ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದ್ಯಮಕ್ಕೆ ಮೂಲಸೌಕರ್ಯ ಭರವಸೆ

Last Updated 25 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನವೋದ್ಯಮ ಆರಂಭಿಸುವವರಿಗೆ ಬೆಂಗಳೂರಿನಲ್ಲಿ ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದ್ದು, ದೇಶ–ವಿದೇಶದ ಕಂಪನಿಗಳು ಬಂಡವಾಳ ಹೂಡಲು ಮುಂದಾಗಬೇಕು’ ಎಂದು ಬೃಹತ್‌ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಮನವಿ ಮಾಡಿಕೊಂಡಿದ್ದಾರೆ.

ಎಲೆಕ್ಟ್ರಾನಿಕ್ಸ್‌ ಮತ್ತು ಕಂಪ್ಯೂಟರ್‌ ಸಾಫ್ಟ್‌ವೇರ್‌ ರಫ್ತು ಉತ್ತೇಜಕ ಮಂಡಳಿ (ಇಎಸ್‌ಸಿ) ಆಯೋಜಿಸಿರುವ ‘ಇಂಡಿಯಾ ಸಾಫ್ಟ್-2018’ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ನವೋದ್ಯಮ ನೀತಿ ಅಳವಡಿಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ಈ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತಿದೆ. ಪ್ರಪಂಚದ ಬೇರೆ ಯಾವ ನಗರಗಳಲ್ಲೂ ಇಷ್ಟು ಮೂಲ ಸೌಕರ್ಯ ಇಲ್ಲ’ ಎಂದರು.

‘ವಾಹನ ದಟ್ಟಣೆಯ ಕಿರಿಕಿರಿ ಇರುವುದು ನಿಜ. ಅದನ್ನು ತಪ್ಪಿಸಲು ಮೆಟ್ರೊ ಸಂಪರ್ಕ, ಉಪನಗರ ರೈಲು ಯೋಜನೆ, ವರ್ತುಲ ರಸ್ತೆ ನಿರ್ಮಾಣ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬಂಡವಾಳ ಹೂಡಲು ವಿದೇಶಿ ಕಂಪನಿಗಳು ಮುಂದೆ ಬರಬೇಕು. ಸಾಫ್ಟ್‌ವೇರ್ ಕಂಪನಿಗಳು ಹೊಸ ರೀತಿಯ ಉದ್ಯೋಗಗಳನ್ನು ಸೃಷ್ಟಿಸಬೇಕು’ ಎಂದು ಮನವಿ ಮಾಡಿದರು.

ಎರಡು ದಿನಗಳ ಸಮ್ಮೇಳನದಲ್ಲಿ 60 ರಾಷ್ಟ್ರಗಳ ವಿವಿಧ ಸಾಫ್ಟ್‌ವೇರ್‌ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ದೇಶದ ಸಣ್ಣ ಮತ್ತು ಮಧ್ಯಮ ಸಾಫ್ಟ್‌ವೇರ್ ಕಂಪನಿಗಳ ವಹಿವಾಟು, ರಫ್ತು ಉತ್ತೇಜನಕ್ಕೆ ಇದು ಅನುಕೂಲ ಆಗಲಿದೆ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ ಹೇಳಿದರು.

ಚಾಲಕ ಮದ್ಯಪಾನ ಮಾಡಿದರೆ ಎಂಜಿನ್ ಆಫ್!
ಚಾಲಕ ಮದ್ಯಪಾನ ಮಾಡಿ ವಾಹನದ ಡ್ರೈವಿಂಗ್ ಸೀಟ್‌ನಲ್ಲಿ ಕುಳಿತರೆ ಎಂಜಿನ್ ಆಫ್ ಆಗಲಿದೆ.

ಇಂತಹದ್ದೊಂದು ತಂತ್ರಾಂಶವನ್ನು ತೆಲಂಗಾಣದ ಸಿರ್ರಪ್‌ (cyrrup) ಸಾಫ್ಟ್‌ವೇರ್ ಕಂಪನಿ ಅಭಿವೃದ್ಧಿಪಡಿಸಿದೆ.

ಈ ತಂತ್ರಾಂಶ ಅಳವಡಿಸಿದ ವಾಹನಕ್ಕೆ ಪಾನಮತ್ತ ಚಾಲಕ ಹತ್ತಿ ಎಂಜಿನ್ ಚಾಲನೆ ಮಾಡಿದ ಕ್ಷಣಾರ್ಧದಲ್ಲೆ ಸ್ಥಗಿತಗೊಳ್ಳುತ್ತದೆ. ಅಲ್ಲದೇ, ಈ ಮಾಹಿತಿ ವಾಹನದ ಮಾಲೀಕರಿಗೆ ರವಾನೆಯಾಗಲಿದೆ.

’ಇಂಡಿಯಾ ಸಾಫ್ಟ್-2018’ ವಸ್ತು ಪ್ರದರ್ಶನದಲ್ಲಿ ಈ ತಂತ್ರಾಂಶದ ಉಪಯುಕ್ತತೆ ವಿವರಿಸಿದ ಸಂಸ್ಥೆಯ ಪ್ರತಿನಿಧಿಗಳು, ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ತಿಳಿಸಿದರು.

ಇದೇ ರೀತಿಯ ಆರು ಉಪಯೋಗ ಇರುವ ‘ವೆಹಿಕಲ್ ಬ್ಲಾಕ್ ಬಾಕ್ಸ್’ ಸಿದ್ಧಪಡಿಸಲಾಗಿದೆ. ವಾಹನ ಎಲ್ಲಿದೆ ಎಂಬುದನ್ನು ತಿಳಿಯಲು ಜಿಪಿಎಸ್ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆ, ಮುಂಭಾಗ ಹಾಗೂ ಕಾರಿನ ಒಳಭಾಗದಲ್ಲಿ ಕ್ಯಾಮರಾ, ವಾಹನ ಎಷ್ಟು ಕಿಲೋ ಮೀಟರ್‌ ವೇಗದಲ್ಲಿ ಚಲಿಸುತ್ತಿದೆ ಎಂಬ ಮಾಹಿತಿಯನ್ನು ಮಾಲೀಕರು ಮನೆಯಲ್ಲಿ ಕುಳಿತು ನೋಡಬಹುದು.

ವಾಹನ ಅತಿಯಾದ ವೇಗದಲ್ಲಿ ಚಾಲನೆಯಾಗುತ್ತಿದ್ದರೆ ಮಾಲೀಕನ ಮೊಬೈಲ್‌ಗೆ ಸಂದೇಶ ರವಾನೆಯಾಗುತ್ತದೆ. ನಿರ್ಜನ ಪ್ರದೇಶದಲ್ಲಿ ವಾಹನ ಕೆಟ್ಟು ನಿಂತಾಗ ಪ್ಯಾನಿಕ್ ಬಟನ್ ಒತ್ತಿದರೆ ಮಾಲೀಕರಿಗೆ ಅಥವಾ ಕುಟುಂಬ ಸದಸ್ಯರಿಗೆ ಮಾಹಿತಿ ತಲುಪಲಿದೆ.

ವಾಹನಗಳ ಮಾಲೀಕರು ತಮಗೆ ಅಗತ್ಯ ಇರುವಷ್ಟು ಸಾಧನ ಅಳವಡಿಸಿಕೊಳ್ಳಬಹುದು. ಕನಿಷ್ಠ ₹ 1,500ರಿಂದ ₹ 10,000 ತನಕ ಬೆಲೆ ನಿಗದಿ ಮಾಡಲಾಗುವುದು ಎಂದೂ ಸಂಸ್ಥೆಯ ಪ್ರತಿನಿಧಿಗಳ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT