‘ಪ್ರಾಮಾಣಿಕರು ಕೆಲಸ ಮಾಡಲಾಗದು ಎಂಬ ಸಂದೇಶ ರವಾನೆ’

7

‘ಪ್ರಾಮಾಣಿಕರು ಕೆಲಸ ಮಾಡಲಾಗದು ಎಂಬ ಸಂದೇಶ ರವಾನೆ’

Published:
Updated:

ಅರಕಲಗೂಡು: ‘ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಮೂಲಕ ರಾಜ್ಯ ಸರ್ಕಾರ ದಕ್ಷ, ಪ್ರಾಮಾಣಿಕ ಅಧಿಕಾರಿಗಳು ಜಿಲ್ಲೆಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಕೆಟ್ಟ ಸಂದೇಶ ನೀಡಿದೆ’ ಎಂದು ಮಾಜಿ ಶಾಸಕ ಎ.ಟಿ ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು, 6ತಿಂಗಳ ಹಿಂದೆ ಜಿಲ್ಲೆಗೆ ಬಂದ ರೋಹಿಣಿ ಅವರು ಜಿಲ್ಲಾಧಿಕಾರಿಯಾಗಿ ದಕ್ಷತೆ, ಪ್ರಾಮಾಣಿಕತೆಗೆ ಹೆಸರಾಗಿದ್ದರು. ವರ್ಗಾವಣೆ ಖಂಡನೀಯ. ಹಣ ಲೂಟಿ ಹೊಡೆಯಲು ಬಿಡಲಿಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳನ್ನು ಎತ್ತಂಗಡಿ ಮಾಡಿರುವುದು ಅತ್ಯಂತ ಕೆಟ್ಟ ಇತಿಹಾಸವಾಗಿದೆ’ ಎಂದು ಆರೋಪಿಸಿದರು.

ರೋಹಿಣಿ ಅವರ ಆಡಳಿತದಲ್ಲಿ ಸಕಾರಾತ್ಮಕ ಅಂಶಗಳೇ ಹೆಚ್ಚಿದ್ದವು. ಜಿಲ್ಲೆಯಲ್ಲಿ ಆಡಳಿತಕ್ಕೆ ಚುರುಕು ಮುಟ್ಟಿಸಿದ್ದರು. ದಕ್ಷತೆಯಿಂದ ಮಹಾಮಸ್ತಕಾಭಿಷೇಕದ ಸಿದ್ಧತೆ ಕಾರ್ಯಗಳನ್ನು ನಿರ್ವಹಿಸಿದ್ದರು. ವರ್ಗಾವಣೆಯು ಮಹಾಮಸ್ತಕಾಭಿಷೇಕದ ಮೇಲೂ ಪರಿಣಾಮ ಬೀರಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ತ್ಯಾಗ, ಬಲಿದಾನಕ್ಕೆ ಹೆಸರಾದ ಬಾಹುಬಲಿ ಮಸ್ತಕಾಭಿಷೇಕದ ಸಮಯದಲ್ಲೆ ಪ್ರಾಮಾಣಿಕ ಅಧಿಕಾರಿ ವರ್ಗಾವಣೆಯಾಗಿದೆ. ಇದು, ಮಂತ್ರಿಗಳಿಗೆ ಬಾಹುಬಲಿಯ ಸಂದೇಶ ಕಿಂಚಿತ್ತೂ ಅರಿವು ಮೂಡಿಸಿಲ್ಲ ಎಂದು ತೋರಿಸಲಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳ ವರ್ಗಾವಣೆ ಖಂಡಿಸಿ ಜ. 25ರಂದು ಗುರುವಾರ ಸಂಸದ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಪ್ರತಿಭಟನೆ ಹಮ್ಮಿಕೊಂಡಿದೆ. ದಕ್ಷ ಹಾಗೂ ಪ್ರಾಮಣಿಕ ಅಧಿಕಾರಿಗಳಿಗೆ ನೈತಿಕ ಬೆಂಬಲ ನೀಡುವುದು ಇದರ ಉದ್ದೇಶ ಎಂದು ಹೇಳಿದರು. ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಎ.ಆರ್‌.ಜನಾರ್ದನ ಗುಪ್ತ ಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry