ಜಿಲ್ಲಾಡಳಿತ ಕಚೇರಿ ಉದ್ಘಾಟನೆ ವಿಳಂಬ

7

ಜಿಲ್ಲಾಡಳಿತ ಕಚೇರಿ ಉದ್ಘಾಟನೆ ವಿಳಂಬ

Published:
Updated:
ಜಿಲ್ಲಾಡಳಿತ ಕಚೇರಿ ಉದ್ಘಾಟನೆ ವಿಳಂಬ

ದೇವನಹಳ್ಳಿ: ಬಹು ನಿರೀಕ್ಷಿತ ಗ್ರಾಮಾಂತರ ಜಿಲ್ಲಾಡಳಿತ ಕಚೇರಿ ಸಂಕೀರ್ಣ, ಇತರೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಭಾಗ್ಯ ಸದ್ಯಕ್ಕಿಲ್ಲ ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

2016 ಮೇ 13 ರಂದು ತಾಲ್ಲೂಕಿಗೆ ಸಂಭ್ರಮದ ದಿನವಾಗಿತ್ತು. ಜನಜಾತ್ರೆಯಂತೆ ನಾಲ್ಕು ತಾಲ್ಲೂಕಿನ ಜನಪ್ರತಿನಿಧಿಗಳು ಇಲಾಖಾವಾರು ಸಚಿವರ ಹಾಜರಾತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಆಡಳಿತ ಕಚೇರಿ ಸಂಕೀರ್ಣ ಇತರೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಬಹಳ ವರ್ಷಗಳಿಂದ ಜಿಲ್ಲಾಡಳಿತ ಕಚೇರಿ ಸ್ಥಳಾಂತರಕ್ಕೆ ಬೇಡಿಕೆ ಇತ್ತು. ಅದು ಈಗ ಈಡೇರಿದೆ. ಕಟ್ಟಡದ ನೀಲ ನಕ್ಷೆ ನೋಡಿದರೆ ಅದು ಮೈಸೂರು ಅರಮನೆಯನ್ನು ನೆನಪಿಸುತ್ತದೆ. ‘ಈ ಕಟ್ಟಡದಲ್ಲಿ 39 ಕಚೇರಿಗಳು ಇರಲಿವೆ. ನಾನೇ ಖುದ್ದು ಬಂದು ಉದ್ಘಾಟನೆ ಮಾಡುತ್ತೇನೆ ಎಂದು ಹೇಳಿ ಮುಖ್ಯಮಂತ್ರಿ ಸೇರಿದವರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.

ಜನವರಿ 26ರಂದು ಕಟ್ಟಡ ಸಂಕೀರ್ಣ ಉದ್ಘಾಟಿಸಿ ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡಲು ಮುಖ್ಯಮಂತ್ರಿ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಕಾಮಗಾರಿಯು ಪೂರ್ಣಗೊಂಡಿಲ್ಲ ಎಂಬುದೇ ಇದಕ್ಕೆ ಕಾರಣ ಎಂಬುದು ಸ್ಥಳೀಯರ ಬೇಸರ. ಹೀಗಾಗಿ 26ರಂದು ಕಾರ್ಯಕ್ರಮ ನಡೆಯುವುದು ಅನುಮಾನ. ಈ ಹಿಂದೆ ಜಿಲ್ಲಾಡಳಿತ ಕಚೇರಿ ಸಂಕೀರ್ಣಕ್ಕೆ ₹ 43 ಕೋಟಿ ಸೇರಿದಂತೆ ಒಟ್ಟು ₹ 393 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಇದನ್ನು ಹೊರತುಪಡಿಸಿ ದೇವನಹಳ್ಳಿ ಕಸಬಾ ಹೋಬಳಿ ಬೊಮ್ಮವಾರ ಸರ್ವೇ ನಂ.36 ರಲ್ಲಿ 10 ಎಕರೆ ಜಾಗದಲ್ಲಿ ₹ 16 ಕೋಟಿ ವೆಚ್ಚದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ನಿರ್ಮಾಣವಾಗಿದ್ದು ಬಹುತೇಕ ಕಾಮಗಾರಿ ಮುಗಿದಿದೆ. ಈ ಕಟ್ಟಡ ಯಾವಾಗ ಉದ್ಘಾಟನೆಯಾಗಲಿದೆ ಎಂಬುದು ಪೋಷಕರ ಪ್ರಶ್ನೆ.

ಬೆಂಗಳೂರು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮಾಂತರ ಜಿಲ್ಲಾ ಮಟ್ಟದ 39 ಇಲಾಖೆಗಳಿಗೆ ಬಹುತೇಕ ಸ್ವಂತ ಕಟ್ಟಡವಿಲ್ಲ. 2007ರಲ್ಲಿ ಗ್ರಾಮಾಂತರ ಜಿಲ್ಲೆಯಿಂದ ರಾಮನಗರ ಜಿಲ್ಲೆಯಾಗಿ ಸ್ಥಳಾಂತರಗೊಂಡ ನಂತರದಿಂದ ಈವರೆವಿಗೂ ಸರ್ಕಾರದ ವತಿಯಿಂದ ಬಾಡಿಗೆ ಪಡೆದು ಕಾರ್ಯ ನಿರ್ವಹಿಸುತ್ತಿವೆ. ಇದಕ್ಕಾಗಿ ಇಲಾಖೆಗಳು ಲಕ್ಷಗಟ್ಟಲೆ ಹಣ ವ್ಯಯಿಸುತ್ತಿವೆ ಎಂದು ಬೀರಸಂದ್ರ ಗ್ರಾಮದ ಮುಖಂಡ ಬಿ.ಎಂ.ಬೀರಪ್ಪ ದೂರು.

ಪ್ರಸ್ತುತ ವಿಶ್ವನಾಥಪುರದಲ್ಲಿ ಖಾಸಗಿ ಕಟ್ಟಡದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ ಮಾಸಿಕ ಒಂದು ಲಕ್ಷ ಬಾಡಿಗೆ ಎಂದರೆ 39 ಇಲಾಖೆಯ ತಿಂಗಳ ಬಾಡಿಗೆ ಲೆಕ್ಕ ಹಾಕಿದರೆ ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊಡೆತ ಬೀಳುತ್ತಿದೆ ಎಂಬುದು ತಿಳಿಯುತ್ತದೆ. ಜನರ ತೆರಿಗೆ ಹಣವನ್ನು ಒಂದೊಂದು ತಿಂಗಳು ಮುಂದೂಡಿ ನಷ್ಟ ಮಾಡಿದರೆ ಹೇಗೆ ಎಂಬುದು ವರ ಪ್ರಶ್ನೆ.

ವಾಜಪೇಯಿ ವಸತಿ ಶಾಲೆ ನವೋದಯ ಮಾದರಿಯಲ್ಲಿ ವ್ಯವಸ್ಥಿತವಾಗಿ ಕಟ್ಟಡ ನಿರ್ಮಿಸಲಾಗಿದೆ. ಶಾಲಾ ಆಡಳಿತ ಕಚೇರಿ, ಬಾಲಕರ ಮತ್ತು ಬಾಲಕಿಯರ ಪ್ರತ್ಯೇಕ ಕೊಠಡಿ, ಉಪಾಹಾರ ಮಂದಿರ, ಅಡುಗೆ ಕೊಠಡಿ, ಪ್ರಾಂಶುಪಾಲರ ಕೊಠಡಿ, ಬೋಧಕರಿಗೆ ಎರಡು ಮತ್ತು ಬೋಧಕೇತರ ಸಿಬ್ಬಂದಿಗೆ ಪ್ರತ್ಯೇಕ ಕೊಠಡಿ, ಭದ್ರತಾ ಕೊಠಡಿ, ರಂಗಮಂದಿರ, ವಿವಿಧ ಕ್ರೀಡೆಗಳ ಅಂಕಣ ನಿರ್ಮಿಸಲಾಗುತ್ತಿದೆ.

ವಿದ್ಯಾರ್ಥಿ ನಿಲಯದಲ್ಲಿ 6 ರಿಂದ 10 ನೇ ತರಗತಿ 520 ವಿದ್ಯಾರ್ಥಿಗಳಿಗೆ ಅವಕಾಶವಿದೆ. ಪ್ರಸ್ತುತ 182 ವಿದ್ಯಾರ್ಥಿಗಳು ಖಾಸಗಿ ಕಟ್ಟಡದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂಬುದಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚನ್ನಬಸ್ಸಪ್ಪ ತಿಳಿಸಿದರು.

ಫೆಬ್ರುವರಿ ಮೂರು ಅಥವಾ ನಾಲ್ಕನೇ ವಾರದಲ್ಲಿ ಜಿಲ್ಲಾಡಳಿತ ಕಚೇರಿ ಸಂಕೀರ್ಣ, ವಸತಿ ಶಾಲೆ ಇತರೆ ಕಟ್ಟಡಗಳ ಉದ್ಘಾಟನೆಯಾಗುವ ನಿರೀಕ್ಷೆ ಇದೆ. ದಿನಾಂಕ ನಿಗದಿಯಾಗಿಲ್ಲ ಎಂಬುದಾಗಿ ಜಿಲ್ಲಾಧಿಕಾರಿ ಎಸ್.ಪಾಲಯ್ಯ ‘ಪ್ರಜಾವಾಣಿ’ಗೆ ಸ್ವಷ್ಟಪಡಿಸಿದರು.

ಜನರ ಪರದಾಟ

‘2017ರ ಡಿಸೆಂಬರ್ ಒಳಗೆ ಕಾಮಗಾರಿ ಮುಗಿಯಲಿದೆ ಎಂದು ಸಚಿವರು ತಿಳಿಸಿದ್ದರು. ಉದ್ಘಾಟನೆ ವಿಳಂಬವಾಗುತ್ತಿರುವುದರಿಂದ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಜಿಲ್ಲಾ ಮಟ್ಟದ 39 ಇಲಾಖೆಗಳಿಗೆ ಸಾರ್ವಜನಿಕರು ತಮ್ಮ ಸಮಸ್ಯೆ ಬಗ್ಗೆ ಪರಿಹರಿಸಿಕೊಳ್ಳಲು ಈವರೆವಿಗೂ ಪರದಾಟ ನಿಂತಿಲ್ಲ’ ಎಂದು ಎಚ್.ಎಂ. ರವಿಕುಮಾರ್ ದೂರಿದ್ದಾರೆ.

ಜನರು ಸಂಚಾರ ದಟ್ಟಣೆಯಲ್ಲಿ ಹೈರಾಣಾಗುತ್ತಿದ್ದಾರೆ. ನುಡಿದಂತೆ ನಡೆದಿದ್ದೇವೆ ಎನ್ನುವ ಸರ್ಕಾರ ಒಂದೆಡೆ ಕಾಮಗಾರಿ ಮುಗಿದಿಲ್ಲ; ಇನ್ನೊಂದೆಡೆ ಮುಗಿದಿದ್ದರೂ ಉದ್ಘಾಟನೆ ಇಲ್ಲ. ಇದು ಸರ್ಕಾರದ ಬೇಜವಾಬ್ದಾರಿತನ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry