ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಪ್ರಕರಣದಲ್ಲೂ ಲಾಲು ಪ್ರಸಾದ್‌ ತಪ್ಪಿತಸ್ಥ

ಮೇವು ಹಗರಣ: ಆರ್‌ಜೆಡಿ ಮುಖ್ಯಸ್ಥನಿಗೆ 5 ವರ್ಷ ಜೈಲು, ₹10 ಲಕ್ಷ ದಂಡ ವಿಧಿಸಿದ ಕೋರ್ಟ್‌
Last Updated 24 ಜನವರಿ 2018, 19:30 IST
ಅಕ್ಷರ ಗಾತ್ರ

ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್‌ ಮತ್ತು ಡಾ. ಜಗನ್ನಾಥ ಮಿಶ್ರಾ ಅವರು ಮೇವು ಹಗರಣದ ಪ್ರಕರಣವೊಂದರಲ್ಲಿ ತಪ್ಪಿತಸ್ಥರು ಎಂದು ಸಿಬಿಐಯ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಇವರಿಗೆ ಐದು ವರ್ಷ ಶಿಕ್ಷೆ ಮತ್ತು ₹10 ಲಕ್ಷ ದಂಡ ವಿಧಿಸಲಾಗಿದೆ.

ಚಾಯಿಬಾಸಾ ಖಜಾನೆಯಿಂದ 1992–93ರಲ್ಲಿ ₹33.13 ಕೋಟಿಯನ್ನು ಅಕ್ರಮವಾಗಿ ಪಡೆದುಕೊಂಡ ಪ್ರಕರಣ ಇದಾಗಿದೆ.

ಜಗನ್ನಾಥ ಮಿಶ್ರಾ ಅವರ ಹೆಂಡತಿ ಸೋಮವಾರ ದೆಹಲಿಯಲ್ಲಿ ನಿಧನರಾಗಿದ್ದಾರೆ. ತೀರ್ಪು ಪ್ರಕಟಿಸುವಾಗ ಮಿಶ್ರಾ ಅವರು ನ್ಯಾಯಾಲಯದಲ್ಲಿ ಹಾಜರಿರಲಿಲ್ಲ.

ಈ ಪ್ರಕರಣದಲ್ಲಿ ಒಟ್ಟು 76 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಅವರಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಮತ್ತು ಮೂವರು ಐಎಎಸ್‌ ಅಧಿಕಾರಿಗಳು (ಈಗ ನಿವೃತ್ತರು) ಸೇರಿದ್ದಾರೆ. ವಿಚಾರಣೆ ನಡೆಯುತ್ತಿರುವಾಗಲೇ 14 ಆರೋಪಿಗಳು ನಿಧನರಾಗಿದ್ದಾರೆ. ಮೂವರು ಮಾಫಿ ಸಾಕ್ಷಿಗಳಾಗಿದ್ದಾರೆ.

ಇಬ್ಬರು ತಪ್ಪೊಪ್ಪಿಕೊಂಡಿದ್ದರೆ ಒಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾರೆ. ಉಳಿದ 56 ಆರೋಪಿಗಳಲ್ಲಿ ಆರು ಮಂದಿಯನ್ನು ಖುಲಾಸೆ ಮಾಡಲಾಗಿದೆ. ಲಾಲು ತಪ್ಪಿತಸ್ಥ ಎಂದು ಘೋಷಿಸಲಾದ ಮೇವು ಹಗರಣದ ಮೂರನೇ ಪ್ರಕರಣ ಇದು. ಒಂದು ಪ್ರಕರಣದ ತೀರ್ಪು ಕಳೆದ ಡಿಸೆಂಬರ್‌ 23ರಂದು ಪ್ರಕಟವಾಗಿತ್ತು.

ಈ ತೀರ್ಪಿನಂತೆ ಲಾಲು ಪ್ರಸಾದ್‌ ಈಗ ಬಿರ್ಸಾ ಮುಂಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಮೇವು ಹಗರಣದಲ್ಲಿ ಲಾಲು ಅಪರಾಧಿ ಎಂಬ ಮೊದಲ ತೀರ್ಪು 2013ರ ಸೆಪ್ಟೆಂಬರ್‌ನಲ್ಲಿ ಪ್ರಕಟವಾಗಿತ್ತು. ಈ ತೀರ್ಪಿನಿಂದಾಗಿ ಅವರು ತಮ್ಮ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದರು. ಈಗ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೂ ನಿಷೇಧ ಇದೆ.

ಮೇವು ಹಗರಣಕ್ಕೆ ಸಂಬಂಧಿಸಿ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ. ಈಗ ಮೂರರ ತೀರ್ಪು ಬಂದಿದ್ದು ಉಳಿದವುಗಳ ವಿಚಾರಣೆ ನಡೆಯುತ್ತಿದೆ.

ತಿರುಗುಬಾಣವಾಗಲಿದೆ: ತೇಜಸ್ವಿ
‘ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ಇದುವೇ ಅಂತಿಮ ತೀರ್ಪು ಅಲ್ಲ. ಈ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ’ ಎಂದು ಲಾಲು ಕಿರಿಯ ಮಗ ಮತ್ತು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಹೇಳಿದ್ದಾರೆ.

‘ಆದರೆ, ಒಂದು ವಿಷಯವಂತೂ ಸ್ಪಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್‌ ಕುಮಾರ್‌ ಅವರು ಜತೆಯಾಗಿ ಲಾಲು ಅವರನ್ನು ಭ್ರಷ್ಟ ನಾಯಕ ಎಂದು ಬಿಂಬಿಸಲು ಹೊರಟಿದ್ದಾರೆ. ಇದು ಆರ್‌ಜೆಡಿ ವಿರೋಧಿಗಳಿಗೆ ತಿರುಗುಬಾಣವಾಗಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT