ಟಿವಿಎಸ್‌ ಮೋಟರ್ಸನ ₹ 50 ಲಕ್ಷ ಮೊತ್ತದ ನಕಲಿ ಬಿಡಿಭಾಗಗಳ ವಶ

7

ಟಿವಿಎಸ್‌ ಮೋಟರ್ಸನ ₹ 50 ಲಕ್ಷ ಮೊತ್ತದ ನಕಲಿ ಬಿಡಿಭಾಗಗಳ ವಶ

Published:
Updated:

ಬೆಂಗಳೂರು: ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಿಕಾ ಸಂಸ್ಥೆ ಟಿವಿಎಸ್‌ ಮೋಟರ್‌ ಕಂಪನಿಯ ವಾಹನ ಬಿಡಿಭಾಗಗಳ ₹ 50 ಲಕ್ಷ ಮೊತ್ತದ ನಕಲಿ ಸರಕನ್ನು ಪೊಲೀಸ್‌ ದಾಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.

‘ದೇಶದ ವಿವಿಧ ಭಾಗಗಳಲ್ಲಿ ಪೊಲೀಸರ ಸಹಕಾರದಿಂದ ಮೂರು ತಿಂಗಳಲ್ಲಿ ನಡೆಸಿದ ದಾಳಿಯಲ್ಲಿ ಈ ಮೊತ್ತದ ನಕಲಿ ಬಿಡಿಭಾಗಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.  ಬೆಂಗಳೂರು, ಹೈದರಾಬಾದ್‌, ದೆಹಲಿ, ಕೋಲ್ಕತ್ತ ಸೇರಿದಂತೆ 55 ನಗರಗಳಲ್ಲಿ ದಾಳಿ ನಡೆಸಲಾಗಿತ್ತು’ ಎಂದು ಕಂಪನಿಯ ಹಿರಿಯ ಉಪಾಧ್ಯಕ್ಷ ಕೆ. ವೆಂಕಟೇಶ್ವರಲು ಅವರು ಹೇಳಿದ್ದಾರೆ.

‘ಕಾಪಿರೈಟ್‌ ಹಕ್ಕು ಉಲ್ಲಂಘಿಸಿದವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ನಕಲಿ ಉತ್ಪನ್ನಗಳ ಹಾವಳಿ ತಡೆಗಟ್ಟಲು ಇದೇ ಬಗೆಯ ದಾಳಿಗಳನ್ನು ಮುಂದೆಯೂ ಹಮ್ಮಿಕೊಳ್ಳಲಾಗುವುದು. ವಶಪಡಿಸಿಕೊಂಡಿರುವ ₹ 50 ಲಕ್ಷಕ್ಕೂ ಹೆಚ್ಚು ಮೊತ್ತದ ನಕಲಿ ಬಿಡಿಭಾಗಗಳಲ್ಲಿ ಬೆಂಗಳೂರಿನಲ್ಲಿ ವಶಪಡಿಸಿಕೊಂಡಿರುವ ಸರಕಿನ ಮೊತ್ತ ₹ 20 ಲಕ್ಷದಷ್ಟಿದೆ.

‘ಕಂಪನಿಯು ತನ್ನ ಬಿಡಿಭಾಗಗಳ ಬ್ರ್ಯಾಂಡ್‌ ರಕ್ಷಿಸಿಕೊಳ್ಳಲು ಮತ್ತು ನಕಲಿ ಸರಕಿನ ಹಾವಳಿ ತಡೆಗಟ್ಟಲು ಕಠಿಣ ಕ್ರಮ ಕೈಗೊಂಡಿದೆ. ಕಂಪನಿಯ 4 ಸಾವಿರ ಅಧಿಕೃತ ಮಳಿಗೆಗಳ ಮೂಲಕ ಅಸಲಿ ಬಿಡಿಭಾಗಗಳನ್ನು ಪೂರೈಸಲಾಗುತ್ತಿದೆ. ಗ್ರಾಹಕರು ನಕಲಿ ಉತ್ಪನ್ನಗಳಿಗೆ ಮೋಸ ಹೋಗಬಾರದು’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನಕಲಿ ಉತ್ಪನ್ನಗಳ ಹಾವಳಿ ಕಡಿಮೆಯಾಗಿದೆ. 2010–11ರಲ್ಲಿ ಶೇ 36ರಷ್ಟಿದ್ದ ನಕಲಿ ಉತ್ಪನ್ನಗಳ ಹಾವಳಿಯು 2016–17ರಲ್ಲಿ ಶೇ 5ಕ್ಕೆ ಇಳಿದಿದೆ. ವಾಹನಗಳ ದೀರ್ಘಕಾಲ ಬಾಳಿಕೆಗೆ ಗ್ರಾಹಕರು ಅಸಲಿ ಬಿಡಿಭಾಗಗಳನ್ನೇ ಖರೀದಿಸಲು ಆದ್ಯತೆ ನೀಡಬೇಕು. ನೈಜ ಹಾಗೂ ನಕಲಿ ಬಿಡಿಭಾಗಗಳ ನಡುವಣ ವ್ಯತ್ಯಾಸ ಗುರುತಿಸುವುದನ್ನು ತಿಳಿಯಲು ಗ್ರಾಹಕರು ಹಾಗೂ ಗ್ಯಾರೇಜ್ ಮೆಕ್ಯಾನಿಕ್‌ಗಳಿಗೆ ಮಾಹಿತಿ ನೀಡಲಾಗುವುದು’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry