ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿತ್ವ ರೂಪಿಸಲು ರಂಗಭೂಮಿ ಸಹಕಾರಿ

Last Updated 24 ಜನವರಿ 2018, 10:31 IST
ಅಕ್ಷರ ಗಾತ್ರ

ಚಾಮರಾಜನಗರ: ‘ರಂಗಭೂಮಿ ಯಿಂದ ವೇದಿಕೆ ಭಯ ನಿವಾರಣೆಯಾಗು ವುದರ ಜತೆಗೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ’ ಎಂದು ತಹಶೀಲ್ದಾರ್‌ ಕೆ. ಪುರಂದರ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಅಭಿಯಂತರರು ಆಯೋಜಿಸಿದ್ದ ಪರಿಶಿಷ್ಟ ಪಂಗಡ ಅಭ್ಯರ್ಥಿಗಳ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮಲ್ಲಿ ನಾಟಕದೆಡೆಗಿನ ಆಸಕ್ತಿ ಬಹಳ ಕಡಿಮೆ. ಸಂಗೀತ, ಹಾಡು, ನೃತ್ಯ ಇರುವುದಿಲ್ಲ. ಅದರಿಂದ ಮನರಂಜನೆ ಸಿಗುವುದಿಲ್ಲ ಎಂಬ ಕಲ್ಪನೆ ಇದೆ. ಆದರೆ, ವಾಸ್ತವವಾದ ಕಲೆಯೆಂದರೆ ಅದು ನಾಟಕ. ನಮ್ಮಲ್ಲಿ ವ್ಯಕ್ತಿತ್ವಕ್ಕೆ ಸಾಣೆ ಹಿಡಿಯಲು, ಧೈರ್ಯ ಬೆಳೆಸಿಕೊಳ್ಳಲು ಮತ್ತು ಭಾವನೆಗಳನ್ನು ಹೊಮ್ಮಿಸಲು ನಾಟಕ ನೆರವಾಗುತ್ತದೆ. ಪೋಷಕರು, ಮಕ್ಕಳು ಮತ್ತು ಶಾಲೆ ಕಾಲೇಜುಗಳು ನಾಟಕಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹದೇವಯ್ಯ ಮಾತನಾಡಿ, ನಾಟಕ ಎನ್ನುವುದು ಸಮಾಜ ವನ್ನು ತಿದ್ದುವ ಪಾಠ ಶಾಲೆ. ಸಮಾಜದ ಆಗುಹೋಗುಗಳ ಚಿತ್ರಣ ವನ್ನು ಪರಿಣಾಮಕಾರಿಯಾಗಿ ನೋಡಲು ನಾಟಕಗಳಿಂದ ಮಾತ್ರ ಸಾಧ್ಯ ಎಂದರು.

ಒಳಿತು ಮತ್ತು ಕೆಡಕುಗಳೆರಡನ್ನೂ ಚಿತ್ರಿಸುವ ನಾಟಕಗಳಿಂದ ಸಾಕಷ್ಟು ಕಲಿಯಬಹುದು. ಇಂದು ಸಾಮಾಜಿಕ ಪರಿಸ್ಥಿತಿ ಹದಗೆಟ್ಟಿದೆ. ಮನುಷ್ಯರು ಪರಸ್ಪರ ದ್ವೇಷ ಕಾರುತ್ತಿದ್ದಾರೆ. ಅತ್ಯಾಚಾರದಂತಹ ದುರ್ಘಟನೆಗಳು ನಡೆಯುತ್ತಿವೆ. ಮನುಷ್ಯನ ಮಾನಸಿಕ ಸ್ಥಿತಿಯನ್ನು ತಿದ್ದಲು ನಾಟಕಗಳು ಅಗತ್ಯವಾಗಿವೆ ಎಂದು ಹೇಳಿದರು.

ನಟ ರಾಜಕುಮಾರ್ ಅವರಂತಹ ಕಲಾವಿದರು ಹುಟ್ಟಿದ ಈ ಗಡಿ ಜಿಲ್ಲೆ ಕಲಾವಿದರ ಆಗರ. ಪ್ರತಿ ಗ್ರಾಮದಲ್ಲಿಯೂ ಕಲಾವಿದರಿದ್ದಾರೆ. ಆದರೆ, ಪ್ರೇಕ್ಷಕರು ಮತ್ತು ಪ್ರಚಾರದ ಕೊರತೆ ಇಲ್ಲಿ ಕಾಣಿಸುತ್ತಿದೆ ಎಂದು ಹೇಳಿದರು.

ಒಂದು ತಿಂಗಳ ಅವಧಿಯಲ್ಲಿ ತರಬೇತಿ ಪಡೆದು ಮೂರು ನಾಟಕಗಳನ್ನು ಪ್ರದರ್ಶಿಸುತ್ತಿರುವುದು ಸಾಧನೆಯೇ ಸರಿ. ವಿದ್ಯಾರ್ಥಿಗಳಲ್ಲಿ ಉತ್ತಮ ಅಭಿರುಚಿ ಇದೆ. ಅದಕ್ಕೆ ಪೋಷಕರ ಉತ್ತೇಜನ ಸಿಗಬೇಕು ಎಂದು ಅಭಿಪ್ರಾಯಪಟ್ಟರು.

ಸೇವಾ ಭಾರತಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್.ಎಂ. ನಿರ್ಮಲಾ ಮಾತನಾಡಿ, ಎಲ್ಲ ವರ್ಗದ ವಿದ್ಯಾರ್ಥಿಗಳಲ್ಲಿಯೂ ಪ್ರತಿಭೆ ಇರುತ್ತದೆ. ಹೀಗಾಗಿ ತರಬೇತಿಯನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಬಾರದು. ಆಸಕ್ತಿಯುಳ್ಳ ಎಲ್ಲರಿಗೂ ಪಾಲ್ಗೊಳ್ಳಲು ಮುಕ್ತ ಅವಕಾಶ ಸಿಗಬೇಕು ಎಂದು ಹೇಳಿದರು.

ಸೇವಾ ಭಾರತಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ‘ಚಂದ್ರಬಲ ತಾರಾಬಲ’ ನಾಟಕ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ನಾಟಕ ಅಕಾಡೆಮಿ ಸದಸ್ಯ ಗಣೇಶ ಅಮೀನಗಡ, ಅಭಿಯಂತರರು ರಂಗ ತಂಡದ ಅಧ್ಯಕ್ಷ ಎಚ್.ಎಸ್. ಸುರೇಶ್‌ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT