ಮುಸ್ಲಿಮರನ್ನು ಕೊಂದವರು, ದಲಿತರನ್ನು ಸುಟ್ಟವರು ಈಗ ನಮ್ಮ ಮನೆ, ಮಕ್ಕಳಿಗೂ ಅಪಾಯಕಾರಿಯಾಗಿದ್ದಾರೆ: ಕೇಜ್ರಿವಾಲ್‌

7

ಮುಸ್ಲಿಮರನ್ನು ಕೊಂದವರು, ದಲಿತರನ್ನು ಸುಟ್ಟವರು ಈಗ ನಮ್ಮ ಮನೆ, ಮಕ್ಕಳಿಗೂ ಅಪಾಯಕಾರಿಯಾಗಿದ್ದಾರೆ: ಕೇಜ್ರಿವಾಲ್‌

Published:
Updated:
ಮುಸ್ಲಿಮರನ್ನು ಕೊಂದವರು, ದಲಿತರನ್ನು ಸುಟ್ಟವರು ಈಗ ನಮ್ಮ ಮನೆ, ಮಕ್ಕಳಿಗೂ ಅಪಾಯಕಾರಿಯಾಗಿದ್ದಾರೆ: ಕೇಜ್ರಿವಾಲ್‌

ನವದೆಹಲಿ: ಪದ್ಮಾವತ್‌ ಸಿನಿಮಾ ಬಿಡುಗಡೆ ವಿರೋಧಿಸಿ ಹೋರಾಟ ನಡೆಸುವ ವೇಳೆ ಗುರುಗ್ರಾಮದಲ್ಲಿ ಖಾಸಗಿ ಶಾಲೆಯ ಎರಡು ಬಸ್‌ಗಳ ಮೇಲೆ ದಾಳಿ ನಡೆಸಿರುವುದನ್ನು ಕಟುವಾಗಿ ಟೀಕಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ‘ಮುಸ್ಲಿಮರನ್ನು ಕೊಂದವರು, ದಲಿತರನ್ನು ಸುಟ್ಟವರು ಈಗ ನಮ್ಮ ಮನೆ, ಮಕ್ಕಳಿಗೂ ಅಪಾಯಕಾರಿಯಾಗಿದ್ದಾರೆ’ ಎಂದು ಹೇಳಿದ್ದಾರೆ.

ಇನ್ನು ಮೌನವಾಗಿರಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ‘ನಾನು ಪ್ರತಿಯೊಬ್ಬರಲ್ಲೂ ಕೇಳಿಕೊಳ್ಳುತ್ತೇನೆ. ಈ ದಿನ ಅವರು ನಮ್ಮ ಮಕ್ಕಳಿಗೆ ಕಲ್ಲಿನಿಂದ ಹೊಡೆಯಲು ಆರಂಭಿಸಿದ್ದಾರೆ. ನಮ್ಮ ಮನೆಯೊಳಗೆ ನುಸುಳಲು ಆರಂಭಿಸಿದ್ದಾರೆ. ಇನ್ನು ಸುಮ್ಮನಿರ ಬೇಡಿ. ಮಾತನಾಡಿ’ ಎಂದು ದೆಹಲಿಯ ಛತ್ರಶಾಲ್‌ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಪದ್ಮಾವತ್‌ ಸಿನಿಮಾ ಬಿಡುಗಡೆ ವಿರೋಧಿಸಿ ಬುಧವಾರ ಪ್ರತಿಭಟನೆ ನಡೆಸುವ ವೇಳೆ ಪತ್ರಿಭಟನಾಕಾರರು ಎರಡು ಖಾಸಗಿ ಶಾಲಾ ಬಸ್‌ಗಳ ಮೇಲೆ ದಾಳಿ ನಡೆಸಿದ್ದರು. ಈ ಘಟನೆ ವೇಳೆ ಶಾಲಾ ಮಕ್ಕಳು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದರು.

ಘಟನೆ ವೇಳೆ ಶಿಕ್ಷಕರು ವಿದ್ಯಾರ್ಥಿಗಳನ್ನು ಸೀಟ್‌ಗಳ ಕೆಳಗೆ ಬಚ್ಚಿಟ್ಟು ರಕ್ಷಿಸಲು ಮುಂದಾಗಿರುವುದು ವಿಡಿಯೊಗಳಲ್ಲಿ ಸೆರೆಯಾಗಿದೆ. ಈ ವಿಡಿಯೊಗಳನ್ನು ನೋಡಿರುವುದಾಗಿ ಹೇಳಿರುವ ಕೇಜ್ರಿವಾಲ್‌, ‘ರಾಷ್ಟ್ರ ರಾಜಧಾನಿಯಿಂದ ಕೆಲವೇ ಕಿಲೋಮೀಟರ್‌ ದೂರದಲ್ಲಿ ಈ ಘಟನೆ ನಡೆದಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

ಈ ಪ್ರಕರಣದಲ್ಲಿ ಭಾಗವಹಿಸಿರುವವರಿಗೆ ಶ್ರೀರಾಮ ರಾವಣನಿಗೆ ನೀಡಿರುವುದಕ್ಕಿಂತಲೂ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

‘ಇದು ರಾಮ, ಕೃಷ್ಣ, ಗೌತಮ ಬುದ್ಧ, ಮಹಾವೀರ, ಗುರುನಾನಕ್‌, ಕಬೀರ್‌, ಮೀರಾ ಬಾಯಿ ಅವರ ನಾಡು. ಪ್ರವಾದಿ ಮಹಮದ್‌ ಹಾಗೂ ಯೇಸು ಕ್ರಿಸ್ತನ ಅನುಯಾಯಿಗಳಿದ್ದಾರೆ. ಮಕ್ಕಳತ್ತ ಕಲ್ಲು ತೂರಿದವರು ಹಿಂದೂ, ಮುಸ್ಲಿಂ ಅಥವಾ ಕ್ರಿಶ್ಚಿಯನ್ನರೇ ಎಂದು ಕೇಳಲು ಬಯಸುತ್ತೇನೆ. ಯಾವ ಧರ್ಮ ಮಕ್ಕಳ ಮೇಲೆ ದೌರ್ಜನ್ಯ ನಡೆಸುವಂತೆ ಉಪದೇಶಿಸುತ್ತದೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry