ಅವರೆ, ರುಚಿ ಸವಿಯಿರೆ

7

ಅವರೆ, ರುಚಿ ಸವಿಯಿರೆ

Published:
Updated:
ಅವರೆ, ರುಚಿ ಸವಿಯಿರೆ

ಮಲ್ಲೇಶ್ವರ ವೃತ್ತದ ಸುತ್ತಮುತ್ತ ಬೆಳ್ಳಂಬೆಳಿಗ್ಗೆಯೇ ಅವರೆ ಘಮ. ಕಚೇರಿಗೆ ಹೊರಟವರ ಒಂದು ದೃಷ್ಟಿ ರಸ್ತೆಯ ಮೇಲಿದ್ದರೆ, ಇನ್ನೊಂದು ದೃಷ್ಟಿ ಘಮ ಬರುವ ಕಡೆಗೆ ಇತ್ತು. ಕಚೇರಿಗೆ ಹೋಗುವ ಮೊದಲು ಅಲ್ಲಿಗೆ ಹೋಗೋಣ ಎನಿಸಿ ಅತ್ತ ಹೆಜ್ಜೆ ಹಾಕಿದೆ. ನನ್ನನ್ನು ಸ್ವಾಗತಿಸಿದ್ದು ಅವರೆಕಾಳುಗಳು. ಹಸಿರು ಟೀಶರ್ಟ್‌ ಧರಿಸಿದ್ದ ಒಂದಿಷ್ಟು ಮಂದಿಗೆ ಜನ ಬರುವುದರೊಳಗೆ ಅಡುಗೆ ಮಾಡಿ ಮುಗಿಸುವ ತವಕ.

ಹತ್ತಾರು ದೊಡ್ಡ ಬಾಣಲೆ. ಕುದಿಯುವ ಎಣ್ಣೆಗೆ ಹದ ಮಾಡಿದ ಹಿಟ್ಟನ್ನು ಸುರುಳಿಯಾಗಿ ಸುತ್ತುತ್ತಾ ಇಳಿಸಿದ್ದೇ ತಡ ಜಿಲೇಬಿ ಘಮ ಬಾಯಿಯಲ್ಲಿ ನೀರೂರಿಸಿತು. ತಡೆಯಲಾಗದೆ ಆರ್ಡರ್‌ ಮಾಡಿದೆ. ಒಂದು ಪ್ಲೇಟ್‌ಗೆ 20 ರೂಪಾಯಿ. ನಾಲ್ಕು ಜಿಲೇಬಿಗಳು ಬಂದವು. ಬಣ್ಣ ಹಸಿರಾದರೂ ರುಚಿಯಲ್ಲಿ ವ್ಯತ್ಯಾಸವಿರಲಿಲ್ಲ. ಸಿಹಿಸಿಹಿಯಾದ ಜಿಲೇಬಿ ಸವಿಯುವ ಹೊತ್ತಿಗೆ ಕ್ಯಾರೆಟ್‌ ಹಾಗೂ ಅವರೆಕಾಳು ಸೇರಿಸಿ ಮಾಡಿದ ಮೈಸೂರು ಪಾಕ್‌ ಮೇಲೆ ಕಣ್ಣು ಬಿತ್ತು.

ಅದನ್ನೂ ಸವಿಯುವ ಹೊತ್ತಿಗೆ ಹೊಟ್ಟೆ ಪೂರ್ತಿ ಸಿಹಿಯಾದಂತೆ ಭಾಸವಾಯಿತು. ಮನಸು ಬೇಡ ಎಂದರೂ ನಾಲಿಗೆ ಕೇಳಬೇಕಲ್ಲ, ಗುಂಡಗಿದ್ದ ಜಾಮೂನು (₹20) ಕೈಬೀಸಿ ಕರೆಯಿತು. ಅದನ್ನು ಮೆಲ್ಲುವ ಹೊತ್ತಿಗೆ ಅವರೆಕಾಯಿ ಹೋಳಿಗೆ (₹30), ಹಲ್ವಾ, ಚಿಕ್ಕಿ, ಶಿರಾ, ಜೆಲ್ಲಿ, ಹಿತಕಬೇಳೆ ಎಳ್ಳವರೆ, ಅವರೆಬೇಳೆ ಸ್ಟಿಕ್‌ ಮುಂತಾದ ಸಿಹಿ ತಿನಿಸುಗಳೂ ಘಮಘಮಿಸುತ್ತಿದ್ದವು. ಗಟ್ಟಿ ಮನಸು ಮಾಡಿ ಹೆಜ್ಜೆ ಮುಂದೆ ಹಾಕಿದರೆ ಖಾರದ ತಿನಿಸುಗಳು. ಸುಮ್ಮನಿರಲು ಸಾಧ್ಯವೇ? ಅವುಗಳ ರುಚಿಯನ್ನೂ ನೋಡಬೇಕು ಎನ್ನುವ ಆಸೆ.

ಗಂಟಲವರೆಗೆ ಬಂದಿದ್ದ ಸಿಹಿಯ ಸವಿ, ನಾಲಿಗೆ ಮೇಲೆ ಖಾರ ಬೀಳುತ್ತಿದ್ದಂತೆ ನಿಧಾನವಾಗಿ ಕರಗಲಾರಂಭಿಸಿತು. ಕಣ್ಣಲ್ಲಿ ನೀರು ತುಂಬಿಕೊಂಡರೂ ಬಿಡಲು ಮನಸಾಗದಂಥ ರುಚಿ ಅವುಗಳದ್ದು. ಹತ್ತಿರದಲ್ಲೇ ಇದ್ದ ಅವರೆಕಾಳು ದೋಸೆ (₹60) ಕೂಡಾ ಸುವಾಸನೆಯಿಂದಲೇ ಮನಸನ್ನು ಸೆಳೆಯಿತು. ಈರುಳ್ಳಿ, ಕೊತ್ತಂಬರಿ, ಅವರೆಬೇಳೆಗಳ ಮಿಶ್ರಣದಲ್ಲಿ ದಪ್ಪವಾಗಿ ಮೈದಳೆದಿತ್ತು. ಅದಕ್ಕೆ ಸಾಗು ಕೂಡ ಅವರೆ ಬೇಳೆಯದ್ದೇ. ಅರ್ಧ ದೋಸೆ ತಿನ್ನುವಷ್ಟಕ್ಕೇ ಹೊಟ್ಟೆ ತುಂಬಿತು.

ಸಾದಾ ಪಡ್ಡು ರುಚಿ ನೋಡಿದ್ದ ನನಗೆ ಅವರೆಬೇಳೆ ಪಡ್ಡು (₹40) ರುಚಿ ನೋಡುವ ಮನಸ್ಸಾಯಿತು. ಅದೂ ಅಷ್ಟೇ ಖಾರಖಾರವಾಗಿ ವಿಶೇಷ ರುಚಿಯಿಂದ ಮನ ಸೆಳೆಯಿತು. ಇನ್ನು ಅಲ್ಲಿದ್ದ ಅವರೆಬೇಳೆ ಬೋಂಡಾ, ವಡೆ, ನಿಪ್ಪಟ್ಟುಗಳ ಸ್ವಾದವೂ ಖುಷಿ ನೀಡಿತು.

ಅವರೆಕಾಳಿನ ಚಿತ್ರಾನ್ನ (₹40), ಪಲಾವ್‌ (₹40), ಉಸುಲಿ (₹20), ಮಸಾಲೆ ಇಡ್ಲಿ (₹20), ಪಾಯಸಗಳಿಗೂ (₹30) ಅಲ್ಲಿ ಬಹುಬೇಡಿಕೆ ಇತ್ತು. ಅವರೆಕಾಳಿನ ಕೇಸರಿಬಾತ್‌ ಸವಿಯುವವರ ಸಂಖ್ಯೆಯೂ ಕಡಿಮೆ ಇರಲಿಲ್ಲ.

ಹೊತ್ತೇರಿದಂತೆ ಮೇಳದ ಜನಸಂದಣಿಯೂ ಹೆಚ್ಚಾಗುತ್ತಿತ್ತು. ‘ಅವರೆಬೇಳೆಯಿಂದ ಇಷ್ಟೆಲ್ಲಾ ಅಡುಗೆ ಮಾಡಬಹುದಾ’ ಎಂದು ಜನರು ಅಚ್ಚರಿ ಪಡುತ್ತಿದ್ದರು. ಅಲ್ಲಿದ್ದವರು ಬರಿದಾಗುತ್ತಿರುವ ಜೇಬು, ದೇಹಕ್ಕೆ ಸೇರುತ್ತಿರುವ ಕ್ಯಾಲರಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ನಾನೂ ಅದನ್ನೆಲ್ಲಾ ಮರೆತೇಬಿಟ್ಟಿದ್ದೆ ಎನ್ನಿ. ಕೆಲಸಗಾರರ ನಗುಮುಖ, ಆದರಾತಿಥ್ಯ ಜನಜಂಗುಳಿಯ ಖುಷಿಯನ್ನೂ ಹೆಚ್ಚಿಸುತ್ತಿತ್ತು.

‘ಅವರೆಬೇಳೆ ಸಾರು, ದೋಸೆ, ಬಿಸಿಬೇಳೆ ಬಾತ್‌ ಹೀಗೆ ಖಾರದ ಆಹಾರಗಳನ್ನು ನಾವು ಮಾಡುತ್ತೇವೆ. ಆದರೆ ಸಿಹಿತಿಂಡಿಯನ್ನು ತಯಾರಿಸುವ ಸಾಹಸಕ್ಕೆ ಹೋಗಿಲ್ಲ. ಕಳೆದ ವರ್ಷ ವಿ.ವಿ.ಪುರಂಗೆ ಹೋಗಿದ್ದೆವು. ನಾವು ಕುಮಾರಪಾರ್ಕ್‌ನಲ್ಲಿರುವುದು. ಇಷ್ಟು ಹತ್ತಿರದಲ್ಲಿರುವುದರಿಂದ ಮನೆಯವರೆಲ್ಲ ಸೇರಿ ಬಂದಿದ್ದೇವೆ. ಎಲ್ಲ ತಿಂಡಿ ರುಚಿಯಾಗಿದೆ. ಬೆಲೆಯೂ ಪರವಾಗಿಲ್ಲ’ ಎಂದರು ವಿದ್ಯಾ.

ಅವರೆಕಾಯಿಯ ಇಷ್ಟೆಲ್ಲಾ ಖಾದ್ಯಗಳನ್ನು ಮೇಳದಲ್ಲಿ ಮಾತ್ರ ತಿನ್ನಲು ಸಾಧ್ಯ. ದೂರವಾದರೂ ವಿ.ವಿ. ಪುರಂಗೆ ಹೋಗುತ್ತಿದ್ದೆವು. ಮಲ್ಲೇಶ್ವರದಲ್ಲಿಯೇ ಆಗಿರುವುದು ಖುಷಿ ಕೊಟ್ಟಿದೆ. ಅಪರೂಪದ ಖಾದ್ಯ, ರುಚಿಯಾಗಿದೆ. ಹಣ ಏನೂ ಜಾಸ್ತಿ ಎನಿಸುತ್ತಿಲ್ಲ’ ಎಂದು ನಗು ಬೀರಿದರು ಲಕ್ಷ್ಮಿನಾರಾಯಣಪುರ ನಿವಾಸಿ ಶಾಂಭವಿ.

ಸ್ಥಳ: ಸರ್ಕಾರಿ ಶಾಲಾ ಮೈದಾನ, ಕೆ.ಜಿ.ಜನರಲ್‌ ಆಸ್ಪತ್ರೆ ಎದುರು, ಮಲ್ಲೇಶ್ವರ ವೃತ್ತ. ಜನವರಿ 28ರವರೆಗೆ ನಡೆಯಲಿದ್ದು ಬೆಳಿಗ್ಗೆ 11ರಿಂದ ರಾತ್ರಿ 10ರವರೆಗೆ.

ಅವರೆಕಾಳಿಗೆ ಬೇಡಿಕೆ

ಮೇಳ ಪ್ರಾರಂಭ ಆದಾಗಿನಿಂದ ಭಾಗವಹಿಸುತ್ತಿದ್ದೇನೆ. ರೈತರಿಗೆ ಇದು ಒಳ್ಳೆಯ ಅವಕಾಶ. ಇಲ್ಲಿ ಬರೀ ಅವರೆಕಾಳು, ಅವರೆಬೇಳೆಯನ್ನು ಮಾರುತ್ತಿದ್ದೇನೆ. ನಿತ್ಯ ಸುಮಾರು 200 ಕೆ.ಜಿ.ಯಷ್ಟು ಮಾರಾಟವಾಗುತ್ತದೆ. 1 ಲೀಟರ್‌ಗೆ 120, 1 ಕೆ.ಜಿ.ಗೆ 160 ರೂಪಾಯಿಯಂತೆ ಮಾರುತ್ತೇನೆ. ಬಿಡಿಸಿದ ಅವರೆಕಾಳನ್ನು ಹೆಚ್ಚು ದಿನ ಇಡಲು ಬರುವುದಿಲ್ಲ. ಹೀಗಾಗಿ ಇಂದು ತಂದಿದ್ದು ಇಂದೇ ಖಾಲಿ ಆಗಬೇಕು. ಉಳಿದರೆ ಕರಿದು ಮಿಕ್ಸ್‌ಚರ್‌ ಮಾಡಲು ಬಳಸುತ್ತೇವೆ. ನಿತ್ಯ ತಾಜಾ ಅವರೆಬೇಳೆಯನ್ನೇ ಮಾರುತ್ತೇವೆ.

ಕುಮಾರ, ರೈತರು, ಮಾಗಡಿ

***

ಪ್ರತಿ ಬಾರಿ ಹೊಸ ಖಾದ್ಯ

‘ಹದಿನೆಂಟು ವರ್ಷಗಳಿಂದಲೂ ನಮ್ಮ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದೆ. ಪ್ರತಿ ಸಲ ನಾವು ಪರಿಚಯಿಸುವ ಹೊಸ ರೆಸಿಪಿಯನ್ನೂ ಜನ ಮೆಚ್ಚಿಕೊಂಡಿದ್ದಾರೆ. ಜೊತೆಗೆ ಅವರೆ ಬೆಳೆಯುವ ರೈತರೂ ಹೆಚ್ಚಾಗಿದ್ದಾರೆ. ಹೀಗಾಗಿ ನಾವು ಮೇಳ ಮಾಡುವ ಸ್ಥಳವನ್ನು ವಿ.ವಿ.ಪುರಂ ಜತೆಗೆ ಮಲ್ಲೇಶ್ವರ ಹಾಗೂ ನಾಗರಬಾವಿಗೂ ವಿಸ್ತರಿಸಿದೆವು. ಮಲ್ಲೇಶ್ವರದಲ್ಲಿ ಕಳೆದ ವರ್ಷ ಇನ್ನೂ ಹೆಚ್ಚು ಜನ ಬಂದಿದ್ದರು. ಎಲ್ಲವನ್ನೂ ಇಲ್ಲೇ ಮಾಡಿ, ಇಲ್ಲೇ ನೀಡುತ್ತೇವೆ. ಇದುವರೆಗೆ ಒಂದು ಟನ್‌ನಷ್ಟು ಅವರೆಬೇಳೆ ಖಾದ್ಯ ಮಾಡಿದ್ದೇವೆ’ ಎಂದು ಹರ್ಷ ವ್ಯಕ್ತಪಡಿಸಿದರು ವಾಸವಿ ಕಾಂಡಿಮೆಂಟ್ಸ್‌ನ ಚೇತನ್‌.

ಈ ಬಾರಿ ಅವರೆಬೇಳೆ ಜೆಲ್ಲಿ, ಐಸ್‌ಕ್ರೀಂ ಜೊತೆಗೆ ಜಾಮೂನ್‌ ಹಾಗೂ ಅವರೆಕಾಳು ಸ್ಟಿಕ್‌ ಪರಿಚಯಿಸಲಾಗಿದೆ ಎಂದೂ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry