ಪದ್ಮಾವತ್‌: 29ಕ್ಕೆ ‘ಸುಪ್ರೀಂ’ ವಿಚಾರಣೆ

7

ಪದ್ಮಾವತ್‌: 29ಕ್ಕೆ ‘ಸುಪ್ರೀಂ’ ವಿಚಾರಣೆ

Published:
Updated:
ಪದ್ಮಾವತ್‌: 29ಕ್ಕೆ ‘ಸುಪ್ರೀಂ’ ವಿಚಾರಣೆ

ನವದೆಹಲಿ: ‘ಪದ್ಮಾವತ್‌’ ಚಿತ್ರದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲು ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಅರ್ಜಿ ಸಲ್ಲಿಕೆಯಾಗಿದೆ.

ವಕೀಲ ಎಂ.ಎಲ್‌. ಶರ್ಮಾ ಎಂಬುವವರು ಸಲ್ಲಿಸಿರುವ ಅರ್ಜಿಯನ್ನು ಸೋಮವಾರ (ಜ.29) ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಒಪ್ಪಿದೆ.

ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀ‍ಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಡಿ.ವೈ. ಚಂದ್ರಚೂಡ್‌ ಅವರಿದ್ದ ನ್ಯಾಯಪೀಠದ ಮುಂದೆ ಶರ್ಮಾ ಮನವಿ ಮಾಡಿದರು.

ಚಿತ್ರದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯುವುದಾಗಿ ನೀಡಿದ್ದ ಭರವಸೆಯನ್ನು ಚಿತ್ರ ತಯಾರಕರು ಈಡೇರಿಸಿಲ್ಲ ಎಂದು ಅವರು ಅರ್ಜಿಯಲ್ಲಿ ದೂರಿದ್ದಾರೆ.

ಪದ್ಮಾವತಿಯಿಂದ ಪದ್ಮಾವತ್‌ವರೆಗೆ...

2016ರ ಜುಲೈನಲ್ಲಿ ಸೆಟ್ಟೇರಿದ ನಂತರ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಾ ಬಂದ ‘ಪದ್ಮಾವತ್‌’ ಚಿತ್ರ ರಜಪೂತ ಸಮುದಾಯದ ತೀವ್ರ ವಿರೋಧದ ನಡುವೆ ಗುರುವಾರ ಬಿಡುಗಡೆಗೆ ಸಿದ್ಧವಾಗಿದೆ. ಅದು ನಡೆದು ಬಂದ ಹಾದಿಯ ಒಂದು ನೋಟ ಇಲ್ಲಿದೆ....

1540: ಸೂಫಿ ಕವಿ ಮಲಿಕ್‌ ಮುಹಮ್ಮದ್‌ ಜೈಸಿ ಅವರಿಂದ ‘ಪದ್ಮಾವತ್‌’ ಮಹಾಕಾವ್ಯ ರಚನೆ.

1988: ಜವಾಹರಲಾಲ್‌ ನೆಹರೂ ಅವರ ‘ದಿ ಡಿಸ್ಕವರಿ ಆಫ್‌ ಇಂಡಿಯಾ’ ಕೃತಿಯನ್ನು ಆಧರಿಸಿದ ಶ್ಯಾಮ್‌ ಬೆನಗಲ್‌ ಅವರ ಪ್ರಸಿದ್ಧ ಟಿವಿ ಸರಣಿ ‘ಭಾರತ್‌ ಏಕ್‌ ಖೋಜ್‌’ನಲ್ಲಿ ‘ಪದ್ಮಾವತಿ’ ಕುರಿತು ಒಂದು ಸಂಚಿಕೆ ಪ್ರಸಾರ. ನಟ ಓಂ ಪುರಿ ಅವರು ಅಲ್ಲಾವುದ್ದೀನ್‌ ಖಿಲ್ಜಿ ಪಾತ್ರ ನಿರ್ವಹಿಸಿದ್ದರು. ‘ಭಾರತ್‌ ಏಕ್‌ ಖೋಜ್‌’ ತಂಡದಲ್ಲಿ ಸಂಜಯ್‌ ಲೀಲಾ ಬನ್ಸಾಲಿ ಅವರು ಸಹಾಯಕ ಸಂಕಲನಕಾರರಾಗಿದ್ದರು.

2008: ಪ್ಯಾರಿಸ್‌ನಲ್ಲಿ ‘ಪದ್ಮಾವತಿ’ಯ ನಾಟಕ ರೂಪವನ್ನು ನಿರ್ಮಿಸಿದ ಸಂಜಯ್‌ ಲೀಲಾ ಬನ್ಸಾಲಿ.

2016 ಜುಲೈ: ಪದ್ಮಾವತಿ ಚಿತ್ರದ ಕೆಲಸ ಆರಂಭ. ‘ಪದ್ಮಾವತ್‌’ ಮಹಾಕಾವ್ಯವನ್ನು ಆಧಾರವಾಗಿಟ್ಟುಕೊಂಡು ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ ಸಂಜಯ್‌ ಲೀಲಾ ಬನ್ಸಾಲಿ. ಪ್ರಮುಖ ಪಾತ್ರಗಳಿಗೆ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ಮತ್ತು ಶಾಹಿದ್‌ ಕಪೂರ್‌ ಆಯ್ಕೆ. ದೀಪಿಕಾ ಅವರಿಗೆ ರಜಪೂತ ರಾಣಿ ಪದ್ಮಿನಿ ಪಾತ್ರ, ರಣವೀರ್‌ ಸಿಂಗ್‌ಗೆ ಅಲ್ಲಾವುದ್ದೀನ್‌ ಖಿಲ್ಜಿಯ ಪಾತ್ರ ನಿಗದಿ.

2016 ಡಿಸೆಂಬರ್‌: ಚಿತ್ರದ ಸೆಟ್‌ನಲ್ಲಿ ಕಾರ್ಮಿಕರೊಬ್ಬರ ಸಾವು. ಚಿತ್ರೀಕರಣ ಸ್ಥಗಿತ

2017, ಜನವರಿ: ಜೈಪುರದ ಜೈಗಡದಲ್ಲಿ ರಜಪೂತ ಕರ್ಣಿ ಸೇನಾ ಸದಸ್ಯರು ಚಿತ್ರ ತಂಡದ ಮೇಲೆ ದಾಳಿ ನಡೆಸಿ, ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ಬನ್ಸಾಲಿ

ಮಾರ್ಚ್‌: ಕೊಲ್ಹಾಪುರದಲ್ಲಿ ಹಾಕಲಾಗಿದ್ದ ‘ಪದ್ಮಾವತಿ’ ಸೆಟ್‌ನಲ್ಲಿ ದಾಂದಲೆ ನಡೆಸಿದ ಅಪರಿಚಿತ ದುಷ್ಕರ್ಮಿಗಳು

ಸೆಪ್ಟೆಂಬರ್‌: ಡಿಸೆಂಬರ್ 1ರಂದು ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಪಡಿಸಿ, ಪೋಸ್ಟರ್‌ಗಳ ಬಿಡುಗಡೆ. ರಾಣಿ ಪದ್ಮಿನಿಯನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ರಾಜಸ್ಥಾನ, ಗುಜರಾತ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಜಪೂತ ಸಂಘಟನೆಗಳಿಂದ ಭಾರಿ ವಿರೋಧ

ನವೆಂಬರ್‌: ರಾಣಿ ಪದ್ಮಿನಿ ಮತ್ತು ಅಲ್ಲಾವುದ್ದೀನ್‌ ಖಲ್ಜಿ ಪಾತ್ರಗಳ ನಡುವೆ ಪ್ರಣಯದ ಕನಸು ಕಾಣುವ ದೃಶ್ಯಾವಳಿ ಇಲ್ಲ ಎಂದು ಹೇಳಿಕೆ ನೀಡಿದ ಬನ್ಸಾಲಿ. ಚಿತ್ರ ತಯಾರಿಸುವಾಗ ರಜಪೂತರ ಘನತೆ ಮತ್ತು ಗೌರವವನ್ನು ಗಮನದಲ್ಲಿಡಲಾಗಿದೆ ಎಂದು ಸ್ಪಷ್ಟನೆ

ನವೆಂಬರ್‌ 10: ಚಿತ್ರದ ಮೇಲೆ ನಿಷೇಧ ಹೇರಬೇಕು ಎಂದು ಮಾಡಿದ್ದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್‌. ಎಲ್ಲ ವಿಚಾರಗಳನ್ನು ಪರಿಶೀಲಿಸುವಂತೆ ಕೇಂದ್ರ  ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಸೂಚನೆ

ನವೆಂಬರ್‌ 13: ಚಿತ್ರೋದ್ಯಮದ ವಿವಿಧ ಸಂಘಟನೆಗಳಿಂದ ಚಿತ್ರ ತಂಡಕ್ಕೆ ಬೆಂಬಲ

ನವೆಂಬರ್‌ 16: ಕರ್ಣಿ ಸೇನಾದಿಂದ ನಟಿ ದೀಪಿಕಾ ಪಡುಕೋಣೆಗೆ ಬೆದರಿಕೆ

ನವೆಂಬರ್‌ 19: ಚಿತ್ರ ಬಿಡುಗಡೆಯನ್ನು ಮುಂದಕ್ಕೆ ಹಾಕಿದ ಚಿತ್ರ ನಿರ್ಮಾಣ ಸಂಸ್ಥೆ ವಯಕಾಮ್‌18

ನವೆಂಬರ್‌ 24: ನಹಾಡ್‌ಗಡದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ. ಪಕ್ಕದಲ್ಲೇ ಇದ್ದ ಕಲ್ಲಿನಲ್ಲಿ ‘ಪದ್ಮಾವತಿಗೆ ವಿರೋಧವಾಗಿ’ ಎಂಬ ಬರಹ ಪತ್ತೆ

ಡಿಸೆಂಬರ್‌ 30:  ಚಿತ್ರದ ಹೆಸರನ್ನು ‘ಪದ್ಮಾವತಿ’ ಬದಲಾಗಿ ‘ಪದ್ಮಾವತ್‌’ ಎಂದು ಇಡುವಂತೆ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಸಲಹೆ. ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಲು ನಿರ್ಧಾರ

2018, ಜನವರಿ: ಚಿತ್ರದ ಬಿಡುಗಡೆಗೆ ನಿರ್ಬಂಧ ಹೇರಿದ ರಾಜಸ್ಥಾನ, ಗುಜರಾತ್‌, ಮಧ್ಯಪ್ರದೇಶ ಮತ್ತು ಹರಿಯಾಣ ರಾಜ್ಯ ಸರ್ಕಾರಗಳು

ಜನವರಿ 16: ರಾಜ್ಯ ಸರ್ಕಾರಗಳ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಚಿತ್ರ ನಿರ್ಮಾಪಕರು

ಜನವರಿ 18: ರಾಜ್ಯಗಳ ಆದೇಶಕ್ಕೆ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್‌, ಜನವರಿ 25ಕ್ಕೆ ಚಿತ್ರ ಬಿಡುಗಡೆಗೆ ಅವಕಾಶ

ಜನವರಿ 22: ಆದೇಶ ಮಾರ್ಪಾಡಿಗೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ ಮಧ್ಯಪ್ರದೇಶ, ರಾಜಸ್ಥಾನ

ಜನವರಿ 23: ಆದೇಶ ಮಾರ್ಪಾಡು ಮಾಡಲು ಸುಪ್ರೀಂ ಕೋರ್ಟ್‌ ನಿರಾಕರಣೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry