‘ವೀರಶೈವ ಮಹಾಸಭಾಕ್ಕೆ ಪರ್ಯಾಯವಾಗಿ ಯಾವ ಸಭಾ ಹುಟ್ಟಿದರೂ ಗುರಿ ಮುಟ್ಟದು’

7

‘ವೀರಶೈವ ಮಹಾಸಭಾಕ್ಕೆ ಪರ್ಯಾಯವಾಗಿ ಯಾವ ಸಭಾ ಹುಟ್ಟಿದರೂ ಗುರಿ ಮುಟ್ಟದು’

Published:
Updated:
‘ವೀರಶೈವ ಮಹಾಸಭಾಕ್ಕೆ ಪರ್ಯಾಯವಾಗಿ ಯಾವ ಸಭಾ ಹುಟ್ಟಿದರೂ ಗುರಿ ಮುಟ್ಟದು’

ಬೆಳಗಾವಿ: ‘ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಪರ್ಯಾಯವಾಗಿ ಯಾವುದೇ ಸಭಾ ಹುಟ್ಟಿದರೂ ಅದು ಗುರಿ ಮುಟ್ಟಲು ಸಾಧ್ಯವಿಲ್ಲ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಉಷಾ ಕಾಲೊನಿಯಲ್ಲಿ ಮಹಾಲಕ್ಷ್ಮಿ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

‘ವೀರಶೈವ–ಲಿಂಗಾಯತ ಎರಡೂ ಒಂದೇ ಎನ್ನುವ ಮಹಾಸಭಾ ನಿರ್ಧಾರಕ್ಕೆ ಪಂಚಪೀಠಗಳವರು ಹಾಗೂ ವಿರಕ್ತ ಮಠಾಧೀಶರು ಬದ್ಧರಾಗಿದ್ದೇವೆ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಸಮಾನ ಪೀಠಾಚಾರ್ಯರ ಹಾಗೂ ನಿರಂಜನ ಶ್ರೀಗಳೊಂದಿಗೆ ವಿಚಾರ ವಿನಿಮಯ ನಡೆಸಿ ಮುಂಬರುವ ದಿನಗಳಲ್ಲಿ ಕ್ರಿಯಾಯೋಜನೆ ರೂಪಿಸಲಾಗುವುದು. ಧಾರ್ಮಿಕ ತಳಹದಿ ಮೇಲಷ್ಟೇ ಅಲ್ಲ, ಕಾನೂನು ರೀತಿಯಲ್ಲೂ ಎಲ್ಲ ಕ್ರಮಗಳನ್ನು ಕೈಗೊಂಡು ಸಮಾಜಕ್ಕೆ ಮಾರ್ಗದರ್ಶನ ನೀಡಲಾಗುವುದು’ ಎಂದು ತಿಳಿಸಿದರು.

ಯುಗಮಾನೋತ್ಸವದಲ್ಲಿ ಮಹತ್ವದ ನಿರ್ಧಾರ: ‘ವೀರಶೈವ ಲಿಂಗಾಯತ ಧರ್ಮದ ಹೆಸರಿನಲ್ಲಿ ಎಷ್ಟೋ ಸಂಘ – ಸಂಸ್ಥೆಗಳು ಹುಟ್ಟಬಹುದು. ಹುಟ್ಟು ಹಾಕುವುದು ಸುಲಭ. ಆದರೆ ಕಟ್ಟಿದ್ದನ್ನು ಬೆಳೆಸುವುದು ಸುಲಭವಲ್ಲ. ಮಾತನಾಡುವುದು ಸುಲಭ. ಅದರಂತೆ ನಡೆದುಕೊಳ್ಳುವುದು ತುಂಬಾ ಕಷ್ಟ. ಪಂಚ ಪೀಠಗಳು ಬೋಧನೆಗಷ್ಟೇ ಸೀಮಿತಗೊಳ್ಳದೇ ಸಂಸ್ಕೃತಿ, ಸದಾಚಾರ, ಸಭ್ಯತೆ, ಸಂಸ್ಕಾರ, ಸೌಜನ್ಯ, ಸೌಹಾರ್ದ, ದೇಶಪ್ರೇಮ, ಕ್ರಿಯಾಶೀಲ ಬದುಕು ಬೆಳೆಸಲು ಪ್ರಾಮಾಣಿಕ ಪ್ರಯತ್ನವನ್ನು ಇಂದಿಗೂ ಮಾಡುತ್ತಾ ಬಂದಿವೆ’ ಎಂದರು.

‘ಫೆ. 28ರಂದು ಬಾಳೆಹೊನ್ನೂರು ಧರ್ಮ ಪೀಠದಲ್ಲಿ ನಡೆಯುವ ಜಗದ್ಗುರು ರೇಣುಕಾಚಾರ್ಯ ಜಯಂತಿ ‘ಯುಗಮಾನೋತ್ಸವ’ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ ಸಂದರ್ಭದಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡು, ಅನುಷ್ಠಾನಗೊಳಿಸಲಾಗುವುದು’ ಎಂದು ಪ್ರಕಟಿಸಿದರು.

ಒಳಗಿನ ವೈರಿಗಳೇ ಹೆಚ್ಚು: ‘ವೀರಶೈವ ಧರ್ಮಕ್ಕೆ ಹೊರಗಿನವರಿಗಿಂತ ಒಳಗಿರುವ ವೈರಿಗಳೇ ಹೆಚ್ಚಾಗಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ವೀರಶೈವ ಧರ್ಮ ಉದಾತ್ತ ಮೌಲ್ಯಗಳನ್ನು ಬೆಳೆಸುತ್ತಿದೆ. ಎಲ್ಲ ಸಮುದಾಯಗಳಿಗೂ ಒಳಿತನ್ನೇ ಮಾಡುತ್ತಾ ಬಂದಿದೆ. ಈ ಧರ್ಮವೃಕ್ಷದ ಬೇರುಗಳು ಬಹಳ ಭದ್ರವಾಗಿವೆ. ಆದರೂ ಕಾಲಕಾಲಕ್ಕೆ ದಬ್ಬಾಳಿಕೆ ನಡೆಯುತ್ತಲೇ ಬಂದಿದೆ. ಈ ಧರ್ಮ ಸಂಸ್ಕೃತಿ ನಾಶಗೊಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ’ ಎಂದು ಪ್ರತಿಪಾದಿಸಿದರು.

‘ವೀರಶೈವ ಧರ್ಮಕ್ಕೆ ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲಗಳು ಮೂಲಾಧಾರವಾಗಿವೆ. ಇವುಗಳಲ್ಲಿ ನಂಬಿಕೆ, ಶೃದ್ಧೆ ಇಲ್ಲದವರು ವೀರಶೈವರಲ್ಲ, ಲಿಂಗಾಯತರೂ ಅಲ್ಲ. ಆಚರಣೆಯಿಂದ ಮಾತ್ರ ವೀರಶೈವರಾಗಬಹುದೇ ಹೊರತು ಕೇವಲ ಮಾತಿನಿಂದಲ್ಲ. ಪಂಚಪೀಠಗಳ ಜನಪ್ರಿಯತೆ ಮತ್ತು ಅದ್ಭುತ ಶಕ್ತಿ ಕಂಡು ದ್ವೇಷ ಅಸೂಯೆಯಿಂದ ಕೆಲವರು ಮಾತನಾಡುತ್ತಾರೆ. ನೀತಿಸಂಹಿತೆ ಮೀರಿ ನಡೆದವರಾರಿಗೂ ಒಳಿತಾಗಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಉಳ್ಳಾಗಡ್ಡಿ ಖಾನಾಪುರದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಬ್ಬೂರು ಗೌರಿಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry