3

ಧಾರವಾಡದಲ್ಲಿ ವಿವಿಧ ಕನ್ನಡ ಸಂಘಟನೆಗಳಿಂದ ಮಹದಾಯಿ ನೀರಿಗಾಗಿ ಪ್ರತಿಭಟನೆ

Published:
Updated:
ಧಾರವಾಡದಲ್ಲಿ ವಿವಿಧ ಕನ್ನಡ ಸಂಘಟನೆಗಳಿಂದ ಮಹದಾಯಿ ನೀರಿಗಾಗಿ ಪ್ರತಿಭಟನೆ

ಧಾರವಾಡ: ಮಹದಾಯಿ ಕಳಸಾ-ಬಂಡೂರಿಗಾಗಿ ಧಾರವಾಡದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ವಿಭಿನ್ನವಾದ ಪ್ರತಿಭಟನೆ ಮೂಲಕ ತಮ್ಮ ಗಮನ ಸೆಳೆದರು.

ಕರ್ನಾಟಕ ರಕ್ಷಣಾ ವೇದಿಕೆಯ(ಕರವೇ) ನಾರಾಯಣ ಗೌಡ ಬಣದ ಕಾರ್ಯಕರ್ತರು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ರೆಹಮಾನ್ ಹೊಳಿ ನೇತೃತ್ವದಲ್ಲಿ ಧಾರವಾಡ ರೈಲು ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ತಡೆದರು. ಇದರಿಂದಾಗಿ ಪೊಲೀಸ್ ಮತ್ತು ಕರವೇ ಕಾರ್ಯಕರ್ತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಕಾರ್ಯಕರ್ತರು ರೈಲ್ವೆ ನಿಲ್ದಾಣದೊಳಗೆ ಬಿಡುವಂತೆ ಪಟ್ಟು ಹಿಡಿದರು. ಅಲ್ಲದೇ, ರೈಲು ರೋಕೋಗೆ ಅವಕಾಶ ಮಾಡಿಕೊಡಲು ಪೊಲೀಸರಲ್ಲಿ ಮನವಿ ಮಾಡಿದರು. ಇದಕ್ಕೆ ನಿರಾಕರಿಸಿದ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದರು.

ನಗರದ ಆಲೂರ ವೆಂಕಟರಾವ್ ವೃತ್ತದಲ್ಲಿ ಖಾಲಿ ಕೊಡದೊಂದಿಗೆ ಆಗಮಿಸಿದ ಮಹಿಳೆಯರು ಮಹದಾಯಿ ಕಳಸಾ-ಬಂಡೂರಿ ನೀರಿಗಾಗಿ ಆಗ್ರಹಿಸಿದರು. ರಾಜ್ಯ ರೈತ ಸಂಘದ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿ, ತಮ್ಮ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದರು.

ಮನಸೂರಿನ ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆಯನ್ನು ಆಲೂರು ವೆಂಕಟರಾವ್ ವೃತ್ತದಲ್ಲಿ ಆಚರಿಸುವ ಮೂಲಕ ಕುಡಿಯುವ ನೀರಿನ ಹೋರಾಟಕ್ಕೆ ಬೆಂಬಲವಿದೆ ಎಂದು ಘೋಷಿಸಿದರು.

ಕರ್ನಾಟಕ ರಕ್ಷಣಾ ಸೇನೆಯ ಕಾರ್ಯಕರ್ತರು ಪ್ರಕಾಶ ದೊಡ್ಡವಾಡ ನೇತೃತ್ವದಲ್ಲಿ ಬೈಕ್ ರ‍್ಯಾಲಿ ನಡೆಸಿ, ತಮ್ಮ ಅಸಮಾಧಾನ ಹೊರ ಹಾಕಿದರು.

ಬಂದ್‌ನಿಂದಾಗಿ ಧಾರವಾಡದ ಸುಪರ್ ಮಾರುಕಟ್ಟೆ, ನೆಹರು ಮಾರುಕಟ್ಟೆ ಹಾಗೂ ಸುಭಾಷ್ ರಸ್ತೆ ಬಿಕೋ ಎನ್ನುತ್ತಿವೆ. ಗ್ರಾಮಸ್ಥರು ಮುಗದ ಬಳಿಯ ಗೋವಾ ರಸ್ತೆ ಹಾಗೂ ಸಲಕಿನಕೊಪ್ಪ ಬಳಿಯ ಹಳಿಯಾಳ ರಸ್ತೆ ತಡೆದು ಕೆಲ ಕಾಲ ಪ್ರತಿಭಟನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry