ಪ್ರಾಥಮಿಕ–ಪ್ರೌಢ ಹಂತದಲ್ಲಿ ಬೇಕು ನೀತಿ ಶಿಕ್ಷಣ

7

ಪ್ರಾಥಮಿಕ–ಪ್ರೌಢ ಹಂತದಲ್ಲಿ ಬೇಕು ನೀತಿ ಶಿಕ್ಷಣ

Published:
Updated:
ಪ್ರಾಥಮಿಕ–ಪ್ರೌಢ ಹಂತದಲ್ಲಿ ಬೇಕು ನೀತಿ ಶಿಕ್ಷಣ

ಜೀವನ ಹಾಗೂ ಶಿಕ್ಷಣ ಪರಸ್ಪರ ಪೂರಕವಾಗಿರಬೇಕಾದುದು ಅವಶ್ಯ. ಪಾಲಕರು ಜೀವ ನೀಡಿದರೆ, ಶಿಕ್ಷಣ ಜೀವನ ರೂಪಿಸುತ್ತದೆ. ಜೀವನಕ್ಕೆ

ನೈತಿಕತೆಯ ಚೌಕಟ್ಟನ್ನು ರೂಪಿಸಬೇಕಾದ ಮೊದಲ ಹಾಗೂ ಅಂತಿಮ ಕಾಳಜಿ ಶಿಕ್ಷಣದ್ದೇ ಆಗಿರುವುದರಿಂದ ನೀತಿ ಶಿಕ್ಷಣವು ಶಿಕ್ಷಣದ ಆಪ್ತ ಧ್ಯೇಯವಾಗಬೇಕಾದ ಎಲ್ಲಾ ಅರ್ಹತೆ ಹೊಂದಿದೆ.

‘ಶಿಕ್ಷಣದ ಅಂತಿಮ ಗುರಿ ಹಾಗೂ ಆಂತರಿಕ ತಿರುಳು ಚಾರಿತ್ರ್ಯ ನಿರ್ಮಾಣವೇ ಆಗಿದೆ’ ಎನ್ನುತ್ತಾನೆ ಪ್ಲೇಟೊ. ‘ನಮಗಿಂದು ಬೇಕಿರುವುದು ಮನುಷ್ಯರನ್ನು ರೂಪಿಸುವ, ನೈತಿಕ ಸಾಕಾರ ಚೇತನಗಳನ್ನು ರೂಪಿಸುವ ಶಿಕ್ಷಣ’ ಎನ್ನುತ್ತಾರೆ ಸ್ವಾಮಿ ವಿವೇಕಾನಂದ. ‘ಚಾರಿತ್ರ್ಯ ರೂಪಿಸದ ಶಿಕ್ಷಣ ಅರ್ಥಹೀನ’ ಎಂಬುದು ಗಾಂಧೀಜಿ ಮಾತು. ಇವರೆಲ್ಲರ ಮೂಲ ಕಾಳಜಿ ನೈತಿಕತೆಯನ್ನು ಶಿಕ್ಷಣದ ನೆಲೆಗಟ್ಟನ್ನಾಗಿಸುವುದೇ ಆಗಿದೆ. Mere information with no formation is not at all Education worth the term. ಮೌಲ್ಯರಹಿತವಾದ ಕೇವಲ ಮಾಹಿತಿ ಪ್ರಧಾನ ಶಿಕ್ಷಣ ನಿಜ ಅರ್ಥದ ಶಿಕ್ಷಣ ಅಲ್ಲವೇ ಅಲ್ಲ. ಮಾಹಿತಿ ಪೂರೈಸುವ ಪ್ರಕ್ರಿಯೆ ಶಿಕ್ಷಣದ ಒಂದು ಆಯಾಮವೇ ಹೊರತು ಅದು ಪೂರ್ಣತ್ವವಾಗಲಾರದು. ನೀತಿ ಶಿಕ್ಷಣವು ಶಿಕ್ಷಣದ ಪೂರ್ಣತ್ವದ ನಿರ್ಣಾಯಕ ಅಂಶ.

‘ಎಣ್ಣೆ ಬತ್ತಿಗಳೆರಡು ಹೊತ್ತಿ ಬೆಳಗುವ ತೆರದಿ/ ಸತ್ಯ ನೀತಿಗಳೆರಡು ಬೆಳಗುತಿಹವು/ ಜೋಡಗಲೆ ಕತ್ತಲೀ ಜಗವು ಸರ್ವಜ್ಞ’. ಸರ್ವಜ್ಞನ ಈ ವಚನ ಸಾಮಾಜಿಕ ಜೀವನದಲ್ಲಿ ನೈತಿಕತೆಯ ಮಹತ್ವವನ್ನು ಪ್ರತಿಪಾದಿಸುತ್ತದೆ. ಸದ್ಯದ ಸನ್ನಿವೇಶದಲ್ಲಿ ವಿದ್ಯಾರ್ಥಿ ಸಮೂಹದಲ್ಲಿ ಸಾಮಾಜಿಕವಾಗಿ ಅಪೇಕ್ಷಿತವಲ್ಲದ ಗುಣಶೀಲತೆಗಳು, ವಿಚಾರ ವಿಧಾನಗಳು, ಚಟುವಟಿಕೆಗಳು ಹೆಚ್ಚಳಗೊಳ್ಳುತ್ತಿವೆ. ಸದ್ಯದ ಶಿಕ್ಷಣ ಪ್ರಕ್ರಿಯೆ ಹಾಗೂ ಜೀವನದ ಧ್ಯೇಯಗಳು ಹೆಚ್ಚು ಹೆಚ್ಚು ಭೌತಿಕ ಹಾಗೂ ಐಹಿಕವಾಗುತ್ತಿವೆ. ಮೌಲ್ಯಗಳ ಕುಸಿತ, ವ್ಯಾಪಕ ಹಿಂಸಾಚಾರ, ಭ್ರಷ್ಟಾಚಾರ, ಭಾವಶೂನ್ಯ ಬದುಕು, ದಿಢೀರ್‌ ಶ್ರೀಮಂತಗೊಳ್ಳುವ ಹಪಹಪಿ, ಹಾಸುಹೊಕ್ಕಾಗಿರುವ ವಾಮಮಾರ್ಗಗಳು, ಮಾನವ ಸಂಬಂಧಗಳಲ್ಲಿ ಹೆಪ್ಪುಗಟ್ಟಿರುವ ವ್ಯಾವಹಾರಿಕತೆ, ತೀವ್ರ ಹಾಗೂ ತೀಕ್ಷ್ಣಗೊಳ್ಳುತ್ತಿರುವ ಸ್ವಾರ್ಥ, ಸಂಕುಚಿತತೆಗಳು, ತತ್ವರಹಿತ ರಾಜಕಾರಣ, ಸತ್ವರಹಿತ ಶಿಕ್ಷಕ... ಒಟ್ಟಾರೆಯಾಗಿ ಸಾರ್ವಜನಿಕ ಬದುಕಿನಲ್ಲಿ ನೈತಿಕತೆಯ ದಿವಾಳಿಕೋರತನ ದಟ್ಟಗೊಳಿಸುತ್ತಿವೆ.

ವರ್ಗಕೋಣೆಗಳಲ್ಲಿ ಹಿಂಸಾಚಾರ, ಅಶಿಸ್ತು, ಕಲಿಕೆಯಿಂದ ವಿಮುಖತೆ, ಶಿಕ್ಷಣದ ಪರೀಕ್ಷಾ ಪ್ರಾಧಾನ್ಯದಿಂದಾಗಿ ಹುಟ್ಟಿಕೊಂಡಿರುವ ಅಕ್ರಮ, ಅವ್ಯವಹಾರಗಳು, ಅಪ್ರಸ್ತುತ ಅಂಶಗಳನ್ನೊಳಗೊಂಡಿರುವ ದೋಷಪೂರ್ಣ ಪಠ್ಯಗಳು, ನೀರಸ ಬೋಧನೆ, ಆರ್ಥಿಕ ಸ್ವಾವಲಂಬನೆಗೆ ಸಿದ್ಧಗೊಳಿಸುವಲ್ಲಿ ವಿಫಲವಾಗುತ್ತಿರುವ ಶಿಕ್ಷಣ ಪದ್ಧತಿ ಹಾಗೂ ಅದು ಹುಟ್ಟು ಹಾಕುತ್ತಿರುವ ಭ್ರಮನಿರಸನ, ಟಿ.ವಿ ಹಾಗೂ ಚಲನಚಿತ್ರಗಳು ತೀವ್ರಗೊಳಿಸುತ್ತಿರುವ ಲೈಂಗಿಕತೆ, ಹಿಂಸಾಚಾರ ಹಾಗೂ ಆಕರ್ಷಕ ಬದುಕಿನ ಬಲವತ್ತರ ವ್ಯಾಮೋಹ, ರಾಷ್ಟ್ರ ನಾಯಕರಲ್ಲಿ ಶೂನ್ಯಗೊಳ್ಳುತ್ತಿರುವ ಆದರ್ಶ, ಮಹಿಳಾ ಶೋಷಣೆ ಹಾಗೂ ಅಮಾನುಷ ವರ್ತನೆ, ಬಾಲಾರೋಪಗಳ ಹೆಚ್ಚಳ ಇತ್ಯಾದಿ ಅಂಶಗಳಿಂದ ತುಂಬಿ ತುಳುಕುತ್ತಿರುವ ಸದ್ಯದ ಬದುಕಿನ ಸನ್ನಿವೇಶ, ಜೀವನದಲ್ಲಿ ನೈತಿಕತೆ ನುಚ್ಚುನೂರಾದ ದುರಂತ ಚಿತ್ರಣವನ್ನು ನೀಡುತ್ತದೆ.

ದಿಕ್ಕು ತಪ್ಪುತ್ತಿರುವ ಬದುಕಿಗೆ ಶಿಕ್ಷಣ ಮಾತ್ರ ದಿಕ್ಸೂಚಿಯಾಗಬಲ್ಲದು. 1964–66ರ ಭಾರತೀಯ ಶಿಕ್ಷಣ ಅಯೋಗವು ತನ್ನ ವರದಿಯಲ್ಲಿ ನೀತಿಶಿಕ್ಷಣದ ಕೊರತೆಯನ್ನು ಅತ್ಯಂತ ವಿಷಾದದಿಂದ ಪ್ರಸ್ತಾಪಿಸಿದೆ, ‘ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಅವಶ್ಯಕತೆ ತೀವ್ರವಿರುವ ಸದ್ಯದ ಸಂದರ್ಭದಲ್ಲಿ ನಮ್ಮ ಶಿಕ್ಷಣ ಚಾರಿತ್ರ್ಯ ನಿರ್ಮಾಣಕ್ಕೆ ಪ್ರಾಶಸ್ತ್ಯ ನೀಡಿಲ್ಲ. ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸುವ ಯಾವ ಪ್ರಯತ್ನವೂ ಇಲ್ಲ. ಅದರಲ್ಲೂ ವಿಶೇಷವಾಗಿ ಪ್ರಜಾಸತ್ತಾತ್ಮಕ ಮತ್ತು ಸಮಾಜವಾದಿ ಸಮಾಜದ ಸ್ಥಾಪನೆಗಾಗಿ ಅವಶ್ಯಕ ಒಲವು– ನಿಲುವುಗಳನ್ನು, ಮೌಲ್ಯಗಳನ್ನು ರೂಪಿಸುವ ಬಗ್ಗೆ ಶಿಕ್ಷಣದಲ್ಲಿ ಅವಕಾಶವಿಲ್ಲ’.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಹಂತದಿಂದಲೇ ನೈತಿಕತೆ ನೆಲೆಗಟ್ಟಿನ ಶಿಕ್ಷಣವನ್ನು ರೂಪಿಸಿ ಕಾರ್ಯಗತಗೊಳಿಸಲು ಸಾಧ್ಯವಿದೆ. ಶಾಲೆಯ ಪರಿಸರವನ್ನು ಸುಂದರ ಹಾಗೂ ಸ್ವಾಸ್ಥ್ಯಪೂರ್ಣಗೊಳಿಸಲು ಮಕ್ಕಳನ್ನು ಸಕ್ರಿಯವಾಗಿ ತೊಡಗಿಸಬೇಕು. ವರ್ಗ ಕೋಣೆಗಳನ್ನು, ಆವರಣವನ್ನು ಸ್ವಚ್ಛವಾಗಿರಿಸುವುದು, ಆವರಣದಲ್ಲಿ ಗಿಡ ನೆಡುವುದು,  ಶೈಕ್ಷಣಿಕ ಪೂರಕ ಚಿತ್ರ, ಬರಹಗಳಿಂದ ವರ್ಗಕೋಣೆಯನ್ನು ಅರ್ಥಪೂರ್ಣಗೊಳಿಸುವುದು ಮುಂತಾದ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದರಿಂದ ಶಾಲೆಯ ಬಗ್ಗೆ ಮಧುರ ಭಾವನೆಗಳು ಮಕ್ಕಳಲ್ಲಿ ಹಂದರಗೊಳ್ಳುತ್ತವೆ. ಇಂದು ಶಾಲೆಯನ್ನು ಪ್ರೀತಿಸುವುದನ್ನು ಕಲಿಯುವ ಮಕ್ಕಳು ನಾಳೆ ರಾಷ್ಟ್ರವನ್ನು ಪ್ರೀತಿಸುವುದನ್ನೂ ಅಂತರ್ಗತಗೊಳಿಸಿಕೊಳ್ಳುತ್ತಾರೆ. ಮಕ್ಕಳಲ್ಲಿ ನೈತಿಕತೆ ಬಲಗೊಳಿಸುವಲ್ಲಿ ಬೋಧನೆ ಬಲವಾದ ಹಾಗೂ ವಿಶ್ವಾಸಾರ್ಹವಾದ ಅಸ್ತ್ರ. ‘ರಾಷ್ಟ್ರದ ಭವಿಷ್ಯ ವರ್ಗಕೋಣೆಗಳಲ್ಲಿ ರೂಪುಗೊಳ್ಳುತ್ತದೆ’ ಎಂಬ ಕೊಠಾರಿ ಆಯೋಗದ ವರದಿಯ ಆರಂಭಿಕ ಸಾಲು, ನೈತಿಕತೆಯ ಸದೃಢ ನೆಲೆಗಟ್ಟು ಸಶಕ್ತ ಬೋಧನಾ ಪ್ರಕ್ರಿಯೆಯ ಮೂಲಕ ಸಾಧ್ಯವಾಗಬಲ್ಲದೆಂಬುದನ್ನು ಧ್ವನಿಸುತ್ತದೆ. ಭಾಷಾ ಬೋಧನೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಚಿತ್ರಕಲೆ ಬೋಧನೆಗಳಲ್ಲಿ ಮಾಹಿತಿಯ ಜೊತೆ ಜೊತೆಗೆ ಮೌಲ್ಯಗಳ ಹೊನ್ನ ಎಳೆಗಳನ್ನು ಶಿಕ್ಷಕ ಸಮರ್ಥವಾಗಿ ನೇಯಬಲ್ಲ. ಪಠ್ಯದ ಉಕ್ಕಿನ ಚೌಕಟ್ಟನ್ನು ಮುರಿದು ಪಠ್ಯದಾಚೆಗೂ ಬೋಧನೆಯನ್ನು ವಿಸ್ತರಿಸುವ ಬೋಧನಾ ಕೌಶಲದ ಸಾಹಸಕ್ಕೆ ಶಿಕ್ಷಕ ಮುಂದಾಗಬೇಕು. ಈ ಶಿಕ್ಷಕ ಕೇವಲ ವಿಷಯ ಬೋಧಕನಾದರೆ ಸಾಲದು. ವ್ಯಕ್ತಿತ್ವ ವಿಕಸನದ ಸಾಧಕನಾಗಬೇಕು.

ಭಾಷಾ ಬೋಧನೆಯ ಶಿಕ್ಷಕ, ಗದ್ಯ ಪದ್ಯಗಳಲ್ಲಿ ಬರುವ ವಿವರಗಳಲ್ಲಿ ನೈತಿಕ ಅಂಶಗಳನ್ನೊಳಗೊಂಡ ವಿವರಗಳಿಗೆ ವಿಶೇಷ ಪ್ರಾಶಸ್ತ್ಯ ನೀಡಿ ಮಕ್ಕಳ ಮನ ಮುಟ್ಟುವ, ಭಾವ ತಟ್ಟುವ, ಅಂತಃಕರಣದ ಅಂತರ್ಜಲ ಉಕ್ಕೇರಿಸುವ ಕಾರ್ಯ ಸಾಧಿಸಬೇಕು. ತಾಯಿ ಹೇಳಿದ ಶೂರವೀರರ ಕತೆಗಳು ಶಿವಾಜಿಯನ್ನು ರೂಪಿಸಿದರೆ, ಹರಿಶ್ಚಂದ್ರ ನಾಟಕ ಗಾಂಧೀಜಿಯನ್ನು ರೂಪಿಸಿತು. ಶ್ರೀ ಸುಂದರಂ ಎಂಬ ಇಂಗ್ಲಿಷ್ ಶಿಕ್ಷಕರು ಬೋಧಿಸಿದ ರಾಬರ್ಟ್‌ ಬ್ರೌನಿಂಗ್‌ರ (Robert Browning) The Pied Piper of Hamelin ಕವಿತೆ ಕುವೆಂಪು ಅವರಲ್ಲಿನ ಕವಿ ಹೃದಯವನ್ನು ಪ್ರೇರೇಪಿಸಿ ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’ ಕಥನ ಕವನ ಬರೆಯಲು ಕಾರಣವಾಯಿತು. ಇದೇ ರೀತಿಯ ಪ್ರಾಮಾಣಿಕ ಕಳಕಳಿ ಹಾಗೂ ಸತ್ವಶಾಲಿ ಬೋಧನೆ ಶಿಕ್ಷಕರಿಂದ ಸಾಧ್ಯವಾದರೆ ವರ್ಗಕೋಣೆಯಲ್ಲಿಯ ಮಕ್ಕಳ ಮನದಂಗಳದಲ್ಲಿ ನೈತಿಕತೆ ಹಾಗೂ ಸೃಜನಶೀಲತೆ ಸಮೃದ್ಧವಾಗಿ ಅಭಿವ್ಯಕ್ತಿಗೊಳ್ಳಲು ಸಾಧ್ಯವಿದೆ.

ಶಿಕ್ಷಕನ ವ್ಯಕ್ತಿತ್ವಕ್ಕಿಂತ ಶ್ರೇಷ್ಠ ಪಠ್ಯಪುಸ್ತಕ ಬೇರೊಂದಿಲ್ಲ ಎಂದು ಗಾಂಧೀಜಿ ಹೇಳುತ್ತಾರೆ. ಭೀಮಜಿ ರಾಮ್‌ಜಿ ಸತ್ಪಾಲ್ ಹೆಸರಿನ ವಿದ್ಯಾರ್ಥಿ ಅಂಬೇಡ್ಕರ್ ಎಂದು ತಮ್ಮನ್ನು ಕರೆದುಕೊಂಡದ್ದು ತಮ್ಮ ಬಾಲ್ಯದ ದಿನಗಳಲ್ಲಿ ಪ್ರೀತಿಯಿಂದ ತಮಗೆ ಕಲಿಸಿ ಕಲಿಯಲು ಪ್ರೋತ್ಸಾಹಿಸಿ ತಮ್ಮ ಏಳ್ಗೆಗೆ ಕಾರಣರಾದ ತಮ್ಮ ಗುರು ಅಂಬಾವಾಡೇಕರ್‌ರ ಮೇಲಿನ ಗೌರವಾರ್ಥ ಎಂಬುದನ್ನು ಗಮನಿಸಬಹುದು.

ಸಾಂಸ್ಕೃತಿಕ ವಿಪತ್ತಿನ (Cultural Crisis) ಸವಾಲಿಗೆ ನಲುಗುತ್ತಿರುವ ಪ್ರಸ್ತುತ ಜಗತ್ತಿಗೆ ಒಂದು ಆತ್ಮ ಬೇಕಿದೆ. ವ್ಯಕ್ತಿಗೆ ಒಂದು ನೈತಿಕ ಶಕ್ತಿ ಬೇಕಿದೆ. ಬದುಕಿಗೆ ಒಂದು ಅರ್ಥ ಬೇಕಿದೆ. ಬಾಳಿಗೆ ಒಂದು ಸಾರ್ಥಕತೆ ಬೇಕಿದೆ. ಶಿಕ್ಷಣ ಅದನ್ನು ಪೂರೈಸಬೇಕಿದೆ.

ಶಿಕ್ಷಣದಲ್ಲಿ ಏನೆಲ್ಲಾ ದೋಷಗಳಿರಬಹುದು, ಲೋಪಗಳಿರಬಹುದು, ಕೊರತೆಗಳಿರಬಹುದು. ಗೆಲುವು ಅಂತಿಮವಾಗಿ ಹೋರಾಟಗಾರರ ಬದ್ಧತೆಯನ್ನು ಅವಲಂಬಿಸಿರುವಂತೆ ಶಿಕ್ಷಣದ ಯಶಸ್ಸು ಅಂತಿಮವಾಗಿ ಶಿಕ್ಷಕರ ಬದ್ಧತೆಯನ್ನು ಅವಲಂಬಿಸಿದೆ. ನೀತಿ ಶಿಕ್ಷಣದ ಯಶಸ್ಸು ಹಾಗೂ ಶ್ರೇಯಸ್ಸು ಅಂತಿಮವಾಗಿ ಶಿಕ್ಷಕರ ವೃತ್ತಿ ಸಾಮರ್ಥ್ಯ, ವೃತ್ತಿ ನಿಷ್ಠೆ ಹಾಗೂ ಇವುಗಳಿಗಿಂತ ಮಿಗಿಲಾಗಿ ಶಿಕ್ಷಕರ ವ್ಯಕ್ತಿತ್ವ ಶ್ರೇಷ್ಠತೆಯನ್ನು ಅವಲಂಬಿಸಿದೆ. ನಾಳಿನ ಜಗತ್ತಿಗೆ ಇಂದಿನ ಶಿಕ್ಷಕರ ವ್ಯಕ್ತಿತ್ವದ್ದೇ ಉತ್ತರದಾಯಿತ್ವದ ಹೊಣೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry