ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೂರಿಕಟ್ಟೆ’ ಕೊಟ್ಟ ಪ್ರೇರಣೆ!

Last Updated 25 ಜನವರಿ 2018, 19:30 IST
ಅಕ್ಷರ ಗಾತ್ರ

‘ಚೂರಿಕಟ್ಟೆ’ ಸಿನಿಮಾದಲ್ಲಿ ಮೊದಲ ದೃಶ್ಯವೇ ಅಚ್ಯುತ್‌ ಕುಮಾರ್‌ ಅವರ ಜತೆ ಇತ್ತು. ಅವರು ಪರದೆಯ ಮೇಲೆ ಇದ್ದರೆ ಪ್ರೇಕ್ಷಕರ ಕಣ್ಣು ಉಳಿದವರ ಕಡೆ ಹೊರಳುವುದೇ ಇಲ್ಲ. ನಾನಿನ್ನೂ ನಟನೆಯಲ್ಲಿ ಹೊಸಬಳು. ಅಂಥ ಶ್ರೇಷ್ಠ ನಟನೆದುರಿಗೆ ಹೇಗೆ ನಟಿಸುವುದು? ಈ ಆತಂಕ ನನ್ನನ್ನು ಕಾಡುತ್ತಲೇ ಇತ್ತು. ಆದರೆ ಆ ಒಂದು ದೃಶ್ಯ ಮುಗಿಯುವಷ್ಟರಲ್ಲಿ ಅಚ್ಯುತ್‌ ನನಗೆ ಆತ್ಮೀಯರಾಗಿಬಿಟ್ಟಿದ್ದರು. ನನ್ನನ್ನು ಯಾವತ್ತೂ ಅವರು ಹೊಸಬಳು ಎನ್ನುವಂತೆ ನೋಡದೆ ತುಂಬ ಬೆಂಬಲ ನೀಡಿದರು. ಎಷ್ಟು ಆತ್ಮೀಯರಾಗಿಬಿಟ್ಟರು ಎಂದರೆ ಚಿತ್ರೀಕರಣ ಮುಗಿದ ಮೇಲೆ ನಾವೆಲ್ಲರೂ ಸೇರಿಕೊಂಡು ಚೆಸ್‌, ಕೇರಂ ಆಟ ಆಡುತ್ತಿದ್ದೆವು.’

ಇಷ್ಟನ್ನು ಒಂದೇ ಉಸಿರಿಗೆ ಉಸುರಿ ಹಗುರ ನಗು ನಕ್ಕರು ಪ್ರೇರಣಾ. ‘ಚೂರಿಕಟ್ಟೆ’ಯ ಪಾತ್ರ ತನ್ನ ನಟನಾಪಯಣದ ದಿಕ್ಕುಬದಲಿಸಲಿದೆ ಎಂಬ ವಿಶ್ವಾಸವಿತ್ತು. ಹಾಗೆಯೇ ಈ ಚಿತ್ರದಿಂದ ತಾವು ಪಡೆದುಕೊಂಡು ಅನುಭವ ಕಣಜ ತಮ್ಮೊಳಗಿನ ನಟಿಯನ್ನು ರೂಪಿಸಿರುವ ಬಗ್ಗೆ ಕೃತಜ್ಞತೆಯೂ ಇತ್ತು.

ಇದೇ ವಾರ ಬಿಡುಗಡೆಯಾಗುತ್ತಿರುವ, ರಾಘು ಶಿವಮೊಗ್ಗ ನಿರ್ದೇಶನದ ‘ಚೂರಿಕಟ್ಟೆ’ ಸಿನಿಮಾ ಪ್ರೇರಣಾ ನಟನೆಯ ಎರಡನೇ ಸಿನಿಮಾ. ಈ ಮೊದಲು ಅವರು ‘ಕರಾಲಿ‘ ಎಂಬ ಇನ್ನೊಂದು ಸಿನಿಮಾದಲ್ಲಿ ನಟಿಸಿದ್ದರು.

ಪ್ರೇರಣಾ ಹುಟ್ಟಿದ್ದು ಬಳ್ಳಾರಿಯಲ್ಲಿ. ಆದರೆ ಐದು ತಿಂಗಳ ಮಗುವಿದ್ದಾಗಲೇ ಅವರ ಕುಟುಂಬ ಹೈದರಾಬಾದ್‌ಗೆ ವಲಸೆ ಹೋಯಿತು. ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ್ದು ಹೈದರಾಬಾದ್‌ನಲ್ಲಿಯೇ. ನಂತರ ಅಮೆರಿಕಕ್ಕೆ ಹೋಗಿ ನಾಲ್ಕು ವರ್ಷ ಇದ್ದು ಬಂದರು. ಕಳೆದ ಏಳು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಹೀಗೆ ಹಲ ದೇಶ– ಪ್ರದೇಶಗಳ ವಾತಾವರಣ ಅವರ ರುಚಿ– ಅಭಿರುಚಿಗಳನ್ನು ರೂಪಿಸಿದೆ. ಇಷ್ಟೆಲ್ಲ ಸಾಂಸ್ಕೃತಿಕ– ಪ್ರಾದೇಶಿಕ ಭಿನ್ನತೆಗಳಲ್ಲಿ ಅವರಲ್ಲಿ ಮೊದಲಿನಿಂದಲೂ ಉಳಿದುಕೊಂಡಿದ್ದ ಒಂದು ಸಾಮಾನ್ಯ ಆಸಕ್ತಿ ನಟನೆ.

‘ನನಗೆ ನಟನೆ ಎಂದರೆ ತುಂಬ ಇಷ್ಟ. ಹಾಗೆಂದು ನಾನು ನಟಿಸುತ್ತಿದ್ದೆ ಎಂದಲ್ಲ, ಯಾರಾದರೂ ನಟಿಸುವುದನ್ನು ಮೈಮರೆತು ನೋಡುತ್ತಿದ್ದೆ. ಸಿನಿಮಾ, ಧಾರಾವಾಹಿ, ಇನ್ಯಾವುದೇ ಕಾರ್ಯಕ್ರಮ ಇರಲಿ ಆಸಕ್ತಿಯಿಂದ ನೋಡುತ್ತಿದ್ದೆ. ಆದರೆ ನಾನೂ ಒಂದುದಿನ ನಟಿ ಆಗುತ್ತೇನೆ ಎಂದು ಖಂಡಿತ ಅಂದುಕೊಂಡಿರಲಿಲ್ಲ’ ಎನ್ನುತ್ತಾರೆ ಅವರು.

ಇವರಿಗೆ ಅಭಿನಯದ ಪ್ರೇರಣೆ ದೊರಕಿದ್ದು ಬೆಂಗಳೂರಿಗೆ ಬಂದ ಮೇಲೆಯೇ. ಆ ಆಸೆಗೆ ವೇದಿಕೆಯಾಗಿದ್ದು ಕಿರುತೆರೆ. ‘ನಾ ನಿನ್ನ ಬಿಡಲಾರೆ’ ಎಂಬ ಧಾರಾವಾಹಿಯಲ್ಲಿ ಸ್ವಲ್ಪ ಕಾಲ ನಟಿಸಿದರು. ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದು ಆಗಲೇ ಆದರೂ ನಟನೆಯ ಪಾಠಗಳನ್ನು ಕಲಿತಿದ್ದು ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ. ‘ನಾನು ಕನ್ನಡವನ್ನು ಕಲಿತಿದ್ದು ಹರಹರ ಮಹದೇವ ಧಾರಾವಾಹಿಯ ಸಂದರ್ಭದಲ್ಲಿಯೇ. ಅಲ್ಲಿ ಪೌರಾಣಿಕ ಕಥೆಯಿರುವುದರಿಂದ ಗ್ರಾಂಥಿಕ ಕನ್ನಡವೇ ಹೆಚ್ಚು ಬಳಕೆಯಾಗುತ್ತಿತ್ತು. ಅದರ ನಂತರ ಆಡುಮಾತನ್ನು ಕಲಿತುಕೊಳ್ಳಲು ಕಷ್ಟವೆನಿಸಲಿಲ್ಲ’ ಎನ್ನುವ ಅವರು ಹೊಸತಾಗಿ ಭಾಷೆ ಕಲಿತವಳು ಎಂದು ಅರಿವಿಗೆ ಬಾರದಷ್ಟು ನಿರರ್ಗಳವಾಗಿ ಮಾತನಾಡುತ್ತಾರೆ.

‘ಕರಾಲಿ’ ಚಿತ್ರದಲ್ಲಿ ನಟಿಸುವ ಸಮಯದಲ್ಲಿಯೇ ‘ಚೂರಿಕಟ್ಟೆ’ ಸಿನಿಮಾ ಆಡಿಷನ್‌ನಲ್ಲಿಯೂ ಅವರು ಭಾಗವಹಿಸಿದ್ದರು. ಎರಡು ಮೂರು ಸುತ್ತಿನ ಆಡಿಷನ್‌ ಮುಗಿದ ಮೇಲೆ ‘ಚೂರಿಕಟ್ಟೆ’ ಚಿತ್ರದ ನಾಯಕಿಯಾಗಿ ಆಯ್ಕೆಯಾದರು. ‘ಇದು ನನ್ನ ಪಾಲಿನ ಅದೃಷ್ಟ’ ಎಂದೇ ಅವರು ಬಣ್ಣಿಸುತ್ತಾರೆ.

ಈ ಚಿತ್ರದಲ್ಲಿ ತಾವು ನಿರ್ವಹಿಸಿದ ಕಲಾ ಎಂಬ ಹುಡುಗಿಯ ಪಾತ್ರದ ಕುರಿತೂ ಅವರು ಅಷ್ಟೇ ಉತ್ಸಾಹದಿಂದ ಮಾತನಾಡುತ್ತಾರೆ. ‘ಕಲಾ ಮಲೆನಾಡಿನ ಹುಡುಗಿ. ಈ ಹುಡುಗಿಯಿಂದಲೇ ಸಿನಿಮಾದ ಕಥೆಗೆ ಮಹತ್ವದ ತಿರುವು  ಸಿಗುತ್ತದೆ. ಅವಳು ನಾಯಕನಿಗೊಂದು ಸವಾಲು ಹಾಕುತ್ತಾನೆ. ಅದನ್ನು ನಾಯಕ ಈಡೇರಿಸುತ್ತಾನೆ. ಈ ಘಟನೆಯಿಂದ ಅವರಿಬ್ಬರ ಬದುಕಿನಲ್ಲಿ ಏನೇನು ಬದಲಾವಣೆಗಳಾಗುತ್ತವೆ ಎನ್ನುವುದರ ಸುತ್ತಲೇ ಸಿನಿಮಾ ಕಥೆ ಸುತ್ತುತ್ತದೆ’ ಎಂದು ತುಸು ಧಾರಾಳವಾಗಿಯೇ ವಿವರಿಸುತ್ತಾರೆ.

‘ಈ ಸಿನಿಮಾದಲ್ಲಿ ಕಥೆಗೊಂದು ಉದ್ದೇಶ ಇದೆ. ಜತೆಗೆ ಸೂಚ್ಯವಾದ ಸಂದೇಶವೂ ಇದೆ’ ಎನ್ನುವುದೂ ಅವರ ತೃಪ್ತಿಗೆ ಕಾರಣ.

‘ಪ್ರೇರಣಾಳಿಗೂ ಕಲಾ ಎಂಬ ಹುಡುಗಿಯ ಪಾತ್ರಕ್ಕೂ ತುಂಬ ವ್ಯತ್ಯಾಸಗಳಿವೆ. ಅವಳು ಮಲೆನಾಡಿನ ಸಣ್ಣ ಊರಿನಲ್ಲಿಯೇ ಇರುವ ಹುಡುಗಿ. ಸುತ್ತಲಿನವರ ಜತೆಗಿನ ಆಪ್ತ ಸಂಬಂಧಗಳು, ಕಾಲೇಜಿನ ಹುಡುಗಾಟಗಳು, ಕಣ್ಣಲ್ಲೇ ನಡೆಸುವ ಪ್ರೇಮ ಸಂಭಾಷಣೆಗಳು ಈ ಎಲ್ಲವೂ ಆ ಪಾತ್ರದ ಜಗತ್ತಿನಲ್ಲಿವೆ. ನನ್ನದಲ್ಲದ ಜಗತ್ತಿಗೆ ಹೊರಳಿಕೊಳ್ಳುವುದು ಒಂದು ಸವಾಲು. ಆದರೆ ಆ ಸವಾಲನ್ನು ನಾನು ಸುಲಭವಾಗಿಯೇ ನಿಭಾಯಿಸಿದೆ. ಒಂದಿಷ್ಟು ಸಿನಿಮಾಗಳನ್ನು ನೋಡಿದೆ. ಮಲೆನಾಡಿನ ಜನರೊಟ್ಟಿಗೆ ಮಾತನಾಡಿದೆ. ಅವೆಲ್ಲಕ್ಕಿಂತ ಹೆಚ್ಚಾಗಿ ಚಿತ್ರೀಕರಣ ಸಂದರ್ಭದಲ್ಲಿ ಕಲಿತುಕೊಂಡಿದ್ದೇ ಹೆಚ್ಚು’ ಎಂದು ಪಾತ್ರಕ್ಕೆ ತಾವು ಸಿದ್ಧರಾದ ಬಗೆಯನ್ನು ವಿವರಿಸುವ ಅವರು ನಿರ್ದೇಶಕ ರಾಘು ಶಿವಮೊಗ್ಗ ಅವರ ಮಾರ್ಗದರ್ಶನವನ್ನು ಅಡಿಗಡಿಗೆ ನೆನಪಿಸಿಕೊಳ್ಳುತ್ತಾರೆ.

‘ನಟನೆ ನನ್ನ ವೃತ್ತಿ. ಆದ್ದರಿಂದ ಒಂದೇ ರೀತಿಯ ಪಾತ್ರಕ್ಕೆ ಅಂಟಿಕೊಂಡಿರದೇ ಯಾವುದೇ ರೀತಿಯ ಪಾತ್ರ ಬಂದರೂ ನಟಿಸುತ್ತೇನೆ. ಆದರೆ ವೈಯಕ್ತಿಕವಾಗಿ ನನಗೆ ಸಕಾರಾತ್ಮಕವಾದ, ಜನರ ಮೇಲೆ ಪ್ರಭಾವ ಬೀರುವ, ಸಂದೇಶವನ್ನೂ ಕೊಡುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇದೆ’ ಎಂದು ಹೇಳಿಕೊಳ್ಳುವ ಪ್ರೇರಣಾ ಅವರಿಗೆ ‘ಜನರು ಚಿತ್ರಮಂದಿರಕ್ಕೆ ಬರುವುದು ಮನರಂಜನೆಗೆ. ಅವರಿಗೆ ನಿರಾಸೆ ಉಂಟುಮಾಡಬಾರದು’ ಎಂಬ ಎಚ್ಚರವೂ ಇದೆ.

ತಮಗೆ ಅವಕಾಶ ಕೊಟ್ಟು ಬೆಳೆಸುತ್ತಿರುವ ‘ಚಂದನವನ’ದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಪ್ರೇರಣಾ ‘‘ಚೂರಿಕಟ್ಟೆ’ ಸಿನಿಮಾದಲ್ಲಿನ ನನ್ನ ಪಾತ್ರ, ಅಭಿನಯವನ್ನು ನೋಡಿ ಇನ್ನಷ್ಟು ಒಳ್ಳೆಯ ಅವಕಾಶಗಳು ಬಂದೇ ಬರುತ್ತವೆ’ ಎಂಬ ತುಂಬು ವಿಶ್ವಾಸದಲ್ಲಿದ್ದಾರೆ.

***

ನಾನು ನಟಿಯಾಗಬೇಕು ಎಂದು ಕನಸು ಕಂಡವಳಲ್ಲ. ಆದರೆ ಒಮ್ಮೆ ಈ ಅಭಿನಯ ಜಗತ್ತಿನೊಳಗೆ ಅಡಿಯಿಟ್ಟ ಮೇಲೆ ಇದನ್ನು ಬಿಟ್ಟು ಬೇರೆ ಏನಾದರೂ ಮಾಡಬಹುದು ಎಂಬುದನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಾಗುತ್ತಿಲ್ಲ– ಪ್ರೇರಣಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT