ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪದ್ಮಾವತ್‌’: ಚಿತ್ರ ಪ್ರದರ್ಶಿಸಿದರೆ ಚಿತ್ರಮಂದಿರ ಧ್ವಂಸ ಖಚಿತ

Last Updated 24 ಜನವರಿ 2018, 19:30 IST
ಅಕ್ಷರ ಗಾತ್ರ

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್‌’ ಚಿತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವ ಶ್ರೀ ರಜಪೂತ ಕರ್ಣಿ ಸೇನಾ ಸಂಘಟನೆಯ ಮುಖ್ಯಸ್ಥ ಲೋಕೇಂದ್ರ ಸಿಂಗ್‌ ಕಾಲವಿ ಅವರು ಗುರುವಾರ ಬಿಡುಗಡೆಯಾಗಲಿರುವ ಚಿತ್ರದ ವಿರುದ್ಧ ‘ಜನರ ಕರ್ಫ್ಯೂ’ಗೆ ಕರೆ ನೀಡಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವ ಕಾಲವಿ ಅವರು ಬುಧವಾರ ಜೈಪುರದಲ್ಲಿ ‘ಪ್ರಜಾವಾಣಿ’ಗೆ ಸಂದರ್ಶನ ನೀಡಿದ್ದಾರೆ. ಅದರ ವಿವರ ಇಲ್ಲಿದೆ...

* ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಚಿತ್ರಕ್ಕೆ ಪ್ರಮಾಣಪತ್ರ ನೀಡಿದ್ದರೂ, ನಿಮ್ಮ ವಿರೋಧಕ್ಕೆ ಕಾರಣ ಏನು?
ಕೆಲವು ದೃಶ್ಯಾವಳಿಗಳಿಗೆ ಕತ್ತರಿ ಹಾಕಬೇಕು ಎಂದು ನಾವು ಬಯಸುತ್ತೇವೆ. ರಾಣಿ ಪದ್ಮಿನಿ ಮತ್ತು ಅಲ್ಲಾವುದ್ದೀನ್‌ ಖಿಲ್ಜಿ ಪರಸ್ಪರ ಪ್ರೀತಿಸುತ್ತಿರುವಂತೆ ಕನಸು ಕಾಣುವ ದೃಶ್ಯ ಚಿತ್ರದಲ್ಲಿದೆ. ರಣವೀರ್‌ ಸಿಂಗ್‌ ಮತ್ತು ದೀಪಿಕಾ ನಡುವಣ ದೃಶ್ಯವನ್ನು ಸ್ವೀಕರಿಸಬಹುದು; ಆದರೆ, ಪದ್ಮಿನಿ ಮತ್ತು ಖಿಲ್ಜಿ ಪ್ರಣಯ ದೃಶ್ಯಗಳಲ್ಲಿ ತೊಡಗಿರುವ ದೃಶ್ಯಗಳನ್ನು ವೀಕ್ಷಿಸುವ ಮೂಲಕ ಇತಿಹಾಸ ತಿರುಚುವುದನ್ನು ನಾವು ಸಹಿಸುವುದಿಲ್ಲ.

ನಮ್ಮ ಮತ್ತೊಂದು ದೊಡ್ಡ ಆಕ್ಷೇಪ ಇರುವುದು ನಮ್ಮ ತಾಯಿ ಪದ್ಮಿನಿ ನೃತ್ಯ ಮಾಡುತ್ತಿರುವುದನ್ನು ತೋರಿಸುವ ಘೂಮರ್‌ ಹಾಡಿನ ಬಗ್ಗೆ. ರಾಣಿಯರು ಮತ್ತು ರಾಜಕುಮಾರಿಯರು ಯಾವತ್ತೂ ಸಾರ್ವಜನಿಕವಾಗಿ ನೃತ್ಯ ಮಾಡಿಲ್ಲ.

* ನೀವು ಹಾಗೂ ಕರ್ಣಿ ಸೇನಾ ಮುಖಂಡರು ಇತ್ತೀಚೆಗೆ ಸಿನಿಮಾ ನೋಡಿದ್ದೀರಿ ಎಂಬ ವದಂತಿ ಇದೆಯಲ್ಲ?
ಇದು ಸುಳ್ಳು ಮಾಹಿತಿ. ಕರ್ಣಿ ಸೇನಾದ ಒಬ್ಬನೇ ಒಬ್ಬ ಸದಸ್ಯ ಚಿತ್ರ ನೋಡಿಲ್ಲ.

* ಸುಪ್ರೀಂ ಕೋರ್ಟ್‌ ಚಿತ್ರದ ಮೇಲಿನ ನಿಷೇಧ ತೆರವುಗೊಳಿಸಿದೆ. ನಿಮ್ಮ ಮುಂದಿನ ನಡೆ ಏನು?
ಗುರುವಾರ ಮತ್ತು ನಂತರ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುವುದನ್ನು ತಡೆಯಲು ನಾನು ಜನರ ಕರ್ಫ್ಯೂಗೆ ಕರೆ ನೀಡಿದ್ದೇನೆ.

* ಸಾಮಾಜಿಕ ಮಾಧ್ಯಮಗಳ ಈ ಕಾಲದಲ್ಲಿ ಸಿನಿಮಾ ನೋಡದಂತೆ ಜನರನ್ನು ತಡೆಯಲು ನಿಮ್ಮಿಂದ ಸಾಧ್ಯವೇ?
ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಯುಟ್ಯೂಬ್‌ನಲ್ಲಿ ಜನರ ಕರ್ಫ್ಯೂ ಹೇರುವುದು ಹೇಗೆ ಎಂಬ ತಂತ್ರ ನನಗೆ ಗೊತ್ತಿದೆ. ಆದರೂ, ರಾಣಿ ಪದ್ಮಿನಿಯ ಮೇಲಿನ ಗೌರವಕ್ಕಾಗಿ ಯಾರೊಬ್ಬರೂ ಆನ್‌ಲೈನ್‌ನಲ್ಲಿ ಚಿತ್ರ ವೀಕ್ಷಿಸುವುದಿಲ್ಲ ಎಂಬ ವಿಶ್ವಾಸ ಇದೆ.

* ಯಾವ್ಯಾವ ರಾಜ್ಯಗಳಲ್ಲಿ ಚಿತ್ರ ಪ್ರದರ್ಶನಗೊಳ್ಳದು ಎಂದು ನಿರೀಕ್ಷಿಸುತ್ತೀರಿ?
ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್‌, ರಾಜಸ್ಥಾನ ಮತ್ತು ಹರಿಯಾಣಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುವುದಿಲ್ಲ ಎಂದು ಖಚಿತವಾಗಿ ಹೇಳಬಲ್ಲೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಜನರು ನಮಗೆ ಬೆಂಬಲ ನೀಡಿದ್ದಾರೆ. ಹಾಗಾಗಿ ಅಲ್ಲೂ ಚಿತ್ರ ಬಿಡುಗಡೆಯಾಗುವುದಿಲ್ಲ ಎಂಬ ವಿಶ್ವಾಸವಿದೆ.

* ನಿಮ್ಮ ಬೆಂಬಲಿಗರು ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ, ಬಸ್‌ಗಳನ್ನು ತಡೆಯುತ್ತಿದ್ದಾರೆ. ಇದಕ್ಕೆಲ್ಲ ಯಾರು ಹೊಣೆ?
ಇದಕ್ಕೆಲ್ಲ ಸಂಜಯ್‌ ಲೀಲಾ ಬನ್ಸಾಲಿ ಅವರನ್ನೇ ಹೊಣೆ ಮಾಡಬೇಕಷ್ಟೆ. ನಾನು ಹಿಂಸಾಚಾರದ ವಿರೋಧಿ. ಅಹಿಂಸಾ ಭಾವನೆಯನ್ನು ಮೈಗೂಡಿಸಿಕೊಳ್ಳುವುದಕ್ಕಾಗಿ ಮಂಗಳವಾರ ಸಾಬರಮತಿ ಆಶ್ರಮಕ್ಕೂ ಭೇಟಿ ನೀಡಿದ್ದೆ.

* ಒಂದು ವೇಳೆ ಚಿತ್ರ ಪ್ರದರ್ಶಿಸಿದರೆ ಕರ್ಣಿ ಸೇನಾ ಏನು ಮಾಡುತ್ತದೆ?
ಈ ಹಿಂದೆ ಮಾಡಿದಂತೆ ಚಿತ್ರಮಂದಿರಗಳನ್ನು ಧ್ವಂಸಗೊಳಿಸುತ್ತೇವೆ. ದೇಶದಾದ್ಯಂತ ನಮ್ಮ ಬೆಂಬಲಿಗರು ಬೀದಿಗಿಳಿಯುತ್ತಾರೆ.

* ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿರುವವರನ್ನು ಪೊಲೀಸರು ಬಂಧಿಸುತ್ತಿದ್ದಾರೆ? ನಿಮಗೂ ಬಂಧನದ ಭಯ ಇದೆಯೇ?
ಗುರುವಾರ ಪೊಲೀಸರು ನನ್ನನ್ನೂ ಬಂಧಿಸುತ್ತಾರೆ ಎಂದುಕೊಂಡಿದ್ದೇನೆ. ನಾನು ಜೈಪುರದಲ್ಲೇ ಇರುತ್ತೇನೆ. ಇದುವರೆಗೆ ಪೊಲೀಸರು ದೇಶದಾದ್ಯಂತ ಕರ್ಣಿ ಸೇನಾದ 138 ಸದಸ್ಯರನ್ನು ಬಂಧಿಸಿದ್ದಾರೆ. ಆದರೆ, ಇದು ನಮ್ಮ ಪ್ರತಿಭಟನೆಯನ್ನು ದುರ್ಬಲಗೊಳಿಸದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT