಸುವ, ರಾಜಕೀಯ ಸ್ಥಿತಿಗತಿಯ ವರದಿಯಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಬೇಕು. ನಮ್ಮ ಪಕ್ಷದ ಆಕಾಂಕ್ಷಿಗಳು, ಹೆಚ್ಚಿನ ಒಲವು ಹೊಂದಿರುವವರ ಪಟ್ಟಿಯಲ್ಲಿ ನಮ್ಮ ಹೆಸರು ಬರಬೇಕು. ಸ್ಥಳೀಯ ವಿದ್ಯಮಾನ ಪಕ್ಷದ ಪ್ರಮುಖರಿಗೆ ಗುಪ್ತಚರ ವರದಿ ಮೂಲಕವೂ ತಲುಪಬೇಕು.

ಇದರ ಜತೆಗೆ ಪಕ್ಷ ನಡೆಸುತ್ತಿರುವ ಆಂತರಿಕ ಸಮೀಕ್ಷೆಯಲ್ಲಿ ಪ್ರಮುಖವಾಗಿ ತಮ್ಮ ಹೆಸರು ಪ್ರಸ್ತಾಪಿತಗೊಳ್ಳಬೇಕು. ಸಮೀಕ್ಷಾ ತಂಡ ಭೇಟಿ ನೀಡಿದ ಎಲ್ಲೆಡೆ ನಮ್ಮ ಹೆಸರೇ ಪ್ರಮುಖವಾಗಿ ಕೇಳಿ ಬರಬೇಕು. ಈ ವರದಿ ಮುಖಂಡರ ಕೈಗೆ ತಲುಪಿದರೆ, ಟಿಕೆಟ್‌ಗೆ ನಡೆಸುವ ಲಾಬಿಯ ಮೊದಲ ಹಂತದ ಯತ್ನದಲ್ಲಿ ಯಶ ದೊರಕಲಿದೆ. ಇದರ ಆಧಾರದಲ್ಲೇ ಮುಂದಿನ ಹಾದಿಯನ್ನು ಸರಳಗೊಳಿಸಿಕೊಳ್ಳಬಹುದು ಎಂಬ ರಾಜಕೀಯ ಮರ್ಮ ಅರಿತಿರುವ ಆಕಾಂಕ್ಷಿಗಳು, ಸಾಮಾಜಿಕ ಜಾಲತಾಣದ ಮೊರೆ ಹೊಕ್ಕಿದ್ದಾರೆ. ಮನೆ ಮನೆಗೂ ಭೇಟಿ ನೀಡಿ, ತಮಗೆ ಬೆಂಬಲ ಸೂಚಿಸುವಂತೆ ಮನವಿ ಮಾಡುತ್ತಿದ್ದಾರೆ.

ಬೆಂಬಲಿಗ ಪಡೆ ಮೂಲಕ ಅಭಿಮಾನಿ ಬಳಗ ರಚಿಸಿಕೊಂಡು, ಮತದಾರರ ಮನ ಸೆಳೆಯುವ ಜತೆಗೆ, ಪಕ್ಷದ ವರಿಷ್ಠರ ಗಮನವನ್ನು ತಮ್ಮತ್ತ ಆಕರ್ಷಿಸಲು ತಂತ್ರಗಾರಿಕೆ ರೂಪಿಸಿಕೊಂಡಿದ್ದಾರೆ. ಕೆಲ ಬೆರಳೆಣಿಕೆ ಆಕಾಂಕ್ಷಿಗಳು ಪ್ರತ್ಯೇಕ ಕಾರ್ಯಾಲಯವನ್ನೇ ಚುನಾವಣೆಗಾಗಿ ಆರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಅನೇಕ ಆಕಾಂಕ್ಷಿಗಳ ಅಭಿಮಾನಿ ಬಳಗ ಕಾರ್ಯಾಚರಿಸುತ್ತಿದ್ದು, ಸದ್ದು ಮಾಡಲಾರಂಭಿಸಿವೆ. ಈ ವಿಷಯದಲ್ಲಿ ಬಿಜೆಪಿ ಮುಖಂಡರು ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌ ಪ್ರಮುಖರು ಹಿಂದುಳಿದಿಲ್ಲ.

ಬಹುತೇಕ ಮುಖಂಡರು ಸಾಮಾಜಿಕ ಜಾಲತಾಣ, ಮನೆ ಮನೆಗೆ ಭೇಟಿ ನೀಡಿ ಪ್ರಚಾರಾಂದೋಲನವನ್ನು ಈಗಾಗಲೇ ಆರಂಭಿಸಿದ್ದಾರೆ. ನಮಗೆ ಟಿಕೆಟ್‌ ಖಾತ್ರಿ. ನಿಮ್ಮ ಆಶೀರ್ವಾದ ಪಡೆಯಲು ಬಂದಿದ್ದೇವೆ. ನಿಮ್ಮ ಮಾತು ಪಡೆದು, ಟಿಕೆಟ್‌ ಯತ್ನ ನಡೆಸೋಣ ಎಂದು ನಿರ್ಧರಿಸಿರುವೆ ಎಂಬ ಮಾತು ನಗರದ ಗಲ್ಲಿ, ಗಲ್ಲಿ, ಗ್ರಾಮೀಣ ಪರಿಸರದ ಹಳ್ಳಿಯ ಓಣಿ ಓಣಿಯಲ್ಲೂ ಮಾರ್ದನಿಸುತ್ತಿವೆ.

ನೂತನ ಮತದಾರರು ಮೊದಲ ಮತ ಚಲಾಯಿಸಲಿಕ್ಕಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಮುಗಿಬಿದ್ದರೆ, ನಕಲಿ ಮತದಾರರನ್ನು ಪತ್ತೆ ಹಚ್ಚಿ, ಪಟ್ಟಿಯಿಂದ ಹೊರ ಹಾಕುವ ಆಯೋಗದ ಕೆಲಸಕ್ಕೆ ವಿವಿಧ ಪಕ್ಷದ ಕಾರ್ಯಕರ್ತರು ಸಾತ್‌ ನೀಡಿದ್ದಾರೆ. ಕೆಲ ಅಭಿಮಾನಿ ಬಳಗಗಳು ತಾವೇ ಮುತುವರ್ಜಿ ವಹಿಸಿಕೊಂಡು ಯುವ ಮತದಾರರ ಸೇರ್ಪಡೆಗೆ ಶ್ರಮಿಸಿವೆ.

* * 

ನಾನು ನಗರಸಭೆ ಸದಸ್ಯನಾಗಿದ್ದಾಗಿನಿಂದಲೂ ಜನಸಂಪರ್ಕ ಕಾರ್ಯಾಲಯ ತೆರೆದಿದ್ದೆ. ಇದೀಗ ಅಭಿಮಾನಿಗಳ ಅಪೇಕ್ಷೆ ಮೇರೆಗೆ ಕಚೇರಿಯನ್ನು ದೊಡ್ಡ ಕಟ್ಟಡಕ್ಕೆ ಸ್ಥಳಾಂತರಿಸಿರುವೆ

ರಾಜಶೇಖರ ಮಗಿಮಠ, ಮಹಾನಗರ ಪಾಲಿಕೆ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry