ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಸಾಧಿಸಲು ತುರ್ತು ಕ್ರಮ ಕೈಗೊಳ್ಳಿ

7

ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಸಾಧಿಸಲು ತುರ್ತು ಕ್ರಮ ಕೈಗೊಳ್ಳಿ

Published:
Updated:
ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಸಾಧಿಸಲು ತುರ್ತು ಕ್ರಮ ಕೈಗೊಳ್ಳಿ

ದಾವೋಸ್‍‍ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಜಾಗತೀಕರಣದ ಪರವಾಗಿ ಪ್ರಧಾನಿ ನರೇಂದ್ರ ಮೋದಿ ದನಿ ಎತ್ತಿದ್ದಾರೆ. ‘ಅಮೆರಿಕ ಮೊದಲು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಿರುವ ಸಂದರ್ಭದಲ್ಲಿ ಇದು ವಿಶೇಷವಾದದ್ದು. ರಕ್ಷಣಾತ್ಮಕವಾದ ಆರ್ಥಿಕ ನೀತಿಗಳು ಭಯೋತ್ಪಾದನೆಯಷ್ಟೇ ಕೆಟ್ಟದ್ದು ಎಂಬಂತಹ ತೀವ್ರ ಮಾತುಗಳಲ್ಲಿ ಮೋದಿಯವರು ಜಾಗತೀಕರಣವನ್ನು ಸಮರ್ಥಿಸಿದ್ದಾರೆ. ಸುಲಲಿತ ವ್ಯಾಪಾರ, ವಹಿವಾಟಿಗೆ ಅಡ್ಡಿಯಾಗಿದ್ದ ಎಲ್ಲಾ ತೊಡಕುಗಳನ್ನು ನಿವಾರಿಸಲಾಗಿದ್ದು, ಭಾರತದಲ್ಲಿ ಈಗ ಉದ್ಯಮಿಗಳಿಗೆ ರತ್ನಗಂಬಳಿ ಸ್ವಾಗತ ನೀಡಲಾಗುತ್ತಿದೆ ಎಂದೂ ಪ್ರಧಾನಿ ಹೇಳಿದ್ದಾರೆ. ಇದಕ್ಕೆ ಅನುಗುಣವಾಗಿ ದೇಶದ ಷೇರುಪೇಟೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದ್ದಲ್ಲದೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವಂತೂ ಹೊಸ ಎತ್ತರವನ್ನೂ ದಾಖಲಿಸಿತು. ಆದರೆ ಇದೇ ಸಂದರ್ಭದಲ್ಲಿ ಭಾರತ ಕುರಿತಂತೆ ಎರಡು ಸ್ವತಂತ್ರ ಸಮೀಕ್ಷೆಗಳು ನೀಡಿರುವ ಅಂಕಿಅಂಶಗಳು ನಮ್ಮ ಗಂಭೀರ ಪರಿಗಣನೆಗೆ ಯೋಗ್ಯ.

ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಶೃಂಗಸಭೆ ನಡೆಯುತ್ತಿರುವ ಈ ಸಂದರ್ಭದಲ್ಲೇ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಸೂಚ್ಯಂಕವನ್ನು ಬಿಡುಗಡೆ ಮಾಡಲಾಗಿದೆ. ಈ ಸೂಚ್ಯಂಕದಲ್ಲಿ ಭಾರತ 62ನೇ ಸ್ಥಾನದಲ್ಲಿದ್ದರೆ ಚೀನಾ 26ನೇ ಸ್ಥಾನದಲ್ಲಿದೆ. ಪಾಕಿಸ್ತಾನ ಕೂಡ ನಮ್ಮ ರಾಷ್ಟ್ರಕ್ಕಿಂತ ಮೇಲೆ 47ನೇ ಸ್ಥಾನದಲ್ಲಿದೆ. ಎಂದರೆ ನಾವು ಪಾಕಿಸ್ತಾನಕ್ಕಿಂತಲೂ 15 ಸ್ಥಾನ ಕೆಳಗಿದ್ದೇವೆ. ಇದರ ಅರ್ಥ ಇಷ್ಟೇ: ಆರ್ಥಿಕ ಸಮೃದ್ಧಿಯ ಲಾಭ ಕೆಲವೇ ಜನರ ಪಾಲಾಗುತ್ತಿದೆ. ಈ ಸಮೀಕ್ಷೆ ಧ್ವನಿಸಿರುವ ಈ ಅಂಶ ಕಡೆಗಣಿಸಲಾಗದ್ದು.

ಹಾಗೆಯೇ ಅಂತರರಾಷ್ಟ್ರೀಯ ಹಕ್ಕುಗಳ ಸಂಘಟನೆ, ‘ಆಕ್ಸ್ ಫಾಮ್’ ವಾರ್ಷಿಕ ಸಮೀಕ್ಷೆಯ ಪ್ರಕಾರ, ಕಳೆದ ವರ್ಷ ರಾಷ್ಟ್ರದಲ್ಲಿ ಸೃಷ್ಟಿಯಾದ ಸಂಪತ್ತಿನ ಶೇ 73ರಷ್ಟು ಭಾಗ ಕೇವಲ ಶೇ 1ರಷ್ಟಿರುವ ಶ್ರೀಮಂತರ ಪಾಲಾಗಿದೆ. ಜಾಗತಿಕವಾಗಿ 2010ರಿಂದ ಈಚೆಗೆ ಕೋಟ್ಯಧಿಪತಿಗಳ ಸಂಪತ್ತು ಪ್ರತಿವರ್ಷ ಸರಾಸರಿ ಶೇ 13ರಷ್ಟು ಏರಿಕೆ ಕಾಣುತ್ತಿದೆ ಎಂದೂ ಈ ಸಮೀಕ್ಷೆ ಹೇಳಿದೆ. ಎಂದರೆ ಉದಾರೀಕರಣದ ನಂತರ ಹೆಚ್ಚಿನ ಲಾಭ, ಕಡಿಮೆ ಸಂಖ್ಯೆಯ ಶ್ರೀಮಂತರಿಗೇ ದಕ್ಕುತ್ತಿದೆ ಎಂಬುದು ವೇದ್ಯ. ಈ ಬಗೆಯ ಅಪಾರ ಅಂತರ, ವರಮಾನಕ್ಕಷ್ಟೇ ಸೀಮಿತವಾಗಿಲ್ಲ. ಆಧುನಿಕ ಶಿಕ್ಷಣ, ಗುಣಮಟ್ಟದ ಆರೋಗ್ಯ ಸೇವೆ, ಉತ್ತಮ ಜೀವನ ವಿಧಾನ, ಉತ್ತಮ ಉದ್ಯೋಗ ದಕ್ಕಿಸಿಕೊಳ್ಳುವಲ್ಲಿಯೂ ಈ ಅಂತರ ಢಾಳಾಗಿ ಪ್ರತಿಫಲಿಸುತ್ತಿದೆ. ಹೆಚ್ಚಿನ ನಾಗರಿಕರನ್ನು ತಲುಪುವಲ್ಲಿ ನಮ್ಮ ಆರ್ಥಿಕ ವ್ಯವಸ್ಥೆ ವಿಫಲವಾಗಿದೆ ಎಂಬುದು ಇದರಿಂದ ಸ್ಪಷ್ಟ. ಇದನ್ನು ಸರಿಪಡಿಸಲು ಸೂಕ್ತ ನೀತಿಗಳನ್ನು ರೂಪಿಸುವುದು ಅವಶ್ಯ. ಸದ್ಯಕ್ಕಂತೂ ಯುವಜನರೇ ಹೆಚ್ಚಿರುವ ದೇಶ ಭಾರತ. ಈ ಯುವಸಂಪನ್ಮೂಲಕ್ಕೆ ಅಗತ್ಯ ಶಿಕ್ಷಣ ಕೌಶಲಗಳೊಂದಿಗೆ ಉದ್ಯೋಗ ಒದಗಿಸುವುದು ಆದ್ಯತೆಯ ಸಂಗತಿ ಆಗಬೇಕಿದೆ. ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಹಣ ಹೂಡಿಕೆ ಮಾಡುವುದಲ್ಲದೆ ಕೃಷಿ ಹಾಗೂ ಸಣ್ಣಪುಟ್ಟ ಉದ್ಯಮಗಳು ಗರಿಗೆದರಲು ಅವಕಾಶ ಸೃಷ್ಟಿಸಬೇಕಾಗಿದೆ. ಭಾರತವನ್ನು ದೊಡ್ಡ ಮಾರುಕಟ್ಟೆ ಆಗಿಯೇ ವಿದೇಶಿ ಹೂಡಿಕೆದಾರರು ಪರಿಭಾವಿಸುತ್ತಾರೆ ಎಂಬ ಕಹಿ ವಾಸ್ತವವನ್ನು ನಾವು ಮರೆಯಬಾರದು. ಸಂಪತ್ತು ಹಾಗೂ ಸಾಮಾಜಿಕ ಅಸಮಾನತೆಗಳು ತೀವ್ರವಾಗಿರುವ ನೆಲದಲ್ಲಿ ಹೂಡಿಕೆ ಮಾಡಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳೂ ಹಿಂಜರಿಯುತ್ತವೆ. ಈ ಬಗ್ಗೆ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಸಾಧಿಸಲು ಅಗತ್ಯ ನೀತಿಗಳನ್ನು ರೂಪಿಸಲು ತುರ್ತಾಗಿ ಕ್ರಮಗಳನ್ನು ಕೈಗೊಳ್ಳಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry