ಗಲಿಬಿಲಿಯಾದ ಮೆಟ್ರೊ ಸಿಬ್ಬಂದಿ!

7
ಶಾಲೆಯಿಂದ ತಪ್ಪಿಸಿಕೊಂಡು ಬಂದಿದ್ದ ತುಮಕೂರಿನ ವಿದ್ಯಾರ್ಥಿ

ಗಲಿಬಿಲಿಯಾದ ಮೆಟ್ರೊ ಸಿಬ್ಬಂದಿ!

Published:
Updated:
ಗಲಿಬಿಲಿಯಾದ ಮೆಟ್ರೊ ಸಿಬ್ಬಂದಿ!

ಬೆಂಗಳೂರು: ತುಮಕೂರಿನಿಂದ ತಪ್ಪಿಸಿಕೊಂಡು ಬಂದಿದ್ದ 10 ವರ್ಷದ ಬಾಲಕನೊಬ್ಬ ನೀಡಿದ ತಪ್ಪು ಮಾಹಿತಿಯಿಂದಾಗಿ ಬೆಂಗಳೂರು ಮೆಟ್ರೊ ರೈಲು ನಿಗಮದ ಸಿಬ್ಬಂದಿಯನ್ನು ಸೋಮವಾರ ಕೆಲಕಾಲ ಗಲಿಬಿಲಿಗೊಳಗಾಗುವ ಪ್ರಮೇಯ ಸೃಷ್ಟಿಯಾಯಿತು.

ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣಕ್ಕೆ ಬಂದಿದ್ದ ಬಾಲಕನ ವರ್ತನೆ ಕಂಡು ಅನುಮಾನಗೊಂಡ ಗೃಹರಕ್ಷಕ ಸಿಬ್ಬಂದಿ ಗೀತಾ ಆತನ ಯೋಗಕ್ಷೇಮ ವಿಚಾರಿಸಿದ್ದರು.

‘ನಿಲ್ದಾಣ ಗೇಟ್‌ನಲ್ಲಿ ಬಾಲಕ ಒಂದು ರೂಪಾಯಿ ನಾಣ್ಯವನ್ನು ಸ್ವಯಂಚಾಲಿತ ದರ ಸಂಗ್ರಹ (ಎಎಫ್‌ಸಿ) ಯಂತ್ರದೊಳಗೆ ತೂರಿಸಲು ಯತ್ನಿಸುತ್ತಿದ್ದ. ಆತ ಒಬ್ಬನೇ ಇರುವುದನ್ನು ನೋಡಿ ಅನುಮಾನಗೊಂಡ ಅವರು, ಆತನ ಯೋಗಕ್ಷೇಮ ವಿಚಾರಿಸಿದರು. ಆಗ ಬಾಲಕ, ಅಜ್ಜಿ ಜೊತೆ ಬಂದಿದ್ದೆ. ಜನಜಂಗುಳಿ ನಡುವೆ ನಾವಿಬ್ಬರು ಬೇರೆಯಾದೆವು ಎಂದು ತಿಳಿಸಿದ’ ಎಂದು ಸಹಸಿಬ್ಬಂದಿಯೊಬ್ಬರು ತಿಳಿಸಿದರು.

ಬಾಲಕನನ್ನು ನಿಯಂತ್ರಣ ಕೊಠಡಿಗೆ ಕರೆದೊಯ್ದ ಸಿಬ್ಬಂದಿ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಗಳನ್ನು ನೋಡಿ, ಆತನ ಅಜ್ಜಿಯನ್ನು ಪತ್ತೆಹಚ್ಚುವ ಪ್ರಯತ್ನ ನಡೆಸಿದರು. ಬಳಿಕ ಒಬ್ಬ ಮಹಿಳೆಯನ್ನು ತೋರಿಸಿದ ಆತ, ‘ಅವರೇ ನನ್ನ ಅಜ್ಜಿ’ ಎಂದಿದ್ದ. ಬಳಿಕ ಗೃಹರಕ್ಷಕ ಸಿಬ್ಬಂದಿಯೊಬ್ಬರು ಆತನ ಜೊತೆ ಮೆಜೆಸ್ಟಿಕ್‌ ಬಸ್‌ನಿಲ್ದಾಣಕ್ಕೆ ತೆರಳಿ,  ಅಜ್ಜಿಗಾಗಿ ಹುಡುಕಾಟ ನಡೆಸಿದ್ದರು.

ಬಾಲಕನಲ್ಲಿ ಸಿಬ್ಬಂದಿ ಮತ್ತಷ್ಟು ಪ್ರಶ್ನೆಗಳನ್ನು ಕೇಳಿದಾಗ, ‘ನಾನು ಹಾಸನದಲ್ಲಿ ಶಾಲೆಯೊಂದರಲ್ಲಿ ಓದುತ್ತಿದ್ದೆ’ ಎಂದು ಅದರ ಹೆಸರು ಹೇಳಿದ್ದ. ಅಲ್ಲಿನ ಪ್ರಾಂಶುಪಾಲರನ್ನು ದೂರವಾಣಿ ಮೂಲಕ ವಿಚಾರಿಸಿದಾಗ ಆ ಹುಡುಗ ಎರಡು ವರ್ಷದ ಹಿಂದೆಯೇ ಶಾಲೆ ತೊರೆದಿರುವುದು ಗೊತ್ತಾಯಿತು.

ಬಾಲಕನ ತಾಯಿಯೂ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಹಾಗಾಗಿ ಅವನ ವಿಳಾಸ ಪತ್ತೆ ಹಚ್ಚುವುದು ಸುಲಭವಾಯಿತು ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದರು.

ಹಾಸನದ ಶಾಲೆಯ ಪ್ರಾಂಶುಪಾಲರು ಬಾಲಕನ ತಾಯಿಯನ್ನು ಸಂಪರ್ಕಿಸಲು ನೆರವಾದರು. ತಾಯಿ ಬಳಿ ಮಾತನಾಡಿದಾಗ, ‘ಬಾಲಕ ಸುಳ್ಳು ಹೇಳುತ್ತಿದ್ದಾನೆ. ಅವನ ಮಾತನ್ನು ನಂಬಬೇಡಿ. ನಾನೇ ಅಲ್ಲಿಗೆ ಬರುತ್ತೇನೆ. ಅಲ್ಲಿಯವರೆಗೆ ಆತ ನಿಮ್ಮ ಬಳಿಯೇ ಇರಲಿ’ ಎಂದರು.

‘ಬಾಲಕ ತುಮಕೂರಿನ ಶಾಲೆಯಿಂದ ತಪ್ಪಿಸಿಕೊಂಡಿದ್ದ. ಆತನನ್ನು ಕೊನೆಗೂ ಪೋಷಕರ ಮಡಿಲಿಗೆ ಒಪ್ಪಿಸಿದೆವು’ ಎಂದು ಅವರು ತಿಳಿಸಿದರು.

‘ಬಾಲಕ ನಾವೆಲ್ಲ ಗಲಿಬಿಲಿಗೊಳ್ಳುವಂತೆ ಮಾಡಿದ್ದ. ಆತನ ವಿಳಾಸ ಹುಡುಕಲು ನಾವು ಮೂರು ಗಂಟೆ ಶ್ರಮ ಪಟ್ಟಿದ್ದೇವೆ. ಆತನನ್ನು ತಾಯಿ ಜೊತೆ ಸೇರಿಸುವುದರ ಮೂಲಕ ಪ್ರಕರಣ ಸುಖಾಂತ್ಯಗೊಂಡ ಬಳಿಕವಷ್ಟೇ ನಾವು ನಿಟ್ಟುಸಿರು ಬಿಟ್ಟೆವು’ ಎಂದು ಮೆಟ್ರೊ ಸಿಬ್ಬಂದಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry