ಟ್ಯಾಬ್ಲೊದಲ್ಲಿ ಮೂಡಿ ಬರಲಿದೆ ಗಡಿ ವಿವಾದ

7

ಟ್ಯಾಬ್ಲೊದಲ್ಲಿ ಮೂಡಿ ಬರಲಿದೆ ಗಡಿ ವಿವಾದ

Published:
Updated:
ಟ್ಯಾಬ್ಲೊದಲ್ಲಿ ಮೂಡಿ ಬರಲಿದೆ ಗಡಿ ವಿವಾದ

ನವದೆಹಲಿ: ಚೀನಾದೊಂದಿಗಿನ ವಿವಾದಾತ್ಮಕ ಗಡಿ ಪ್ರದೇಶ ಮತ್ತು ಆ ದೇಶದ ಅತಿಕ್ರಮಣಗಳಿಂದ ಈ ಪ್ರದೇಶವನ್ನು ರಕ್ಷಿಸಿಕೊಳ್ಳಲು ಭಾರತದ ಯೋಧರು ತೋರುತ್ತಿರುವ ಕೆಚ್ಚೆದೆಯನ್ನು ಈ ಬಾರಿಯ ಗಣರಾಜ್ಯೋತ್ಸವ ದಿನ ಇಂಡೊ–ಟಿಬೆಟನ್‌ ಗಡಿ ಪೊಲೀಸ್‌ (ಐಟಿಬಿಪಿ) ಪಡೆ ಸ್ತಬ್ಧಚಿತ್ರ ಪಡಿಮೂಡಿಸಲಿದೆ.

ತನ್ನಲ್ಲಿದ್ದ ವಿಶ್ವ ದರ್ಜೆಯ ಪರ್ವತಾರೋಹಿಗಳು ಮತ್ತು ಅವರು ಏರಿದ ಪ್ರಮುಖ ಪರ್ವತಗಳನ್ನು ತೋರಿಸುವ ಸ್ತಬ್ಧಚಿತ್ರವನ್ನು 1998ರ ಗಣರಾಜ್ಯೋತ್ಸವದಲ್ಲಿ ಐಟಿಬಿಪಿ ಪ್ರದರ್ಶಿಸಿತ್ತು. ಅದಾಗಿ 20 ವರ್ಷ ಬಳಿಕ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಐಟಿಬಿಪಿ ಸ್ತಬ್ಧಚಿತ್ರ ಕಾಣಿಸಿಕೊಳ್ಳಲಿದೆ. ಭಾರತ–ಚೀನಾ ನಡುವಣ 3,488 ಕಿ. ಮೀ. ಗಡಿಯನ್ನು ಕಾಯುವುದು ಐಟಿಬಿಪಿ ಹೊಣೆಯಾಗಿದೆ.

ಚೀನಾದ ಜತೆಗೆ ದೀರ್ಫ ಕಾಲದಿಂದ ಭಾರತವು ಗಡಿ ವಿವಾದವನ್ನು ಹೊಂದಿದೆ. ಕಳೆದ ವರ್ಷ ದೋಕಲಾದಲ್ಲಿ ಎರಡೂ ದೇಶಗಳ ನಡುವೆ 72 ದಿನಗಳಷ್ಟು ಸುದೀರ್ಘವಾದ ಮುಖಾಮುಖಿ ಉಂಟಾಗಿತ್ತು. ಕೊನೆಗೆ, ಈ ಸಂಘರ್ಷ ಸ್ಥಿತಿಗೆ ಪರಿಹಾರ ಕಂಡುಕೊಂಡರೂ ಎರಡೂ ಕಡೆ ಅತೃಪ್ತಿಗೆ ಇದು ಕಾರಣವಾಗಿದೆ.

ದೇಶದ ಸೇನಾ ಬಲ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಸಾರುವ ಪಥಸಂಚಲನದಲ್ಲಿ ಗಡಿ ವಿವಾದವನ್ನು ಸೇರಿಸುವ ಮೂಲಕ ಚೀನಾಕ್ಕೆ ಪರೋಕ್ಷ ಸಂದೇಶ ನೀಡಲು ಭಾರತ ಮುಂದಾಗಿದೆ ಎಂದು ಐಟಿಬಿಪಿ ಸ್ತಬ್ಧಚಿತ್ರ ಆಯ್ಕೆಯನ್ನು ವಿಶ್ಲೇಷಿಸಲಾಗಿದೆ.

ಆಸಿಯಾನ್‌ನ ಹತ್ತು ದೇಶಗಳ ನಾಯಕರು ಗಣರಾಜ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಅವರ ಮುಂದೆ ಈ ಸ್ತಬ್ಧಚಿತ್ರ ಹಾದು ಹೋಗಲಿದೆ. ಇನ್ನೊಂದು ಆಸಕ್ತಿಕರ ಅಂಶವೆಂದರೆ ಈ ಹತ್ತರಲ್ಲಿ ಹಲವು ದೇಶಗಳು ಚೀನಾ ಜತೆಗೆ ಗಡಿ ತಕರಾರು ಹೊಂದಿವೆ.

ಪರ್ವತಾರೋಹಣ, ರ‍್ಯಾಪ್ಟಿಂಗ್‌, ಸಾಹಸ ಕ್ರೀಡೆಗಳು ಮತ್ತು ಅತಿ ಎತ್ತರದ ಪ್ರದೇಶಗಳಲ್ಲಿ ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿಕೊಂಡು ನದಿ ದಾಟುವುದು ಮತ್ತು ರಕ್ಷಣಾ ಕಾರ್ಯಾಚರಣೆ ಮುಂತಾದವುಗಳ ಪ್ರಾತ್ಯಕ್ಷಿಕೆಯೂ ಈ ಸ್ತಬ್ಧಚಿತ್ರದ ಭಾಗವಾಗಿರಲಿವೆ.

ಸ್ತ್ರೀಶಕ್ತಿ: ಎತ್ತರ ಪ್ರದೇಶದ ಗಡಿಗಳನ್ನು ಕಾಯುವ ಕೆಲಸ ಮಾಡುತ್ತಿರುವ ಮಹಿಳಾ ಯೋಧರು ಪಥ ಸಂಚಲನದಲ್ಲಿ ಐಟಿಬಿಪಿಯ ‘ಹಮ್‌ ಸರ್‌ಹದ್‌ ಕೆ ಸೇನಾನಿ’ ಗೀತೆಗೆ ಹೆಜ್ಜೆ ಹಾಕಲಿದ್ದಾರೆ. 2016ರಿಂದ ಗಡಿ ಹೊರ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿಯನ್ನು ಐಟಿಬಿಪಿ ನಿಯೋಜಿಸುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ಕಾರಕೋರಂನಿಂದ ಅರುಣಾಚಲ ಪ್ರದೇಶದ ಜೆಚಾಪ್‌ವರೆಗೆ ಐದು ರಾಜ್ಯಗಳಲ್ಲಿ ಹಂಚಿ ಹೋಗಿರುವ ಗಡಿಯನ್ನು ಐಟಿಬಿಪಿ ಕಾಯುತ್ತಿದೆ. ಅತ್ಯಂತ ದುರ್ಗಮವಾದ ಮತ್ತು ಮೂರು ಸಾವಿರ ಅಡಿಯಿಂದ 19 ಸಾವಿರ ಅಡಿವರೆಗಿನ ಎತ್ತರದಲ್ಲಿ ಈ ಪ್ರದೇಶ ಇದೆ.

ಭಾಗವಹಿಸುತ್ತಿರುವ ಗಣ್ಯರು

ಅಧ್ಯಕ್ಷರು

* ಜೊಕೊ ವಿಡೊಡೊ (ಇಂಡೋನೇಷ್ಯಾ)

* ರಾಡ್ರಿಗೊ ಡುಟರ್ಟೆ (ಫಿಲಿಪ್ಪೀನ್ಸ್‌)

ಪ್ರಧಾನಿಗಳು

* ಲೀ ಶಿಯನ್‌ ಲೂಂಗ್‌ (ಸಿಂಗಪುರ)

* ಗುವೆನ್‌ ಕ್ಸುವನ್‌ ಫುಕ್‌ (ವಿಯೆಟ್ನಾಂ)

* ಮೊಹಮ್ಮದ್‌ ನಜೀಬ್‌ ಬಿನ್‌ ಟುನ್‌ ಹಾಜಿ ಅಬ್ದುಲ್‌ ರಜಾಕ್‌ (ಮಲೇಷ್ಯಾ)

* ಜ. ಪ್ರಯುತ್‌ ಚನ್‌–ಒ–ಚಾ (ಥಾಯ್ಲೆಂಡ್‌)

* ಥಾಂಗ್ಲೌನ್‌ ಸಿಸೌಲಿಥ್‌ (ಲಾವೋಸ್‌)

* ಹುನ್‌ ಸೆನ್‌ (ಕಾಂಬೋಡಿಯಾ)

ಬ್ರೂನಿಯ ಸುಲ್ತಾನ ಹಾಜಿ ಹಸನಲ್‌ ಬೊಲ್ಕಿಯ ಮುಯಿಜದ್ದೀನ್‌ ವದಾವುಲ್ಲಾ

ಮ್ಯಾನ್ಮಾರ್‌ನ ಸ್ಟೇಟ್‌ ಕೌನ್ಸಿಲರ್‌ ಆಂಗ್‌ ಸಾನ್‌ ಸೂಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry