ವರ್ಚಸ್ಸು ಕೆಡಿಸಿದವರಿಗೆ ಬಿಜೆಪಿ ಟಿಕೆಟ್ ಅನುಮಾನ?

7

ವರ್ಚಸ್ಸು ಕೆಡಿಸಿದವರಿಗೆ ಬಿಜೆಪಿ ಟಿಕೆಟ್ ಅನುಮಾನ?

Published:
Updated:
ವರ್ಚಸ್ಸು ಕೆಡಿಸಿದವರಿಗೆ ಬಿಜೆಪಿ ಟಿಕೆಟ್ ಅನುಮಾನ?

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಬೇಕೇ ಬೇಡವೇ ಎಂಬ ಬಗ್ಗೆ ವರಿಷ್ಠರು ಗಂಭೀರ ಚಿಂತನೆ ನಡೆಸಿರುವುದು ಆಕಾಂಕ್ಷಿಗಳ ಆತಂಕಕ್ಕೆ ಕಾರಣವಾಗಿದೆ.‌

ಈಗಾಗಲೇ ಐದು ಸಮೀಕ್ಷಾ ವರದಿಗಳನ್ನು ಕೈಯಲ್ಲಿಟ್ಟುಕೊಂಡಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಯಾವ ಕ್ಷೇತ್ರದಲ್ಲಿ ಯಾರು ಸಮರ್ಥರು ಎಂಬ ಮಾಹಿತಿಯನ್ನು ಪಡೆದಿದ್ದಾರೆ. ಇನ್ನೂ ಎರಡು ಅಥವಾ ಮೂರು ಹಂತದಲ್ಲಿ ಸಮೀಕ್ಷೆ ನಡೆಸಲಿದ್ದು, ಅಲ್ಲಿನ ಅಭಿಮತ ಹಾಗೂ ಆರ್‌ಎಸ್‌ಎಸ್‌ ಪ್ರಮುಖರ ಜತೆ ಸಮಾಲೋಚನೆ ನಡೆಸಿಯೇ ಟಿಕೆಟ್‌ ಹಂಚಿಕೆ ಮಾಡಲಿದ್ದಾರೆ.

2018ರ ವಿಧಾನಸಭಾ ಚುನಾವಣೆಯ ಟಿಕೆಟ್ ನೀಡುವ ಅಧಿಕಾರವನ್ನು ಶಾ ತಮ್ಮ ಬಳಿಯೇ ಇಟ್ಟುಕೊಂಡಿರುವುದರಿಂದಾಗಿ ಆಕಾಂಕ್ಷಿಗಳು ದಿಗಿಲುಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಮಿಷನ್ –150’ ಗುರಿ ಸಾಧಿಸಬೇಕಾದರೆ ಬೂತ್‌ ಮಟ್ಟದ ಸಮಿತಿ ರಚಿಸಬೇಕು, ತಳಮಟ್ಟದಲ್ಲಿ ಪಕ್ಷ ಸಂಘಟಿಸಬೇಕು ಎಂದು ಶಾ ನೀಡಿದ್ದ ಎಚ್ಚರಿಕೆಯನ್ನು ಹಾಲಿ ಶಾಸಕರೂ ಸೇರಿದಂತೆ ಅನೇಕರು ಪಾಲಿಸಿಲ್ಲ. ತಮ್ಮ ಸ್ವಂತ ವರ್ಚಸ್ಸಿನ ಮೇಲೆ ಗೆಲ್ಲಬಹುದೆಂಬ ಅಹಂಕಾರವೂ ಕೆಲವರಿಗೆ ಇದೆ. ಸೂಚನೆ ಪಾಲಿಸದವರಿಗೂ ಟಿಕೆಟ್ ಸಿಗುವುದು ಅನುಮಾನ ಎಂದೂ ಮೂಲಗಳು ಹೇಳಿವೆ.

ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ 11 ಶಾಸಕರು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಂಡೆದ್ದಿದ್ದರು. ಅವರನ್ನು ಅನರ್ಹಗೊಳಿಸಲಾಗಿತ್ತು. ಬಳಿಕ, ಅವರೆಲ್ಲ ತಪ್ಪು ಒಪ್ಪಿಕೊಂಡು ಪಕ್ಷಕ್ಕೆ ಮರಳಿದ್ದರು. ಈ ಪೈಕಿ ಎಚ್.ಎಸ್. ಶಂಕರಲಿಂಗೇಗೌಡ ನಿಧನರಾಗಿದ್ದಾರೆ. ಆನಂದ ಆಸ್ನೋಟಿಕರ ಜೆಡಿಎಸ್ ಸೇರಿದ್ದಾರೆ. ಉಳಿದವರು ಈ ಬಾರಿಯೂ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪವನ್ನು ಎಂ.ಪಿ. ರೇಣುಕಾಚಾರ್ಯ, ಹರತಾಳು ಹಾಲಪ್ಪ ಎದುರಿಸಿದ್ದರು. ಅಂದು ಸಚಿವರಾಗಿದ್ದ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ ಹಾಗೂ ಕೃಷ್ಣ ಪಾಲೇಮಾರ್ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗಲೇ ಅಶ್ಲೀಲ ವಿಡಿಯೊ ನೋಡಿದ ಆರೋಪಕ್ಕೆ ಗುರಿಯಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದರು.

ಇವರೆಲ್ಲರೂ ಮತ್ತೊಮ್ಮೆ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದ್ದಾರೆ. ಒಮ್ಮೆ ಪಕ್ಷಕ್ಕೆ ಮುಜುಗರ ತಂದವರಿಗೆ ಮತ್ತೊಮ್ಮೆ ಟಿಕೆಟ್ ನೀಡಬೇಕೇ ಎಂಬ ಬಗ್ಗೆ ವರಿಷ್ಠರು ಪರಿಶೀಲನೆ ನಡೆಸಿದ್ದಾರೆ. ಗೆಲ್ಲುವ ಅರ್ಹತೆ ಇರುವವರು, ಶಾ ಕೊಟ್ಟ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದವರಿಗೆ ಟಿಕೆಟ್ ಸಿಗಬಹುದು. ಯಡಿಯೂರಪ್ಪ ಟಿಕೆಟ್ ಕೊಡಿಸಲಿದ್ದಾರೆ, ಅನಂತಕುಮಾರ್ ಕೈ ಹಿಡಿಯಲಿದ್ದಾರೆ ಎಂದು ನಂಬಿ ಕುಳಿತರೆ ಟಿಕೆಟ್ ಕಷ್ಟ ಎಂದೂ ಮೂಲಗಳು ವಿವರಿಸಿವೆ.

ಜೆಡಿಎಸ್ ಜತೆ ಅನುಕೂಲಸಿಂಧು ಹೊಂದಾಣಿಕೆಗೆ ಬಿಜೆಪಿ ಸಜ್ಜು!

ರಾಜ್ಯದಲ್ಲಿ ಜೆಡಿಎಸ್‌ ಅನ್ನು ಶತ್ರು ಎಂದು ಭಾವಿಸದೇ, ಆ ಪಕ್ಷದ ಜತೆ ಅನುಕೂಲಸಿಂಧು ಹೊಂದಾಣಿಕೆ ಮಾಡಿಕೊಳ್ಳುವ ಚಿಂತನೆ ಪಕ್ಷದ ವರಿಷ್ಠರದ್ದಾಗಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.

ಪ್ರಮುಖವಾಗಿ ಹಳೆ ಮೈಸೂರು ಪ್ರದೇಶದಲ್ಲಿ ಬಿಜೆಪಿಗೆ ಬಲಿಷ್ಠ ನೆಲೆ ಇಲ್ಲ. ಅಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮಧ್ಯೆಯೇ ಹಣಾಹಣಿ ಇದೆ. ಇಂತಹ ಕಡೆ ಕಾಂಗ್ರೆಸ್‌ನ ಪಾರಂಪರಿಕ ಮತಗಳನ್ನು ಒಡೆಯುವ ಕೆಲಸ ಆ ಪಕ್ಷದಿಂದ ಮಾತ್ರ ಸಾಧ್ಯ ಎಂದು ಮೂಲಗಳು ಹೇಳಿವೆ.

ಈ ಕಾರಣಕ್ಕಾಗಿಯೇ ಜೆಡಿಎಸ್ ಬಗ್ಗೆ ಆಕ್ರಮಣಕಾರಿಯಾಗಿ ವಾಗ್ದಾಳಿ ನಡೆಸದೇ ಇರಲು, ಮೃದು ಧೋರಣೆ ಅನುಸರಿಸಲು ವರಿಷ್ಠರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.‌

ಹೆಗಡೆ ಬಾಯಿ ಬಂದ್: ‘ಮುಸ್ಲಿಂ ಮತ ಬೇಡ, ಸಂವಿಧಾನ ಬದಲಾವಣೆ ಮಾಡುತ್ತೇವೆ’ ಎಂಬಂತಹ ಹೇಳಿಕೆ ನೀಡುತ್ತಿರುವ ಅನಂತಕುಮಾರ್ ಹೆಗಡೆ ಬಾಯಿಗೆ ಬೀಗ ಹಾಕಲು ವರಿಷ್ಠರು ಮುಂದಾಗಿದ್ದಾರೆ.

‘ಮುಸ್ಲಿಮರ ಬಗ್ಗೆ ನಮಗೆ ವಿರೋಧವಿಲ್ಲ. ನಿಮ್ಮ ಲೋಕಸಭಾ ಕ್ಷೇತ್ರದ ಗೆಲುವಿಗೆ ತಕ್ಕಂತೆ ನಿಮ್ಮ ನೀತಿ, ಮಾತು ಇಟ್ಟುಕೊಳ್ಳಿ. ಇಡೀ ಕರ್ನಾಟಕಕ್ಕೆ ಅದೇ ಮಾದರಿ ಅನುಸರಿಸಬೇಡಿ’ ಎಂದೂ ಅವರಿಗೆ ಸೂಚಿಸಿರುವುದಾಗಿ ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry