ದೇಶಭಕ್ತಿ ಬಿಂಬಿಸುವ ‘ಬಜೇ ಸರಗಮ್ ’

7

ದೇಶಭಕ್ತಿ ಬಿಂಬಿಸುವ ‘ಬಜೇ ಸರಗಮ್ ’

Published:
Updated:
ದೇಶಭಕ್ತಿ ಬಿಂಬಿಸುವ ‘ಬಜೇ ಸರಗಮ್ ’

‘ಬಜೇ ಸರಗಮ್ ಹರ್ ತರಫ್ ಸೇ ಗೂಂಜ್ ಬನ್‌ಕರ್‌ ದೇಸ್‌ ರಾಗ್‌’

ಸುಮಾರು 30 ವರ್ಷಗಳ ಹಿಂದೆ ದೂರದರ್ಶನದಲ್ಲಿ ರಾಷ್ಟ್ರೀಯ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಈ ಹಾಡು ನೆನಪಿದೆಯೇ? ಪಂಡಿತ್‌ ಭೀಮಸೇನ ಜೋಷಿ, ಎಂ.ಬಾಲಮುರಳೀಕೃಷ್ಣ ಅವರ ಕಂಠಸಿರಿಯೊಂದಿಗೆ ಪಂಡಿತ್‌ ರವಿಶಂಕರ್‌ ಅವರ ಸಿತಾರ್‌, ಹರಿಪ್ರಸಾದ್ ಚೌರಾಸಿಯಾ ಅವರ ಕೊಳಲು, ಶಿವಕುಮಾರ್‌ ಶರ್ಮಾ ಅವರ ಸಂತೂರ್‌, ಉಸ್ತಾದ್‌ ಅಲ್ಲಾರಖಾ ಮತ್ತು ಝಾಕೀರ್‌ ಹುಸೇನ್ ಅವರ ತಬಲಾ, ಭರತನಾಟ್ಯ , ಕಥಕ್‌, ಮಣಿಪುರಿ, ಕಥಕ್ಕಳಿ, ಮೋಹಿನಿಯಾಟ್ಟಂ, ಕುಚಿಪುಡಿ ನೃತ್ಯಗಳೆಲ್ಲದರ ಸಂಯೋಜನೆಯಿದ್ದ ಈ ಹಾಡು ಜನಪ್ರಿಯವಾಗಿತ್ತು.

‘ದೇಸ್ ರಾಗ’ವನ್ನು ಆಧಾರವಾಗಿಟ್ಟುಕೊಂಡು ಸಿದ್ಧಪಡಿಸಿದ ದೇಶಭಕ್ತಿ ಬಿಂಬಿಸುವ ಬಹುಸಂಸ್ಕೃತಿಯ ಅದೇ ಹಾಡನ್ನು ಆಧಾರವಾಗಿಟ್ಟುಕೊಂಡು  30 ವರ್ಷಗಳ ಬಳಿಕ ಈ ಕಾಲಕ್ಕೆ ತಕ್ಕಂತೆ ಇನ್ನಷ್ಟು ಸುಧಾರಿಸಿ ಹೊಸದೊಂದು ವಿಡಿಯೊ ಹಾಡು ಹೊರಬರುತ್ತಿದೆ. ಭಾರತದ ವಿವಿಧ ರಾಜ್ಯಗಳಿಂದ ಪ್ರಸಿದ್ಧ ಕಲಾವಿದರನ್ನು ಬಳಸಿಕೊಂಡು ಸಂಗೀತ, ಚಿತ್ರಕಲೆ ಮತ್ತು ನೃತ್ಯವನ್ನು ಒಳಗೊಂಡು ಒಂದೇ ಫ್ರೇಂನಲ್ಲಿ ತೋರಿಸುವ ಯತ್ನ ಮಾಡಲಾಗಿದೆ. ಭರತನಾಟ್ಯ, ಪೇಂಟಿಂಗ್‌, ಕೊಳಲು, ಗಿಟಾರ್‌, ಡ್ರಮ್ಸ್ , ತಬಲಾ, ನಾಲ್ವರು ಹಾಡುಗಾರರು, ಮಧ್ಯೆ ಸಂಭಾಷಣೆ ಇವೆಲ್ಲ ಒಳಗೊಂಡಿರುವ ‘ಬಜೇ ಸರಗಮ್‌’ ಇದೇ 26ರಂದು ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.

ಇದನ್ನು ತಯಾರಿಸಿದವರು ಹುಬ್ಬಳ್ಳಿ ಹೈದ ಪ್ರಸನ್ನ ಭೋಜಶೆಟ್ಟರ. ಇದರಲ್ಲಿ ಪಾಲ್ಗೊಂಡಿರುವ ಕಲಾವಿದರೆಲ್ಲ ದೇಶದ ವಿವಿಧ ಭಾಗದವರು.  ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಚೆನ್ನೈನಲ್ಲಿರುವ ಕೆ.ಎಂ. ಮ್ಯೂಸಿಕ್ ಕನ್ಸರ್ವೇಟರಿ ಮ್ಯೂಸಿಕ್‌ ಕಾಲೇಜಿನಲ್ಲಿ ಇವರೆಲ್ಲ ಒಂದೆಡೆ ಸೇರಿ ಈ ಹೊಸ ಸಾಹಸಕ್ಕೆ ಸಾಥ್ ನೀಡಿದ್ದಾರೆ.

‘ರೆಹಮಾನ್‌ ಅವರ ಮ್ಯೂಸಿಕ್‌ ಕಾಲೇಜಿನಲ್ಲಿ ಉನ್ನತ ಮಟ್ಟದ ಸಂಗೀತ ತಂಡವಿದೆ. ಅವರನ್ನು ಬಳಸಿಕೊಂಡು ಈ ವಿಡಿಯೊ ತಯಾರಿಸಿದ್ದೇನೆ. ಸಂಗೀತದ ಪರಿಕಲ್ಪನೆ, ಜೋಡಣೆ, ಡ್ರಮ್ಸ್‌, ಸಂಭಾಷಣೆ, ಪೇಂಟಿಂಗ್‌, ನಿರ್ದೇಶನ, ಸಂಕಲನ ಎಲ್ಲವನ್ನೂ ನಿರ್ವಹಿಸಿದ್ದೇನೆ, ಅಲ್ಲಿಯೇ ರೆಕಾರ್ಡಿಂಗ್‌ ಕೂಡ ಮಾಡಿದ್ದೇನೆ’ ಎನ್ನುತ್ತಾರೆ ಪ್ರಸನ್ನ.

ಪ್ರಸನ್ನ ಏಳನೇ ವಯಸ್ಸಿನಲ್ಲೇ ಹಾಡಲು ಆರಂಭಿಸಿದವರು. ಪಂಡಿತ್ ನರಸಿಂಹಲು ವಡವಾಟಿ, ವೀರಣ್ಣ ಕಾಮಕರ, ಗಾಯತ್ರಿ ಕಾಮಕರ ಮತ್ತು  ಜಯತೀರ್ಥ ಮೇವುಂಡಿ ಅವರ ಬಳಿ ಸಂಗೀತ ಕಲಿತವರು. ಬಳ್ಳಾರಿಯ ವಿಜಯನಗರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ ಅಂತಿಮ ಸೆಮಿಸ್ಟರ್‌ನಲ್ಲಿ ಬೆಂಗಳೂರಿನ ಟಾಟಾ ಕನ್ಸಲ್ಟನ್ಸಿ ಸರ್ವಿಸ್‌ನಲ್ಲಿ ಉದ್ಯೋಗ ಪಡೆದರು.

ಪ್ರಸನ್ನ ಅವರು ಗಾಯಕ, ಸಂಗೀತಗಾರ, ಗೀತರಚನಾಕಾರ ಹಾಗೂ ರಾಗ ಸಂಯೋಜಕ. ಕನ್ನಡದಲ್ಲಿ ರ‍್ಯಾಪ್‌ಗಳನ್ನು ಬರೆದು ಸಂಗೀತ ಸಂಯೋಜಿಸಿ ಹಾಡಿದ್ದಾರೆ. ವಿವಿಧ ಭಾಷೆಯ ಚಿತ್ರಗೀತೆಗಳು, ಶಾಸ್ತ್ರೀಯ, ಭಕ್ತಿ, ಭಾವ ಮತ್ತು ಜಾನಪದ ಗೀತೆಗಳನ್ನು ತಮ್ಮದೇ ಆದ ಶೈಲಿಯಲ್ಲಿ ಹಾಡುತ್ತಾರೆ. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ರಾಕ್ ಬ್ಯಾಂಡ್‌ಗಳ ಜತೆಗೆ ಕೆಲಸ ಮಾಡಿರುವ ಅವರು ಹಾಡುವ ಜತೆಗೆ ಅನೇಕ ವಾದ್ಯಗಳನ್ನು ನುಡಿಸಬಲ್ಲರು.

ವಚನಗಳ ಬಗ್ಗೆ, ಕನ್ನಡದ ಅಭಿಮಾನದ ಬಗ್ಗೆ ಅನೇಕ ಹಾಡುಗಳನ್ನು ಹಾಡಿರುವ ಪ್ರಸನ್ನ, ವಿವಿಧ ಭಾಷೆಗಳ ಹಾಡುಗಳನ್ನು ಮ್ಯಾಷಪ್‌ ಮಾಡಿದ್ದಾರೆ. ‘ಹೋಂಗೆ ಕಾಮ್ ಯಾಬ್‌ ಏಕ್‌ ದಿನ್‌’ ಕನ್ನಡಕ್ಕೆ ಅನುವಾದಿಸಿ ಹಾಡಿನ ದೃಶ್ಯ ರೂಪ ನೀಡಿ ಯುಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದಾಗ 55 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಫೇಸ್‌ಬುಕ್ ಪುಟ– facebook.com/PrasannaBhojashettar

ಗಾಯಕಿ ಮೀರಾ ಸೇನಗುಪ್ತಾ (ಕೋಲ್ಕತ್ತಾ), ಜಸ್‌ದೀಪ್‌ ಜೋಗಿ(ಉತ್ತರಾಖಂಡ), ಅಮಿತ್‌ ಝಾ (ಛತ್ತೀಸಗಡ), ರೋಲಿ ಸೀಬೋರ್ಡ್‌– ರಚಿಂತನ ತ್ರಿವೇದಿ(ರಾಜ್‌ಕೋಟ್‌), ಕೊಳಲು –ದಿವ್ಯಶ್ರೀ ಎಂ.ಜೆ.(ಮೈಸೂರು), ತಬಲಾ–ರಾಜೇಶ ಧವಳೆ(ಚೆನ್ನೈ), ಅಕೌಸ್ಟಿಕ್ ಗಿಟಾರ್‌–ಮಹೇನ್‌ ಜೋಶಿ (ಔರಂಗಾಬಾದ್‌), ಸಂಭಾಷಣೆ ಜ್ಯೋತಿ ನಾಯರ್ (ಚೆನ್ನೈ), ಭರತನಾಟ್ಯ–ರಾಧಿಕಾ ಪೊಡ್ವಾಲ್‌( ಶಿವಮೊಗ್ಗ), ಎಲೆಕ್ಟ್ರಿಕ್‌ ಗಿಟಾರ್‌ –ಅಚ್ಯುತ್ ಡಬ್ಲ್ಯು. ಎಂ. (ಬೆಂಗಳೂರು), ರುಡಿ ದೀಕ್ಷಿತ್‌ (ಗುಜರಾತ್‌), ರೆಕಾರ್ಡಿಂಗ್‌, ಮಿಕ್ಸಿಂಗ್‌ ಮತ್ತು ಮಾಸ್ಟೆರಿಂಗ್ –ಲೆ ಮ್ಯೂಸಿಕ್ ಸ್ಟುಡಿಯೊ, ಚೆನ್ನೈ, ಸಿನಿಮಾಟೊಗ್ರಫಿ–ಜೋಷುಆ ಎಸ್‌. ವರ್ಗಿಸ್‌(ಮುಂಬೈ), ಸಿದ್ಧಾರ್ಥ ಸಿ. (ಹೈದ್ರಾಬಾದ್‌), ಮತ್ತು ಡಾ.ಸಂತೋಷ ಭೋಜಶೆಟ್ಟರ (ಹುಬ್ಬಳ್ಳಿ).

ಜನವರಿ 26 ರಂದು ಯುಟ್ಯೂಬ್ ಚಾನೆಲ್‌ ಮೂಲಕ ಈ ವಿಡಿಯೊ ಹಾಡನ್ನು ಬಿಡುಗಡೆ ಮಾಡಲಾಗುತ್ತಿದೆ. ವೀಕ್ಷಣೆಗಾಗಿ https://www.youtube.com/PrasannaBhojashettar ಕೊಂಡಿ ಬಳಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry