ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಸಂಚಾರ ಸ್ಥಗಿತ; ಮಾಹಿತಿ ಇಲ್ಲದೆ ಪ್ರಯಾಣಿಕರ ಪರದಾಟ

Last Updated 25 ಜನವರಿ 2018, 4:16 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ನಗರ ಬಸ್ ನಿಲ್ದಾಣದ ಎದುರು ಕನ್ನಡ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದರಿಂದ ನಗರ ಹಾಗೂ ಗ್ರಾಮಾಂತರ ವಿಭಾಗದ ಬಸ್ ಸಂಚಾರ ಸ್ಥಗಿತಗೊಂಡಿದೆ.

ಗುರುವಾರ ಬೆಳಿಗ್ಗೆ ಬಸ್ ನಿಲ್ದಾಣದ ಎದುರು ಜಮಾಯಿಸಿದ ಪ್ರತಿಭಟನಾಕಾರರು ಧರಣಿ ಕುಳಿತರು. ಬಸ್ಸುಗಳು ನಿಲ್ದಾಣದಿಂದ ಹೊರಗೆ ಹೋಗದಂತೆ ತಡೆದರು.

ಸಂಸದ ಪ್ರತಾಪ ಸಿಂಹ ಅವರು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಬಸ್ ಸಂಚಾರ ಸ್ಥಗಿತಗೊಳಿಸಿರುವ ಕ್ರಮವನ್ನು ಪ್ರಶ್ನಿಸಿದರು.

ಉದ್ದೇಶಪೂರ್ವಕವಾಗಿ ಸಂಚಾರ ಸ್ಥಗಿತಗೊಳಿಸಿ ಜನರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರು, ಮಕ್ಕಳ ವಾಹನ ತಡೆಯದಂತೆ ಸೂಚನೆ
ಬಳ್ಳಾರಿ: 
ಮಹಿಳೆಯರು ಮತ್ತು ಮಕ್ಕಳಿರುವ ವಾಹನಗಳನ್ನು ತಡೆಯದಿರಲು ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಪ್ರತಿಭಟನಾ ನಿರತ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಗೆ ಮಹಿಳಾ ಠಾಣೆ ಇನ್ಸ್‌ಪೆಕ್ಟರ್‌ ಗಾಯತ್ರಿ ಸೂಚನೆ ನೀಡಿದರು.

ಆಟೋರಿಕ್ಷ ಮತ್ತು ನಗರ ಸಾರಿಗೆ ಬಸ್ ಗಳು ಎಂದಿನಂತೆ ಸಂಚರಿಸುತ್ತಿವೆ. ಆದರೆ ಪ್ರಯಾಣಿಕರ ಸಂಖ್ಯೆ ವಿರಳ.

ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ತಬ್ದ

ಚಿತ್ರದುರ್ಗ: ಕರ್ನಾಟಕ್ ಬಂದ್ ಹಿನ್ನೆಲೆಯಲ್ಲಿ  ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ತಬ್ದಗೊಂಡಿದೆ.

ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ‌ಯಂತಹ ದೂರದ ಊರಿಗೆ ಹೋಗುವ ಬಸ್‌ಗಳು ಕೂಡ ಸಂಚಾರ ಸ್ಥಗಿತಗೊಳಿಸಿವೆ‌. ಜಿಲ್ಲೆಯೊಳಗೆ ಸಂಚರಿಸುವ ಗ್ರಾಮೀಣ ಸಾರಿಗೆ ಮಾತ್ರ ಅಲ್ಲಲ್ಲಿ‌ ಕಾಣಿಸಿಕೊಳ್ಳುತ್ತಿವೆ.

ಬಸ್ ಸಂಚಾರ ಸ್ಥಗಿತಗೊಳಿಸಲು ಸರ್ಕಾರ ಯಾವುದೇ ಅಧಿಕೃತ ಆದೇಶ ನೀಡಿಲ್ಲ. ಆದರೂ ಬಸ್ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಖಾಸಗಿ ಬಸ್ ಗಳು ಎಂದಿನಂತೆ ಸಂಚಾರ ಆರಂಭಿಸಿವೆ. ರಾತ್ರಿ ಪ್ರಯಾಣ ಆರಂಭಿಸಿರುವ ಕೆಎಸ್‌ಆರ್‌ಟಿಸಿಗಳಷ್ಟೇ ಓಡಾಡುತ್ತಿವೆ.

ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ

ತುಮಕೂರು: ಕನ್ನಡ ಸಂಘಟನೆಗಳು ಗುರುವಾರ ಬಂದ್‌ಗೆ ಕರೆ ನೀಡಿದ ಪ್ರಯುಕ್ತ ನಗರದ ಕನ್ನಡ ಸಂಘಟನೆಗಳು ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದವು.

ಬೆಳಿಗ್ಗೆಯಿಂದ 9 ಗಂಟೆಯವರೆಗೆ ಎಂದಿನಂತೆಯೇ ಇದ್ದ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿತು.

ರೈಲ್ವೆ ನಿಲ್ದಾಣಕ್ಕೆ ನುಗ್ಗಿ ಪ್ರತಿಭಟನೆ ಮಾಡಲು ಮುಂದಾದ ಕನ್ನಡ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಮಾರುಕಟ್ಟೆ ಪ್ರದೇಶ ಸೇರಿದಂತೆ ಪ್ರಮುಖ ರಸ್ತೆಗಳ ಅಂಗಡಿ ತೆರೆದಿಲ್ಲ. ಕೆಲ ಕಡೆ ಹೊಟೇಲ್‌ಗಳು ತೆರೆದಿವೆ.

ಆಟೊಗಳು ಮಾತ್ರ ಎಂದಿನಂತೆಯೇ ಸಂಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT