ದಾಖಲೆಯೊಂದಿಗೆ ಫೆಡರರ್‌, ಚುಂಗ್‌ ಸೆಮಿಗೆ

7
ಏಂಜಲಿಕ್ ಕರ್ಬರ್‌, ಸಿಮೋನಾ ಹಲೆಪ್ ಹಣಾಹಣಿ ಇಂದು

ದಾಖಲೆಯೊಂದಿಗೆ ಫೆಡರರ್‌, ಚುಂಗ್‌ ಸೆಮಿಗೆ

Published:
Updated:
ದಾಖಲೆಯೊಂದಿಗೆ ಫೆಡರರ್‌, ಚುಂಗ್‌ ಸೆಮಿಗೆ

ಮೆಲ್ಬರ್ನ್‌: ನೊವಾಕ್ ಜೊಕೊವಿಚ್‌ ಅವರನ್ನು ಮಣಿಸಿ ಕ್ವಾರ್ಟರ್ ಪ್ರವೇಶಿಸಿದ್ದ ದಕ್ಷಿಣ ಕೊರಿಯಾ ಆಟಗಾರ ಚುಂಗ್‌ ಹೆಯಾನ್‌ ಇಲ್ಲಿನ ರಾಡ್‌ ಲವೆರಾ ಅರೆನಾದಲ್ಲಿ ಮಿಂಚಿನ ಆಟವಾಡಿ ದಾಖಲೆ ಬರೆದರು. ಆಸ್ಟ್ರೇಲಿಯಾ ಓಪನ್‌ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕದ ಟೆನಿಸ್‌ ಸ್ಯಾಂಗ್ರೆನ್‌ ಅವರನ್ನು ಮಣಿಸಿದ ಅವರು ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದ ಕನಿಷ್ಠ ರ‍್ಯಾಂಕ್‌ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು.

21 ವರ್ಷ ವಯಸ್ಸಿನ ಚುಂಗ್‌ 58ನೇ ರ‍್ಯಾಂಕ್‌ ಆಟಗಾರ. ಬಿರುಬಿಸಿಲಿನಲ್ಲಿ ನಡೆದ ಪಂದ್ಯದಲ್ಲಿ ಅವರು ಸ್ಯಾಂಗ್ರೆನ್‌ ವಿರುದ್ಧ 6–4, 7–6(7/5), 6–3 ಸೆಟ್‌ಗಳ ಜಯ ಸಾಧಿಸಿದರು. ಈ ಮೂಲಕ 2004ರಲ್ಲಿ ಮರಾಟ್ ಸಫಿನ್ ಸ್ಥಾಪಿಸಿದ್ದ ದಾಖಲೆಯನ್ನು ಮುರಿದರು. ಟೂರ್ನಿಯ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದ ದಕ್ಷಿಣ ಕೊರಿಯಾದ ಮೊದಲ ಆಟಗಾರ ಎಂಬ ಹಿರಿಮೆಯೂ ಅವರದಾಗಿತ್ತು. ನಾಲ್ಕರ ಘಟ್ಟದ ಪಂದ್ಯದಲ್ಲಿ ಅವರು ಹಾಲಿ ಚಾಂಪಿಯನ್‌ ರೋಜರ್‌ ಫೆಡರರ್ ಅವರನ್ನು ಎದುರಿಸುವರು.

ದಾಖಲೆ ಬರೆದ ಫೆಡರರ್‌: ದಿನದ ಮತ್ತೊಂದು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ರೋಜರ್ ಫೆಡರರ್‌ 7–6(7/1), 6–3, 6–4ರಿಂದ ಥಾಮಸ್‌ ಬೆರ್ಡಿಕ್‌ ಅವರನ್ನು ಮಣಿಸಿದರು. ಈ ಮೂಲಕ ಟೂರ್ನಿಯಲ್ಲಿ 14ನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದ ದಾಖಲೆ ಮಾಡಿದರು.

ಎರಡನೇ ಶ್ರೇಯಾಂಕಿತ ಫೆಡರರ್‌ಗೆ ರಾಡ್‌ ಲವೆರಾ ಅರೆನಾದಲ್ಲಿ ನಡೆದ ಪಂದ್ಯದ ಮೊದಲ ಸೆಟ್‌ನಲ್ಲಿ ಪ್ರತಿರೋಧ ಎದುರಾಯಿತು. ಆದರೆ ನಂತರದ ಎರಡು ಸೆಟ್‌ಗಳಲ್ಲಿ ನಿರಾಯಾಸವಾಗಿ ಗೆದ್ದು ದಾಖಲೆಯ 43ನೇ ಬಾರಿ ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರ ಸೆಮಿಗೆ ಲಗ್ಗೆ ಇರಿಸಿದರು.

ಮೊದಲ ಸೆಟ್‌ನ ಮೊದಲ ಗೇಮ್‌ನಲ್ಲಿ ಫೆಡರರ್‌ ಅವರ ಸರ್ವ್ ಮುರಿದ ಥಾಮಸ್‌ 5–2ರ ಮುನ್ನಡೆ ಸಾಧಿಸಿದರು. ಆದರೆ ಒಂಬತ್ತನೇ ಗೇಮ್‌ನಲ್ಲಿ ಬ್ಯಾಕ್‌ಹ್ಯಾಂಡ್‌ ಮೂಲಕ ಅಮೋಘವಾಗಿ ಚೆಂಡನ್ನು ಬಾರಿಸಿದ ಫೆಡರರ್‌ ಸೆಟ್‌ ಅನ್ನು ಟೈಬ್ರೇಕರ್‌ಗೆ ಕೊಂಡೊಯ್ದರು. ಮೋಹಕವಾಗಿ ಚೆಂಡನ್ನು ಡ್ರಾಪ್‌ ಮಾಡಿ ಟೈಬ್ರೇಕರ್‌ ಗೆದ್ದು ಸೆಟ್‌ ಅನ್ನು ತಮ್ಮದಾಗಿಸಿಕೊಂಡು ಪ್ರೇಕ್ಷಕರಿಂದ ಅಭಿನಂದನೆ ಸ್ವೀಕರಿಸಿದರು.

ಎರಡನೇ ಸೆಟ್‌ ಗೆಲ್ಲಲು ಫೆಡರರ್‌ಗೆ ಹೆಚ್ಚು ಪ್ರಯಾಸವಾಗಲಿಲ್ಲ. ಎಂಟನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದ ಅವರು ನಂತರ ಸುಲಭವಾಗಿ ಸೆಟ್‌ ಗೆದ್ದುಕೊಂಡರು. ಮೂರನೇ ಸೆಟ್‌ನ ಆರಂಭಲ್ಲಿ ಥಾಮಸ್‌ ಹಿಡಿತ ಸಾಧಿಸಿದರು. ಆರಂಭದಲ್ಲಿ ಉಭಯ ಆಟಗಾರರು ಸರ್ವ್‌ಗಳನ್ನು ಮುರಿದು ಮೇಲುಗೈ ಸಾಧಿಸಿದರು. ಆದರೆ ಐದನೇ ಗೇಮ್‌ನಲ್ಲಿ ಮಿಂಚು ಹರಿಸಿದ ಫೆಡರರ್ ನಂತರ ತಿರುಗಿ ನೋಡಲಿಲ್ಲ. 

ಕೆರ್ಬರ್‌, ಹಲೆಪ್‌ ನಾ‌ಲ್ಕರ ಘಟ್ಟಕ್ಕೆ

ಮಹಿಳೆಯರ ಸಿಂಗಲ್ಸ್‌ನಲ್ಲಿ ಜರ್ಮನಿಯ ಏಂಜಲಿಕ್ ಕೆರ್ಬರ್‌, ರೊಮೇನಿಯಾದ ಸಿಮೊನಾ ಹಲೆಪ್‌, ಡೆನ್ಮಾರ್ಕ್‌ನ ಕರೊಲಿನಾ ವೋಜ್ನಿಯಾಕಿ ಹಾಗೂ ಬೆಲ್ಜಿಯಂ ಎಲೈಸ್ ಮಾರ್ಟಿನ್‌ ಸೆಮಿಫೈನಲ್‌ ಪ್ರವೇಶಿಸಿದರು.

ಕೆರ್ಬರ್‌ ಕ್ವಾರ್ಟರ್ ಫೈನಲ್‌ನಲ್ಲಿ ಮ್ಯಾಡಿಸನ್ ಕೀ ಅವರನ್ನು 6–1, 6–2ರಲ್ಲಿ ಸುಲಭವಾಗಿ ಮಣಿಸಿದರು. ಹಲೆಪ್‌ ಕೂಡ ಕ್ವಾರ್ಟರ್ ಫೈನಲ್‌ನಲ್ಲಿ ಪಾರಮ್ಯ ಮೆರೆದರು. ಆರನೇ ಶ್ರೇಯಾಂಕದ ಕರೊಲಿನಾ ಪ್ಲಿಸ್ಕೋವಾ ಎದುರಿನ ಪಂದ್ಯದಲ್ಲಿ 6–3, 6–2ರಿಂದ ಗೆದ್ದು ಬೀಗಿದರು.

ನಡಾಲ್‌ಗೆ ಮೂರು ವಾರ ವಿಶ್ರಾಂತಿ

ಮರಿನ್ ಸಿಲಿಕ್ ವಿರುದ್ಧ ಮಂಗಳವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದ ಸಂದರ್ಭದಲ್ಲಿ ಗಾಯಗೊಂಡು ನಿವೃತ್ತರಾದ ರಫೆಲ್ ನಡಾಲ್‌ ಮೂರು ವಾರ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.

ಮೆಲ್ಬರ್ನ್‌ನ ಆಸ್ಪತ್ರೆಯಲ್ಲಿ ಅವರನ್ನು ಸ್ಕ್ಯಾನಿಂಗ್‌ಗೆ ಒಳಪಡಿಸಿದ್ದು ಗಾಯದ ಸಮಸ್ಯೆ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ಪೇನ್‌ಗೆ ಮರಳಲಿರುವ ಅವರು ಅಲ್ಲಿ ಫಿಜಿಯೊಥೆರಪಿಗೆ ಒಳಗಾಗಲಿದ್ದಾರೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

ಬೋಪಣ್ಣ ಜೋಡಿ ನಾಲ್ಕರ ಘಟ್ಟಕ್ಕೆ

ಭಾರತದ ರೋಹನ್ ಬೋಪಣ್ಣ ಮತ್ತು ಹಂಗೆರಿಯ ಟೈಮಿಯಾ ಬಾಬೊಸ್‌ ಜೋಡಿ ಮಿಶ್ರ ಡಬಲ್ಸ್ ವಿಭಾಗದ ಸೆಮಿಫೈನಲ್‌ಗೆ ಲಗ್ಗೆ ಇರಿಸಿದರು. ಬುಧವಾರ ನಡೆದ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಅವರು ಕೊಲಂಬಿಯಾದ ಜುವಾನ್‌ ಸೆಬಾಸ್ಟಿಯನ್‌ ಮತ್ತು ಅಮೆರಿಕದ ಅಬಿಗೈಲ್‌ ಸ್ಪಿಯರ್ಸ್ ಜೋಡಿಯನ್ನು 6–4, 7–6 (5) ಸೆಟ್‌ಗಳಿಂದ ಮಣಿಸಿದರು.

ಎದುರಾಳಿಗಳಿಂದ ಭಾರಿ ಸವಾಲು ಎದುರಿಸಬೇಕಾಗಿ ಬಂದ ಬೋಪಣ್ಣ ಮತ್ತು ಬಾಬೊಸ್‌ ಮೊದಲ ಸೆಟ್‌ನಲ್ಲಿ ಪ್ರಯಾಸದಿಂದ ಗೆದ್ದರು. ಎರಡನೇ ಸೆಟ್‌ನಲ್ಲೂ ಎದುರಾಳಿಗಳು ಪ್ರಬಲ ಆಟವಾಡಿದರು. ಏಳು ಬ್ರೇಕ್‌ ಪಾಯಿಂಟ್‌ಗಳ ಪೈಕಿ ಮೂರನ್ನು ಗೆದ್ದುಕೊಂಡು ಆತಂಕ ಮೂಡಿಸಿದರು. ಆದರೆ ನಿರಾಯಾಸವಾಗಿ ಆಡಿದ ಬೋಪಣ್ಣ ಮತ್ತು ಬಾಬೊಸ್ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಪಂದ್ಯವನ್ನು ಗೆದ್ದರು.

*14ನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದ ದಾಖಲೆ ಬರೆದ ರೋಜರ್ ಫೆಡರರ್‌

*ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರಲ್ಲಿ ಫೆಡರರ್‌ 43ನೇ ಬಾರಿ ಸೆಮಿಗೆ ಲಗ್ಗೆ

*ಟೂರ್ನಿಯ ಸೆಮಿಫೈನಲ್ ತಲುಪಿದ ಕನಿಷ್ಠ ರ‍್ಯಾಂಕ್‌ನ ಆಟಗಾರ ಚುಂಗ್‌ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry