ಗಣರಾಜ್ಯೋತ್ಸವದಂದು ಕೇರಳದ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಮೋಹನ್ ಭಾಗವತ್

7

ಗಣರಾಜ್ಯೋತ್ಸವದಂದು ಕೇರಳದ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಮೋಹನ್ ಭಾಗವತ್

Published:
Updated:
ಗಣರಾಜ್ಯೋತ್ಸವದಂದು ಕೇರಳದ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಮೋಹನ್ ಭಾಗವತ್

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯ ಶಾಲೆಯೊಂದರಲ್ಲಿ ಸ್ವಾತಂತ್ರ್ಯದಿನದಂದು ತ್ರಿವರ್ಣ ಧ್ವಜಾರೋಹಣ ಮಾಡಿದ್ದ ಆರ್‍ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಗಣರಾಜ್ಯೋತ್ಸವದಂದು ಇಲ್ಲಿನ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಲಿದ್ದಾರೆ.

ಶೈಕ್ಷಣಿಕ ಸಂಸ್ಥೆಗಳಲ್ಲಿ ಆ ಸಂಸ್ಥೆಯ ಮುಖ್ಯಸ್ಥರು ಮಾತ್ರ ತ್ರಿವರ್ಣ ಧ್ವಜಾರೋಹಣ ಮಾಡಬೇಕು ಎಂದು ಕೇರಳದ ಎಲ್‍ಡಿಎಫ್ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಪಾಲಕ್ಕಾಡ್‍ನಲ್ಲಿರುವ ಈ ಶಾಲೆ ಸರ್ಕಾರಿ ಶಾಲೆ ಅಲ್ಲದೇ ಇರುವುದರಿಂದ ಸರ್ಕಾರದ ಆದೇಶ ಇಲ್ಲಿ ಪಾಲನೆಯಾಗುವುದಿಲ್ಲ, ಹಾಗಾಗಿ ಮೋಹನ್ ಭಾಗವತ್ ಅವರು ಇಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಪಾಲಕ್ಕಾಡ್ ಜಿಲ್ಲೆಯ ಸಿಬಿಎಸ್‍ಇ ಪಠ್ಯಕ್ರಮ ಹೊಂದಿರುವ ಹೈಯರ್ ಸೆಕೆಂಡರಿ ಶಾಲೆಯಾದ ವ್ಯಾಸ ವಿದ್ಯಾ ಪೀಠಂನಲ್ಲಿ ಭಾಗವತ್ ಧ್ವಜಾರೋಹಣ ಮಾಡಲಿದ್ದಾರೆ. ಈ ಶಾಲೆಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವತ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಪಾಲಕ್ಕಾಡ್ ಘಟಕದ ಅಧ್ಯಕ್ಷ ಇ.ಕೃಷ್ಣದಾಸ್ ಹೇಳಿದ್ದಾರೆ.

ರಾಜ್ಯ ಸರ್ಕಾರ ಆದೇಶಗಳು ಈ ಶಾಲೆಗೆ ಅನ್ವಯಿಸುವುದಿಲ್ಲ. ವ್ಯಾಸ ವಿದ್ಯಾ ಪೀಠ ಖಾಸಗಿ ಶಾಲೆಯಾಗಿದ್ದು, ಸಿಬಿಎಸ್‍ಇ ಪಠ್ಯಕ್ರಮವನ್ನು ಅನುಸರಿಸುತ್ತದೆ ಎಂದು ಕೃಷ್ಣದಾಸ್ ಹೇಳಿದ್ದಾರೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಅಲ್ಲಿನ ಮುಖ್ಯಸ್ಥರು, ವಿಭಾಗದ ಮುಖ್ಯಸ್ಥರು ಮಾತ್ರ ಧ್ವಜಾರೋಹಣ ಮಾಡಬೇಕು ಮತ್ತು ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡಬೇಕು ಎಂದು ಕೇರಳ ಸರ್ಕಾರ ಜನವರಿ 17ರಂದು ಸುತ್ತೋಲೆ ಹೊರಡಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry