ನೈತಿಕ ರಾಜಕಾರಣ ಸ್ಥಾಪನೆಗಾಗಿ 'ಸ್ವರಾಜ್ ಇಂಡಿಯಾ'

7

ನೈತಿಕ ರಾಜಕಾರಣ ಸ್ಥಾಪನೆಗಾಗಿ 'ಸ್ವರಾಜ್ ಇಂಡಿಯಾ'

Published:
Updated:
ನೈತಿಕ ರಾಜಕಾರಣ ಸ್ಥಾಪನೆಗಾಗಿ 'ಸ್ವರಾಜ್ ಇಂಡಿಯಾ'

ಚಿತ್ರದುರ್ಗ: ಪ್ರಸ್ತುತ ದೇಶದಲ್ಲಿ ನೈತಿಕ ರಾಜಕಾರಣ, ರಾಜಕಾರಣಿಗಳ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಅಂಥ ರಾಜಕಾರಣ ಮಾಡುವ ಆಶಯದೊಂದಿಗೆ ಸ್ವರಾಜ್ ಇಂಡಿಯಾ ಪಕ್ಷ ಉದಯಿಸುವ ಪ್ರಮೇಯ ಬಂದಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೀಯ ಮಂಡಳಿ ಸದಸ್ಯ ದೇವನೂರ ಮಹಾದೇವ ಅಭಿಪ್ರಾಯಪಟ್ಟರು.

ಕ್ರೀಡಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವರಾಜ್ ಇಂಡಿಯಾ ಪಕ್ಷದ ಚಿತ್ರದುರ್ಗ ಜಿಲ್ಲಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಆಶಯ ನುಡಿಗಳನ್ನಾಡಿದರು.

'ನೈತಿಕ ರಾಜಕಾರಣಿಗಳಾಗಿದ್ದ ಮಾಜಿ ಸಚಿವ ಏಕಾಂತಯ್ಯ, ದಾವಣಗೆರೆಯ ಪಂಪಾಪತಿಯಂಥವರು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ. ಅವರು ಸಮಾಜದ ಬದಲಾವಣೆಗಾಗಿ ಸಮುದಾಯದ ಬದುಕನ್ನು ಸಹ್ಯ ಮಾಡುವುದಕ್ಕಾಗಿ ರಾಜಕಾರಣ ಮಾಡಿದದರು. ಇಂದು ಆ ಪರಿಸ್ಥಿತಿ ಇಲ್ಲ. ಅಂಥವರು ಇದ್ದಿದ್ದರೆ, ಸ್ವರಾಜ್ ಪಕ್ಷದೊಂದಿಗೆ ನಾವಿಲ್ಲಿ ಸೇರುವ ಅಗತ್ಯವಿರುತ್ತಿರಲಿಲ್ಲ. ಅಂಥ ನೈತಿಕ ರಾಜಕಾರಣವನ್ನು ಪುನರ್ ಸ್ಥಾಪಿಸುವ ಅಗತ್ಯವಿದೆ' ಎಂದರು.

'ಸ್ವರಾಜ್ ಇಂಡಿಯಾ ಒಂದು ಪಕ್ಷವಲ್ಲ. ಒಂದು ಒಕ್ಕೂಟ. ಪಕ್ಷದೊಂದಿಗೆ  ಜನಸಂಗ್ರಾಮ ಪರಿಷತ್, ದಲಿತ ಸಂಘರ್ಷ ಸಮಿತಿ, ರೈತ ಸಂಘ ಸೇರಿದಂತೆ ಜನಪರ ಹೋರಾಟ ಸಂಘಟನೆಗಳು ಸೇರಿವೆ. ಈ ಸಂಘಟನೆಗಳು ತಮ್ಮೊಂದಿಗಿನ ಜನಸಮು­ದಾಯ­ವನ್ನು ಮತಗಳನ್ನಾಗಿ ಪರಿವರ್ತಿಸು ವಂತಾಗಬೇಕು. ಸಂಘಟನೆಯ ಮುಖಂಡರು  ಜನರೊಂದಿಗೆ ಗುರುತಿಸಿಕೊಳ್ಳಬೇಕು. ಆನಂತರ ಜನ ಮುಖಂಡರನ್ನು ಗುರುತಿಸುತ್ತಾರೆ' ಎಂದು ಅಭಿಪ್ರಾಯಪಟ್ಟರು.

ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರೊ.ಅಜಿತ್ ಝಾ ಜಿಲ್ಲಾ ಘಟಕ ಉದ್ಘಾಟಿಸಿ ಮಾತನಾಡಿ, 'ದೇಶದಲ್ಲಿ ಅಸಮಾನತೆ ತಾಂಡವವಾಡುತ್ತಿದೆ. ಶೇ 1ರಷ್ಟು ಶ್ರೀಮಂತರು, ಶೇ 75ರಷ್ಟು ಸಂಪತ್ತನ್ನು ಹಿಡಿದಿಟ್ಟುಕೊಂಡಿದ್ದಾರೆ. ಉಳ್ಳವರು, ಇಲ್ಲದವರನ್ನು ಶೋಷಿಸುತ್ತಿದ್ದಾರೆ. ಇವೆಲ್ಲವನ್ನು ಪ್ರಶ್ನಿಸುವಂತಹ ಸಮಾಜ ವನ್ನು ನಿರ್ಮಾಣ ಮಾಡುವುದು ಪಕ್ಷದ ಉದ್ದೇಶವಾಗಿದೆ' ಎಂದರು.

ಸಾರ್ವಜನಿಕರು ಪ್ರಜಾಪ್ರಭುತ್ವದಲ್ಲಿ ಭಾಗವಹಿಸಬೇಕು. ಪ್ರಜಾತಾಂತ್ರಿಕ ವ್ಯವಸ್ಥೆ, ಮೌಲ್ಯಗಳನ್ನು ಉಳಿಸಿ ಕೊಳ್ಳಬೇಕಾಗಿದೆ. ಲಕ್ಷಾಂತರ ಜನರ ಜತೆ ಸಂಪರ್ಕ ಇಟ್ಟುಕೊಳ್ಳಬೇಕಾಗುತ್ತದೆ. ನಾವು ನಾಯಕರಾಗಿ ಹೋಗದೇ ಸಂದೇ ಶವನ್ನೂ ಹೊತ್ತು ಜನರ ಬಳಿ ಹೋಗ ಬೇಕು. ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಬೇಕು ಎಂದರು.

ಸ್ವರಾಜ್ ಇಂಡಿಯಾ ಕರ್ನಾಟಕ ರಾಜ್ಯ ಸಂಘಟನಾ ಸಮಿತಿ ಸಂಚಾಲಕ ಅಮ್ಜದ್ ಪಾಷ, ಪಕ್ಷದ ರಾಜ್ಯ ಉಸ್ತು ವಾರಿ ಪುರುಷೋತ್ತಮ, ರಾಷ್ಟ್ರೀಯ ಸಮಿತಿ ಸದಸ್ಯ ಬಡಗಲಪುರ ನಾಗೇಂದ್ರ, ಕಾರ್ಯಕಾರಿ ಸಮಿತಿ ಸದಸ್ಯ ಕೆ.ಪಿ.ಸಿಂಗ್, ಮುಖಂಡರಾದ ಚಾಮರಸ ಮಾಲಿ ಪಾಟೀಲ್, ಕೆ.ಪಿ.ಭೂತಯ್ಯ, ಟಿ.ನುಲೇನೂರು ಎಂ.ಶಂಕರಪ್ಪ, ಬಿ.ಕುರುಣಾಕರ್, ಎನ್.ಡಿ.ವಸಂತ್‌ಕುಮಾರ್, ಹೆಬ್ಬಾಲೆ ಲಿಂಗರಾಜು, ರಶ್ಮಿ, ವಿ.ನಾಗರಾಜ್, ಬಸ್ತಿಹಳ್ಳಿ ಸುರೇಶ್‌ಬಾಬು ಅವರೂ ಇದ್ದರು.

ಜನ ಸಮುದಾಯ ಮತಗಳಾಗಬೇಕು’ 'ಸ್ವರಾಜ್ ಇಂಡಿಯಾ ಪಕ್ಷದ ನಿಲುವುಗಳನ್ನು ಒಪ್ಪುವ ರೈತ ಸಂಘ, ದಸಂಸ, ಜನಸಂಗ್ರಾಮ ಪರಿಷತ್ ನಂತಹ ಸ್ನೇಹಿ ಘಟನೆಗಳು, ಈಗಿನ ರಾಜಕಾರಣದಲ್ಲಿರುವ ಹಣದ ಹುಚ್ಚು ಹೊಳೆಯಲ್ಲಿ, ಈಜಾಡಲು ಸಾಧ್ಯವೇ' ಎಂದು ಪ್ರಶ್ನಿಸುತ್ತವೆ. ನಿನ್ನೆ ದಾವಣಗೆರೆಯಲ್ಲಿ ರೈತ ಸಂಘದವರು ಈ ಪ್ರಶ್ನೆ ಕೇಳಿದ್ದರು.

ಅದಕ್ಕೆ ನಾನು ಪ್ರಶ್ನೆ ಕೇಳಿದವರಿಗೆ ಮರು ಪ್ರಶ್ನೆ ಹಾಕುವ ಜತೆಗೆ ಸಾಧ್ಯತೆಯೊಂದನ್ನು ತೆರೆದಿಟ್ಟೆ. 'ಈಗ ಮೂರು ಪಂಚಾಯ್ತಿ ಚುನಾವಣೆಗಳಲ್ಲಿ (ಗ್ರಾ.ಪಂ, ತಾ.ಪಂ, ಜಿ.ಪಂ)ಗಳಲ್ಲಿ ರೈತ ಸಂಘ, ಜನ ಸಂಗ್ರಾಮ ಪರಿಷತ್, ದಲಿತ ಸಂಘರ್ಷ ಸಮಿತಿಯಿಂದ ಜನರನ್ನು ನಿಲ್ಲಿಸಿದರೆ ಏನಾಗಬಹುದು' ಎಂದು ಪ್ರಶ್ನಿಸಿದೆ. ಮುಖಂಡರು ಮರು ಯೋಚನೆ ಮಾಡದೆ 'ಖಂಡಿತಾ ಹೆಚ್ಚಿಗೆ ವೋಟು ತಗೊಂಡು ಗೆಲ್ಲಬಹುದು' ಎಂದರು.

ಈಗ ಸ್ವರಾಜ್ ಇಂಡಿಯಾ ಅಲ್ಲಿಂದಲೇ ರಾಜಕಾರಣ ಆರಂಭಿಸುತ್ತಿದೆ. ಈ ಸಂಘಟನೆಗಳ ಜತೆಗೆ, ಜನಾಂದೋಲನ ಮಹಾ ಮೈತ್ರಿ ಸಹಯೋಗದಲ್ಲಿ ಪಂಚಾಯ್ತಿಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುತ್ತಿದ್ದೇವೆ' ಎಂದು ದೇವನೂರ ಮಹಾದೇವ ಪಕ್ಷದ ಭವಿಷ್ಯದ ಹೆಜ್ಜೆಗಳನ್ನು ವಿವರಿಸಿದರು. 'ಯಾವುದೇ ಪಕ್ಷ ಚುನಾವಣೆಗೆ ಇಳಿಯುವ ಮುನ್ನ ತಾಲೀಮು ನಡೆಸಬೇಕು. ಹಾಗಾದಾಗ ಮಾತ್ರ, ರಾಜಕಾರಣದಲ್ಲಿನ ಹಣದ ಹುಚ್ಚು ಹೊಳೆ ಮಾತ್ರವಲ್ಲ, ಜಾತಿ ಹೊಳೆಯನ್ನು ಎದುರಿಸಲು ಸಾಧ್ಯವಿದೆ. ಆ ಕೆಲಸವನ್ನು ಪಕ್ಷ ಮಾಡುತ್ತಿದೆ' ಎಂದು ಅವರು ವಿವರಿಸಿದರು.

* * 

ಸ್ವರಾಜ್ ಇಂಡಿಯಾ ಪಕ್ಷ ಒಂದು ಪಕ್ಷವಲ್ಲ. ಇದೊಂದು ಜನಪರ ಆಂದೋಲನ ರೂಪಿಸುವ ಒಕ್ಕೂಟ. ನಮ್ಮದು ಒಂದು ಧ್ಯೇಯ ಪಡೆ.

- ಪ್ರೊ.ಅಜಿತ್ ಝಾ, ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry