ದಿವ್ಯ ಪ್ರೇಮಾನುಭವ

7

ದಿವ್ಯ ಪ್ರೇಮಾನುಭವ

Published:
Updated:
ದಿವ್ಯ ಪ್ರೇಮಾನುಭವ

‘ಮಹಬ್ಬಾ ಅಥವಾ ಪ್ರೇಮವೆಂಬ ಶಬ್ದದ ಪ್ರಯೋಗಕ್ಕೆ ಸಂಪ್ರದಾಯವಾದಿ ಸೂಫಿಗಳು ಹಿಂದಿನ ಕಾಲದಲ್ಲಿ ವಿರೋಧಿಸಿದ್ದರು. ಇದರಿಂದಾಗಿ ನಂತರದ ಸೂಫಿಗಳು ಮತ್ತು ಸೂಫಿ ಕವಿಗಳು ‘ಇಷ್ಕ್ (ಉತ್ಕಟ ಪ್ರೇಮ) ಎಂಬ ಶಬ್ದವನ್ನು ಉಪಯೋಗಿಸಲು ಪ್ರಾರಂಭಿಸಿ, ಹೆಚ್ಚಾಗಿ ದೇವರು ಮತ್ತು ಮನುಷ್ಯರ ನಡುವಿನ ಅಧ್ಯಾತ್ಮ ಸಂಬಂಧಕ್ಕೆ ಪ್ರಯೋಗಿಸ ತೊಡಗಿದರು. ಈ ಶಬ್ದದ ಬಳಕೆಯನ್ನು ಕೂಡ ಸಂಪ್ರದಾಯಸ್ಥ ಸೂಫಿಗಳು ವಿರೋಧಿಸಿದರು. ದೇವರು ಸಂಪೂರ್ಣ ಪರಿಪೂರ್ಣವಾದವನು. ಅವನಿಗೆ ಮನುಷ್ಯನ ಗುಣವನ್ನು ಹಚ್ಚುವುದು ತರವಲ್ಲವೆಂದರು. ಆದರೆ, ಕವಿಗಳು ಈ ಪದಪ್ರಯೋಗವನ್ನು ಹೆಚ್ಚುಹೆಚ್ಚಾಗಿ ಬಳಸಿ ಜನಪ್ರಿಯಗೊಳಿಸಿದರು. ಬಹುಶಃ ಸೂಫಿ ಕವಿ ನೂರಿ ಮೊದಲಿಗೆ ಈ ‘ಇಷ್ಕ್’ ಎಂಬ ಪದವನ್ನು ತನ್ನನ್ನು ಸಮರ್ಥಿಸಿಕೊಳ್ಳುವ ಜೊತೆಗೆ ಈ ಎರಡು ಶಬ್ದಗಳಿಗೆ ಪ್ರತ್ಯೇಕ ವಿವರಗಳನ್ನು ನೀಡಿದ. ‘ಆಶಿಕ್’ (ಪ್ರಿಯಕರ) ಎಂಬುದು ಒಂದಿಷ್ಟು ದೂರವನ್ನು ಇಟ್ಟುಕೊಂಡಿರುವ ಸಂಬಂಧವನ್ನು ಪ್ರತಿನಿಧಿಸುತ್ತದೆ. ‘ಮಹಬ್ಬಾ’ (ಪ್ರೇಮ) ಎನ್ನುವುದು ಅವನ ಪ್ರೇಮವನ್ನು ಅನುಭವಿಸುವ ಜೊತೆಗೆ ಅನ್ಯೋನ್ಯತೆಯ ಅರ್ಥವನ್ನು ಒಳಗೊಂಡಿದೆ ಎಂದು ವಿವರಿಸಿದ!

ಸೂಫಿ ತಾತ್ವಿಕತೆಯಲ್ಲಿ ಅದ್ವೈತವಾದವನ್ನು ಪ್ರತಿಪಾದಿಸಿದ ಸಂತ ಮನ್ಸೂರ್ ಅಲ್ ಹಲ್ಲಾಜ್ ದಿವ್ಯ ಪ್ರೇಮಾನುಭವದ ತಿರುಳನ್ನು ಬಹಿರಂಗವಾಗಿ ವ್ಯಾಖ್ಯಾನಿಸಿದ್ದರು. ಪ್ರೇಮಾನುಭವದಲ್ಲಿ ‘ಬಯಕೆಯನ್ನು ವ್ಯಕ್ತಪಡಿಸುವುದು ಬಹುಮುಖ್ಯ’ ಎಂದಿದ್ದರು. ಈ ವ್ಯಾಖ್ಯಾನವು ಮುಂದಿನ ಪೀಳಿಗೆಯ ಸೂಫಿಗಳಲ್ಲಿ ಒಂದು ನಿರ್ಣಾಯಕ ಹಂತದ ನಿರ್ಧಾರಕ್ಕೆ ಸಹಕಾರಿಯಾಯಿತು. ಕಾಲ ಉರುಳಿದಂತೆ ಅಧ್ಯಾತ್ಮಿಕ ದಿವ್ಯ ಪ್ರೇಮಾನುಭವದ ವ್ಯಾಖ್ಯಾನವು ಇರಾಕ್ ದೇಶದ ಬಾಗ್ದಾದ್ ಮೂಲದ ಸೂಫಿ ವಲಯದಲ್ಲಿ ಕಗ್ಗಂಟಾಗತೊಡಗಿತು. ಪ್ರವಾದಿಯವರು ಹೇಳಿದರೆನ್ನಲಾಗುವ ‘ಯಾರೇ ಆಗಲಿ, ಪ್ರೀತಿಸಿ ತಮ್ಮ ಪರಿಶುದ್ಧತೆ, ಪಾವಿತ್ರ್ಯ ಕಾಯ್ದುಕೊಂಡವರು ತೀರಿಕೊಂಡಲ್ಲಿ ಅವರಿಗೆ ಹುತಾತ್ಮ ಪದವಿ ಲಭಿಸುವುದು’ ಎಂಬ ಹದೀಸ್ ವಾಕ್ಯವನ್ನು ಮುಂದಿಟ್ಟುಕೊಂಡು ದಿವ್ಯ ಪ್ರೇಮಾನುಭವವನ್ನು ಸೂಫಿ ಕವಿ ಜಾಮಿ ‘ನಿಷ್ಕಾಮ ಪ್ರೇಮ’ವೆಂದು ಪ್ರತಿಪಾದಿಸಿದ. ಜಾಹಿರಿ ಕಾನೂನು ಪರಂಪರೆಯ ಮುಹಮ್ಮದ್ ಇಬ್ನ್ ದಾವೂದ್ ಎಂಬ ಕವಿ ಸಂತ ಹಲ್ಲಾಜನ ಕಾಲದಲ್ಲೇ ನೂರು ಅಧ್ಯಾಯಗಳನ್ನೊಳಗೊಂಡ ‘ನಿಷ್ಕಾಮ ಪ್ರೇಮದ ಹುತಾತ್ಮತ್ವ’ ಎಂಬ ಕವನ ಸಂಕಲವನ್ನು ಪ್ರಕಟಿಸಿದ. ಈ ಕವಿ ಮತ್ತು ಬೆಂಬಲಿಗರು, ಶಿಷ್ಯರು ಪ್ರತಿಯೊಬ್ಬ ಮನುಷ್ಯನನ್ನು ಕೂಡ ದೇವರು ಮತ್ತು ಮನುಷ್ಯನ ನಡುವಿನ ದೈವೀ ಪ್ರೇಮಾನುಭವ ಅಥವಾ ಅಧ್ಯಾತ್ಮ ಪ್ರೇಮವನ್ನು ಪತ್ಯೇಕಿಸಿ, ದೈವೀ ಪ್ರೇಮಾನುಭವ ಸಾಧ್ಯವಾಗದು ಎಂದು ಪ್ರತಿಪಾದಿಸಿದರು. ಆದರೆ ಈ ವಾದವು ಹೆಚ್ಚು ಸಮಯ ಬಾಳಲಿಲ್ಲ. ಎರಡು ಶತಮಾನಗಳ ನಂತರ ಈ ಎರಡು ಅಭಿಪ್ರಾಯಗಳು ಕ್ರಮೇಣ ಸಮ್ಮಿಲನಗೊಂಡು ಪರ್ಶಿಯಾದ ಅನೇಕ ಶ್ರೇಷ್ಠ  ಕವಿಗಳ ಕಾವ್ಯಗಳಲ್ಲಿ ಪ್ರತಿಪಾದಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry