ಮುಖ್ಯ ಕಾಲುವೆ ಬಿರುಕು: ನ್ಯಾಯಾಂಗ ತನಿಖೆಗೆ ಆಗ್ರಹ

7

ಮುಖ್ಯ ಕಾಲುವೆ ಬಿರುಕು: ನ್ಯಾಯಾಂಗ ತನಿಖೆಗೆ ಆಗ್ರಹ

Published:
Updated:

ಶಹಾಪುರ: ‘ನಾರಾಯಣಪೂರ ಎಡದಂಡೆ ಕಾಲುವೆಯ 61 ಹಾಗೂ 71 ಕಿ.ಮೀ. ಬಳಿ ಬಿರುಕು ಬಿಟ್ಟಿದ್ದು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಪ್ರತಿ ವರ್ಷ ಕಾಲುವೆ ಒಡೆಯುವುದು ಸಾಮಾನ್ಯವಾಗಿದೆ. ಈ ಸಮಸ್ಯೆಯನ್ನು ಪರಿಹರಿಸಬೇಕು’ ಎಂದು ಅಖಂಡ ಕರ್ನಾಟಕ ರೈತ ಸಂಘದ ಮುಖಂಡರು ಮಂಗಳವಾರ ಭೀಮರಾಯನಗುಡಿ ಕೆಬಿಜೆಎನ್ಎಲ್ ನಿಗಮದ ಮುಖ್ಯ ಎಂಜಿನಿಯರ್‌ಗೆ ಕೋರಿದರು.

‘ನೀರಿಗಿಂತಲು ಹೆಚ್ಚು ಹಣ ವೆಚ್ಚ ಮಾಡುತ್ತಿದ್ದರೂ ಸಹ ಶಾಶ್ವತ ಪರಿಹಾರ ಕಂಡು ಹಿಡಿಯಲಾಗುತ್ತಿಲ್ಲ. ಇದರ ಬಗ್ಗೆ ಪ್ರತ್ಯೇಕವಾಗಿ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ರೈತರು ಮನವಿ ಮಾಡಿಕೊಂಡರು.

‘ಐದು ವರ್ಷದ ಹಿಂದೆ ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ₹110 ಕೋಟಿ ವೆಚ್ಚದಲ್ಲಿ ಮುಖ್ಯ ಕಾಲುವೆಯ ನವೀಕರಣ ಕಾಮಗಾರಿ ನಡೆದಿತ್ತು. ಈಗ ಮತ್ತೆ ಎರಡನೇ ಬಾರಿ ಕಾಲುವೆ ಬಿರುಕು ಬಿಟ್ಟಿದೆ. ಅನವಶ್ಯಕವಾಗಿ ಹಣ ಪೋಲು ಅಗುತ್ತಿದೆ. ಶಾಶ್ವತ ಪರಿಹಾರವನ್ನು ಕಂಡು ಹಿಡಿಯಲಾಗುತ್ತಿಲ್ಲ’ ಎಂದು ಅವರು ತಿಳಿಸಿದರು.

‘ಕಾಲುವೆ ಬಿರುಕು ಬಿಟ್ಟ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಮೊಸಳೆ ಕಣ್ಣೀರು ಹಾಕುವ ಕೆಲ ರಾಜಕೀಯ ಮುಖಂಡರು ಇದರಲ್ಲಿ ಶಾಮೀಲಾಗಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಅವರು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅವರು ಆರೋಪಿಸಿದರು.

ಮಲ್ಲಬಾದಿ ಏತ ನೀರಾವರಿ ಯೋಜನೆ ತ್ವರಿಯವಾಗಿ ಅನುಷ್ಠಾನಗೊಳಿಸಬೇಕು. ಬಾಳಕುಂದ್ರಿ ವರದಿ ಪ್ರಕಾರ ಮುಖ್ಯ ಕಾಲುವೆ ಯೋಜನೆ ಅನುಷ್ಠಾನಗೊಳಿಸಿ ರೈತರನ್ನು ಸಂಕಷಟದಿಂದ ಪಾರು ಮಾಡಬೇಕು. ಸಿಂಗನಹಳ್ಳಿ ಗ್ರಾಮದ ಬಳಿ ನಿರ್ಮಿಸಿದ ಸೇತುವೆ ಕಳಪೆಮಟ್ಟದಾಗಿದೆ. ವಿಜಯಪೂರ– ಸಿಂದಗಿ ರಸ್ತೆಯ ಗೋಗಿ ಗ್ರಾಮದ ಬಳಿ ಕೆರೆಯ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಪ್ರಯಾಣಿಕರಿಗೆ ತೊಂದರೆಯಾಗಿದೆ. ತಕ್ಷಣ ಸೇತುವೆ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.

ರೈತ ಸಂಘದ ಸಂಚಾಲಕರಾದ ಮಲ್ಲಣ್ಣ ಪರಿವಾಣ ಗೋಗಿ ಹಾಗೂ ಶರಣಪ್ಪ ಸಲಾದಪುರ, ಬಸಣ್ಣಗೌಡ , ಭೀಮಣ್ಣಗೌಡ ಹುಲಕಲ್, ಚಂದ್ರಶೇಖರ ಬ್ಯಾರಿ, ನಿಂಗಣ್ಣ ವಡಿಗೇರಾ, ಚಂದ್ರಶೇಖರ ಸಲಾದಪೂರ, ಭೀಮಾಶಂಕರ, ಭೀಮಣ್ಣ ಇದ್ದರು.

* * 

ಮುಖ್ಯ ಕಾಲುವೆ ಪದೇ ಪದೇ ಯಾಕೆ ಬಿರುಕು ಬಿಡುತ್ತಿದೆ ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

–ಮಲ್ಲಣ್ಣ ಪರಿವಾಣ ಗೋಗಿ, ಸಂಚಾಲಕ, ರೈತ ಸಂಘ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry