ಕೆಂಪು ರಾಜನಿಗೆ ಬಂತು ಭಾರಿ ಬೇಡಿಕೆ

7

ಕೆಂಪು ರಾಜನಿಗೆ ಬಂತು ಭಾರಿ ಬೇಡಿಕೆ

Published:
Updated:
ಕೆಂಪು ರಾಜನಿಗೆ ಬಂತು ಭಾರಿ ಬೇಡಿಕೆ

ಲಕ್ಷ್ಮೇಶ್ವರ: ಮಳೆ ಕೊರತೆಯಿಂದಾಗಿ ಇಳುವರಿ ಕುಂಠಿತಗೊಂಡು ‘ಕೆಂಪುರಾಜ’ನೆಂದೆ ಕರೆಯಲಾಗುವ ಒಣ ಮೆಣಸಿನಕಾಯಿಗೆ ಈ ಬಾರಿ ಭಾರೀ ಡಿಮ್ಯಾಂಡ್‌ ಬಂದಿದ್ದು ಬೆಲೆ ಈಗಾಗಲೇ ಗಗನ ಮುಖಿಯಾಗಿ ಗ್ರಾಹಕರಿಗೆ ತನ್ನ ಖಾರದ ರುಚಿ ಮುಟ್ಟಿಸಿದೆ. ಇದು ಅಖಂಡ ಧಾರವಾಡ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯೂ ಆಗಿದೆ.

ಎಲ್ಲಿ ಬೆಳೆಯುತ್ತಾರೆ: ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳ ಲಕ್ಷಾಂತರ ಹೆಕ್ಟೇರ್‌ ಪ್ರದೇಶಗಳಲ್ಲಿ ಮೆಣಸಿನಕಾಯಿ ಬೆಳೆಯುತ್ತದೆ. ಅದರಲ್ಲೂ ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಮಾಡಳ್ಳಿ, ಯತ್ನಳ್ಳಿ, ಯಳವತ್ತಿ, ಮಾಗಡಿ, ಗೊಜನೂರು, ಪುಟಗಾಂವ್‌ ಬಡ್ನಿ, ಬಟ್ಟೂರು, ಗೋವನಾಳ, ರಾಮಗಿರಿ, ಲಕ್ಷ್ಮೇಶ್ವರ, ಬಸಾಪುರ ಹಾಗೂ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಬಹುತೇಕ ಎಲ್ಲ ಭಾಗಗಳಲ್ಲಿ ರೈತರು ಕಡ್ಡಾಯವಾಗಿ ಮೆಣಸಿನಕಾಯಿ ಬೆಳೆಯುತ್ತಾರೆ.

ನಾಟಿ ಮಾಡುವ ವಿಧಾನ: ಮುಂಗಾರು ಮಳೆಗಾಲದಲ್ಲಿ ಬೀಜಗಳನ್ನು ಬಿತ್ತನೆ ಮಾಡುವುದರ ಮೂಲಕ ಮಡಿಗಳಲ್ಲಿ ಸಸಿಗಳನ್ನು ಬೆಳೆಸುತ್ತಾರೆ. ಆರಿದ್ರಾ ಮಳೆ ಆರಂಭದ ನಂತರ ಸಸಿಗಳನ್ನು ಹೊಲದಲ್ಲಿ ನಾಟಿ ಮಾಡುತ್ತಾರೆ. ಸಸಿ ನಾಟಿ ನಂತರ ಹಸಿ ಮಳೆ ಆದರೆ ಆ ವರ್ಷ ಬಂಪರ್‌ ಬೆಳೆ ಖಾತರಿ. ಮೆಣಸಿನಕಾಯಿ ಗಿಡದ ಬೇರುಗಳು ಬಹಳ ನಾಜೂಕು. ಹೀಗಾಗಿ ಇದಕ್ಕೆ ಹಗುರ ಮಳೆಯಾದರೂ ಸಾಕು ಚೆನ್ನಾಗಿ ಬೆಳೆಯುತ್ತದೆ.

ಇಳುವರಿ: ಚೆನ್ನಾಗಿ ಬೆಳೆ ಬಂದರೆ ಪ್ರತಿ ಎಕರೆಗೆ 5 ಕ್ವಿಂಟಲ್ ಇಳುವರಿ ಬರುತ್ತದೆ. ಆದರೆ ಈ ವರ್ಷ ಮಳೆರಾಯನ ಕಣ್ಣಾಮುಚ್ಚಾಲೆಯಿಂದಾಗಿ ಎಕರೆಗೆ ಎರಡು ಕ್ವಿಂಟಲ್‌ ಫಸಲು ಬರುವುದು ಕಷ್ಟ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿ ಮೆಣಸಿನಕಾಯಿಗೆ ಉತ್ತಮ ಧಾರಣಿ ಇದೆ.

ಈ ವರ್ಷ ಆರಂಭದಲ್ಲಿ ಮುಂಗಾರು ಚೆನ್ನಾಗಿ ಆಗಿತ್ತು. ಆದರೆ ನಂತರದ ದಿನಗಳಲ್ಲಿ ಮಳೆರಾಯ ಕೈಕೊಟ್ಟ. ಹೀಗಾಗಿ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದನ್ನು ಬೆಳೆಯುವ ಸಾಹಸಕ್ಕೆ ಕೈ ಹಾಕಲಿಲ್ಲ. ಈಗ ಬಂದಷ್ಟು ಫಸಲಿಗೆ ಉತ್ತಮ ಬೆಲೆ ದೊರೆಯುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ ಗುಣಮಟ್ಟದ ಮೆಣಸಿನಕಾಯಿ ಕ್ವಿಂಟಲ್‌ಗೆ ₹ 13 ಸಾವಿರದಿಂದ ₹ 15 ಸಾವಿರದವರೆಗೆ ಮಾರಾಟ ಆಗುತ್ತಿದೆ. ಇದು ರೈತರಿಗೆ ಖುಷಿ ಕೊಡುವ ವಿಷಯವೇ. ಆದರೆ ಗ್ರಾಹಕರಿಗೆ ತುಸು ಹೊರೆ ಆಗಿದೆ.

‘ಈ ವರ್ಷ ಮೆಣಸಿನಕಾಯಿನ ಭಾಳ ಮಂದಿ ಬೆಳದಿಲ್ರೀ. ಹಿಂಗಾಗಿ ರೇಟ್‌ ಚಲೋ ಐತಿ. ಈಗ ಒಂದ ಸಲಾ ಕಾಯಿ ಬಿಡಿಸೇವಿ. ಇನ್ನೇನ ಭಾಳ ಬರಂಗಿಲ್ಲ. ಈ ವರ್ಷ ರೇಟ್‌ ಕಡಿಮಿ ಆಗ ಚಾನ್ಸ್‌ ಇಲ್ರೀ’ ಎಂದು ರಾಮಗಿರಿ ಗ್ರಾಮದ ರೈತ ಶಂಕ್ರಣ್ಣ ಕಾಳೆ ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry