ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲೆಪ್‌–ವೋಜ್ನಿಯಾಕಿ ಪೈಪೋಟಿ

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಮೊದಲ ಬಾರಿಗೆ ಫೈನಲ್‌ ತಲುಪಿದ ಆಟಗಾರ್ತಿಯರು
Last Updated 25 ಜನವರಿ 2018, 20:06 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಮೊದಲ ಬಾರಿಗೆ ಆಸ್ಟ್ರೇಲಿಯಾ ಓಪನ್‌ನಲ್ಲಿ ಪ್ರಶಸ್ತಿ ಸುತ್ತು ತಲುಪಿರುವ ಸಿಮೋನಾ ಹಲೆಪ್‌ ಹಾಗೂ ಕರೊಲಿನಾ ವೋಜ್ನಿಯಾಕಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ತವಕದಲ್ಲಿ ಇದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ರುಮೇನಿಯಾದ ಹಲೆಪ್‌ ಅವರು ಎರಡನೇ ರ‍್ಯಾಂಕಿಂಗ್‌ನ ಡೆನ್ಮಾರ್ಕ್ ಆಟಗಾರ್ತಿ ವೋಜ್ನಿಯಾಕಿಗೆ ಶನಿವಾರ ನಡೆಯುವ ಫೈನಲ್‌ನಲ್ಲಿ ಪ್ರಬಲ ಪೈಪೋಟಿ ಒಡ್ಡಲು ಸಿದ್ದತೆ ನಡೆಸಿದ್ದಾರೆ.

ಹಲೆಪ್ ಹಾಗೂ ವೋಜ್ನಿಯಾಕಿ ಇದುವೆರೆಗೂ ಒಂದೂ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿಲ್ಲ. 2009 ಹಾಗೂ 2014ರ ಅಮೆರಿಕ ಓಪನ್‌ನಲ್ಲಿ ಫೈನಲ್‌ ತಲುಪಿರುವುದು ವೋಜ್ನಿಯಾಕಿಯ ಈವರೆಗಿನ ಸಾಧನೆ ಎನಿಸಿದೆ.

2014 ಮತ್ತು 2017ರ ಫ್ರೆಂಚ್ ಓಪನ್‌ ಫೈನಲ್‌ನಲ್ಲಿ ಆಡಿರುವುದು ಹಲೆಪ್ ಅವರ ಸಾಧನೆಯಾಗಿದೆ.

ಸೆರೆನಾ ವಿಲಿಯಮ್ಸ್‌, ವಿಕ್ಟೋರಿಯಾ ಅಜರೆಂಕಾ ಅವರ ಅನುಪಸ್ಥಿತಿ ಹಾಗೂ ವೀನಸ್‌ ವಿಲಿಯಮ್ಸ್‌ ಮತ್ತು ರಷ್ಯಾದ ಮರಿಯಾ ಶರಪೋವಾ ಅವರ ಸೋಲುಗಳ ಬಳಿಕ ವೋಜ್ನಿಯಾಕಿ ಹಾಗೂ ಹಲೆಪ್‌ ಫಿನಿಕ್ಸಿನಂತೆ ಹೊರಬಂದು ಟೆನಿಸ್ ಅಂಕಣದಲ್ಲಿ ಮಿಂಚು ಹರಿಸಿದ್ದಾರೆ. ಇಬ್ಬರಲ್ಲಿ ಯಾರ ಮುಡಿಗೆ ಪ್ರಶಸ್ತಿ ಒಲಿದರೂ ಅದು ಇತಿಹಾಸ ರಚನೆಯಾಗಲಿದೆ.

ಕೆರ್ಬರ್ ಮಣಿಸಿದ ಹಲೆಪ್‌: ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ ಪೈಪೋಟಿಯಲ್ಲಿ ಹಲೆಪ್‌ 6–3, 4–6, 9–7ರಲ್ಲಿ ಏಂಜಲಿಕ್ ಕೆರ್ಬರ್‌ಗೆ ಸೋಲುಣಿಸಿದರು.

ಸಿಂಗಲ್ಸ್ ವಿಭಾಗದಲ್ಲಿ ಈಗಾಗಲೇ ಎರಡು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿರುವ ಅನುಭವಿ ಆಟಗಾರ್ತಿ ಕೆರ್ಬರ್ ಎದುರು ಹಲೆಪ್‌ ಸಮಯೋಚಿತ ಆಟದಿಂದ ಗಮನಸೆಳೆದರು.

ಜರ್ಮನಿಯ ಆಟಗಾರ್ತಿ ಕೆರ್ಬರ್‌ ಸುಲಭದಲ್ಲಿ ಸೋಲು ಒಪ್ಪಿಕೊಳ್ಳಲಿಲ್ಲ. ಮೊದಲ ಸೆಟ್‌ನಲ್ಲಿ ಮೂರು ಗೇಮ್‌ಗಳನ್ನು ಗೆದ್ದು ಪೈಪೋಟಿ ನೀಡಿದರು. ಎರಡನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಒಡ್ಡುವ ಮೂಲಕ ಗೆಲುವು ಒಲಿಸಿಕೊಂಡರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಹಲೆಪ್‌ ಅವರ ನೈಜ ಆಟದ ಎದುರು ಕೆರ್ಬರ್‌ಗೆ ಸೋಲು ಎದುರಾಯಿತು. 2 ಗಂಟೆ 20 ನಿಮಿಷದ ಹಣಾಹಣಿಯಲ್ಲಿ ರುಮೇನಿಯಾದ ಹಲೆಪ್‌ ನಾಲ್ಕು ಮ್ಯಾಚ್‌ಪಾಯಿಂಟ್ಸ್‌ಗಳನ್ನು ಪಡೆದರು.

‘ನಾನು ಪುಳಕಗೊಂಡಿದ್ದೇನೆ. ಈ ಗೆಲುವು ನಿಜಕ್ಕೂ ಆಶ್ಚರ್ಯ ಉಂಟುಮಾಡಿದೆ. ಇಲ್ಲಿ ಫೈನಲ್‌ನಲ್ಲಿ ಆಡುವುದು ನನ್ನ ವೃತ್ತಿಬದುಕಿನ ಅತ್ಯಂತ ಭಾವುಕ ಕ್ಷಣ’ ಎಂದು ಹಲೆಪ್‌ ಹೇಳಿದ್ದಾರೆ.

ಎಲೈಸ್‌ಗೆ ಸೋಲು: ಯುವ ಆಟಗಾರ್ತಿ ಎಲೈಸ್ ಮಾರ್ಟಿನ್ಸ್‌ ಅವರ ಚೊಚ್ಚಲ ಪ್ರಶಸ್ತಿ ಕನಸು ಕಮರಿದೆ. ಬೆಲ್ಜಿಯಂನ 22 ವರ್ಷದ ಎಲೈಸ್ ಸೆಮಿಫೈನಲ್‌ನಲ್ಲಿ 3–6, 6–7ರಲ್ಲಿ ಅನುಭವಿ ಸ್ಪರ್ಧಿ ವೋಜ್ನಿಯಾಕಿ ಎದುರು ಸೋತಿದ್ದಾರೆ.

ಫೈನಲ್‌ನಲ್ಲಿ ಮೊದಲ ರ‍್ಯಾಂಕ್‌ನ ಆಟಗಾರ್ತಿಯೊಂದಿಗೆ ಎರಡನೇ ರ‍್ಯಾಂಕ್‌ನ ಸ್ಪರ್ಧಿ ಆಡುತ್ತಿರುವುದು ಆಸ್ಟ್ರೇಲಿಯಾ ಓಪನ್ ಇತಿಹಾಸದಲ್ಲಿ ಇದು 17ನೇ ಬಾರಿ. ಈ ಮೊದಲು 2015ರಲ್ಲಿ ಸೆರೆನಾ ವಿಲಿಯಮ್ಸ್‌ ಎರಡನೇ ರ‍್ಯಾಂಕ್‌ನ ಮರಿಯಾ ಶರಪೋವಾ ಎದುರು ಗೆದ್ದು ಪ್ರಶಸ್ತಿ ಗೆದ್ದಿದ್ದರು.

ಪಂದ್ಯ ಆರಂಭ: ಶನಿವಾರ ಮಧ್ಯಾಹ್ನ: 2 ಗಂಟೆ

*ಆಸ್ಟ್ರೇಲಿಯಾ ಓಪನ್‌ನಲ್ಲಿ ಹಲೆಪ್‌, ವೋಜ್ನಿಯಾಕಿ ಮೊದಲ ಬಾರಿಗೆ ಫೈನಲ್ ತಲುಪಿದ್ದಾರೆ.
*ಮೊದಲ ಎರಡು ರ‍್ಯಾಂಕ್‌ನ ಆಟಗಾರ್ತಿಯರು ಫೈನಲ್‌ನಲ್ಲಿ ಆಡುತ್ತಿರುವುದು ಇದು 17ನೇ ಬಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT