ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಂದ್‌ಗೆ ಹಲವು ಸಂಘಟನೆಗಳ ಬೆಂಬಲ’

Last Updated 24 ಜನವರಿ 2018, 20:16 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 3000ಕ್ಕೂ ಅಧಿಕ ಕನ್ನಡ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ಸಂಘ–ಸಂಸ್ಥೆಗಳು ಬಂದ್‌ಗೆ ಬೆಂಬಲ ನೀಡಿವೆ. ಇದನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕೋರಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶದಿಂದ ಬಂದ್‌ಗೆ ಕರೆ ಕೊಟ್ಟಿಲ್ಲ. ಮಹದಾಯಿ ವಿವಾದ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡುವಂತೆ ಆಗ್ರಹಿಸಿ ಕರೆ ಕೊಟ್ಟಿದ್ದೇವೆ’ ಎಂದರು.‌

ಮಹದಾಯಿ ನೀರಿಗಾಗಿ 900 ದಿನಗಳಿಂದ ರೈತರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ನರೇಂದ್ರ ಮೋದಿ ರಾಜ್ಯಕ್ಕೆ 5 ಬಾರಿ ಬಂದಿದ್ದಾರೆ. ಒಮ್ಮೆಯೂ ವಿವಾದದ ಬಗ್ಗೆ ಅವರು ಮಾತನಾಡಿಲ್ಲ. ರಾಜ್ಯದ ಬಿಜೆಪಿ ನಾಯಕರು ಅವರಿಗೆ ವಿವಾದದ ಬಗ್ಗೆ ಮನವರಿಕೆಯನ್ನೂ ಮಾಡಿಕೊಟ್ಟಿಲ್ಲ ಎಂದು ದೂರಿದರು.

‘ರಾಜ್ಯದಾದ್ಯಂತ ನಡೆಯುವ ಬಂದ್‌ನಲ್ಲಿ 1 ಲಕ್ಷ ಮಂದಿ ಪಾಲ್ಗೊಳ್ಳುತ್ತಿದ್ದಾರೆ. ನಗರದಲ್ಲಿ ಬೆಳಿಗ್ಗೆ 10 ಗಂಟೆಗೆ ಪುರಭವನದ ಬಳಿಯಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸುತ್ತೇವೆ. ಇದರಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಹೇಳಿದರು.

ರಾಜಕೀಯ ಪ್ರೇರಿತವಲ್ಲ: ಇದು ರಾಜಕೀಯ ಹಾಗೂ ಕಾಂಗ್ರೆಸ್‌ ಪ್ರೇರಿತ ಬಂದ್ ಎಂದು ಕೆಲವರು ಹೇಳಿಕೆ ಕೊಟ್ಟಿದ್ದಾರೆ. ಇದು ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದರು.

ಕನ್ನಡ ಸಂಘಟನೆಗಳ ನಾಯಕರ ಪ್ರತಿಕ್ರಿಯೆ

* ಕುಚೋದ್ಯಕ್ಕಾಗಿ ಹಾಗೂ ಸ್ವಹಿತಾಸಕ್ತಿಗಾಗಿ ಕೆಲವರು ಬಂದ್‌ಗೆ ಬೆಂಬಲವಿಲ್ಲ ಎನ್ನುತ್ತಿದ್ದಾರೆ. ಗುರುವಾರ ಸಂಜೆ ವೇಳೆಗೆ ಬಂದ್ ಯಶಸ್ವಿಯಾದ ಸುದ್ದಿ ಕೇಳುವಿರಿ

– ಶಿವರಾಮೇಗೌಡ, ಕನ್ನಡ ಸೇನೆ ಅಧ್ಯಕ್ಷ

* ಮಹದಾಯಿ ವಿಚಾರದಲ್ಲಿ ಕನ್ನಡಿಗರ ನೋವಿಗೆ ಪ್ರಧಾನಿ ಸ್ಪಂದಿಸಬೇಕು. ಬಂದ್‌ಗೆ ಸಮಿತಿಯ ಸಂಪೂರ್ಣ ಬೆಂಬಲವಿದೆ. ಸಂಘದ ಯಾವುದೇ ಸದಸ್ಯರು ಬಸ್‌ಗಳನ್ನು ರಸ್ತೆಗಿಳಿಸುವುದಿಲ್ಲ

– ವ.ಚ.ಚನ್ನೇಗೌಡ, ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ

ಮೆಟ್ರೊ, ಬಿಎಂಟಿಸಿ, ಐಟಿ–ಬಿಟಿ ಕಂಪನಿಗಳು ಕೆಲಸ ಸ್ಥಗಿತಗೊಳಿಸಬೇಕು. ಐಷಾರಾಮಿ ಹೋಟೆಲ್‌ಗಳು ಹಾಗೂ ಪೆಟ್ರೋಲ್ ಬಂಕ್‌ಗಳ ಮಾಲೀಕರು ಪ್ರತಿಭಟನೆಗೆ ಬೆಂಬಲ ನೀಡಬೇಕು

–ಪ್ರವೀಣ್ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ

15 ಸಾವಿರ ಪೊಲೀಸರ ಭದ್ರತೆ
ಬೆಂಗಳೂರು:
ಮಹದಾಯಿ ವಿವಾದ ಸಂಬಂಧ ಗುರುವಾರ ನಡೆಯಲಿರುವ ಬಂದ್ ವೇಳೆ ನಗರದಲ್ಲಿ 15 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್, ‘ಕಳೆದ ವರ್ಷ ಕಾವೇರಿ ವಿವಾದ ಸಂಬಂಧ ಹೋರಾಟ ನಡೆಯುವಾಗ ನಗರದ ಕೆಲವೆಡೆ ಹಿಂಸಾತ್ಮಕ ಘಟನೆಗಳು ನಡೆದಿದ್ದವು. ಆ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದೇವೆ’ ಎಂದು ಹೇಳಿದರು.

‘15 ಸಾವಿರ ಪೊಲೀಸರ ಜತೆಗೆ, ಕೆಎಸ್‌ಆರ್‌ಪಿ ಹಾಗೂ ಸಿಎಆರ್‌ನ 50 ತುಕಡಿಗಳು ಭದ್ರತೆ ಒದಗಿಸಲಿವೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸ್ಥಳ­ಗ­ಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಮತ್ತು ಅಹಿತಕರ ಘಟನೆಗಳಿಗೆ ಪ್ರಚೋದನೆ ನೀಡುವ ವ್ಯಕ್ತಿ ವಿರುದ್ಧ
ಮುಲಾಜಿಲ್ಲದೆ ಕ್ರಮ ಜರುಗಿಸಲಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT