‘ಬೇಡಿಕೆಗಳಿಗೆ ಒಪ್ಪಿದರೆ ವಿಜಯೋತ್ಸವ, ಇಲ್ಲವಾದರೆ ಹೋರಾಟ’

7

‘ಬೇಡಿಕೆಗಳಿಗೆ ಒಪ್ಪಿದರೆ ವಿಜಯೋತ್ಸವ, ಇಲ್ಲವಾದರೆ ಹೋರಾಟ’

Published:
Updated:
‘ಬೇಡಿಕೆಗಳಿಗೆ ಒಪ್ಪಿದರೆ ವಿಜಯೋತ್ಸವ, ಇಲ್ಲವಾದರೆ ಹೋರಾಟ’

ಬೆಂಗಳೂರು: ಭೂಮಿ ಹಾಗೂ ವಸತಿ ಹಕ್ಕಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇದೇ 27ರಂದು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಉನ್ನತ ಮಟ್ಟದ ಸಭೆ ಕರೆಯಲಾಗಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತಿಳಿಸಿದರು.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರಿಗೆ ಭೂಮಿ ಹಾಗೂ ವಸತಿ ಹಕ್ಕು ಕಲ್ಪಿಸುವಂತೆ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಎರಡು ವರ್ಷಗಳಿಂದ ಹೋರಾಟ ಮಾಡುತ್ತಿದೆ ಎಂದರು.

ಅರಣ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ವಸತಿ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸಮಿತಿಯ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮಾರ್ಚ್ 31ರೊಳಗೆ ಸರ್ಕಾರಿ ಭೂಮಿಯನ್ನು ಸ್ಥಳೀಯ ನಿರಾಶ್ರಿತರಿಗೆ ಹಂಚಿಕೆ ಮಾಡಬೇಕು. ಅನೇಕ ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ವಾಸವಾಗಿರುವ ಹಾಗೂ ಕೃಷಿ ಮಾಡುತ್ತಿರುವವರನ್ನು ಅಭಿವೃದ್ಧಿ ಹೆಸರಿನಲ್ಲಿ ಒಕ್ಕಲೆಬ್ಬಿಸಬಾರದು. ಒಕ್ಕಲೆಬ್ಬಿಸುವುದು ಅನಿವಾರ್ಯವಾಗಿದ್ದರೆ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ನಮ್ಮ ಎಲ್ಲ ಬೇಡಿಕೆಗಳಿಗೆ ಸರ್ಕಾರ ಸಭೆಯಲ್ಲಿ ಒಪ್ಪಿದರೆ ಮಾತ್ರ ಹೋರಾಟ ಸ್ಥಗಿತಗೊಳಿಸುತ್ತೇವೆ. ಇಲ್ಲವಾದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದರು.

28ಕ್ಕೆ ಜಿಗ್ನೇಶ್ ನಗರಕ್ಕೆ: ಸಮಿತಿಯು ನಿರ್ಣಾಯಕ ಸಮಾವೇಶವನ್ನು ನಗರದಲ್ಲಿ ಇದೇ 28ರಂದು ಆಯೋಜಿಸಿದ್ದು, ಶಾಸಕ ಜಿಗ್ನೇಶ್‌ ಮೆವಾನಿ ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿಯ ರಾಜ್ಯ ಸಂಚಾಲಕ ಸಿರಿಮನೆ ನಾಗರಾಜ್ ಹೇಳಿದರು.

‘ಉನ್ನತ ಮಟ್ಟದ ಸಭೆ ಯಶಸ್ವಿಯಾದರೆ ಸಮಾವೇಶದಲ್ಲಿ ವಿಜಯೋತ್ಸವ ಆಚರಣೆ ಮಾಡುತ್ತೇವೆ. ಸಭೆ ವಿಫಲವಾದರೆ, ಹೋರಾಟದ ಮುಂದಿನ ರೂ‍ಪುರೇಷೆ ಚರ್ಚೆಗೆ ಸಮಾವೇಶವನ್ನು ಬಳಸಿಕೊಳ್ಳುತ್ತೇವೆ’ ಎಂದರು.

ಪ್ರಮುಖ ಬೇಡಿಕೆಗಳು

* ನಾಗರಿಕ ಸಮಾಜದ, ಚಳವಳಿಯ ಪ್ರತಿನಿಧಿಗಳನ್ನು ಒಳಗೊಂಡ ಭೂಮಿ–ವಸತಿ ಮಂಜೂರಾತಿ ಮೇಲುಸ್ತುವಾರಿ ಹಾಗೂ ಮಾರ್ಗದರ್ಶನ ಸಮಿತಿ ರಚಿಸಬೇಕು

* ಹೋರಾಟ ಸಮಿತಿ ಅಧ್ಯಯನ ನಡೆಸಿ ಸರ್ಕಾರಕ್ಕೆ ಸಲ್ಲಿಸಿರುವ 200 ಪ್ರಕರಣಗಳನ್ನು ತುರ್ತು ಆದ್ಯತೆಯ ಮೇಲೆ ಬಗೆಹರಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು

* ಮನೆ ಹಾಗೂ ಜಮೀನಿಗಾಗಿ ನಮೂನೆ 50, 53, 94ಸಿ, 94ಸಿಸಿ ಅಡಿ ಅರ್ಜಿ ಸಲ್ಲಿಸಿರುವ ಬಡವರಿಗೆ ಹಕ್ಕುಪತ್ರ ನೀಡಬೇಕು

* ಭೂಮಿ ಹಾಗೂ ಜಮೀನಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು

12.50 ಲಕ್ಷ ಎಕರೆ ಒತ್ತುವರಿ

ರಾಜ್ಯದಲ್ಲಿ 12.50 ಲಕ್ಷ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ಎಚ್.ಎಸ್.ದೊರೆಸ್ವಾಮಿ ಹೇಳಿದರು.

ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಎಕರೆ ಒತ್ತುವರಿಯಾಗಿದೆ. ಬೆಂಗಳೂರಿನಲ್ಲಿ 25 ಸಾವಿರ ಎಕರೆ ಒತ್ತುವರಿಯಾಗಿದೆ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry