ಒತ್ತಡಕ್ಕೆ ಸಂಗೀತವೇ ಮದ್ದು

7

ಒತ್ತಡಕ್ಕೆ ಸಂಗೀತವೇ ಮದ್ದು

Published:
Updated:
ಒತ್ತಡಕ್ಕೆ ಸಂಗೀತವೇ ಮದ್ದು

ನಮ್ಮ ತಂದೆ – ತಾಯಿಗೆ ನಾವು ಒಂಬತ್ತು ಮಂದಿ ಮಕ್ಕಳು. ಕೃಷಿ ಪ್ರಧಾನ ಕುಟುಂಬ. ಆ ಕಾಲದಲ್ಲಿ ಮಕ್ಕಳು ಹೊರೆ ಎಂದೆನಿಸುತ್ತಿರಲಿಲ್ಲ. ಮನೆ ತುಂಬಾ ಮಕ್ಕಳಿದ್ದರೂ ಅಪ್ಪ – ಅಮ್ಮ ಯಾವತ್ತೂ ಕೂಡ ಒತ್ತಡಕ್ಕೆ ಸಿಲುಕಿ ರೇಗಾಡಿದ ಪ್ರಸಂಗವೇ ನೋಡಲಿಲ್ಲ.

ಈಗ ನನಗೆ ಅರವತ್ತು ಎರಡು ವರ್ಷ. ಎಳೆ ಪ್ರಾಯದಲ್ಲೇ ಸಂಗೀತ ಪ್ರಭಾವಕ್ಕೆ ಒಳಗಾದೆ. ಓದು – ಸಂಗೀತ ಜೊತೆ ಜೊತೆಯಾಗಿ ಕಲಿಯುವ ಸಮಯದಲ್ಲಿ ಕೊಂಚ ಮಟ್ಟಿಗೆ ಸಮಸ್ಯೆಗಳು ಎದುರಾದರೂ ಅತಿಯಾದ ಒತ್ತಡಕ್ಕೆ ಸಿಲುಕಿ ತಾಪತ್ರಯಪಟ್ಟಿದ್ದು ಇಲ್ಲವೇ ಇಲ್ಲ. ಅಪ್ಪನಿಗೆ ನಾಟಕ, ಯಕ್ಷಗಾನದಲ್ಲಿ ಆಸಕ್ತಿ ಇತ್ತು. ಅಮ್ಮ ಕೂಡ ಸಂಗೀತ ಪ್ರೇಮಿ. ಎಷ್ಟೇ ಕಷ್ಟ ಬಂದರೂ ಸಂಸಾರ ಸರಿದೂಗಿಸುತ್ತಿದ್ದ ಅಮ್ಮ ಅಷ್ಟೇ ತಾಳ್ಮೆ, ಸಮಾಧಾನದಿಂದ ನಮ್ಮನ್ನು ಸಲುಹಿದರು.

ಸಂಗೀತ ಎಂದರೆ ಅಪಹಾಸ್ಯ ಮಾಡುವ ಕಾಲದಲ್ಲಿ ಎಸ್‌.ಎಂ.ಭಟ್‌ ಅವರಲ್ಲಿ ಕಲಿಕೆ ಆರಂಭವಾಯಿತು. ನಂತರ ಧಾರವಾಡದ ಪಂ.ಚಂದ್ರಶೇಖರ ಪುರಾಣಿಕ ಮಠ ಅವರ ಬಳಿ ಮುಂದುವರಿಯಿತು. ಹೆಚ್ಚಿನ ಸಂಗೀತಾಭ್ಯಾಸಕ್ಕೆ ಪಂ.ಬಸವರಾಜ ರಾಜಗುರು ಅವರಲ್ಲಿ ಸೇರಿ ಅತ್ಯಂತ ನೆಚ್ಚಿನ ಶಿಷ್ಯರಲ್ಲೊಬ್ಬನಾಗಿ ಬೆಳೆದೆ. ಒತ್ತಡಕ್ಕೆ ಸಂಗೀತವೇ ಮದ್ದು. ಇದು; ಮೂವರು ಗುರುಗಳ ಸಾನ್ನಿಧ್ಯದಲ್ಲಿ ಕಲಿತ ಮೊದಲ ಪಾಠ.

ಮುಂಡಗೋಡದ ಸರ್ಕಾರಿ ಶಾಲೆಯಲ್ಲಿ ಸಂಗೀತ ಶಿಕ್ಷಕನಾಗಿ ವೃತ್ತಿ ಜೀವನ ಆರಂಭಿಸಿ, ನಂತರ ಬೆಂಗಳೂರಿಗೆ ವರ್ಗಾವಣೆ ಮಾಡಿಸಿಕೊಂಡು,  ಮಕ್ಕಳಿಗೆ ಸಂಗೀತ ಧಾರೆ ಎರೆದೆ. ಎಂತಹ ಕ್ಲಿಷ್ಟ ಸಂದರ್ಭ ಎದುರಾದರೂ ಎಂದೆಗುಂದದೆ ನಿಭಾಯಿಸುವ ಶಕ್ತಿ ಸಂಗೀತಕ್ಕೆ ಇದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಿದೆ. ಸಂಗೀತ ಎಂದರೆ ಮನರಂಜನೆ ಅಲ್ಲ; ಅದೊಂದು ಆಧ್ಯಾತ್ಮಿಕ ತನ್ಮಯತೆ. ಸಂಗೀತ ಶಿಕ್ಷಕ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದ ನಂತರ ಈ ಕ್ಷೇತ್ರದ ಮತ್ತೊಂದು ಹಾದಿಗೆ ಹೊರಳಿಕೊಂಡಿದ್ದೇನೆ.

ಕಿರಾಣಾ ಘರಾಣಾ ಮತ್ತು ಗ್ವಾಲಿಯರ್‌ ಘರಾಣಾಗಳ ಗಾಯನ ಶೈಲಿಯನ್ನು ಸಮ್ಮಿಳಿತವಾಗಿ ಅಧ್ಯಯನ ಮಾಡಿ, ಧ್ವನಿ ಸಂಸ್ಕರಣ ಪದ್ಧತಿಯನ್ನು ಕೌಶಲಯುತವಾಗಿ ರೂಢಿಸಿಕೊಂಡಿದ್ದೇನೆ. ಸ್ವರ, ಲಯ ಶುದ್ಧಿ, ರಾಗ ವಿಸ್ತಾರ ಕ್ರಮವನ್ನು ಸಾಂಪ್ರದಾಯಿಕ ಚೌಕಟ್ಟು ಮೀರದ ಹಾಡುಗಾರಿಕೆಯಿಂದ ಜನರ ಪ್ರೀತಿ ಗಳಿಸಿ ಹೆಜ್ಜೆ ಗುರುತು ಮೂಡಿಸುವ ಪ್ರಯತ್ನ ಮಾಡಿದ್ದೇನೆ. ಹಿಂದುಸ್ತಾನಿ ಗಾಯನ ಕ್ಷೇತ್ರದಲ್ಲಿ ಇದ್ಯಾವುದೂ ಒತ್ತಡದಿಂದ ಮಾಡಿದ ಕೆಲಸವಲ್ಲ. ಪ್ರೀತಿಯಿಂದ ಕಲಿತು ಮಾಡಿದ ಸಾಧನೆಯೇ ಹೊರತು; ಬೇರೇನೂ ಅಲ್ಲ.

ಆಲ್‌ ಇಂಡಿಯಾ ರೇಡಿಯೊದಲ್ಲಿ ‘ಎ’ ಗ್ರೇಡ್‌ ಕಲಾವಿದನಾಗಿ ಹಲವು ಕಾರ್ಯಕ್ರಮ ನೀಡಿದ್ದೇನೆ. ದೇಶದ ಪ್ರತಿಷ್ಠಿತ ಸಂಗೀತ ವೇದಿಕೆಗಳಾದ ಸವಾಯಿ ಗಂಧರ್ವ ಪುಣೆ, ದೀನಾನಾಥ್‌ ಮಂಗೇಶಕರ್‌ ಸಂಗೀತ ಹಬ್ಬ ಗೋವಾ, ಏರ್‌ ಸಂಗೀತ ಸಮ್ಮೇಳನ ಶಿಲ್ಲಾಂಗ್‌, ಸಪ್ತಕ್‌ ಮ್ಯೂಸಿಕ್‌ ಫೆಸ್ಟಿವಲ್‌ ಸೇರಿದಂತೆ ಅಮೇರಿಕ, ಕೆನಡಾ, ಇಂಗ್ಲೆಂಡ್‌, ಗಲ್ಫ್‌ ರಾಷ್ಟ್ರಗಳಲ್ಲೂ ಕಾರ್ಯಕ್ರಮ ನೀಡಿರುವ ಅನುಭವ ಇದೆ. ಸಿನಿಮಾ ಮತ್ತು ಧಾರಾವಾಹಿಗಳಿಗೂ ಸಂಗೀತ ಸಂಯೋಜಿಸಿದ್ದು, ಸಂಗೀತ ಪ್ರಿಯರಿಗಾಗಿ ಸಿಡಿ, ಡಿವಿಡಿಗಳನ್ನು ಹೊರ ತಂದಿರುವೆ. ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಗೌರವಗಳಿಗೆ ಪಾತ್ರನಾಗಿದ್ದೇನೆ.

ಗುರುಗಳಾದ ಪಂ.ಬಸವರಾಜ ರಾಜಗುರು ನೆನಪಿನಲ್ಲಿ ‘ರಾಜಗುರು ಸ್ಮೃತಿ ಟ್ರಸ್ಟ್‌’ ಸ್ಥಾಪಿಸಿ ಆಡಳಿತ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ಟ್ರಸ್ಟ್‌ ಯುವ ಕಲಾವಿದರಿಗೆ ವೇದಿಕೆ ನೀಡಿದ್ದು, ಮುಂಜಾನೆಯ ಉಲ್ಲಾಸಿತ ವಾತಾವರಣದಲ್ಲಿ ರಾಗಗಳ ಪರಿಚಯಿಸುವ ವಿಶಿಷ್ಟ ಸಂಗೀತ ಕಾರ್ಯಕ್ರಮವನ್ನು ಕಳೆದ 19ವರ್ಷದಿಂದ ವ್ರತದಂತೆ ಪಾಲಿಸಿಕೊಂಡು ಬರುತ್ತಿದ್ದೇನೆ. ಇಂತಹ ಕಾರ್ಯಕ್ರಮಗಳ ಮುಖೇನ ಸಂಗೀತ ಆಸ್ವಾದಿಸುವ ರಸಾನುಭವ ಗಳಿಗೆ ನಮ್ಮೆಲ್ಲಾ ಒತ್ತಡಗಳನ್ನು ದೂರು ಮಾಡುತ್ತದೆ.

ಸಂಗೀತಕ್ಕೆ ಗಡಿ, ಭಾಷೆ, ಜಾತಿ, ಧರ್ಮದ ಹಂಗು ಇಲ್ಲ. ಬಹುತೇಕ ಸಂಗೀತ ಶ್ರೋತೃಗಳಿಗೆ ರಾಗಗಳ ಪರಿಚಯ ಇರುವುದಿಲ್ಲ. ಆದರೂ, ಆಸ್ವಾದಿಸುತ್ತಾರೆ. ಅದು ಸಂಗೀತಕ್ಕೆ ಇರುವ ತಾಕತ್ತು. ಸಂಗೀತದ ಯಾವುದೇ ಪ್ರಾಕಾರವಾದರೂ ಅದರದ್ದೆ ಮಹತ್ವ ಇರುತ್ತದೆ. ಮನಸ್ಸಿಗೆ ಮುದ ನೀಡುವ, ಆತ್ಮಕ್ಕೆ ಸಂತೋಷ ಕೊಡಬಲ್ಲ ಕಲೆ ರೂಢಿಸಿಕೊಂಡಾಗ ಜಂಜಾಟ ದೂರ ಸರಿಯುತ್ತದೆ.

ರಾಗದಲ್ಲಿ ಏನಾದರೂ ಲೋಪವಾದರೆ ಇಲ್ಲವೇ ಚೆನ್ನಾಗಿ ಹಾಡಬಲ್ಲ ಸಂಗೀತಗಾರರ ಎದುರು ಸಹಜ ಒತ್ತಡ ಸೃಷ್ಟಿಯಾಗುತ್ತದೆ. ಇನ್ನು ಪ್ರತಿಭೆ ಕಂಡು ಅಸೂಯೆ ಪಡುವ ಜನರು ಎಲ್ಲಾ ಕಾಲದಲ್ಲೂ ಇರುತ್ತಾರೆ. ಕಾಲದ ಅಂಕೆಯಿಂದ ಯಾರೂ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ 'ಕಾಲಾಯ ತಸ್ಮೈ ನಮಃ' ಎಂದಿದ್ದಾರೆ ನಮ್ಮ ಪೂರ್ವಿಕರು. ನಾವು ಮಾಡುವ ಕೆಲಸದಲ್ಲಿ ನಿರ್ದಿಷ್ಟ ಗುರಿ, ಬದ್ಧತೆ, ಶಿಸ್ತು ಮೈಗೂಡಿಸಿಕೊಂಡರೆ ಎಲ್ಲವೂ ಸರಿಯಾಗುತ್ತದೆ.

ಬಿಡುವಿಲ್ಲದ ಸಂಗೀತ ಕಛೇರಿ, ಸನ್ಮಾನ ಕಾರ್ಯಕ್ರಮ‌ಗಳ ನಡುವೆಯೂ ಓದುವ ಹವ್ಯಾಸ ಇದೆ. ಮನೆಯಲ್ಲಿ ಪುಟ್ಟ ಗ್ರಂಥಾಲಯವೊಂದು ನಿರ್ಮಿಸಿಕೊಂಡಿದ್ದೇನೆ. ಇಷ್ಟದ ಲೇಖಕರ ಪುಸ್ತಕಗಳ ಸಂಗ್ರಹವಿದೆ. ನಾಟಕ, ನೃತ್ಯದಂತಹ ಸೃಜನಶೀಲ ಮಾಧ್ಯಮದ ಬಗ್ಗೆಯೂ ಆಸಕ್ತಿ ಇದೆ.

ಬೆಂಗಳೂರಿನಲ್ಲಿ 27ವರ್ಷದಿಂದ ವಾಸವಾಗಿದ್ದು, ಅತಿಯಾದ ಸಂಚಾರ ದಟ್ಟಣೆಯಲ್ಲಿ ಸಿಲುಕಿದಾಗ ಒತ್ತಡಕ್ಕೆ ಒಳಗಾಗುತ್ತೇನೆ. ನಗರದ ಊಸಾಬರಿ ಸಾಕು ಮಾಡಿ, ಊರಿಗೆ ಹೋಗುವ ಚಡಪಡಿಕೆಯೂ ಇದೆ. ಇನ್ನು ಹಳ್ಳಿಗಳಲ್ಲಿ ಜನರು ಮುಗ್ಧತೆ ಕಳೆದುಕೊಂಡಿದ್ದಾರೆ. ಆಧುನಿಕ ಆಕರ್ಷಣೆಗಳಿಂದ ವಲಸೆ ಹೆಚ್ಚಾಗಿದೆ. ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿದ್ದು, ಇಡೀ ಬದುಕೇ ಒತ್ತಡದ ಸುಳಿಗಾಳಿಗೆ ಸಿಲುಕಿ ತರಗಲೆಯಂತೆ ಆಗುತ್ತಿದೆ. ಇದು ಈ ಕಾಲದ ದುರ್ವೈವ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry