ಈಶಾನ್ಯ ವಿಭಾಗೀಯ ಸಾರಿಗೆಯಿಂದ ‘ಪ್ಯಾಕೇಜ್‌ ದರ’

7

ಈಶಾನ್ಯ ವಿಭಾಗೀಯ ಸಾರಿಗೆಯಿಂದ ‘ಪ್ಯಾಕೇಜ್‌ ದರ’

Published:
Updated:

ಮೊಳಕಾಲ್ಮುರು: ಬಳ್ಳಾರಿಯಿಂದ ಬೆಂಗಳೂರು ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರಿಗೆ ಈಶಾನ್ಯ ಕರ್ನಾಟಕ ಸಾರಿಗೆ ಹೊಸ ಪ್ಯಾಕೇಜ್ ದರ’ ಯೋಜನೆ ಜಾರಿ ಮಾಡುವ ಮೂಲಕ ಪ್ರಯಾಣಿಕರಲ್ಲಿ ಸಂತಸ ಉಂಟು ಮಾಡಿದೆ. ಆದರೆ, ಖಾಸಗಿ ಬಸ್‌ ಮಾಲೀಕರ ನಿದ್ದೆಗೆಡಿಸಿದೆ.

ಹೊಸ ಆದೇಶದ ಪ್ರಕಾರ ಈಶಾನ್ಯ ಸಾರಿಗೆ ವ್ಯಾಪ್ತಿ ಎಲ್ಲಾ ಬಸ್‌ಗಳಲ್ಲಿ ಹಗಲು ವೇಳೆ ಬೆಂಗಳೂರು ಮಾರ್ಗದಲ್ಲಿ ಓಡಾಡುವ ಬಸ್‌ಗಳಲ್ಲಿ ಬಳ್ಳಾರಿಯಿಂದ ಚಳ್ಳಕೆರೆವರೆಗೆ ಪ್ರಯಾಣ ದರಕ್ಕೆ ಪ್ಯಾಕೇಜ್‌ ದರ ನಿಗದಿ ಮಾಡಲಾಗಿದೆ. ಇದರಿಂದ ಪ್ರತಿ ಟಿಕೆಟ್‌ಗೆ ಹಳೆ ದರಕ್ಕೆ ಹೋಲಿಕೆ ಮಾಡಿದಲ್ಲಿ ₹ 27 ಉಳಿತಾಯವಾಗುತ್ತದೆ. ಹೊಸ ದರ ₹80 ನಿಗದಿ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಆರ್. ಚಂದ್ರಶೇಖರ್, ‘ಖಾಸಗಿ ಬಸ್‌ಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಈ ದರ ನಿಗದಿ ಮಾಡಲಾಗಿದೆ.  ನಿತ್ಯ ನಿಗಮದಿಂದ ಈ ಮಾರ್ಗದಲ್ಲಿ ಒಟ್ಟು 46 ಬಸ್‌ಗಳು ಸಂಚರಿಸುತ್ತವೆ. ಇದರ ವ್ಯಾಪ್ತಿಗೆ ರಾಯಚೂರು, ಕೊಪ್ಪಳ ಘಟಕಗಳು ಒಳಪಡುತ್ತವೆ ಎಂದು ಹೇಳಿದರು.

ವರ್ಷದಿಂದ ಈ ಮಾರ್ಗದಲ್ಲಿ ಕೆಲ ‘ಪ್ಯಾಕೇಜ್‌ ದರ’ ಬಸ್ಸುಗಳು ಸಂಚರಿಸುತ್ತಿತ್ತು. ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿರುವ ಕಾರಣ ಬೇರೆ ಬಸ್ಸುಗಳಿಗೂ ವಿಸ್ತರಿಸಲಾಗಿದೆ. ದರ ಬಳ್ಳಾರಿ ಡಿಪೊ ಬಸ್ಸುಗಳಲ್ಲಿ ಈಗಾಗಲೇ ಜಾರಿಗೆ ಬಂದಿದ್ದು, ಒಂದೆರಡು ದಿನಗಳಲ್ಲಿ ಉಳಿದ ಘಟಕ ಬಸ್ಸುಗಳೂ ಅನ್ವಯಿಸಿಕೊಳ್ಳಲಿವೆ ಎಂದು ಹೇಳಿದರು.

‘ಪ್ಯಾಕೇಜ್‌ ದರ’ ಜಾರಿ ಮಾಡಿರುವ ಬಗ್ಗೆ ಹಾಗೂ ಇದನ್ನು ಕೆಎಸ್‌ಆರ್‌ಟಿ ಸೇರಿದಂತೆ ಬೇರೆ ನಿಗಮ ಬಸ್ಸುಗಳೂ ಅನುಸರಿಸುವಂತೆ ಈಗಾಗಲೇ ಪತ್ರ ಬರೆದು ಮನವಿ ಬೇರೆ ನಿಗಮಗಳಿಗೆ ಮಾಡಲಾಗಿದೆ. ಈ ಕುರಿತ ನಿರ್ಧಾರ ಅಲ್ಲಿನ ಅಧಿಕಾರಿಗಳಿಗೆ ಸೇರಿದ್ದು’ ಎಂದು ತಿಳಿಸಿದರು.

ಕ್ರಮಕ್ಕೆ ಮನವಿ

ಪ್ಯಾಕೇಜ್‌ ದರ ಜಾರಿ ಅತ್ಯಂತ ಸ್ವಾಗತಾರ್ಹ. ಇದನ್ನು ಬೇರೆ ನಿಗಮ ಬಸ್ಸುಗಳಿಗೂ ಅಳವಡಿಸಿಕೊಳ್ಳಬೇಕು. ಅಲ್ಲದೇ ಬಳ್ಳಾರಿಯಿಂದ ಚಿತ್ರದುರ್ಗ, ದಾವಣಗೆರೆ ಮಾರ್ಗವಾಗಿ ಇನ್ನೂ ಹೆಚ್ಚು ಬಸ್ಸುಗಳನ್ನು ಓಡಿಸಬೇಕು. ಚಳ್ಳಕೆರೆಯಲ್ಲಿ ಬಸ್‌ನಿಲ್ದಾಣವಿದ್ದರೂ ಚಿತ್ರದುರ್ಗ ಮಾರ್ಗದ ಬಸ್ಸುಗಳು ಬಸ್‌ನಿಲ್ದಾಣಕ್ಕೆ ಹೋಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜನಸಂಸ್ಥಾನ ಸಂಸ್ಥೆ ವಿರೂಪಾಕ್ಷಪ್ಪ ಮನವಿ ಮಾಡಿದ್ದಾರೆ.

ಅನುಮತಿ ಕೊಡಿಸಿ: ತಾಲ್ಲೂಕು ಗಡಿಭಾಗದಲ್ಲಿದ್ದು ಸಾಕಷ್ಟು ಕಡು ಬಡವರಿದ್ದಾರೆ. ಶಿಕ್ಷಣಕ್ಕಾಗಿ ಚಳ್ಳಕೆರೆ, ಬಳ್ಳಾರಿ ಅಲವಂಬಿಸಿದ್ದಾರೆ. ಆದರೆ ಇಲ್ಲಿ ಅನೇಕ ಬಸ್ಸುಗಳು ಹೊರರಾಜ್ಯದ ಬಸ್ಸುಗಳು ಎಂದು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವುದಿಲ್ಲ. ಪರಿಣಾಮ ತರಗತಿಗಳನ್ನು ಕಳೆದುಕೊಳ್ಳಬೇಕಾಗುತ್ತಿದೆ. ಶಿಕ್ಷಣಕ್ಕಾಗಿ ಸರ್ಕಾರ ಸಾಕಷ್ಟು ಸಾರಿಗೆ ಸೌಲಭ್ಯ ನೀಡಿದ್ದರೂ ಇದರಿಂದ ಇವುಗಳು ಮರೀಚಿಕೆಯಾಗಿದೆ. ಈ ಬಗ್ಗೆ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry