ಈ ಚಿತ್ರದ ಶಕ್ತಿ ಅಬ್ದುಲ್‌ ಕಲಾಂ!

7

ಈ ಚಿತ್ರದ ಶಕ್ತಿ ಅಬ್ದುಲ್‌ ಕಲಾಂ!

Published:
Updated:
ಈ ಚಿತ್ರದ ಶಕ್ತಿ ಅಬ್ದುಲ್‌ ಕಲಾಂ!

ರಾಷ್ಟ್ರಪತಿಯಾಗಿದ್ದ ಎ.ಪಿ.ಜೆ. ಅಬ್ದುಲ್‌ ಕಲಾಂ ಯುವಜನರಿಗೆ ಮಾದರಿ. ಅವರು ಭಾರತದ ಕ್ಷಿಪಣಿ ಜನಕ. ಆದರೆ, ಅವರ ಬಾಲ್ಯಜೀವನ ಕುರಿತು ಬಹುತೇಕರಿಗೆ ತಿಳಿದಿಲ್ಲ. ಈ ಕುರಿತು ಹೇಳಲು ‘ಮೈ ಹೀರೊ ಕಲಾಂ’ ಚಿತ್ರ ಸಿದ್ಧವಾಗಿದೆ. ಇದು ಅಪ್ಪಟ ಮಕ್ಕಳ ಚಿತ್ರ.

ಕಲಾಂ ಅವರ ಆದರ್ಶ ವ್ಯಕ್ತಿತ್ವ, ಬಾಲ್ಯದ ಶಿಕ್ಷಣ, ಎಲ್ಲರೊಂದಿಗೆ ಬೆರೆತು ಬಡತನದ ಮೆಟ್ಟಿಲುಗಳಿಂದ ಉನ್ನತ ಶಿಖರಕ್ಕೇರಿದ ಅವರ ಯಶೋಗಾಥೆ ಬಗ್ಗೆ ತಿಳಿಸುವುದೇ ಈ ಚಿತ್ರದ ಉದ್ದೇಶವಂತೆ. ಕಲಾಂ ಹಳ್ಳಿಯಿಂದ ದಿಲ್ಲಿಯವರೆಗೆ ಮಾಡಿದ ಸಾಧನೆ ಅನನ್ಯ. ಅವರದು ಸರಳ ವ್ಯಕ್ತಿತ್ವ. ಪ್ರಸ್ತುತ, ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದರೆ ಆತ್ಮಹತ್ಯೆಯ ಹಾದಿ ತುಳಿಯುತ್ತಾರೆ. ಇದಕ್ಕೆ ಆತ್ಮಹತ್ಯೆ ಪರಿಹಾರವಲ್ಲ ಎಂಬ ಸಂದೇಶ ಹೇಳಲು ನಿರ್ದೇಶಕ ಶಿವು ಡಿ. ಹಿರೇಮಠ ಹೊರಟಿದ್ದಾರೆ. ಚಿತ್ರಕಥೆಯ ಜವಾಬ್ದಾರಿಯೂ ಅವರದ್ದೇ.

‘ಕಲಾಂ ಕೇವಲ ವ್ಯಕ್ತಿಯಾಗಿರದೆ ದೇಶದ ಶಕ್ತಿಯಾಗಿದ್ದರು. ತಮ್ಮ ಜೀವಿತಾವಧಿಯುದ್ದಕ್ಕೂ ಎಲ್ಲರಿಗೂ ಮಾದರಿಯಾಗಿದ್ದರು. ಇದನ್ನೇ ಚಿತ್ರದಲ್ಲಿ ಅಚ್ಚುಕಟ್ಟಾಗಿ ತೋರಿಸಿದ್ದೇವೆ’ ಎಂದರು ನಿರ್ದೇಶಕ ಶಿವು.

ಚಿನ್ಮಯ್ ಮತ್ತು ದೀಪಕ್ ಎರಡು ಹಂತದಲ್ಲಿ ಕಲಾಂ ಆಗಿ ಕಾಣಿಸಿಕೊಂಡಿದ್ದಾರೆ. ಅಹಂಕಾರಿಯಾದ ಶ್ರೀಮಂತ ಹುಡುಗನೊಬ್ಬ ಸ್ನೇಹಿತನಿಂದ ಪರಿವರ್ತನೆಗೊಳ್ಳುವ ಪಾತ್ರದಲ್ಲಿ ಸಾಯಿಕೃಷ್ಣ ನಟಿಸಿದ್ದಾರೆ. ಶಿಕ್ಷಕ ಅಂಗಡಿ ಶಾಂತಪ್ಪ ಬರೆದಿರುವ ಕಥೆಗೆ ರಘು ನಿಡುವಳ್ಳಿ ಕಲಾಂ ಪುಸ್ತಕಗಳನ್ನು ಉಲ್ಲೇಖಿಸಿ ಮಾತುಗಳನ್ನು ಪೋಣಿಸಿದ್ದಾರಂತೆ.

ಅಣಜಿ ನಾಗರಾಜ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ಕಮರ್ಷಿಯಲ್, ಪ್ರಯೋಗಾತ್ಮಕ ಚಿತ್ರಗಳ ನಿರ್ಮಾಣ ಮಾಡಿದ್ದೇನೆ. ಮೊದಲ ಬಾರಿಗೆ ಇಂತಹ ಸಿನಿಮಾ ಮಾಡಲು ಧೈರ್ಯ ಮಾಡಿದ್ದೇನೆ’ ಎಂದರು.

ಹಾಡುಗಳಿಲ್ಲದ ಈ ಚಿತ್ರಕ್ಕೆ ಪಳನಿ ಡಿ. ಸೇನಾಪತಿ ಅವರ ಹಿನ್ನೆಲೆ ಸಂಗೀತವಿದೆ. ಆನಂದ್‌ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪ್ರಸ್ತುತ ಸೆನ್ಸಾರ್ ಮಂಡಳಿ ಮುಂದೆ ಚಿತ್ರ ಇದೆ. ಮುಂದಿನ ತಿಂಗಳು ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry