ಹಿಂದುತ್ವ ಉಳಿವಿಗೆ ಶಿವಾಜಿ ಕೊಡುಗೆ ಅಪಾರ

7

ಹಿಂದುತ್ವ ಉಳಿವಿಗೆ ಶಿವಾಜಿ ಕೊಡುಗೆ ಅಪಾರ

Published:
Updated:

ಚನ್ನಗಿರಿ: ‘ಛತ್ರಪತಿ ಶಿವಾಜಿ ಮಹಾರಾಜರಿಂದ ದೇಶದಲ್ಲಿ ಹಿಂದುತ್ವ ಉಳಿದಿದೆ. ಹಿಂದೂ ಸಮಾಜವನ್ನು ಸಂಘಟಿಸಿದ ಶಿವಾಜಿ ಮಹಾರಾಜರನ್ನು ಈ ದೇಶಕ್ಕೆ ಕೊಡುಗೆಯಾಗಿ ನೀಡಿದವರು ಷಹಾಜಿ ರಾಜೇ ಭೋಂಸ್ಲೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಕ್ಷತ್ರಿಯ ಮರಾಠ ಸಮಾಜದಿಂದ ಮಂಗಳವಾರ ನಡೆದ ಷಹಾಜಿ ರಾಜೇ ಭೋಂಸ್ಲೆ ಅವರ 354ನೇ ಪುಣ್ಯತಿಥಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶಕ್ಕಾಗಿ ಪ್ರಾಣ ತೆತ್ತ ಸಮಾಜದವರ ಪೈಕಿ ಕ್ಷತ್ರಿಯರ ಮರಾಠ ಸಮಾಜದವರು ಪ್ರಮುಖರಾಗಿದ್ದಾರೆ. ಹೊದಿಗೆರೆ ಗ್ರಾಮದಲ್ಲಿ 1664ರಲ್ಲಿ ಷಹಾಜಿ ರಾಜೆ ಭೋಂಸ್ಲೆ ಅವರು ಬೇಟೆಯಾಡುವ ವೇಳೆ ಕುದುರೆಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು. ಅವರ ಸಮಾಧಿಯನ್ನು ಈ ಗ್ರಾಮದಲ್ಲಿ ಮಾಡಲಾಗಿದೆ. ಇಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹ 50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ, ಆದರೆ, ಅನುದಾನ ಇನ್ನೂ ಬಳಕೆಯಾಗಿಲ್ಲ’ ಎಂದು ಹೇಳಿದರು.

‘ಸಮಾಧಿ ಸ್ಥಳವನ್ನು ಪ್ರಸಿದ್ಧ ಪ್ರವಾಸಿ ಸ್ಥಳವನ್ನಾಗಿ ಮಾಡಲು ₹ 5 ಕೋಟಿ ಅನುದಾನ ಬಿಡುಗಡೆಗಾಗಿ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಮಾರ್ಚ್‌ ಅಂತ್ಯದೊಳಗೆ ಅನುದಾಣ ಬಿಡುಗಡೆಯಾಗುವ ನಿರೀಕ್ಷೆ ಇದೆ’ ಎಂದು ಹೇಳಿದರು.

ಬಿಜೆಪಿ ಮುಖಂಡ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ‘ಈ ಕ್ಷೇತ್ರದಲ್ಲಿ ಯಾತ್ರಿನಿವಾಸ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ₹ 1 ಕೋಟಿ ಅನುದಾನ ನೀಡಿದ್ದರು. ಅದರಲ್ಲಿ ಕೇವಲ ₹ 50 ಲಕ್ಷ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಬಾಕಿ ಉಳಿದಿರುವ ಅನುದಾನವನ್ನು ಬಳಸಿಕೊಂಡು ಅರ್ಧಕ್ಕೆ ನಿಂತಿರುವ ಯಾತ್ರಿನಿವಾಸದ ಕಾಮಗಾರಿಯನ್ನು ಪ್ರಾರಂಭಿಸಬೇಕು’ ಎಂದರು.

ಉಪನ್ಯಾಸ ನೀಡಿದ ಬೆಳಗಾವಿಯ ಸಂಭಾಜಿ ಬ್ರಿಗೇಡ್ ಸಂಘಟನಾ ಕಾರ್ಯದರ್ಶಿ ಸೌರವ್ ಖೇಡಕರ್, ‘ಶಿವಾಜಿ ಮಹಾರಾಜರು ಹಿಂದೂ ಧರ್ಮ ಸ್ಥಾಪನೆ ಮಾಡದೇ ಇದ್ದರೆ ಇಂದು ಭಾರತ ಹಿಂದೂ ರಾಷ್ಟ್ರವಾಗುತ್ತಿರಲಿಲ್ಲ. ಬ್ರಿಟಿಷರನ್ನು ಈ ದೇಶದಿಂದ ಓಡಿಸಲು ಅವರು ಕೆಚ್ಚದೆಯಿಂದ ಹೋರಾಡಿದ್ದರು. ಇಂದು ಹಿಂದುತ್ವ ಪದ ಅಜರಾಮರವಾಗಿ ಉಳಿಯಲು ಶಿವಾಜಿ ಮಹಾರಾಜರೇ ಕಾರಣರಾಗಿದ್ದಾರೆ’ ಎಂದು ಹೇಳಿದರು.

‘ದೇಶಕ್ಕಾಗಿ ಪ್ರಾಣತೆತ್ತ ಕ್ಷತ್ರಿಯ ಮರಾಠ ಸಮಾಜ ಪ್ರಸ್ತುತ ಪ್ರವರ್ಗ 3 ‘ಬಿ’ನಲ್ಲಿದೆ. ಇದನ್ನು ಪ್ರವರ್ಗ 2 ‘ಎ’ಗೆ ಸೇರಿಸಬೇಕು’ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಐರಣಿ ಹೊಳೆಮಠದ ಗುರು ಬಸವರಾಜ ದೇಶಿ ಕೇಂದ್ರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ದಾವಣಗೆರೆ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಯಶವಂತ್‌ರಾವ್ ಜಾಧವ್, ಬಸವಕಲ್ಯಾಣದ ಮುಖಂಡ ಮಾರುತಿ ರಾವ್ ಮೂಳೆ, ಸ್ಮಾರಕ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ವೈ. ಮಲ್ಲೇಶ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಟಿ.ವಿ. ರಾಜು, ಹೊದಿಗೆರೆ ರಮೇಶ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಸನ್ನ, ಎಪಿಂಎಸಿ ಸದಸ್ಯ ಪ್ರಕಾಶ್, ಭದ್ರಾವತಿ ಮರಾಠ ಸಮಾಜದ ಅಧ್ಯಕ್ಷ ಶಿವಾಜಿರಾವ್ ಸಿಂಧೆ, ತಾಲ್ಲೂಕು ಸಮಾಜದ ಅಧ್ಯಕ್ಷ ನಿಂಗೋಜಿರಾವ್, ವೈ.ಎಂ. ರಾಮಚಂದ್ರರಾವ್, ಶಿವಮೊಗ್ಗ ರೈತ ಸಂಘದ ಅಧ್ಯಕ್ಷ ಯಶವಂತ್‌ರಾವ್ ಘೋರ್ಪಡೆ, ಜೀಜಾಮಾತಾ ಮಹಿಳಾ ಮಂಡಳಿ ಅಧ್ಯಕ್ಷೆ ಗೌರಾಬಾಯಿ ಮೋಹಿತೆ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry