ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ 5ನೇ ಹಂತದ ಯೋಜನೆ: ಜೈಕಾ ಒಪ್ಪಂದ

110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶ
Last Updated 24 ಜನವರಿ 2018, 19:50 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕಾವೇರಿ ಐದನೇ ಹಂತದ ಮಹತ್ವಾಕಾಂಕ್ಷಿ ಯೋಜನೆಗೆ ಬಂಡವಾಳ ಹೂಡುವ ಕುರಿತು ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ಬುಧವಾರ ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡಿತು.

ಬಿಬಿಎಂಪಿ ವ್ಯಾಪ್ತಿಗೆ ಹೊಸತಾಗಿ ಸೇರ್ಪಡೆಯಾದ 225 ಚದರ ಕಿ.ಮೀ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಒದಗಿಸುವುದಕ್ಕೂ ಜೈಕಾ ಹಣಕಾಸಿನ ನೆರವು ಒದಗಿಸಲಿದೆ. ಯೋಜನೆಯ ಒಟ್ಟು ವೆಚ್ಚದಲ್ಲಿ ಶೇ 85ರಷ್ಟು ಮೊತ್ತವನ್ನು ಜೈಕಾ ಭರಿಸಲಿದೆ. ಇನ್ನುಳಿದ ಶೇ 7.5ರಷ್ಟನ್ನು ರಾಜ್ಯ ಸರ್ಕಾರ ಹಾಗೂ ಶೇ 7.5ರಷ್ಟನ್ನು ಜಲಮಂಡಳಿ ಭರಿಸಲಿವೆ.

ನವದೆಹಲಿಯಲ್ಲಿ ಬುಧವಾರ ಜೈಕಾ ಮುಖ್ಯ ಪ್ರತಿನಿಧಿ ತಕೇಮಾ ಸಕಮೊಟೊ, ಜಪಾನ್‌ ರಾಯಭಾರಿ ಕೆಂಜಿ ಹಿರಾಮಟ್ಸು ಹಾಗೂ ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಎಸ್. ಸೆಲ್ವ ಕುಮಾರ್ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು. ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್, ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ, ಮುಖ್ಯ ಎಂಜಿನಿಯರ್‌ ಡಾ. ಪಿ.ಎನ್.ರವೀಂದ್ರ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಕಾವೇರಿ ಒಂದು, ಎರಡು, ಮೂರು ಹಾಗೂ ನಾಲ್ಕನೇ ಹಂತಗಳ ನೀರು ಪೂರೈಕೆ ಮಾರ್ಗಗಳ ಮೂಲಕ ನಗರಕ್ಕೆ ನಿತ್ಯ 135 ಕೋಟಿ ಲೀಟರ್‌ ನೀರು ಪೂರೈಕೆ ಆಗುತ್ತಿದೆ. ಆದರೂ, ನಗರ ನಿತ್ಯ 77.5 ಕೋಟಿ ಲೀಟರ್‌ಗಳಷ್ಟು ಕೊರತೆ ಅನುಭವಿಸುತ್ತಿದೆ. ಐದನೇ ಹಂತದ ಯೋಜನೆ ಅನುಷ್ಠಾನವಾದ ಬಳಿಕ ನೀರಿನ ಕೊರತೆ ನೀಗಲಿದೆ.

ಈ ಗ್ರಾಮಗಳ 2049ರ ಜನಸಂಖ್ಯೆ (43 ಲಕ್ಷ) ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ಸಿದ್ಧಪಡಿಸಲಾಗಿದೆ. ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಗಾಗಿ 2,817 ಕಿ.ಮೀ ಉದ್ದದ ಪೈಪ್‌ಲೈನ್‌ ಅಳವಡಿಸಬೇಕಿದೆ. ಈ ಯೋಜನೆಯಲ್ಲಿ 14 ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ನಿರ್ಮಿಸುವ ಪ್ರಸ್ತಾವವೂ ಇದೆ.

ಈ ಯೋಜನೆಯ ವಿನ್ಯಾಸ ಮತ್ತು ನೀಲ ನಕ್ಷೆ ತಯಾರಿಯಂತಹ ಪೂರ್ವಸಿದ್ಧತಾ ಕಾರ್ಯಗಳು ಈ ವರ್ಷವೇ ಪ್ರಾರಂಭವಾಗಲಿವೆ. ಆದರೆ, ಕಾಮಗಾರಿಗಳು 2019ರಿಂದ ಆರಂಭವಾಗಲಿವೆ. 2022ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಒಂದೆಡೆ ನಗರಕ್ಕೆ  ಕುಡಿಯುವ ನೀರು ಪೂರೈಸುವುದರ ಜೊತೆಗೆ ಪರಿಸರ ಸಂರಕ್ಷಣೆಯ ಉದ್ದೇಶವನ್ನೂ ಈ ಯೋಜನೆ ಹೊಂದಿದೆ ಎಂದು ಜಲಮಂಡಳಿಯ ಪ್ರಕಟಣೆ ತಿಳಿಸಿದೆ.

ಈ ಹಳ್ಳಿಗಳಲ್ಲಿ ಜಲಾಗಾರಗಳನ್ನು ನಿರ್ಮಿಸಲು 35 ಎಕರೆ ಗುರುತಿಸಲಾಗಿದೆ. ಈ ಜಾಗಗಳು ಜಲಮಂಡಳಿಯ ಸ್ವಾಧೀನದಲ್ಲಿವೆ. ನಗರದೊಳಗೆ ಜಲಾಗಾರಗಳನ್ನು ಸ್ಥಾಪಿಸಲು 20 ಎಕರೆ ಅಗತ್ಯ ಇದ್ದು, ಸರ್ಕಾರಿ ಜಾಗ ನೀಡುವಂತೆ ಕಂದಾಯ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಹೀಗಾಗಿ ಭೂಸ್ವಾಧೀನಕ್ಕೆ ಹೆಚ್ಚು ವೆಚ್ಚವಾಗದು ಎಂದು ಮಂಡಳಿ ಹೇಳಿದೆ.

ಕಾವೇರಿ 5ನೇ ಹಂತದ ಯೋಜನೆಯ ಹಾದಿ...
2010 ಡಿಸೆಂಬರ್‌:
110 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸಲು ₹2,379 ಕೋಟಿ ಮೊತ್ತದ ಯೋಜನೆಗೆ ರಾಜ್ಯ ಸರ್ಕಾರರ ಆಡಳಿತಾತ್ಮಕ ಮಂಜೂರಾತಿ

2011­: ಯೋಜನೆಗೆ ಮಂಜೂರಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ.  ಲಿಂಗನಮಕ್ಕಿ, ಮೇಕೆದಾಟು ಸೇರಿದಂತೆ ಬೇರೆ ಬೇರೆ ಮೂಲಗಳಿಂದ ನೀರು ಪೂರೈಕೆ ಮಾಡಲು ಪ್ರಸ್ತಾವ. ನಿಶ್ಚಿತ ಜಲಮೂಲವನ್ನು ಅಂತಿಮಗೊಳಿಸಿ ಮರುಪ್ರಸ್ತಾವ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚನೆ

2014: ಕಾವೇರಿ ನದಿಯಿಂದ ನಗರಕ್ಕೆ 10 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಪೂರೈಸಲು ರಾಜ್ಯ ಸಚಿವ ಸಂಪುಟ  ಒಪ್ಪಿಗೆ. ಜಲಮಂಡಳಿಯಿಂದ ₹4,307 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿ. ನಗರಾಭಿವೃದ್ಧಿ ಇಲಾಖೆಯಿಂದ 2015ರ ಜೂನ್‌ನಲ್ಲಿ ತಾಂತ್ರಿಕ ಅನುಮೋದನೆ. ಸಾಲಕ್ಕಾಗಿ ಜೈಕಾ ಸಂಸ್ಥೆಗೆ ಮೊರೆ

2015ರ ಡಿಸೆಂಬರ್‌: ಜಲಮಂಡಳಿಯಿಂದ ₹5,018 ಕೋಟಿಯ ಪರಿಷ್ಕೃತ ಪ್ರಸ್ತಾವ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಕೆ

2016ರ ಜನವರಿ: ಯೋಜನಾ ಮೊತ್ತ ₹5,550 ಕೋಟಿಗೆ ಏರಿಕೆ. ಪರಿಷ್ಕೃತ ಪ್ರಸ್ತಾವಕ್ಕೆ ಸಚಿವ ಸಂಪುಟ ಅನುಮೋದನೆ. ಜೈಕಾಗೆ  ಡಿಪಿಆರ್‌ ಸಲ್ಲಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT