ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜ ಕೃಷಿಯಲ್ಲಿ ಅರಳಿದ ಬದುಕು

Last Updated 24 ಜನವರಿ 2018, 10:33 IST
ಅಕ್ಷರ ಗಾತ್ರ

ಚಾಮರಾಜನಗರ: ಕೃಷಿಯಿಂದ ಯುವಜನರು ವಿಮುಖರಾಗುತ್ತಿರುವ, ಕೃಷಿ ಕುಟುಂಬದಲ್ಲಿ ಬೆಳೆದ ಯುವತಿಯರು ಸಾಂಸಾರಿಕ ಬದುಕನ್ನು ನಗರದಲ್ಲಿಯೇ ಕಟ್ಟಿಕೊಳ್ಳಲು ಹಂಬಲಿಸುವ ಈ ದಿನಗಳಲ್ಲಿ ಯುವಜನರಿಗೆ ಮಾದರಿ ಯಾಗುತ್ತಿರುವವರು ತಾಲ್ಲೂಕಿನ ದೊಡ್ಡರಾಯಪೇಟೆ ಗ್ರಾಮದ ರೈತ ಮಹಿಳೆ ನಾಗರತ್ನಮ್ಮ.

ಕೃಷಿಯ ಜತೆಗೆ ಸ್ವಯಂ ಉದ್ಯೋಗದ ಮಾರ್ಗಗಳನ್ನು ಸಹ ಕಂಡುಕೊಂಡು ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಅವರು, ಬದುಕಿನ ದಿಕ್ಕು ಕಾಣದೆ ಕಂಗೆಟ್ಟ ಅನೇಕ ಹೆಣ್ಣುಮಕ್ಕಳಿಗೆ ಸ್ಫೂರ್ತಿ.

‘ತೊಟ್ಟಿಲು ತೂಗುವ ಕೈ ದೇಶವನ್ನು ತೂಗಬಲ್ಲದು’ ಎಂಬುದನ್ನು ಸಾಬೀತುಪಡಿಸಿರುವ ಅವರು ತಮಗಿರುವ 2.30 ಎಕರೆ ಜಮೀನಿನಲ್ಲಿ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಯಶಸ್ಸು ಕಂಡಿದ್ದಾರೆ.

‘ನಮ್ಮದು ಕೃಷಿ ಪ್ರಧಾನ ಕುಟುಂಬ. ಹನೂರು ತಾಲ್ಲೂಕಿನ ಚಿಂಚಳ್ಳಿ ಗ್ರಾಮ ನಮ್ಮೂರು. 7 ಜನ ಮಕ್ಕಳಲ್ಲಿ ನಾನೇ ಕೊನೆಯಾಕಿ. 6ನೇ ತರಗತಿ ಓದುತ್ತಿದ್ದಾಗ ನನ್ನ ತಂದೆ ಕೃಷಿ ಕೆಲಸಕ್ಕಾಗಿ ಶಾಲೆ ಬಿಡಿಸಿದರು. ಬಾಲ್ಯದಲ್ಲಿ ದಿನವಿಡೀ ಕೃಷಿ ಚಟುವಟಿಕೆಯಲ್ಲೇ ತೊಡಗುತ್ತಿದ್ದ ನನಗೆ ಅದರಲ್ಲಿ ಅತೀವ ಆಸಕ್ತಿ ಬೆಳೆಯಿತು. ಮದುವೆಯಾದ ಬಳಿಕ ಪತಿ ನನ್ನ ಕೃಷಿ ಒಲವಿಗೆ ಬೆಂಬಲ ನೀಡಿದರು. ಇದರ ಪ್ರತಿಫಲವಾಗಿ ನಾನಿಂದು ಯಶಸ್ವಿ ರೈತ ಮಹಿಳೆಯಾಗಿ ಗುರುತಿಸಿಕೊಂಡಿದ್ದೇನೆ’ ಎಂದು ತಮ್ಮ ಯಶೋಗಾಥೆಯನ್ನು ನಾಗರತ್ನಮ್ಮ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ಒಂದು ಗಂಡು, ಒಂದು ಹೆಣ್ಣು ಇಬ್ಬರು ಮಕ್ಕಳು ಇದ್ದಾರೆ. ನಾವು ಸಾಲಿಗೆ ಹೋಗಕ್ಕೆ ಆಗಲಿಲ್ಲ. ಮಕ್ಕಳಾದರೂ ಚೆನ್ನಾಗಿ ಓದಬೇಕು ಅಂತ ಮಗನನ್ನು ಮರಿಯಾಲ ಗ್ರಾಮದ ಶಾಲೆಗೆ ಸೇರಿಸಿದ್ದೇವೆ. ಇವಾಗ ಅವನು 8ನೇ ಕ್ಲಾಸ್‌. ಮಗಳು ಊರಾಗಿಯೇ 6ನೇ ಕ್ಲಾಸ್‌ ಓತ್ತವಳೆ...

ಊರಾಗಿ ನಾನು, ಗಂಡ ಸೇರಿ 2.30 ಎಕರೆ ಜಮೀನಿನನ್ನು ಗುತ್ತಿಗೆ ಹಾಕಿಕೊಂಡು ಕೆಲಸ ಮಾಡುತ್ತಿದ್ದೇವೆ. ಬೋರ್‌ ಇರೋದಿಂದ್ರ ನೀರಿನ ಸಮಸ್ಯೆಯಿಲ್ಲ. ಬಾಳೆ, ಜೋಳ, ಪಪ್ಪಾಯ, ಕಲ್ಲಂಗಡಿ, ರಾಗಿ ಸೇರಿದಂತೆ ಸಿರಿಧಾನ್ಯಗಳನ್ನು ಬೆಳೆಯುತ್ತೇವೆ. ಸಾಲಿಗೆ ರಜೆ ಇದ್ದಾಗ ಮಕ್ಕಳು ನಮಗೆ ಸಹಾಯ ಮಾಡತ್ತಾರೆ’ ಎಂದು ಖುಷಿಯಿಂದ ಹೇಳಿದರು.

ಬೆಳೆದ ಫಲವನ್ನು ಚಾಮರಾಜ ನಗರ, ತೆರಕಣಾಂಬಿ ಹಾಗೂ ತಾಳವಾಡಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಾರೆ. ಅವರ ಕೃಷಿಯ ಸಾಧನೆಯನ್ನು ಮೆಚ್ಚಿ ಹೆಬ್ಬಾಳ ಕೃಷಿ ವಿಜ್ಞಾನ ಕೇಂದ್ರ ‘ಜಿಲ್ಲಾ ಪ್ರಗತಿಪರ ಯುವ ರೈತ ಮಹಿಳೆ’ ಎಂಬ ಪ್ರಶಸ್ತಿ ನೀಡಿದೆ.

ಕೈಹಿಡಿದ ಉಪಕಸುಬು: ಕೃಷಿಯೊಂದಿಗೆ ಹಿರಳಿಕಾಯಿಯ ರುಚಿಯಾದ ಉಪ್ಪಿನಕಾಯಿ ಹಾಗೂ ರಾಗಿ, ಅಕ್ಕಿ, ಮುಸುಕಿನ ಜೋಳದಿಂದ ಹಪ್ಪಳ, ಚಕ್ಕುಲಿ ಸಂಡಿಗೆ ತಯಾರಿಸಿ ಮಾರಾಟ ಮಾಡುತ್ತಾರೆ. ಜತೆಗೆ, ಹಸು, ಕುರಿ ಸಾಕಾಣಿಕೆ ಮಾಡುತ್ತಿದ್ದು, ಬೆಣ್ಣೆ, ಮಜ್ಜಿಗೆ ತಯಾರಿಸಿ ನಗರದ ವಿವಿಧ ಹೋಟೆಲ್‌, ಮನೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇವರು ತಯಾರಿಸಿದ ಹಪ್ಪಳ, ಸಂಡಿಗೆಗೆ ಬೆಂಗಳೂರು, ರಾಮನಗರ, ಮೈಸೂರು ಮುಂತಾದೆಡೆಗಳಲ್ಲಿಯೂ ಬೇಡಿಕೆ ಇದೆ.

ನೈಸರ್ಗಿಕ ಕೃಷಿ ಪದ್ಧತಿ: ಜಮೀನಿನಲ್ಲಿ ನೈಸರ್ಗಿಕ ಹಾಗೂ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಈ ದಂಪತಿ, ಹೊರಗಿನ ಯಾವುದೇ ಕೂಲಿಗಳನ್ನು ಬಳಸಿಕೊಳ್ಳುತ್ತಿಲ್ಲ. ಮನೆಯವರ ಶ್ರಮದಿಂದಲೇ ಸಂಪೂರ್ಣ ಕೃಷಿ ಕಾರ್ಯ ನಡೆಸುತ್ತಿದ್ದಾರೆ.

ರಸಗೊಬ್ಬರದ ಬಳಕೆ ಇಲ್ಲ: ಇಳುವರಿ ಹೆಚ್ಚಬೇಕು ಎಂಬ ಆಸೆಯಿಂದ ಜಮೀನಿಗೆ ಎಂದಿಗೂ ರಾಸಾಯನಿಕ ಹಾಕಿದವರಲ್ಲ. ‘ಜೀವಾಮೃತದಿಂದ ಭೂಮಿಯಲ್ಲಿ ಸೂಕ್ಷ್ಮಾಣುಜೀವಿಗಳು ಬೆಳೆಯುವುದಲ್ಲದೆ, ಫಲವತ್ತತೆ ಹೆಚ್ಚುತ್ತದೆ’ ಎನ್ನುತ್ತಾರೆ ನಾಗರತ್ನಮ್ಮ.

ಎಸ್. ಪ್ರತಾಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT