ಚಿಂಚೋಳಿ: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಜೋಳದ ಬೆಳೆಗಾರರು

7

ಚಿಂಚೋಳಿ: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಜೋಳದ ಬೆಳೆಗಾರರು

Published:
Updated:
ಚಿಂಚೋಳಿ: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಜೋಳದ ಬೆಳೆಗಾರರು

ಚಿಂಚೋಳಿ: ತಾಲ್ಲೂಕಿನಲ್ಲಿ ಉತ್ತಮ ಹವಾಮಾನದಿಂದ ಪ್ರಸಕ್ತ ವರ್ಷ ಜೋಳದ ಬೆಳೆ ಬಂಪರ್ ಇಳುವರಿ ಬರುವ ನಿರೀಕ್ಷೆಯಲ್ಲಿ ಜೋಳದ ಬೆಳೆಗಾರರು ಇದ್ದಾರೆ. ಪ್ರಸಕ್ತ ವರ್ಷ ಮುಂಗಾರಿನ ಉದ್ದು, ಹೆಸರು, ಸಜ್ಜೆ, ಸೋಯಾ ಹಾಗೂ ತೊಗರಿಯಲ್ಲಿ ಅಲ್ಪಾವಧಿಯ ಬೆಳೆಗಳು ಮಳೆಗೆ ಆಗುತ್ತಿಯಾಗಿದ್ದವು. ಆದರೆ, ಮಿಶ್ರ ಬೆಳೆ ಬೇಸಾಯ ಮಾಡುವುದರಿಂದ ರೈತರನ್ನು ತೊಗರಿ ಬಂಪರ್ ಇಳುವರಿ ಮೂಲಕ ಕೈಹಿಡಿದಿದೆ.

ಅದೇ ರೀತಿ ಪ್ರಸಕ್ತ ವರ್ಷದ ಮಳೆಗಾಲ ಕೊನೆಯ ಅವಧಿಯಲ್ಲಿ ಹದವಾದ ಮಳೆ ಸುರಿದಿದ್ದರಿಂದ ಜೋಳದ ಬಿತ್ತನೆ ಕೆಲವು ಕಡೆ ವಿಳಂಬವಾಗಿದೆ. ಆದರೆ, ಬೆಳೆಗೆ ಪೂರಕ ವಾತಾವರಣ ಲಭಿಸಿದ್ದರಿಂದ ಬೆಳೆ ಬಂಪರ್ ಇಳುವರಿ ಬರುವುದು ಬಹುತೇಕ ಖಚಿತವಾಗಿದೆ.

ತಾಲ್ಲೂಕಿನಲ್ಲಿ ಚಂದ್ರಂಪಳ್ಳಿ ನೀರಾವರಿ ಯೋಜನೆ, ಕೆಳದಂಡೆ ಮುಲ್ಲಾಮಾರಿ ಯೋಜನೆ ಹಾಗೂ ಸಣ್ಣ ನೀರಾವರಿ ಇಲಾಖೆಯ 20ಕ್ಕೂ ಹೆಚ್ಚು ಕೆರೆಗಳು ಕೊಟಗಾ, ಕನಕಪುರ, ಬಾವನಗುಡಿ, ಗೌಡನಹಳ್ಳಿ, ಚಂದಾಪುರ, ನೀಮಾಹೊಸಳ್ಳಿ, ಹಲಚೇರಾ, ಗರಕಪಳ್ಳಿ ಮೊದಲಾದ ಬಾಂದಾರುಗಳಿಂದ ರೈತರು ಬೆಳೆಗೆ ನೀರು ಪಡೆಯಬಹುದಾಗಿದೆ.

ಪ್ರಸ್ತುತ ಒಳ ಬೇಸಾಯದ ರೈತರ ಜೋಳದ ಬೆಳೆಯೂ ಉತ್ತಮವಾಗಿದೆ. ಆದರೆ, ನೀರು ಬಿಟ್ಟಿದ್ದ ಬೆಳೆ ಬೊಗಸೆ ಗಾತ್ರದ ಬುತ್ತಿಬುತ್ತಿ ಚಂಡಿನಂತಹ ತೆನೆ ಬಿಟ್ಟು ಕಂಗೊಳಿಸುತ್ತಿದೆ. ಸಾಧಾರಣ ಭೂಮಿಯಲ್ಲಿ ಜೋಳದ ಬೆಳೆ ಉತ್ತಮ ಬೆಳವಣಿಗೆ ಕಂಡು ತೆನೆಬಿಟ್ಟು ಕಾಳು ಹಾಲು ತುಂಬಿಕೊಳ್ಳುವ ಹಂತದಲ್ಲಿದೆ.

‘ತಾಲ್ಲೂಕಿನಲ್ಲಿ 35,378 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಜೋಳದ ಬೇಸಾಯವಿದ್ದು, ನೀರಾವರಿ ಹಾಗೂ ಮಳೆ ಆಶ್ರಯದಲ್ಲೂ ಬೆಳೆಯಾಗುತ್ತದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ಎಸ್.ಎಚ್.ಗಡಗಿಮನಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ತಾಲ್ಲೂಕಿನಲ್ಲಿ ಮಾಲದಂಡಿ, ಬಿಳಿಸುಳಿ, ಎಂ.35-1, ಸೇರಿದಂತೆ ವಿವಿಧ ತಳಿಯ ಜೋಳದ ಬೇಸಾಯ ಕಾಣಬಹುದಾಗಿದೆ.

ಚಂದ್ರಂಪಳ್ಳಿ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಬೆಳೆಗಳಿಗೆ ತುಂಬಾ ಅನುಕೂಲವಾಗಿದೆ. ನಮ್ಮ ಎಕರೆಗೆ 3 ಕ್ವಿಂಟಲ್ ಬೆಳೆಯುತ್ತಿರಲಿಲ್ಲ. ಈಗ 10 ಕ್ವಿಂಟಲ್ ಬೆಳೆಯುತ್ತಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ದಿವಂಗತ ದಿ.ವೀರೇಂದ್ರ ಪಾಟೀಲರೇ ಕಾರಣ’ ಎಂದು ಸುಭಾಷ್ ಅಬಕಾರಿ ಸ್ಮರಿಸಿದರು.

‘ಸದ್ಯ ಬಹುತೇಕ ಬೆಳೆ ತೆನೆಬಿಟ್ಟು ಕಾಳುಕಟ್ಟುವ ಹಂತದಲ್ಲಿ ಮುಂದಿನ ಎರಡು ವಾರದಲ್ಲಿ ಸಿಹಿತೆನೆ(ಶೀತನಿ) ಸುಟ್ಟು ತಿನ್ನಲು ಬರುತ್ತದೆ. ಬೆಳೆಗೆ ಹಕ್ಕಿಗಳು ಹಾಗೂ ಕಾಡುಹಂದಿಯ ಕಾಟ ಹೆಚ್ಚಾಗಿದ್ದು, ಹಗಲು ಹಾಗೂ ಇರುಳು ಹೊಳದಲ್ಲಿಯೇ ಉಳಿದು ಡಬ್ಬಿ ಬಾರಿಸುತ್ತ ಕುಳಿತುಕೊಳ್ಳುವಂತಾಗಿದೆ’ ಎಂದು ಗೋಳು ತೋಡಿಕೊಂಡರು.

‘ಪಟಾಕಿ ಹೊಡೆದರೂ ಕಾಡುಹಂದಿಗಳು ಹತೋಟಿಗೆ ಬರುತ್ತಿಲ್ಲ. ಬೆಳೆಯಲ್ಲಿ ಮಂಚಿಕೆ ಹಾಕಿ ಅದರ ಮೇಲೆ ಕುಳಿತು ಬೆಳೆ ಕಾಯುವುದು ಅನಿವಾರ್ಯವಾಗಿದೆ. ನನ್ನ ಸಹೋದರ ಹಾಗೂ ನನ್ನದು ಸೇರಿ 10 ಎಕರೆ ಬೆಳೆಯಲ್ಲಿ ಬಿಳಿಸುಳಿ ತಳಿಯ ಜೋಳ ಬಿತ್ತನೆ ನಡೆಸಲಾಗಿದ್ದು, ನಾಲ್ಕು ಬಾರಿ ಡೀಸೆಲ್ ಎಂಜಿನ್‌ನಿಂದ ಬೆಳೆಗೆ ನೀರುಣಿಸಿದ್ದೇವೆ. ಇದರಿಂದ ಬೆಳೆಯ ತೆನೆ ಬೊಗಸೆ ತುಂಬಿ ಆಕರ್ಷಿಸುತ್ತಿವೆ’ ಎಂದರು.

‘ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ್ ಜಲಾಶಯದಿಂದ ಪ್ರಸಕ್ತ ವರ್ಷ ಮುಂಗಾರು ಹಾಗೂ ಹಿಂಗಾರು ಬೆಳೆಗಳಿಗಾಗಿ 0.5 ಟಿಎಂಸಿ ಅಡಿ ನೀರು ಬಿಡಲಾಗಿದೆ. ಇದರಿಂದ ಸುಮಾರು 6 ಸಾವಿರ ಹೆಕ್ಟೇರ್‌ಗೆ ನೀರು ಲಭಿಸಿದ್ದು ಜೋಳದ ಬೆಳೆ ನಳನಳಿಸುತ್ತಿದೆ. ನೀರು ಲಭಿಸದ ಕಡೆಗಳಲ್ಲಿ ತೇವಾಂಶದ ಕೊರತೆಯಿಂದ ಬಾಟಿ ಬಂದಿದ್ದು ಕಾಣಸಿಗುತ್ತದೆ’ ಎಂದು ಯೋಜನೆಯ ಎಇಇ ಕೃಷ್ಣಾ ಅಗ್ನಿಹೋತ್ರಿ ತಿಳಿಸಿದರು.

* * 

ಮಾಜಿ ಮುಖ್ಯಮಂತ್ರಿ ದಿವಂಗತ ವೀರೇಂದ್ರ ಪಾಟೀಲರು ಚಂದ್ರಂಪಳ್ಳಿ ನೀರಾವರಿ ಯೋಜನೆ ರೂಪಿಸಿ ಬಯಲು ನಾಡಿನ ರೈತರ ಜಮೀನಿಗೆ ನೀರು ಹರಿಯುವಂತೆ ಮಾಡಿದ್ದರಿಂದ ಎಕರೆಗೆ 3 ಕ್ವಿಂಟಲ್ ಬೆಳೆಯುತ್ತಿದ್ದ ಹೊಲಗಳಲ್ಲಿ 10 ಕ್ವಿಂಟಲ್ ಇಳುವರಿ ಬರುತ್ತಿದೆ.

ಸುಭಾಷ್ ಅಬಕಾರಿ,

ರೈತ, ಚಂದಾಪುರ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry