ಮೈಸೂರು ವಿ.ವಿ ತಂಡ ಚಾಂಪಿಯನ್

7

ಮೈಸೂರು ವಿ.ವಿ ತಂಡ ಚಾಂಪಿಯನ್

Published:
Updated:
ಮೈಸೂರು ವಿ.ವಿ ತಂಡ ಚಾಂಪಿಯನ್

ಮೈಸೂರು: ಕೊನೆಯ ಕ್ಷಣದಲ್ಲಿ ಎದುರಾದ ಒತ್ತಡವನ್ನು ಮೆಟ್ಟಿನಿಂತ ಆತಿಥೇಯ ಮೈಸೂರು ವಿಶ್ವವಿದ್ಯಾನಿಲಯ ತಂಡದವರು ಬುಧವಾರ ಇಲ್ಲಿ ಕೊನೆಗೊಂಡ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಕೊಕ್ಕೊ ಟೂರ್ನಿಯಲ್ಲಿ ಚಾಂಪಿಯನ್ ಆದರು.

ವಿ.ವಿ. ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೈಸೂರು ತಂಡ 14–13 ರಲ್ಲಿ ಪುಣೆಯ ಸಾವಿತ್ರಿಬಾಯಿ ಫುಲೆ ವಿ.ವಿ ತಂಡವನ್ನು ಮಣಿಸಿತು. 34 ವರ್ಷಗಳ ಬಿಡುವಿನ ಬಳಿಕ ಮೈಸೂರಿನ ತಂಡ ಈ ಸಾಧನೆ ಮಾಡಿದೆ. 1983–84 ರಲ್ಲಿ ಕೊನೆಯದಾಗಿ ಚಾಂಪಿಯನ್ ಅಗಿತ್ತು.

ಸಾಕಷ್ಟು ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯ ನೆರೆದವರನ್ನು ರಂಜಿಸಿತು. ಮೊದಲಾರ್ಧ ಕೊನೆಗೊಂಡಾಗ ಮೈಸೂರು ವಿ.ವಿ 6–7 ರಲ್ಲಿ ಹಿನ್ನಡೆ ಅನುಭವಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಸಾವಿತ್ರಿಬಾಯಿ ತಂಡದವರು ಆರು ಪಾಯಿಂಟ್‌ ಕಲೆಹಾಕಿದರು. ಇದರಿಂದ ಮೈಸೂರು ತಂಡಕ್ಕೆ ಪ್ರಶಸ್ತಿ ಗೆಲ್ಲಲು ಎದುರಾಳಿ ತಂಡದ ಎಂಟು ಆಟಗಾರರನ್ನು ಔಟ ಮಾಡಬೇಕಿತ್ತು. ಅದರಲ್ಲಿ ಯಶಸ್ವಿಯಾಯಿತಲ್ಲದೆ, ಕಿರೀಟ ಮುಡಿಗೇರಿಸಿಕೊಂಡಿತು.

ನಾಲ್ಕು ನಿಮಿಷ 50 ಸೆಕೆಂಡು ಆಡಿದ್ದಲ್ಲದೆ ಮೂರು ಪಾಯಿಂಟ್ ಕಲೆಹಾಕಿದ ಎ.ವಿ.ಮಧು ಮತ್ತು ಮೂರು ನಿಮಿಷ 50 ಸೆಕೆಂಡು ಆಡಿದ್ದಲ್ಲದೆ ಇಬ್ಬರನ್ನು ಔಟ್ ಮಾಡಿದ ಜೆ.ಎಸ್.ಕಿರಣ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೈಸೂರು ವಿ.ವಿ ತಂಡದವರು ಇದೇ ತಾಣದಲ್ಲಿ ಕಳೆದ ವಾರ ನಡೆದಿದ್ದ ದಕ್ಷಿಣ ವಲಯ ಅಂತರ ವಿ.ವಿ ಕೊಕ್ಕೊ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. ಎಂಟು ದಿನಗಳ ಅಂತರದಲ್ಲಿ ಎರಡು ಪ್ರಮುಖ ಪ್ರಶಸ್ತಿಗಳನ್ನು ಗೆದ್ದುಕೊಂಡ ಸಾಧನೆ ಮಾಡಿದ್ದಾರೆ.

ಮೈಸೂರು ವಿ.ವಿ ತಂಡ ಬೆಳಿಗ್ಗೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ 15–9 ರಲ್ಲಿ ಮಂಗಳೂರು ವಿ.ವಿ ತಂಡವನ್ನು ಮಣಿಸಿತು. ವಿಜಯಿ ತಂಡದ ಪ್ರವೀಣ್‌ ಮತ್ತು ಕಿರಣ್ ಕುಮಾರ್ ಉತ್ತಮ ಆಟವಾಡಿದರು.ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಸಾವಿತ್ರಿಬಾಯಿ ಫುಲೆ ತಂಡ 20–17 ರಲ್ಲಿ ಕೊಲ್ಲಾಪುರದ ಶಿವಾಜಿ ವಿ.ವಿ ತಂಡವನ್ನು ಸೋಲಿಸಿತು.‌

ಈ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪೈಪೋಟಿ ನಡೆಸಿದ್ದವು. ಬಾರಿಯ ಚಾಂಪಿಯನ್ ಮಹಾರಾಷ್ಟ್ರದ ನಾಂದೇಡ್‌ನ ಎಸ್‌ಆರ್‌ಟಿಎನ್ ವಿ.ವಿ ಮತ್ತು ‘ರನ್ನರ್ ಅಪ್’ ಮುಂಬೈ ವಿ.ವಿ ತಂಡಗಳು ಕ್ವಾರ್ಟರ್ ಫೈನಲ್‌ನಲ್ಲೇ ಸೋಲು ಅನುಭವಿಸಿದ್ದವು.

ವೈಯಕ್ತಿಕ ಪ್ರಶಸ್ತಿ: ಉತ್ತಮ ಆಲ್‌ರೌಂಡರ್: ಜಿ.ಅಕ್ಷಯ್ (ಸಾವಿತ್ರಿಬಾಯಿ ಫುಲೆ ವಿ.ವಿ), ಉತ್ತಮ ಡಿಫೆಂಡರ್: ಜೆ.ಎಸ್.ಕಿರಣ್ (ಮೈಸೂರು ವಿ.ವಿ), ಉತ್ತಮ ದಾಳಿಗಾರ: ಎ.ವಿ.ಮಧು (ಮೈಸೂರು ವಿ.ವಿ).

*

ಪ್ರಶಸ್ತಿ ಗೆಲ್ಲುವ ಛಲದೊಂದಿಗೆ ಆಡಿದ್ದೇವೆ. ತಂಡದ ಎಲ್ಲ ಆಟಗಾರರು ಅದ್ಭುತ ಪ್ರದರ್ಶನ ನೀಡಿರುವುದು ಸಂತಸ ಉಂಟುಮಾಡಿದೆ.

ಎಂ.ಎಲ್.ಗೋಪಿನಾಥ್,

ಕೋಚ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry