ಸಾಲ ತೀರಿಸಲು ಕಳ್ಳನಾದ ಸಿವಿಲ್ ಎಂಜಿನಿಯರ್!

7
ರಾಮಮೂರ್ತಿನಗರ ಪೊಲೀಸರ ಕಾರ್ಯಾಚರಣೆ

ಸಾಲ ತೀರಿಸಲು ಕಳ್ಳನಾದ ಸಿವಿಲ್ ಎಂಜಿನಿಯರ್!

Published:
Updated:
ಸಾಲ ತೀರಿಸಲು ಕಳ್ಳನಾದ ಸಿವಿಲ್ ಎಂಜಿನಿಯರ್!

ಬೆಂಗಳೂರು: ರಾತ್ರಿ ವೇಳೆ ಮನೆಗಳ ಬೀಗ ಮುರಿದು ನಗ–ನಾಣ್ಯ ದೋಚುತ್ತಿದ್ದ ಸಿವಿಲ್ ಎಂಜಿನಿಯರ್ ಸೇರಿ ಇಬ್ಬರನ್ನು ಬಂಧಿಸಿರುವ ರಾಮಮೂರ್ತಿನಗರ ಪೊಲೀಸರು, ಅರ್ಧ ಕೆ.ಜಿ ಚಿನ್ನ ಹಾಗೂ ಕಾರನ್ನು ಜಪ್ತಿ ಮಾಡಿದ್ದಾರೆ.

ತಮಿಳುನಾಡಿನ ಜಸ್ಟಿನ್ ಅಲಿಯಾಸ್ ಜಾಕ್ (44) ಹಾಗೂ ಉತ್ತರ ಪ್ರದೇಶದ ಸಂಜಯ್‌ ಅಲಿಯಾಸ್ ಸೋನು (19) ಎಂಬುವರನ್ನು ಬಂಧಿಸಿದ್ದೇವೆ. ಇವರು ರಾಮಮೂರ್ತಿನಗರ, ಹೆಣ್ಣೂರು ಹಾಗೂ ಆವಲಹಳ್ಳಿ ಠಾಣೆಗಳ ವ್ಯಾಪ್ತಿಯ ಹತ್ತು ಮನೆಗಳಲ್ಲಿ ಕಳ್ಳತನ ಮಾಡಿದ್ದರು. ಇನ್ನೊಬ್ಬ ಆರೋಪಿ ಮೋಟು ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿವಿಎಲ್ ಎಂಜಿನಿಯರ್ ಆಗಿರುವ ಜಸ್ಟಿನ್, ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದು ಹೊರಮಾವು ಸಮೀಪದ ಬಂಜಾರ ಲೇಔಟ್‌ನಲ್ಲಿ ನೆಲೆಸಿದ್ದ. ಟೈಲ್ಸ್ ಹಾಕುವ ಕೆಲಸ ಮಾಡುತ್ತಿದ್ದ ಸಂಜಯ್ ಹಾಗೂ ಮೋಟು, ವರ್ಷದ ಹಿಂದೆ ಆತನಿಗೆ ಪರಿಚಯವಾಗಿದ್ದರು.

ಹಗಲು ವೇಳೆ ಕಾರಿನಲ್ಲಿ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದ ಆರೋಪಿಗಳು, ರಾತ್ರಿ ಆ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು. ಕದ್ದ ಒಡವೆಗಳನ್ನು ಪರಿಚಿತ ಆಭರಣ ವ್ಯಾಪಾರಿಗಳಿಗೆ ಮಾರಾಟ ಮಾಡಿ, ಹಣ ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪಕ್ಕದ ಮನೆಗೇ ಕನ್ನ: ಜಸ್ಟಿನ್‌ನ ಪಕ್ಕದ ಮನೆಯಲ್ಲಿ ಒಡಿಶಾದ ರಮಾಕಾಂತ್ ಕುಟುಂಬ ನೆಲೆಸಿದೆ. 2017ರ ಡಿ.24ರಂದು ಅವರು ಕುಟುಂಬ ಸಮೇತ ಊರಿಗೆ ಹೋಗಿದ್ದರು. ಆಗ ಅವರ ಮನೆಗೇ ಕನ್ನ ಹಾಕಲು ಸಂಚು ರೂಪಿಸಿ ಸಹಚರರನ್ನು ಕರೆಸಿಕೊಂಡ ಜಸ್ಟಿನ್, ‘ಇದು ನಮ್ಮ ಅಕ್ಕನ ಮನೆ. ಎಲ್ಲರೂ ಊರಿಗೆ ಹೋಗಿದ್ದಾರೆ. ನೀವಿಬ್ಬರೇ ಹೋಗಿ ಕೆಲಸ ಮುಗಿಸಿ’ ಎಂದು ಹೇಳಿದ್ದ. ಅಂತೆಯೇ ಸಂಜಯ್ ಹಾಗೂ ಮೋಟು ಆ ಮನೆಯಲ್ಲಿ ಲೂಟಿ ಮಾಡಿದ್ದರು. ಡಿ.31ರಂದು ರಮಾಕಾಂತ್ ಕುಟುಂಬ ನಗರಕ್ಕೆ ವಾಪಸಾದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಮನೆಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಕಳ್ಳರ ಚಹರೆ ಆಧರಿಸಿ ಕಾರ್ಯಾಚರಣೆ ಶುರು ಮಾಡಿದ್ದ ಪೊಲೀಸರು, ಮೊದಲು ಸಂಜಯ್‌ನನ್ನು ವಶಕ್ಕೆ ಪಡೆದುಕೊಂಡರು. ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಜಸ್ಟಿನ್‌ನೇ ಸೂತ್ರಧಾರಿ ಎಂದು ಗೊತ್ತಾಗಿದೆ. ನಂತರ ಆತನನ್ನೂ ಬಂಧಿಸಿ ಅರ್ಧ ಕೆ.ಜಿ. ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

‘ಮನೆ ಹಾಗೂ ಕಾರು ಖರೀದಿಗೆ ಸಾಕಷ್ಟು ಸಾಲ ಮಾಡಿಕೊಂಡಿದ್ದೆ. ಅದನ್ನು ತೀರಿಸಲು ಹಾಗೂ ಬೇಗನೆ ಶ್ರೀಮಂತನಾಗಲು ಕಳ್ಳತನದ ದಾರಿ ಹಿಡಿದೆ’ ಎಂದು ಜಸ್ಟಿನ್ ಹೇಳಿಕೆ ಕೊಟ್ಟಿದ್ದಾನೆ. ನ್ಯಾಯಾಧೀಶರ ಆದೇಶದಂತೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry