7
ಹೊಯ್ಸಳ ಚಾಲಕನಿಗೆ ಮಚ್ಚಿನಿಂದ ಹೊಡೆದಿದ್ದ; ಇನ್‌ಸ್ಪೆಕ್ಟರ್‌ಗೂ ಧಮಕಿ ಹಾಕಿದ್ದ

ರೌಡಿ ಅಲಿಂ ಕಾಲಿಗೆ ಗುಂಡೇಟು

Published:
Updated:
ರೌಡಿ ಅಲಿಂ ಕಾಲಿಗೆ ಗುಂಡೇಟು

ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ಮಾಡುವವರ ಕಾಲಿಗೆ ಗುಂಡು ಹೊಡೆಯುವಂತೆ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಸೂಚನೆ ಕೊಟ್ಟ ಬೆನ್ನಲ್ಲೇ, ರೌಡಿ ಅಲಿಂ ಖಾನ್‌ನ (34) ಕಾಲಿಗೆ ಜಗಜೀವನ್‌ರಾಮನಗರ ಠಾಣೆ ಇನ್‌ಸ್ಪೆಕ್ಟರ್ ಬುಧವಾರ ಗುಂಡು ಹೊಡೆದಿದ್ದಾರೆ.

ಜ.16ರ ರಾತ್ರಿ ಪಾದರಾಯನಪುರದಲ್ಲಿ ಹೊಯ್ಸಳ ವಾಹನದ ಚಾಲಕ ರಾಜೇಂದ್ರ ಅವರಿಗೆ ಮಚ್ಚಿನಿಂದ ಹೊಡೆದು ಅಜ್ಮೀರ್‌ಗೆ ತೆರಳಿದ್ದ ಅಲಿಂ, ಬುಧವಾರ ಬೆಳಗಿನ ಜಾವ ನಗರಕ್ಕೆ ಬಂದು ದೊಡ್ಡಬಸ್ತಿಯಲ್ಲಿರುವ ಸೋದರ ಮಾವನ ಮನೆಯಲ್ಲಿ ತಂಗಿದ್ದ.

ಬೆಳಿಗ್ಗೆ 11.45ಕ್ಕೆ ಕಾಯಿನ್‌ ಬಾಕ್ಸ್‌ನಿಂದ ಜಗಜೀವನ್‌ರಾಮನಗರ ಠಾಣೆಗೆ ಕರೆ ಮಾಡಿದ್ದ ಆತ, ‘ನಿಮ್ಮ ಇನ್‌ಸ್ಪೆಕ್ಟರ್‌ ನನ್ನನ್ನು ಹುಡುಕುತ್ತಿದ್ದಾರಂತೆ. ಅವರಿಗೆ ಒಂದು ಗತಿ ಕಾಣಿಸುತ್ತೇನೆ’ ಎಂದು ಹೇಳಿದ್ದ. ಕೂಡಲೇ ಸಿಬ್ಬಂದಿ ಆ ವಿಚಾರವನ್ನು ಇನ್‌ಸ್ಪೆಕ್ಟರ್ ಲಿಂಗರಾಜ್ ಅವರ ಗಮನಕ್ಕೆ ತಂದಿದ್ದರು.

ಆರೋಪಿಯ ಬಂಧನಕ್ಕೆ ಲಿಂಗರಾಜ್, ಜ್ಞಾನಭಾರತಿ ಇನ್‌ಸ್ಪೆಕ್ಟರ್ ಗಿರಿರಾಜ್ ಹಾಗೂ ಕಾಟನ್‌ಪೇಟೆ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಕಾಯಿನ್‌ ಬೂತ್‌ಗೆ ವಾಪಸ್ ಕರೆ ಮಾಡಿದಾಗ, ದೊಡ್ಡಬಸ್ತಿಯಿಂದ ಕರೆ ಬಂದಿರುವುದು ಗೊತ್ತಾಯಿತು. ಕೂಡಲೇ ವಿಶೇಷ ತಂಡಗಳು ಅಲ್ಲಿಗೆ ತೆರಳಿದ್ದವು.

ಈ ವೇಳೆಗಾಗಲೇ ಆರೋಪಿ ಸ್ನೇಹಿತನ ಬೈಕ್‌ನಲ್ಲಿ ಚಿಕ್ಕಬಸ್ತಿಗೆ ಬಂದಿದ್ದ. ಪೊಲೀಸ್ ಜೀಪನ್ನು ನೋಡುತ್ತಿದ್ದಂತೆಯೇ ಆತ ಬೈಕ್‌ನಿಂದ ಇಳಿದು ನಿರ್ಜನ ಪ್ರದೇಶದ ಕಡೆಗೆ ಓಡಲಾರಂಭಿಸಿದ. ಅಲಿಂನನ್ನು ಕಂಡ ಲಿಂಗರಾಜ್ ನೇತೃತ್ವದ ತಂಡ, ಕೂಡಲೇ ಜೀಪ್ ನಿಲ್ಲಿಸಿ ಆತನನ್ನು ಬೆನ್ನಟ್ಟಿತು. ಕಾನ್‌ಸ್ಟೆಬಲ್ ವೆಂಕಟೇಶ್ ಅವರು ಕೊರಳಪಟ್ಟಿಗೆ ಕೈ ಹಾಕುತ್ತಿದ್ದಂತೆಯೇ, ಆರೋಪಿ ಮಚ್ಚಿನಿಂದ ಹಲ್ಲೆ ನಡೆಸಿದ. ಆಗ ಲಿಂಗರಾಜು ಆರೋಪಿಯ ಕಾಲಿಗೆ ಎರಡು ಸುತ್ತು ಗುಂಡು ಹೊಡೆದರು.

ಒಂದು ಗುಂಡು ತೊಡೆಯನ್ನು ಸೇರಿದರೆ, ಮತ್ತೊಂದು ಮೊಣಕಾಲಿನ ಕೆಳಭಾಗವನ್ನು ಹೊಕ್ಕಿತು. ರಕ್ತಸ್ರಾವವಾಗಿ ಕುಸಿದು ಬಿದ್ದ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಹಾಗೂ ಹಲ್ಲೆಯಿಂದ ಗಾಯಗೊಂಡ ವೆಂಕಟೇಶ್ ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮೂಲಗಳು ಹೇಳಿವೆ.

ಐದು ಹೊಲಿಗೆಗಳು: ‘ಜ.16ರ ರಾತ್ರಿ ಅಲಿಂ ಗಾಂಜಾ ಮತ್ತಿನಲ್ಲಿ ಪಾದರಾಯನಪುರದ ಅಯ್ಯಂಗಾರ್ ಬೇಕರಿ ಬಳಿ ಸಾರ್ವಜನಿಕರ ಜತೆ ಗಲಾಟೆ ಮಾಡುತ್ತಿದ್ದ. ಆಗ ಸಿಬ್ಬಂದಿ ಜತೆ ಸ್ಥಳಕ್ಕೆ ದೌಡಾಯಿಸಿದ್ದ ರಾಜೇಂದ್ರ ಅವರ ತಲೆಗೆ ಮಚ್ಚಿನಿಂದ ಹೊಡೆದಿದ್ದ. ತಕ್ಷಣ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ತಲೆಗೆ ಐದು ಹೊಲಿಗೆಗಳನ್ನು ಹಾಕಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ’ ಎಂದು ಬಾಣಸವಾಡಿ ಪೊಲೀಸರು ಹೇಳಿದರು.

ಆ ಒಂದು ವಾರದಲ್ಲೇ ನಗರದ ವಿವಿಧೆಡೆ 13 ಪೊಲೀಸರ ಮೇಲೆ ಹಲ್ಲೆ ನಡೆದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕಮಿಷನರ್, ಕರ್ತವ್ಯದ ವೇಳೆ ಹಲ್ಲೆ ಮಾಡಿದರೆ ಕಾಲಿಗೆ ಗುಂಡು ಹೊಡೆಯುವಂತೆ ಜ.20ರಂದು ಸೂಚನೆ ಕೊಟ್ಟಿದ್ದರು.

ಗೂಂಡಾ ಅಸ್ತ್ರ ಪ್ರಯೋಗ

ಕೊಲೆ, ಕೊಲೆ ಯತ್ನ, ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ, ದರೋಡೆ ಸೇರಿದಂತೆ ಅಲಿಂ ವಿರುದ್ಧ ಬ್ಯಾಟರಾಯನಪುರ, ಜಗಜೀವನ್‌ರಾಮನಗರ ಹಾಗೂ ವಿಜಯನಗರ ಠಾಣೆಗಳಲ್ಲಿ ಆರು ಪ್ರಕರಣಗಳು ದಾಖಲಾಗಿವೆ. 2013ರಲ್ಲಿಯೂ ಈತ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದ. ಅಲಿಂ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸಲು ನಿರ್ಧರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry