ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಡಿಯಾರ ಕಲೆಯಾಯ್ತು

Last Updated 24 ಜನವರಿ 2018, 19:30 IST
ಅಕ್ಷರ ಗಾತ್ರ

ಫ್ಯಾಷನ್‌ ಅಕ್ಸೆಸರಿಗಳಲ್ಲಿ ವಾಚ್‌ಗೆ ಯಾವತ್ತೂ ಮೊದಲ ಪ್ರಾಶಸ್ತ್ಯ. ಆದರೆ ಕಾಲಕ್ಕೆ ತಕ್ಕಂತೆ ವಾಚ್‌ಗಳ ವಿನ್ಯಾಸವೂ ಬದಲಾಗುತ್ತದೆ. ಕಳೆದ ವರ್ಷ ಕಟ್ಟಿಕೊಂಡ ವಾಚ್‌ ಇಂದಿಗೆ ಹಳೆ ಫ್ಯಾಷನ್. ಹಾಗಿದ್ದರೆ ಹಳೆ ವಾಚ್‌ಗಳನ್ನು ಏನು ಮಾಡಬೇಕು?

ಸಾಮಾನ್ಯವಾಗಿ ಅವೆಲ್ಲ ಕಸಕ್ಕೋ ಗುಜರಿಗೋ ಸೇರುತ್ತವೆ. ಆದರೆ ಅವನ್ನು ಎಸೆಯದೇ ಅದಕ್ಕೇ ಹೊಸ ಹೊಸ ರೂಪ ನೀಡಿದವರು ಕಲಾವಿದ ಡಾನ್ ಟ್ಯಾನೆನ್‌ಬೌಮ್.
ಕೆನಡಾದ ಈ ಕಲಾವಿದ ಮೂಲತಃ ತಂತ್ರಜ್ಞ. ಮಿಚಿಗನ್ ಯೂನಿವರ್ಸಿಟಿಯಿಂದ ಪದವಿ ಪಡೆದು ಜಾಹೀರಾತು ವಿಭಾಗದಲ್ಲಿ ಆರ್ಟ್‌ ಡೈರೆಕ್ಟರ್ ಆಗಿರುವವರು.

ಅಚಾನಕ್ಕೆಂಬಂತೆ ಈ ಹವ್ಯಾಸವೂ ಅವರಿಗೆ ಜೊತೆಯಾಯಿತು. ಅವರ ತಾಯಿ ವಿಂಟೇಜ್ ಆಭರಣಗಳ ಸಂಗ್ರಹ ಮಾಡಿದ್ದವರು. ಇವರೂ ಅದೇ ರೀತಿ ವಿಂಟೇಜ್ ವಾಚ್‌ಗಳನ್ನು ಸಂಗ್ರಹಿಸಿದ್ದಾರೆ.

ಸಂಗ್ರಹ ಮಾತ್ರವಲ್ಲ, ಅವುಗಳನ್ನು ಬಳಸಿ ಕಲಾಸಾಮಗ್ರಿಗಳನ್ನೂ ರೂಪಿಸಿದ್ದಾರೆ. ಕೆಲಸದಿಂದ ಬಿಡುವು ಸಿಕ್ಕ ಸಮಯವನ್ನು ಕಳೆಯುವುದು ವರ್ಕ್‌ಶಾಪ್‌ನಲ್ಲಿ. ಅದೂ ವಾಚ್‌ಗಳ ಜೊತೆಗೆ.

ಒಂದಿಷ್ಟು ಸಮಯ ಸಿಕ್ಕರೂ ಹಳೆ ವಾಚುಗಳನ್ನು ಹಿಡಿದು ಕುಳಿತು, ಅವುಗಳಿಂದ ಏನೆಲ್ಲಾ ಮಾಡಬಹುದು ಎಂದು ಯೋಚಿಸುತ್ತಾರೆ. ಅವರ ಆ ಯೋಚನೆಗಳ ಫಲವೇ ‘ವಾಚ್‌ ಸಿರೀಸ್’. ವಾಚಿನ ಬಿಡಿ ಭಾಗಗಳನ್ನು ಒಟ್ಟುಗೂಡಿಸಿ ಒಂದು ರೂಪವನ್ನು ಕೊಡುತ್ತಾರೆ. ಅದೇ ರೀತಿ ನೂರಾರು ಕಲಾಸಾಮಗ್ರಿಗಳನ್ನು ತಯಾರು ಮಾಡಿದ್ದಾರೆ.

ಮೊಲ, ಕಾರು, ದುಂಬಿ, ರೋಬೊ... ಹೀಗೆ ಹಲವು ಆಕಾರಗಳನ್ನು ಬಿಡಿಭಾಗಗಳಿಂದಲೇ ವಿನ್ಯಾಸಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ಇವುಗಳಲ್ಲಿ ಸರಣಿಗಳನ್ನೂ ಹೊರತಂದಿದ್ದಾರೆ. ‘ಸ್ಟೀಮ್‌ಪಂಕ್ ಸಿರೀಸ್’ ಎಂಬ ಮಿನಿ ಮೋಟಾರ್‌ಬೈಕ್‌ಗಳ ಸರಣಿ ವಿನ್ಯಾಸವೇ ಇವರ ಬಳಿಯಿವೆ. ಒಂದೊಂದು ವಸ್ತುವಿನಲ್ಲೂ ಸಂಕೀರ್ಣತೆ ಎದ್ದು ಕಾಣುತ್ತದೆ. ಈ ಸರಣಿ ವಿಶ್ವದಾದ್ಯಂತ ಮೆಚ್ಚುಗೆಯನ್ನೂ ಗಳಿಸಿಕೊಂಡಿದೆ.

‘ಯಾವುದೇ ಮ್ಯಾಚಿಂಗ್ ಇಲ್ಲದೆಯೇ ಸುಮ್ಮನೆ ಜೋಡಿಸುತ್ತಲೇ ಹೋಗುತ್ತೇನೆ. ಹಾಗೇ ಒಂದು ಆಕಾರ ಮೈದಳೆಯುತ್ತದೆ. ಇದು ಸಂಕೀರ್ಣ ಕಲೆ. ಮೊದಲು ವಾಚ್‌ಗಳನ್ನು ಸಂಗ್ರಹ ಮಾಡುವುದನ್ನು ಶುರುವಿಟ್ಟುಕೊಂಡೆ. ನಂತರ ಹಳೆ ವಾಚುಗಳಿಗೆ ಹೊಸ ರೂಪವನ್ನು ಕೊಡಲು ಆರಂಭಿಸಿದೆ. ಇದೊಂದು ಕ್ರಿಯಾಶೀಲ ಕೆಲಸ’ ಎಂದು ಹೇಳಿಕೊಳ್ಳುತ್ತಾರೆ ಟ್ಯಾನೆನ್‌.

ಈ ಒಂದೊಂದು ಕಲೆಯ ಹಿಂದೆಯೂ ಗಂಟಾನುಗಟ್ಟಲೆಯ ಶ್ರಮ, ಕ್ರಿಯಾಶೀಲತೆ ಅಡಗಿದೆ. ಒಂದು ಆಕಾರ ಕೊಡಲು ಕನಿಷ್ಠ 40 ಗಂಟೆಗಳು ಹಿಡಿಯುತ್ತದೆ. ಇನ್ನೂ ಸಾಕಷ್ಟು ಸಂಗ್ರಹಗಳನ್ನು ಹೊರತರುವ ಆಲೋಚನೆಯೂ ಟ್ಯಾನನ್‌ ಅವರಿಗೆ ಇದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT