ಕುಂದಾಪುರ ರುಚಿಯ ಮೀನೂಟ

7

ಕುಂದಾಪುರ ರುಚಿಯ ಮೀನೂಟ

Published:
Updated:
ಕುಂದಾಪುರ ರುಚಿಯ ಮೀನೂಟ

ಕರಾವಳಿ ಹೋಟೆಲ್ ಎಂದೊಡನೆ ಕುಂದಾಪುರಡ ನೆನಪಾಗುವುದು ಸಹಜ. ಇದೇ ಕಾರಣಕ್ಕೆ ಇರಬಹುದು ನಗರದ ಗಲ್ಲಿಗಲ್ಲಿಗಳಲ್ಲಿ ಕುಂದಾಪುರ ಹೋಟೆಲ್‌ಗಳು ಕಾಣಿಸಿಕೊಳ್ಳುತ್ತಿವೆ. ಸಮುದ್ರದ ಮೀನಿನ ಖಾದ್ಯಗಳ ಸಾಂಪ್ರದಾಯಿಕ ರುಚಿ ಬಯಸುವವರ ಮೊದಲ ಆಯ್ಕೆ ಇಂಥ ಹೋಟೆಲ್‌ಗಳೇ ಆಗಿರುತ್ತವೆ. ನಗರದಲ್ಲಿ ಕರಾವಳಿ ಹೋಟೆಲುಗಳ ಸಂಖ್ಯೆ ಹೆಚ್ಚಾಗಲು ಅಲ್ಲಿನ ರುಚಿಯೇ ಕಾರಣ.

ಹೋಟೆಲುಗಳಲ್ಲಿ ಕೆಲಸ ಮಾಡಲೆಂದು ಕುಂದಾಪುರದಿಂದ ಬೆಂಗಳೂರಿಗೆ ಬಂದ ಮೂವರು ಯುವಕರು ಈಗ ತಮ್ಮದೇ ಸ್ವಂತ ಹೋಟೆಲು ತೆರೆದು ಕುಂದಾಪ್ರ ಸ್ವಾದವನ್ನು ಉಣಬಡಿಸುತ್ತಿದ್ದಾರೆ. ಐದು ವರ್ಷಗಳಿಂದ ನಗರದ ಕೆಲವು ಹೋಟೆಲುಗಳಲ್ಲಿ ಕೆಲಸ ಮಾಡಿ ಅನುಭವ ಪಡೆದ ಕುಂದಾಪುರದ ರವಿ, ವಿಜಯ್ ಮತ್ತು ಶಂಭುಗೌಡ ನಾಗದೇವನಹಳ್ಳಿ ಮುಖ್ಯರಸ್ತೆಯಲ್ಲಿ (ಅಂಬೇಡ್ಕರ್ ಕಾಲೇಜು- ಕೆಂಗೇರಿ ರಸ್ತೆ) ‘ಆರ್ಯ ಕರಾವಳಿ’ ಎಂಬ ಹೋಟೆಲು ಆರಂಭಿಸಿದ್ದಾರೆ.

ಕೆಟರಿಂಗ್ ಕ್ಷೇತ್ರದಲ್ಲಿ 12 ವರ್ಷಗಳ ಅನುಭವವಿರುವ ರವಿ ಹೋಟೆಲ್‌ ವಿಚಾರದಲ್ಲಿ ಒಂದು ರೀತಿ ಆಲ್‌ರೌಂಡರ್. ಚೈನೀಸ್, ಕರಾವಳಿ, ತಂದೂರಿ ಇವರಿಗೆ ಕರಗತ. ಅವರೇ ಇಲ್ಲಿನ ಮುಖ್ಯ ಬಾಣಸಿಗ. ಇನ್ನಿಬ್ಬರು ಚೈನೀಸ್ ಬಿಟ್ಟು ಬೇರೆಲ್ಲ ಅಡುಗೆಯಲ್ಲಿ ಪರಿಣಿತರು. ಅಡುಗೆ ತಯಾರಿ, ಸಪ್ಲೈ ಎಲ್ಲಾ ಕೆಲಸವನ್ನು ಮೂವರೂ ಮಾಡುತ್ತಾರೆ. ಸಹಾಯಕ್ಕೆಂದು ಎಂಟು ಹುಡುಗರಿದ್ದಾರೆ. ಇವರ ಪೈಕಿ ಇಬ್ಬರು ಈಶಾನ್ಯ ರಾಜ್ಯದವರು.

ಮೀನಿನ ಖಾದ್ಯಗಳು ‘ಆರ್ಯ ಕರಾವಳಿ’ಯ ವಿಶೇಷ. ಇದರ ಜೊತೆಗೆ ದಕ್ಷಿಣ- ಉತ್ತರ ಭಾರತ ಶೈಲಿಯ ಆಹಾರಗಳೂ ಸಿಗುತ್ತವೆ. ಕರಾವಳಿಯ ವಿಶೇಷ ಎನಿಸುವ ಮೀನಿನ ಸಾರು, ಅಂಜಲ್ ತವಾ ಫ್ರೈ, ಬೂತಾಯಿ ರವಾ ಫ್ರೈ, ಸಿಗಡಿ ಘೀ ರೋಸ್ಟ್, ಚಿಕನ್ ಸುಕ್ಕಾ, ಸಿಗಡಿ ಸುಕ್ಕಾ, ನೀರು ದೋಸೆ, ತಂದೂರ್ ರೋಟಿ, ಚಪಾತಿ, ಮುದ್ದೆಯೂ ಲಭ್ಯ. ಕಾಲು ಸೂಪು ಭಾನುವಾರದ ವಿಶೇಷ. 

ಇಲ್ಲಿ

 

‘ಮೀನಿನ ಸಾರು ತಯಾರಿಸುವಾಗ ಕೆಂಪು ಮಸಾಲೆಯನ್ನು ಮಾತ್ರ ನುಣ್ಣಗೆ ಅರೆದಿಟ್ಟುಕೊಳ್ಳುತ್ತೇವೆ. ನಂತರ ತೆಂಗಿನ ಕಾಯಿಯ ತಾಜಾ ಹಾಲು ತಗೆದು ಬಳಸುತ್ತೇವೆ. ಇಲ್ಲದಿದ್ದರೆ ಮಸಾಲೆ ನುಣ್ಣಗಾಗಲು ಮೂರ್ನಾಲ್ಕು ಗಂಟೆ ಗ್ರೈಂಡರ್‌ನಲ್ಲಿ ರುಬ್ಬಬೇಕಾಗುತ್ತದೆ. ತಾಜಾ ಮೀನುಗಳನ್ನು ಯಶವಂತಪುರದ ಮಾರುಕಟ್ಟೆಯಿಂದ ತರುತ್ತೇವೆ. ಅಲ್ಲಿಗೆ ಮಂಗಳೂರಿನಿಂದ ತಾಜಾ ಮೀನುಗಳು ಬರುತ್ತವೆ. ಆಯಾ ಸೀಸನ್‌ನಲ್ಲಿ ಸಿಗುವ ಮೀನಿನ ಖಾದ್ಯಗಳನ್ನು ತಯಾರಿಸುತ್ತೇವೆ’ ಎಂದು ಮುಖ್ಯ ಬಾಣಸಿಗ ರವಿ ಹೇಳುತ್ತಾರೆ.

ಕೇಟರಿಂಗ್‌ ಕುಟುಂಬ: ‘ನಮ್ಮದು ಬಾಣಸಿಗರ ಕುಟುಂಬ. ಊರಲ್ಲಿ ಅಣ್ಣಂದಿರು ಕೇಟರಿಂಗ್ ವ್ಯವಹಾರ ನಡೆಸುತ್ತಿದ್ದಾರೆ. ಹಾಗಾಗಿ ನನಗೂ ಆ ಕ್ಷೇತ್ರದಲ್ಲಿ ಅನುಭವವಿದೆ. ಬೆಂಗಳೂರಿನಲ್ಲಿ ನಾಲ್ಕಾರು ಕಡೆ ಕೆಲಸ ಮಾಡಿದ್ದೇನೆ. ಇಲ್ಲಿನ ಜನರಿಗೆ ಕರಾವಳಿಯ ಮೀನಿನ ಖಾದ್ಯಗಳ ಬಗ್ಗೆ ಹೆಚ್ಚಿನ ಕುತೂಹಲವಿದೆ. ಇಲ್ಲಿ ಮನೆಗಳಲ್ಲಿ ಮೀನಿನ ಸಾರು, ಖಾದ್ಯಗಳನ್ನು ತಯಾರಿಸುವುದಕ್ಕಿಂತ ಹೋಟೆಲುಗಳಲ್ಲಿ ಸವಿಯಲು ಬಯಸುವವರ ಸಂಖ್ಯೆಯೇ ಹೆಚ್ಚು. ಹಾಗಾಗಿ ನಮ್ಮಲ್ಲಿ ಮೀನಿನ ಖಾದ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ನಮ್ಮಲ್ಲಿ ಚಿಕನ್, ಮಟನ್, ಮೊಟ್ಟೆ, ಸಸ್ಯಾಹಾರ ಕೂಡಾ ಇದೆ. ಬೇರೆ ರಾಜ್ಯಗಳಿಂದ ಜ್ಞಾನಭಾರತಿ ಕ್ಯಾಂಪಸ್‌ಗೆ ಬರುವ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ತಂದೂರ್ ರೋಟಿ, ಚೈನೀಸ್ ಖಾದ್ಯಗಳನ್ನು ತಯಾರಿಸುತ್ತೇವೆ’ ಎನ್ನುತ್ತಾರೆ ರವಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry