ಸ್ವರಭೂಷಣಿ, ಲಿಪಿ ಪ್ರಾಜ್ಞೆ ಪ್ರಶಸ್ತಿ ಪ್ರದಾನ

7

ಸ್ವರಭೂಷಣಿ, ಲಿಪಿ ಪ್ರಾಜ್ಞೆ ಪ್ರಶಸ್ತಿ ಪ್ರದಾನ

Published:
Updated:

ಬೆಂಗಳೂರು ಗಾಯನ ಸಮಾಜ ಈ ಸಾಲಿನ ‘ಸ್ವರಲಿಪಿ’ ಪ್ರಶಸ್ತಿ ಪ್ರದಾನ ಹಾಗೂ ಸಂಗೀತ ಕಛೇರಿಗೆ ಸಜ್ಜಾಗಿದೆ. ಹಿರಿಯ ಪಿಟೀಲು ವಿದುಷಿ ದಿ.ಬಿ.ಎಸ್‌.ಚಂದ್ರಕಲಾ ಸ್ಮರಣಾರ್ಥ ನೀಡುವ ಈ ಪ್ರಶಸ್ತಿಯಲ್ಲಿ ಸ್ವರಭೂಷಣಿ ಪ್ರಶಸ್ತಿ ಗಾಯಕಿ ಎಚ್‌.ಎನ್‌.ಮೀರಾ ಅವರಿಗೆ ಸಂದಿದೆ. ‘ಲಿಪಿ ಪ್ರಾಜ್ಞೆ’ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಡಾ.ಆರ್‌.ಪೂರ್ಣಿಮಾ ಆಯ್ಕೆಯಾಗಿದ್ದಾರೆ.

ಜ. 26ರಂದು ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಬಳಿಕ ವಿದುಷಿ ಎಚ್‌.ಎನ್‌. ಮೀರಾ ಅವರ ಗಾಯನವೂ ಇದೆ. ಬಿ.ರಘುರಾಮ್‌ ಪಿಟೀಲು ಹಾಗೂ ರೇಣುಕಾ ಪ್ರಸಾದ್‌ ಮೃದಂಗ ಪಕ್ಕವಾದ್ಯ ಸಹಕಾರ ನೀಡಲಿದ್ದಾರೆ.

ಗಾಯಕಿ, ಪಿಟೀಲು ವಾದಕಿ

ದಿ.ಬಿ.ಎಸ್‌ ಚಂದ್ರಕಲಾ ಅವರು ಗಾಯಕಿ ಹಾಗೂ ಪಿಟೀಲು ವಾದಕಿಯಾಗಿ ಹೆಸರುವಾಸಿಯಾಗಿದ್ದವರು. ಸಂಗೀತ ಕಲಾರತ್ನ ಆರ್‌.ಆರ್‌.ಕೇಶವಮೂರ್ತಿ ಅವರಿಂದ ಪಿಟೀಲು ಹಾಗೂ ಚಿಂತಲಪಲ್ಲಿ ಕೃಷ್ಣಮೂರ್ತಿ ಹಾಗೂ ಅವಧಾನ ಪಲ್ಲವಿ ಖ್ಯಾತಿಯ ಪಲ್ಲವಿ ಚಂದ್ರಪ್ಪ ಅವರಿಂದ ಗಾಯನ ಶಿಕ್ಷಣ ಪಡೆದವರು. ಸಂಗೀತದ ವಿದ್ವತ್‌ ಪರೀಕ್ಷೆಯಲ್ಲಿ ರ‍್ಯಾಂಕ್‌ ಗಳಿಸಿದ್ದ ಪ್ರತಿಭಾನ್ವಿತೆ.

ಪ್ರತಿಷ್ಠಿತ ಸಂಗೀತ ಸಭೆಗಳಲ್ಲಿ, ಆಕಾಶವಾಣಿಯಲ್ಲಿ ಸುಮಾರು ಐದು ದಶಕ ನಿರಂತರ ಸಂಗೀತ ಸೇವೆ ಮಾಡಿದ ಹೆಗ್ಗಳಿಕೆ ಇವರದು. ಕಾರ್ಪೊರೇಷನ್‌ ಹೈಸ್ಕೂಲಿನಲ್ಲಿ ಸಂಗೀತ ಶಿಕ್ಷಕಿಯಾಗಿದ್ದ ವಿದುಷಿ ಚಂದ್ರಕಲಾ ಹಲವಾರು ಶಿಷ್ಯರನ್ನೂ ತಯಾರು ಮಾಡಿದ್ದರು. ಸಂಗೀತ ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಸಾಕಷ್ಟು ಕೃಷಿ ನಡೆಸಿದ ಚಂದ್ರಕಲಾ, ಕವನ ಸಂಕಲನ, ಶಿಶುಗೀತೆ, ನಾಟಕ, ಕಾದಂಬರಿ, ಸಂಗೀತ ಗ್ರಂಥ, ಜೀವನಚರಿತ್ರೆಗಳನ್ನೂ ಬರೆದವರು.

ಸಂಗೀತ, ಸಾಹಿತ್ಯದ ಜತೆಗೆ ಸಮಾಜಸೇವೆಯಲ್ಲೂ ತೊಡಗಿಸಿಕೊಂಡ ಈ ಬಹುಶ್ರುತ ವಿದುಷಿ, 1994ರಲ್ಲಿ ‘ಸ್ವರಲಿಪಿ’ ಎಂಬ ಪ್ರತಿಷ್ಠಾನ ಸ್ಥಾಪಿಸಿ, ಒಬ್ಬ ಹಿರಿಯ ಮಹಿಳಾ ಸಾಹಿತಿಗೆ ‘ಲಿಪಿ ಪ್ರಾಜ್ಞೆ’ ಪ್ರಶಸ್ತಿ ಹಾಗೂ ಹಿರಿಯ ಸಂಗೀತ ಕಲಾವಿದೆಗೆ ‘ಸ್ವರಭೂಷಣಿ’ ಪ್ರಶಸ್ತಿ ನೀಡುತ್ತಾ ಬಂದವರು. ಇದನ್ನು ಗಾಯನ ಸಮಾಜ ನಡೆಸಿಕೊಂಡು ಹೋಗಲಿ ಎಂಬ ಉದ್ದೇಶದಿಂದ ಗಾಯನ ಸಮಾಜದಲ್ಲೇ ದತ್ತಿನಿಧಿ ಸ್ಥಾಪಿಸಿದ್ದಾರೆ. 2005ರ ಮಾರ್ಚ್‌ ನಾಲ್ಕರಂದು ಅವರು ನಿಧನರಾದ ಬಳಿಕ ಅವರ ನೆನಪಿನಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಸಂಗೀತ ಕಾರ್ಯಕ್ರಮ ನಡೆಯುತ್ತಿದೆ.

ಪ್ರಶಸ್ತಿ ಪ್ರದಾನ: ಗೊ.ರು.ಚನ್ನಬಸಪ್ಪ ಮತ್ತು ಆರ್.ಎನ್.ತ್ಯಾಗರಾಜನ್ ಅವರಿಂದ. ಗಾಯನ–ಎಚ್.ಎನ್.ಮೀರಾ, ಪಿಟೀಲು–ಬಿ.ರಘುರಾಮ್, ಮೃದಂಗ–ರೇಣುಕಾ ಪ್ರಸಾದ್. ಆಯೋಜನೆ, ಸ್ಥಳ– ಬೆಂಗಳೂರು ಗಾಯನ ಸಮಾಜ, ಕೃಷ್ಣರಾಜೇಂದ್ರ ರಸ್ತೆ, ಸಂಜೆ 5.30

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry