ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಕೊಡಿ

Last Updated 24 ಜನವರಿ 2018, 19:30 IST
ಅಕ್ಷರ ಗಾತ್ರ

ಮುಖ್ಯಮಂತ್ರಿಯವರೇ,
ಕರ್ನಾಟಕದ ಜನರಿಗೆ ನೀವು ಅನೇಕ ಭಾಗ್ಯಗಳನ್ನು ನೀಡಿದ್ದೀರಿ. ಆದರೆ ಈಗ ಯುವ ಜನರಿಗೆ ಬೇಕಾಗಿರುವುದು ‘ಉದ್ಯೋಗ ಭಾಗ್ಯ’. ನಿಮ್ಮ ಸರ್ಕಾರದ ಉದ್ದೇಶ ‘ನವ ಕರ್ನಾಟಕ ನಿರ್ಮಾಣ’ ಮಾಡುವುದು. ಈ ಉದ್ದೇಶ ಈಡೇರಬೇಕಾದರೆ ನಿಮ್ಮ ಸರ್ಕಾರ ಯುವ ಜನರಿಗೆ ಉದ್ಯೋಗ ಭಾಗ್ಯ ನೀಡಲೇಬೇಕು.

ಕೆ.ಪಿ.ಎಸ್.ಸಿ. ಮೂಲಕ ಅನೇಕ ನೇಮಕಾತಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಎರಡು ವರ್ಷಗಳಿಂದ ಫಲಿತಾಂಶ ಪ್ರಕಟಿಸಿಲ್ಲ. ಈ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಒ.ಎಂ.ಆರ್. ಶೀಟ್‌ ಮೂಲಕ ಉತ್ತರಿಸುತ್ತಾರೆ. ಆದ್ದರಿಂದ ಅದರ ಫಲಿತಾಂಶ ಪ್ರಕಟಿಸಲು ವರ್ಷಾನುಗಟ್ಟಲೆ ಸಮಯ ಬೇಕಾಗಿಲ್ಲ. ಚುನಾವಣಾ ನೀತಿಸಂಹಿತೆ ಜಾರಿಗೆ ಬರುವ ಮೊದಲೇ ಫಲಿತಾಂಶ ಪ್ರಕಟಿಸಿ ನಮಗೆ ಉದ್ಯೋಗ ಭಾಗ್ಯ ಕಲ್ಪಿಸಿ.

ಕೆ.ಪಿ.ಎಸ್.ಸಿ. ಮೂಲಕ ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರು ಹಾಗೂ ಇನ್ನಿತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಆದರೆ ಒಂದು ಇಲಾಖೆಗೆ ನಡೆಸಿದ ಪರೀಕ್ಷೆಯ ಫಲಿತಾಂಶಕ್ಕೂ ಮೊದಲೇ ಮತ್ತೊಂದು ಇಲಾಖೆಯ ಪರೀಕ್ಷೆಗೆ ಅರ್ಜಿ ಕರೆದಿರುತ್ತಾರೆ. ಇದರಿಂದಾಗಿ ನಮಗೆ ಫಲಿತಾಂಶ ಕಾಣುವ ಭಾಗ್ಯವಿಲ್ಲದೆ, ಪದೇ ಪದೇ ಪರೀಕ್ಷೆಯ ಶುಲ್ಕ ಕಟ್ಟುವ ಭಾಗ್ಯ ಮಾತ್ರ ಒಲಿದಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ವಿಜ್ಞಾನ ವಿಷಯದ ಸಿಇಟಿ ಪರೀಕ್ಷೆ ಬರೆಯಲು ಟಿಇಟಿ ಪಾಸಾಗಿದ್ದ ಸಿಬಿಝಡ್ ಅಭ್ಯರ್ಥಿಗಳಿಗೆ ಅವಕಾಶ ನೀಡದಿರುವುದು ಈ ವಿಭಾಗದ ಅಭ್ಯರ್ಥಿಗಳಿಗೆ ಮಾಡಿದ ಅತಿ ದೊಡ್ಡ ಅನ್ಯಾಯ. ಸಿಬಿಝಡ್ ಅಭ್ಯರ್ಥಿಗಳು ವಿಜ್ಞಾನ ವಿಷಯಕ್ಕೆ ಅರ್ಹರಲ್ಲ ಎಂದು ಏಕಾಏಕಿ ನಿಯಮ ರೂಪಿ
ಸುವ ಮೂಲಕ ಟಿಇಟಿ ಪಾಸು ಮಾಡಿ, ಸಿಇಟಿಗಾಗಿ ತಯಾರಿ ನಡೆಸುತ್ತಿದ್ದ ಅದೆಷ್ಟೋ ಅಭ್ಯರ್ಥಿಗಳ ಉದ್ಯೋಗ ಪಡೆಯುವ ಕನಸನ್ನು ಹುಸಿಯಾಗಿಸಿದೆ. ಇದೀಗ ಸರ್ಕಾರಿ ಉದ್ಯೋಗದಲ್ಲಿರುವವರ ನಿವೃತ್ತಿ ವಯಸ್ಸನ್ನು 60 ರಿಂದ 62ಕ್ಕೆ ಏರಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಇದು ಇನ್ನಷ್ಟು ಆತಂಕ ತರುವ ವಿಚಾರ.

ಇತ್ತೀಚೆಗೆ ಕರ್ನಾಟಕದಾದ್ಯಂತ ಅನೇಕಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದೀರಿ. ಅದೇ ರೀತಿ ಕೆ.ಪಿ.ಎಸ್.ಸಿ. ನಡೆಸಿರುವ ಪರೀಕ್ಷೆಗಳ ಫಲಿತಾಂಶವನ್ನೂ ಆದಷ್ಟು ಬೇಗನೀಡಿ, ಉದ್ಯೋಗ ಭಾಗ್ಯಕ್ಕೂ ಚಾಲನೆ ನೀಡಬೇಕಾಗಿ ವಿನಂತಿ.

ಎಲ್ಲಾ ನಿರುದ್ಯೋಗಿಗಳ ಪರವಾಗಿ,

ದಿವ್ಯ ಜೈನ್, ನರಸಿಂಹರಾಜಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT