ಕಲ್ಲು ತೂರಿ, ರೈಫಲ್‌ ಕಸಿದುಕೊಂಡ ಅಪರಾಧಿ

7
ರಾಮನಗರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಘಟನೆ

ಕಲ್ಲು ತೂರಿ, ರೈಫಲ್‌ ಕಸಿದುಕೊಂಡ ಅಪರಾಧಿ

Published:
Updated:
ಕಲ್ಲು ತೂರಿ, ರೈಫಲ್‌ ಕಸಿದುಕೊಂಡ ಅಪರಾಧಿ

ರಾಮನಗರ: ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಯೊಬ್ಬ ಮಾಧ್ಯಮದವರು, ವಕೀಲರತ್ತ ಕಲ್ಲು ತೂರಿ, ಪೊಲೀಸರ ರೈಫಲ್‌ ಕಸಿದುಕೊಂಡ ಘಟನೆಯು ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬುಧವಾರ ಮಧ್ಯಾಹ್ನ ನಡೆಯಿತು.

ಆಪರಾಧಿ ಸಲೀಂ (35), ನ್ಯಾಯಾಲಯದಿಂದ ಹೊರಬರುವ ಸಂದರ್ಭ ಪತ್ರಕರ್ತರು ಹಾಗೂ ವಕೀಲರು ಎದುರಾದರು. ರೊಚ್ಚಿಗೆದ್ದ ಆತ ನೆಲದಲ್ಲಿ ಬಿದ್ದಿದ್ದ ಇಟ್ಟಿಗೆಯನ್ನು ತೆಗೆದು ಪತ್ರಕರ್ತರ ಮೇಲೆ ಬೀಸಿದ. ಆವೇಶದಲ್ಲಿ ಪೊಲೀಸರ ರೈಫಲ್ ಕಸಿದುಕೊಂಡ. ಪೊಲೀಸರು ಎಚ್ಚೆತ್ತುಕೊಂಡು ರೈಫಲ್ ಅನ್ನು ವಶಕ್ಕೆ ಪಡೆದು, ಅಪರಾಧಿಯನ್ನು ಆಟೊದಲ್ಲಿ ಕರೆದೊಯ್ದರು. ಆಟೊ ಹತ್ತುವ ಮುನ್ನವೂ ಕಲ್ಲನ್ನು ಎತ್ತಿಕೊಂಡು ಬೀಸಿದ. ಕಲ್ಲು ನೆಲಕ್ಕೆ ಬಿದ್ದಿದ್ದು, ಯಾರಿಗೂ ಗಾಯವಾಗಲಿಲ್ಲ.

ಅಪರಾಧಿಯನ್ನು ಯಾವುದೇ ಮುಂಜಾಗ್ರತಾ ಕ್ರಮ ವಹಿಸದೇ ಹೊರಗೆ ಕರೆ ತಂದದ್ದು ಹಾಗೂ ಸರ್ಕಾರಿ ವಾಹನ ಬಳಸದೇ ಆಟೊದಲ್ಲಿ ಕರೆದುಕೊಂಡು ಹೋಗಿದ್ದರ ಬಗ್ಗೆ ಸ್ಥಳದಲ್ಲಿ ಇದ್ದ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ಮರಣದಂಡನೆ ಶಿಕ್ಷೆ: ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಆರೋಪದ ಮೇಲೆ ಸಲೀಂಗೆ ಇಲ್ಲಿನ ಮೂರನೇ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಬುಧವಾರ ಮರಣದಂಡನೆ ಶಿಕ್ಷೆ ವಿಧಿಸಿತು.

2012ರ ಆಗಸ್ಟ್ 15ರಂದು ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆಯ ಜನತಾ ಕಾಲೊನಿಯಲ್ಲಿ ಈ ದುಷ್ಕೃತ್ಯ ನಡೆದಿತ್ತು. ಬೆಂಗಳೂರಿನ ಗೋರಿಪಾಳ್ಯದ ನಿವಾಸಿಯಾಗಿದ್ದ ಸಲೀಂ ಅಂದು ತಾವರೆಕೆರೆಯಲ್ಲಿನ ಅಕ್ಕನ ಮನೆಗೆ ಬಂದಿದ್ದ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಬೀಡಿ ತರಿಸಿಕೊಳ್ಳುವ ನೆಪದಲ್ಲಿ ಪಕ್ಕದ ಮನೆಯ ಬಾಲಕಿಯನ್ನು ಮನೆಗೆ ಕರೆಯಿಸಿಕೊಂಡು ಅತ್ಯಾಚಾರ ನಡೆಸಿ, ಅಲ್ಲಿಯೇ ಕೊಲೆ ಮಾಡಿದ್ದ. ತಾವರೆಕೆರೆ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.

‘ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಗೋಪಾಲಕೃಷ್ಣ ರೈ ಅವರು ಅತ್ಯಾಚಾರ ಕೃತ್ಯಕ್ಕೆ 10 ವರ್ಷ ಸಜೆ ಹಾಗೂ ₹50 ಸಾವಿರ ದಂಡ ಮತ್ತು ಕೊಲೆ ಆಪಾದನೆಗೆ ಮರಣದಂಡನೆ ಶಿಕ್ಷೆ ವಿಧಿಸಿದರು' ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಎಂ.ಡಿ. ರಘು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry