ರಾಹುಲ್‌ ಗಾಂಧಿ ಪ್ರವಾಸದ ವೇಳೆಯೂ ಬಂದ್: ಯಡಿಯೂರಪ್ಪ ಎಚ್ಚರಿಕೆ

7

ರಾಹುಲ್‌ ಗಾಂಧಿ ಪ್ರವಾಸದ ವೇಳೆಯೂ ಬಂದ್: ಯಡಿಯೂರಪ್ಪ ಎಚ್ಚರಿಕೆ

Published:
Updated:
ರಾಹುಲ್‌ ಗಾಂಧಿ ಪ್ರವಾಸದ ವೇಳೆಯೂ ಬಂದ್: ಯಡಿಯೂರಪ್ಪ ಎಚ್ಚರಿಕೆ

ಮಡಿಕೇರಿ: ‘ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಕರ್ನಾಟಕ ಪ್ರವಾಸದ ವೇಳೆಯಲ್ಲಿ ಮಹದಾಯಿ ವಿಚಾರವಾಗಿ ತಮ್ಮ ನಿಲುವು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿ ಬಂದ್‌ ಮೂಲಕ ಅವರಿಗೆ ಬಿಸಿ ಮುಟ್ಟಿಸಲು ನಮ್ಮ ಕಾರ್ಯಕರ್ತರು ಸಜ್ಜಾಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಎಚ್ಚರಿಸಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಬುಧವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ‘ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಅವರು ಮಹದಾಯಿ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಸ್ಯೆ ಬಗೆಹರಿಸುವ ಬದಲಿಗೆ ರಾಜಕಾರಣ ನಡೆಸುತ್ತಿದ್ದಾರೆ. ರಾಹುಲ್‌ ಗಾಂಧಿ ಭೇಟಿ ನೀಡುವ ಜಿಲ್ಲೆಗಳಿಗೆ ಸೀಮಿತವಾಗಿ ಬಂದ್‌ ನಡೆಯಲಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಗುರುವಾರ ನಡೆಯುತ್ತಿರುವ ಬಂದ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಮ್ಮಕ್ಕಿದೆ. ಮೈಸೂರಿನ ಬಿಜೆಪಿ ಸಮಾವೇಶ ವಿಫಲಗೊಳಿಸುವ ದುರುದ್ದೇಶದಿಂದ ಸಂಘಟನೆಗಳನ್ನು ಎತ್ತಿಕಟ್ಟುವ ಕೆಲಸಕ್ಕೆ ಮುಖ್ಯಮಂತ್ರಿ ಕೈಹಾಕಿದ್ದಾರೆ. ಪೂರ್ವ ನಿಗದಿಯಂತೆ ಸಮಾವೇಶ ನಡೆಯಲಿದೆ. ಫೆ. 4ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಅಂದೂ ಸಹ ಬಂದ್ ಕರೆ ನೀಡಲಾಗಿದೆ. ಬಿಜೆಪಿಯೊಂದು ರಾಷ್ಟ್ರೀಯ ಪಕ್ಷವಾಗಿದ್ದು, ನಮಗೂ ರಾಜಕಾರಣ ಗೊತ್ತಿದೆ. ಮುಂದೆ ತೋರಿಸುತ್ತೇವೆ’ ಎಂದು ಎಚ್ಚರಿಸಿದರು.

‘ಸಿದ್ದರಾಮಯ್ಯ ವಿರುದ್ಧ 67 ಪ್ರಕರಣಗಳು ದಾಖಲಾಗಿವೆ. ಕ್ಲೀನ್‌ ಚಿಟ್‌ ಪ್ರಯತ್ನ ನಡೆಯುತ್ತಿದ್ದು, ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮರುತನಿಖೆಗೆ ಆದೇಶಿಸಲಾಗುವುದು’ ಎಂದು ಹೇಳಿದರು.

ಸಿಬಿಐ ತನಿಖೆಗೆ ಆಗ್ರಹ: ‘ಮಲೇಷ್ಯಾದ ಮರಳು ಆಮದಿನಲ್ಲಿ ₨ 5,800 ಕೋಟಿಯಷ್ಟು ಅವ್ಯವಹಾರ ನಡೆದಿರುವ ಶಂಕೆಯಿದೆ. ಟೆಂಡರ್‌ ನಿಯಮ ಉಲ್ಲಂಘಿಸಿ ಬೋಗಸ್‌ ಕಂಪೆನಿಗೆ ಮರಳು ಪೂರೈಸುವ ಜವಾಬ್ದಾರಿ ನೀಡಲಾಗಿದೆ. ಇದು ಗಂಭೀರ ಪ್ರಕರಣವಾಗಿದ್ದು, ಸಿಬಿಐ ತನಿಖೆ ನಡೆಸಬೇಕು’ ಎಂದು ಯಡಿಯೂರಪ್ಪ ಆಗ್ರಹಿಸಿದರು.

‘ತಮಿಳುನಾಡು ಸರ್ಕಾರ ಮಲೇಷ್ಯಾದ ಪ್ರತಿಟನ್‌ ಮರಳಿಗೆ ₨ 925ಕ್ಕೆ ನೀಡಿದರೆ, ರಾಜ್ಯ ಸರ್ಕಾರವು ₨ 2,300 ನೀಡಿ ಖರೀದಿಸುತ್ತಿದೆ. ಚುನಾವಣೆ ಹತ್ತಿರದಲ್ಲಿರುವ ಕಾರಣ ಸಿದ್ದರಾಮಯ್ಯ ದೋಚಿಕೊಂಡು ಹೋಗಲು ಮುಂದಾಗಿದ್ದಾರೆ’ ಎಂದು ದೂರಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ‘ಹಿಂದೂ ಧರ್ಮ ಹಾಗೂ ದೇವಸ್ಥಾನ ಉಳಿಯಬೇಕಾದರೆ ಜಾತಿವಾದಿ ಸಿದ್ದರಾಮಯ್ಯ ಆಡಳಿತ ತೊಲಗಬೇಕು. ಎಸ್‌ಡಿಪಿಐ, ಪಿಎಫ್‌ಐ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನದಲ್ಲಿರುವ ಕಾಂಗ್ರೆಸ್‌ಗೆ ಬುದ್ಧಿ ಕಲಿಸಬೇಕು’ ಎಂದು ಕಾರ್ಯಕರ್ತರಲ್ಲಿ ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry