ಆದಿಯೂ, ಅಂತ್ಯವೂ ಇಲ್ಲದ ನಾಟಕ ಇದು

7

ಆದಿಯೂ, ಅಂತ್ಯವೂ ಇಲ್ಲದ ನಾಟಕ ಇದು

Published:
Updated:
ಆದಿಯೂ, ಅಂತ್ಯವೂ ಇಲ್ಲದ ನಾಟಕ ಇದು

‘ಈ ನಾಟಕ ಆಡುವ ದೃಷ್ಟಿಕೋನದಿಂದ ನಿಷ್ಪ್ರಯೋಜಕ. ಇದನ್ನು ಕೃತಕಾಭಿನಯದಿಂದ ಪ್ರದರ್ಶಿಸಲು ಅಸಾಧ್ಯ. ಆದ್ದರಿಂದ ಕಲ್ಪನಾ ತಪಸ್ಸಾಧ್ಯವಾದ ಮನೋರಂಗಭೂಮಿಯಲ್ಲಿಯೇ ಇದನ್ನು ಸೃಷ್ಟಿಸಿ ದೃಷ್ಟಿಸಬೇಕು’.

ಬಹುಶಃ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಓದಿ ನಂತರ ಈ ಅದೇ ಕೃತಿಯ ರಂಗ ಪ್ರಯೋಗ ನೋಡಿದವರಿಗೆ ‘ಶೂದ್ರತಪಸ್ವಿ’ ನಾಟಕದ ಮುನ್ನುಡಿಯಲ್ಲಿ ಕುವೆಂಪು ಬರೆದಿರುವ ಈ ನುಡಿಗಳು ನೆನಪಾಗದಿರದು.

ಕನ್ನಡ ಸಾಹಿತ್ಯ ಲೋಕದ ವಿಸ್ಮಯ ಎಂದೇ ಕರೆಸಿಕೊಳ್ಳುವ 700ಕ್ಕೂ ಹೆಚ್ಚು ಪುಟಗಳ ಬೃಹತ್ ಕಾದಂಬರಿಯೊಂದನ್ನು ಒಂದು ಚೌಕಟ್ಟಿನಲ್ಲಿ ಹಿಡಿದಿಟ್ಟು ರಂಗರೂಪವಾಗಿಸುವುದು ಸುಲಭವಲ್ಲ. ಏಕೆಂದರೆ, ಈ ಕಾದಂಬರಿ ವ್ಯಕ್ತಿಕೇಂದ್ರಿತ ಕಥೆಯೂ ಅಲ್ಲ. ಕುಟುಂಬವೊಂದರ ವ್ಯಥೆಯೂ ಅಲ್ಲ. ಸ್ವಾತಂತ್ರ್ಯಪೂರ್ವ ಮಲೆನಾಡು ಪ್ರದೇಶದಲ್ಲಿ 6 ತಿಂಗಳ ಅವಧಿಯಲ್ಲಾಗುವ ಆರ್ಥಿಕ, ಸಾಮಾಜಿಕ, ಧಾರ್ಮಿಕ ಸ್ಥಿತ್ಯಂತರಗಳನ್ನು ಕಾದಂಬರಿ ಹಿಡಿದಿಡುತ್ತದೆ. ಪ್ರೀತಿ, ರಾಗ, ದ್ವೇಷ, ಸ್ವಾರ್ಥ, ಜಾತಿ, ಧರ್ಮಗಳ ಅಸಮಾನತೆ, ಮೇಲುಕೀಳುಗಳ ಅಂತರ ಹೀಗೆ ಇಲ್ಲಿ ಎಲ್ಲವೂ ಇವೆ.

ಇವೆಲ್ಲವನ್ನೂ ಒಂದೇ ಚೌಕಟ್ಟಿನಲ್ಲಿ ನಿರೂಪಿಸುವುದು ಸವಾಲು. ಆ ನಿಟ್ಟಿನಲ್ಲಿ ನಾಟಕದ ನಿರ್ದೇಶಕ ಸಿ.ಬಸವಲಿಂಗಯ್ಯ ಅವರ ಪ್ರಯತ್ನ ಪ್ರಶಂಸನಾರ್ಹ. 150ಕ್ಕೂ ಹೆಚ್ಚು ಪಾತ್ರಗಳು, 70 ಕಲಾವಿದರು, 4 ಭಿನ್ನ ವೇದಿಕೆ, ಸುಂದರ ರಂಗಸಜ್ಜಿಕೆಯ ಮುಖೇನ ಭಿನ್ನವಾಗಿ ನಾಟಕ ಹೆಣೆದಿರುವುದು ವಿಸ್ಮಯ ಎನಿಸುತ್ತದೆ. ‘ಇಲ್ಲಿ ಯಾರು ಮುಖ್ಯರಲ್ಲ, ಯಾವುದೂ ಅಮುಖ್ಯವೂ ಅಲ್ಲ. ಯಾವುದಕ್ಕೂ ಆರಂಭವೂ ಇಲ್ಲ. ಅಂತ್ಯವೂ ಇಲ್ಲ...’ ಎಂಬ ಆಶಯವನ್ನು ನಾಟಕ ಕೊನೆಯವರೆಗೂ ಗಟ್ಟಿ ನಿಲುವಿನೊಂದಿಗೆ ಪ್ರತಿಪಾದಿಸುತ್ತದೆ. ಕುವೆಂಪು ಅವರೇ ಸ್ವತಃ ಕಾದಂಬರಿಯ ಮುನ್ನುಡಿಯಲ್ಲಿ ಹೇಳುವಂತೆ ಈ ಕಾದಂಬರಿಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಇಂತಹ ಕತೆಯನ್ನು ಪ್ರೇಕ್ಷಕರಿಗೆ ನಾಟಕದ ಮುಖೇನ ದಾಟಿಸುವಾಗ ನಿರೂಪಣಾ ಶೈಲಿ ಮುಖ್ಯವಾಗಿರುತ್ತದೆ. ಗ್ರಾಮೀಣ ಪ್ರದೇಶದ ಸಂವಹನಕಾರರಾರು, ಜನಪದ ಸಂಸ್ಕೃತಿಯ ರೂವಾರಿಗಳು ಆಗಿರುವ ಅಲೆಮಾರಿ ಸಮುದಾಯದ ಜೋಗಪ್ಪರು, ಸುಡುಗಾಡು ಸಿದ್ದರು, ಬುಡುಬುಡಿಕೆಯವರ ಮೂಲಕ ಕತೆಯ ನಿರೂಪಣೆ ಅರ್ಥಪೂರ್ಣವಾಗಿ ಸಾಗುತ್ತದೆ.

ಕಥೆಗಳ ಕಂತೆಯೇ ಬರಿದಾಗಿ ಕಿನ್ನರಿಯನ್ನೇ ನದಿಯಲ್ಲಿ ತೇಲಿಬಿಡಲು ಸಿದ್ಧನಾದ ಜೋಗಪ್ಪನ ಮೂಲಕ ಜನಪದ ಕಲೆಗಳ ಅವನತಿಯನ್ನು ಸೂಚ್ಯವಾಗಿ ಬಿಂಬಿಸುತ್ತಲೇ ನಾಟಕ ರಂಗದ ಮೇಲೆ ತೆರೆದುಕೊಳ್ಳುತ್ತದೆ. ಅಷ್ಟರಲ್ಲಿ ಎದುರಾಗುವ ಸ್ವಾಮೀಜಿಗಳು ನೀಡುವ ಉಂಗುರದಿಂದ ಕತೆ ನೇರವಾಗಿ ಮಲೆನಾಡಿಗೆ ಹೊರಳಿಕೊಳ್ಳುತ್ತದೆ. ತೀರ್ಥಹಳ್ಳಿಯ ಮೇಗರವಳ್ಳಿಯ ಪರಿಚಯ ದೊಂದಿಗೆ ಮಲೆಗಳಲಿ ಮದುಮಗಳು ನಾಟಕ ಆರಂಭವಾಗುತ್ತದೆ.

ಮಲೆನಾಡಿಗೆ ಆಗತಾನೆ ಪ್ರವೇಶಿಸುತ್ತಿದ್ದ ಆಧುನಿಕತೆಯ ಸೂಚನೆಯಾದ ಬೈಸಿಕಲ್ ಮೂಲಕ ನಿರೂಪಿಸುವುದು, ಸುಬ್ಬಣ್ಣ ಹೆಗಡೆಯವರ ಮನೆಯಲ್ಲಿ ಹಂದಿ ಹಿಡಿಯುವ ಸಾಹಸ, ಪೋಲಿಸರಿಗೆ ಚಳ್ಳೇಹಣ್ಣು ತಿನ್ನಿಸಿ ಪರಾರಿಯಾಗುವ ಗುತ್ತಿಯ ಪ್ರಸಂಗಗಳಲ್ಲಿ ಕಾದಂಬರಿ ಓದುವಾಗ ದಕ್ಕುವ ಅನುಭವವನ್ನು ರಂಗಪ್ರಯೋಗ ಕಟ್ಟಿಕೊಡಲಾರದು.

ನೈತಿಕತೆ ಅನೈತಿಕತೆ, ಧಾರ್ಮಿಕ ಹೇರಿಕೆ, ನಾಗರೀಕತೆ, ಜಾತಿ ಹೆಸರಿನಲ್ಲಿ ನಡೆಯುವ ಅಗಾಧ ಶೋಷಣೆಯನ್ನು ಕಾದಂಬರಿ ತೆರೆದಿಡುತ್ತದೆ. ರಂಗಪ್ರಯೋಗದಲ್ಲಿಯೂ ಈ ಎಲ್ಲ ಅಸಮಾನತೆ, ಅನೈತಿಕತೆ ಅಲ್ಲಿನ ಸಮಾಜದಲ್ಲಾಗುತ್ತಿರುವ ಸ್ಥಿತ್ಯಂತರಗಳ ಅನಾವರಣವಿದೆ. ಕಾದಂಬರಿಯ ರಂಗರೂಪ ಹಾಸ್ಯಪ್ರಧಾನವಾಗಿದೆ. ಮನರಂಜನೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಹಾಗಾಗಿ ಕಾದಂಬರಿಯ ನಿಜವಾದ ಆಶಯಗಳು ಗೌಣವಾಗಿರುವಂತೆ ಭಾಸವಾಗುತ್ತದೆ. ನಾಟಕ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತದೆ ಆದರೆ ಕಾಡುವುದಿಲ್ಲ. ಸಾಹಿತ್ಯ ಕೃತಿಯೊಂದನ್ನು ರಂಗರೂಪವಾಗಿಸುವಾಗ ಹಾಸ್ಯರಸ ಅನಿವಾರ್ಯ. ಇಲ್ಲವಾದಲ್ಲಿ  8 ಗಂಟೆಗಳ ದೀರ್ಘ ನಾಟಕವನ್ನು ವೀಕ್ಷಿಸುವುದು ಪ್ರಯಾಸವಾಗಬಹುದು.

ತಂದೆ–ತಾಯಿಯನ್ನು ಕಳೆದುಕೊಂಡು ದುಃಖಿಸುವ ಬಾಲಕ ಧರ್ಮ, ದಲಿತ ಸಮುದಾಯದ ತಿಮ್ಮಿಯ ತಂದೆ ಮತ್ತು ತಮ್ಮನನ್ನು ಕಂಬಕ್ಕೆ ಕಟ್ಟಿ ಹೊನ್ನಾಳಿ ಹೊಡೆತ ಹೊಡೆಯುವ ದಾರುಣ ಸನ್ನಿವೇಶ, ಮನೆಬಿಟ್ಟು ಹೋದ ಮಗನನ್ನು ನೆನೆದು ಕಣ್ಣೀರಿಡುವ ಸುಬ್ಬಣ್ಣ ಹೆಗಡೆ, ಕಣ್ಣ ಮುಂದೆಯೇ ನಡೆಯುವ ಕಾವೇರಿಯ ಅತ್ಯಾಚಾರ... ಹೀಗೆ ಅನೇಕ ಹೃದಯ ವಿದ್ರಾವಕ, ದಬ್ಬಾಳಿಕೆಗೊಳಗಾದವರ ದೃಶ್ಯಗಳು ಕರುಣಾ ರಸವನ್ನು ಉಕ್ಕಿಸುವ ಬದಲಾಗಿ ನಗೆಗಡಲಲ್ಲಿ ತೇಲಿಸುವಂತಿವೆ. ಆದರೆ, ಇದಕ್ಕೆ ವಿರುದ್ಧವಾಗಿ ಅತ್ಯಾಚಾರ ಅನಾಚಾರಗಳಿಂದ ನೆತ್ತರು ಹರಿದರು, ಜಾತಿ ಆಧಾರಿತ ಅಸಮಾನತೆ ಪರಾಕಾಷ್ಠೆ ತಲುಪಿದರೂ, ಮರುಗದ ಮನಸು, ತೇವವಾಗದ ವೀಕ್ಷಕರ ಕಣ್ಣಾಲೆಗಳು ಹುಲಿಯನ ಸಾವಿಗೆ ಹನಿಗೂಡುತ್ತವೆ. ಗುತ್ತಿ ಹಾಗೂ ಹುಲಿಯನ ನಡುವಿದ್ದ ಅವಿನಾಭಾವ ಸಂಬಂಧವು ಪ್ರೇಕ್ಷಕರ ಮನದಲ್ಲಿರುವ ಪ್ರಾಣಿಪ್ರೀತಿಯನ್ನು ಬಡಿದೆಬ್ಬಿಸುವಂತಿದೆ.

ನಾಟಕಗಳಲ್ಲಿ ರಂಗಸಂಗೀತ ಮಹತ್ವದ ಪಾತ್ರವಹಿಸುತ್ತವೆ. ಈ ನಾಟಕದಲ್ಲಿ ಸುಮಾರು 40 ಹಾಡುಗಳಿದ್ದರೂ ಮನದಾಳದಲ್ಲಿ ಯಾವ ಹಾಡು ಉಳಿಯುವುದಿಲ್ಲ. ರಂಗಸಂಗೀತಕ್ಕಿಂತ ಸಿನಿಮಾ ಸಂಗೀತವನ್ನು ಕೇಳಿದ ಅನುಭವ ದಕ್ಕುತ್ತದೆ. ‘ಮಲೆಗಳಲಿ ಮದುಮಗಳು ಪುಟ್ಟಪ್ಪನ ಕನಸಿನ ಕುಸುಮಗಳು...’ ಎಂಬ ಹಾಡಿನಿಂದ ಆರಂಭವಾಗಿ. ‘ಇಲ್ಲಿ ಯಾರು ಮುಖ್ಯರಲ್ಲ ಯಾರೂ ಅಮುಖ್ಯರಲ್ಲ’ ಎಂಬ ಕೊನೆಯ ಹಾಡಿನವರೆಗೂ ಬಹುತೇಕ ಎಲ್ಲ ಹಾಡುಗಳೂ ಸಿನಿಮಾ ಸಂಗೀತದ ಅನುಭವವನ್ನೇ ಕಟ್ಟಿಕೊಡುತ್ತವೆ. ‘ಸಾಬರು ನಾವು ಸಾಬರು..’ ಎಂಬ ಹಾಡಿನಲ್ಲಿ ಕಲಾವಿದರ ನೃತ್ಯ ನಿದ್ದೆಯ ಮಂಪರಿನಲ್ಲಿರುವ ಪ್ರೇಕ್ಷಕರನ್ನೂ ಎಚ್ಚರಿಸುತ್ತದೆ.

ರಂಗಸಜ್ಜಿಕೆ ಈ ನಾಟಕದ ಜೀವಾಳ. ಕೆರೆಯಂಗಳ, ಬಯಲುರಂಗ, ಬಿದಿರುಮೆಳೆರಂಗ ಹಾಗೂ ಹೊಂಗೆರಂಗಗಳಲ್ಲಿ ಪ್ರದರ್ಶನವಾಗುತ್ತದೆ. ಮೊದಲನೇ ವೇದಿಕೆಯಲ್ಲಿ ಮಲೆನಾಡಿನ ಪರಿಸರ, ಹಳ್ಳ, ಮರದ ಸಾರ (ಸೇತುವೆ), ಅಡಿಕೆ ಮರ, ಸುಬ್ಬಣ್ಣ ಹೆಗ್ಗಡೆ ಅವರ ಮನೆಗಳ ಅನಾವರಣವಿದ್ದರೆ, ಎರಡನೇ ವೇದಿಕೆಯಲ್ಲಿ ಮಲೆನಾಡಿನ ಮನೆಗಳ ಪರಿಚಯವಿದೆ. ಮೂರನೇ ವೇದಿಕೆಯಲ್ಲಿ ಮೇಗರವಳ್ಳಿಯಲ್ಲಿ ಆರಂಭವಾದ ಮಿಷನರಿ ಶಾಲೆ, ಬಾವಿ, ಬಿದಿರುಮೆಳೆ, ಅಂತಕ್ಕ ಶೆಡ್ತಿಯ ಅಂಗಡಿಗಳು ತೆರೆದುಕೊಳ್ಳುತ್ತವೆ. ನಾಲ್ಕನೇ ವೇದಿಕೆ ಹುಲಿಕಲ್ಲು ನೆತ್ತಿ, ವೆಂಕಟಪ್ಪ ನಾಯಕನ ಮನೆ ಗದ್ದೆಗಳ ಜೊತೆಗೆ ಗುತ್ತಿ ಮತ್ತು ತಿಮ್ಮಿ ಹೊಳೆದಾಟಿ ಕಾನೂರಿಗೆ ತಲುಪುವ ದೃಶ್ಯವನ್ನು ಅಷ್ಟೇ ನೈಜವಾಗಿ ನಿರೂಪಿಸಲು ಕೆರೆಯನ್ನು ಬಳಸಿಕೊಳ್ಳಲಾಗಿದೆ. ವಸ್ತ್ರ ಮತ್ತು ಪರಿಕರಗಳು ಕಾಲಘಟ್ಟ ಮತ್ತು ಪ್ರಾಂತ್ಯಕ್ಕೆ ಸೂಕ್ತವಾಗಿ ವಿನ್ಯಾಸಮಾಡಲಾಗಿದೆ. ಬೆಳಕಿನ ವಿನ್ಯಾಸವೂ ನೂತನವಾಗಿದೆ.

ಅಕ್ಷರ ಮಾಧ್ಯಮಕ್ಕೂ ದೃಶ್ಯ ಮಾಧ್ಯಮಕ್ಕೂ ನಡುವೆ ಅಗಾಧ ವ್ಯತ್ಯಾಸಗಳಿವೆ. ಒಂದು ಮಾಧ್ಯಮ ನೀಡುವ ಅನುಭವ ಹಾಗೂ ಸಾಧ್ಯತೆಗಳನ್ನು ಇನ್ನೊಂದು ಮಾಧ್ಯಮ ನೀಡಲಾರದು. ಹಾಗಾಗಿ ಕಾದಂಬರಿಯನ್ನು ಓದಿ ಅದರಿಂದ ಯಾವುದೇ ನಿರೀಕ್ಷಗಳಿಲ್ಲದೆ, ಕಾದಂಬರಿಯ ಆಶಯಗಳ ಗೊಡವೆಗೆ ಕಿವಿಗೊಡದೆ ಒಬ್ಬ ಸಾಮಾನ್ಯ ಪ್ರೇಕ್ಷಕರಾಗಿ ಈ ನಾಟಕವನ್ನು ನೋಡುವವರಿಗೆ ಅದರಲ್ಲಿನ ರಂಗಸಜ್ಜೆಕೆ, ಬೆಳಕು, ವಸ್ತ್ರವಿನ್ಯಾಸ ಬೆರಗು ಮೂಡಿಸುತ್ತದೆ. ಇದೇ ಮನಸ್ಥಿತಿಯನ್ನು ಇಡೀ ನಾಟಕವನ್ನು ನೆನೆದರೆ ರಂಗಭೂಮಿ ಮಾಧ್ಯಮದ ಅನನ್ಯ ಹಾಗೂ ನವೀನ ಪ್ರಯೋಗಗಳು ಆಪ್ತ ಎನಿಸುತ್ತವೆ.

‘ಮಲೆಗಳಲ್ಲಿ ಮದುಮಗಳು’ ನಾಟಕ ಪ್ರದರ್ಶನ: ರಂಗರೂಪ–ಕೆ.ವೈ.ನಾರಾಯಣಸ್ವಾಮಿ, ರಂಗವಿನ್ಯಾಸ–ಶಶಿಧರ ಅಡಪ, ಸಂಗೀತ ನಿರ್ದೇಶನ–ಹಂಸಲೇಖ, ನಿರ್ದೇಶನ–ಸಿ.ಬಸವಲಿಂಗಯ್ಯ. ಆಯೋಜನೆ–ರಾಷ್ಟ್ರೀಯ ನಾಟಕ ಶಾಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಸ್ಥಳ–ಕಲಾಗ್ರಾಮ ಮಲ್ಲತ್ತಹಳ್ಳಿ. ಜ.30ರವರೆಗೆ ಪ್ರತಿ ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ. ರಾತ್ರಿ 8.30. ಟಿಕೇಟ್‌ ದರ–₹249

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry