ಜೀವ ತುಂಬಿದ ಸೂಲಗಿತ್ತಿಗೆ ಪದ್ಮಶ್ರೀ ಗರಿ

7

ಜೀವ ತುಂಬಿದ ಸೂಲಗಿತ್ತಿಗೆ ಪದ್ಮಶ್ರೀ ಗರಿ

Published:
Updated:
ಜೀವ ತುಂಬಿದ ಸೂಲಗಿತ್ತಿಗೆ ಪದ್ಮಶ್ರೀ ಗರಿ

ತುಮಕೂರು: ಹಳ್ಳಿಗಾಡಿನ ಅದೆಷ್ಟೋ ಕಂದಮ್ಮಗಳು, ಗರ್ಭಿಣಿಯರಿಗೆ ಜೀವ ತುಂಬಿದ ಸೂಲಗಿತ್ತಿ ನರಸಮ್ಮ (97)  ದೇಶದ ಅತ್ಯುನ್ನತ ಮೂರನೇ ನಾಗರಿಕ ಗೌರವವಾದ ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಬಸ್‌ ಸಂಚಾರವೇ ಇಲ್ಲದಿದ್ದ ನಕ್ಸಲ್‌ ಪೀಡಿತ ಪಾವಗಡ ತಾಲ್ಲೂಕಿನ ಕುಗ್ರಾಮ ಕೃಷ್ಣಾಪುರದ ನರಸಮ್ಮ ಈವರೆಗೂ 1500ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದಾರೆ. ರಾತ್ರಿ ಹಗಲು ಎನ್ನದೆ ಕರೆದಲ್ಲಿಗೆ ಹೋಗಿ ಮಗು ಮತ್ತು ತಾಯಿಯ ಜೀವ ಕಾಪಾಡಿದ ಸೂಲಗಿತ್ತಿ ಇವರು.

ನರಸಮ್ಮ ಪಾವಗಡ ತಾಲ್ಲೂಕಿನ ತಿಮ್ಮನಾಯಕನಪೇಟೆಯಲ್ಲಿ ಹುಟ್ಟಿದರು. 12ನೇ ವರ್ಷಕ್ಕೆ ಕೃಷ್ಣಾಪುರದ ಆಂಜನಪ್ಪ ಅವರನ್ನು ವಿವಾಹವಾದರು. ತನ್ನ ಅಜ್ಜಿ ಸೂಲಗಿತ್ತಿ ಮರಿಗೆಮ್ಮ ಅವರಿಂದ ಹೆರಿಗೆ ಮಾಡಿಸುವುದನ್ನು ಕಲಿತ್ತಿದ್ದರು. ಅಜ್ಜಿ ಜತೆ ಊರೂರು ತಿರುಗುತ್ತಲೇ ಹೆರಿಗೆ ಪಾಠ ಕಲಿತ್ತಿದ್ದ ನರಸಮ್ಮ, ಕೃಷ್ಣಾಪುರಕ್ಕೆ ಹೋದ ನಂತರ ತಮ್ಮ ಹದಿನಾರನೇ ವಯಸ್ಸಿನಲ್ಲಿ ಕನುಕ್ಕಮ್ಮ ಅವರಿಗೆ ಹೆರಿಗೆ ಮಾಡಿಸಿದರು. ಇದು ಅವರು ಮಾಡಿಸಿದ ಮೊದಲ ಹೆರಿಗೆ.

ಯಾರೇ ಕರೆಯಲಿ, ರಾತ್ರಿ, ಬೆಳಗು ಇರಲಿ ಇನಿತು ಬೇಸರ ಮಾಡಿಕೊಳ್ಳದೆ ನಗುಮುಖದಿಂದಲೇ ಹೆರಿಗೆ ಮಾಡಿಸಲು ಹೋಗುತ್ತಿದ್ದರು. ಅವರ ಕೆಲಸ ಹಾಗೂ ಅವರು ಹೆರಿಗೆ ಮಾಡಿಸಿದರೆ ಸಮಸ್ಯೆಯೇ ಇಲ್ಲ ಎಂದು ಹಳ್ಳಿಯಿಂದ ಹಳ್ಳಿಗೆ ಸುದ್ದಿ ಹಬ್ಬಿತು. ಪಾವಗಡ ತಾಲ್ಲೂಕು ಮಾತ್ರವಲ್ಲದೇ ಸಮೀಪದ ಆಂಧ್ರಪ್ರದೇಶದಲ್ಲೂ ಹೆಸರುವಾಸಿಯಾದರು. ಎತ್ತಿನಗಾಡಿ ಕಟ್ಟಿಕೊಂಡು ಕೃಷ್ಣಾಪುರಕ್ಕೆ ಬಂದು ಕರೆದುಕೊಂಡು ಹೋಗುವವರೂ ಇದ್ದರು. ಪಾವಗಡ ತಾಲ್ಲೂಕಿನ ಕುಗ್ರಾಗಳಲ್ಲಿ ಆಸ್ಪತ್ರೆಗಳಲ್ಲಿ ಇಲ್ಲದ ಕಾರಣ ಇವರೇ ಸಂಚಾರಿ ಹೆರಿಗೆ ಆಸ್ಪತ್ರೆಯಂತೆ ಕಾರ್ಯನಿರ್ವಹಿಸಿದ್ದಾರೆ.

ಇವರ ಸೂಲಗಿತ್ತಿ ಕೆಲಸಕ್ಕೆ ಮಾರುಹೋದ ಕೃಷ್ಣಾಪುರದ ಸುತ್ತಮುತ್ತಲಿನ ಜನರು ತಾವು ಬೆಳೆದ ಭತ್ತ, ರಾಗಿ, ಶೇಂಗಾ ರಾಶಿಯಲ್ಲಿ ಮೊದಲ ಮೊರವನ್ನು ಇವರಿಗಾಗಿ ತೆಗೆದಿಡುತ್ತಿದ್ದರು.

ಹೆರಿಗೆ ಮಾಡಿಸುವುದಷ್ಟೇ ಅಲ್ಲ 9 ತಿಂಗಳವರೆಗೆ ಮಗುವಿನ ಲಾಲನೆ–ಪಾಲನೆಯ ಬಗ್ಗೆ ತಿಳಿವಳಿಕೆಯನ್ನೂ ನೀಡುತ್ತಿದ್ದರು. ಬುಡುಬುಡಿಕೆ ಮನೆಯೊಂದರ ಗರ್ಭಿಣಿಯೊಬ್ಬರಿಗೆ ಹೆರಿಗೆ ಮಾಡಿಸಲು ಹೋದಾಗ ಅವರಿಂದ ’ಹೆರಿಗೆ ಕಸ ಬೀಳಿಸುವ’ ಕಷಾಯದ ಗಿಡಮೂಲಿಕೆ ಮದ್ದು ಅರೆಯುವುದು ಕಲಿತರು. ಮಕ್ಕಳಿಗೆ ಕಿರುನಾಲಿಗೆ ಬಿದ್ದಾಗಲೂ ಇವರು ನೀಡುತ್ತಿದ್ದ ಮದ್ದೇ ಈ ಭಾಗದಲ್ಲಿ ಇಂದಿಗೂ ಹೆಸರುವಾಸಿ.

ತಮ್ಮೂರಿನಿಂದ 20 ಕಿಲೋ ಮೀಟರ್‌ ದೂರದವರೆಗೂ ಹೋಗಿ ಹೆರಿಗೆ ಮಾಡಿಸಿದ ನೆನಪುಗಳು ಅವರಲ್ಲಿ ಈಗಲೂ ಇವೆ. ಎಲ್ಲರೂ ಇನ್ನೇನು ಮಗು, ಗರ್ಭಿಣಿ ಬದುಕುವುದಿಲ್ಲ ಎಂದಾಗಲೂ ಅವರನ್ನು ಬದುಕಿಸಿ ಎಲ್ಲರ ಮೊಗದಲ್ಲೂ ಜೀವ ತುಂಬಿದ್ದನ್ನು ಆ ಭಾಗದ ಅನೇಕರು ನೆನಪು ಮಾಡಿಕೊಳ್ಳುತ್ತಾರೆ.

ಜಾತಿ, ಮತ, ಧರ್ಮ ನೋಡದೇ ಹೆರಿಗೆ ಕಾಯಕವನ್ನೆ ಉಸಿರಾಗಿಸಿಕೊಂಡ ನರಸಮ್ಮ ಅವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.  ‘ವಯೋ ಶ್ರೇಷ್ಠ  ಸಮ್ಮಾನ್‌ ’ ರಾಷ್ಟ್ರಪತಿ ಪ್ರಶಸ್ತಿ,  ತುಮಕೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್‌, ರಾಜ್ಯೋತ್ಸವ ಪ್ರಶಸ್ತಿ, ಮುರುಘಾ ಶ್ರೀ ಪ್ರಶಸ್ತಿ, ಡಿ.ದೇವರಾಜ್ ಅರಸು ಪ್ರಶಸ್ತಿ ಹೀಗೆ ಸಾಗುತ್ತದೆ ಪ್ರಶಸ್ತಿಯ ಸಾಲು.

ಅನಕ್ಷರಸ್ಥೆಯಾದರೂ ’ಜೀವದ ಬೆಳಕು’ ಬೆಳಗಿದ ನರಸಮ್ಮ ಅವರು ಸೋಬಾನೆ, ಜೋಗುಳದ ಪದ ಹಾಡುವುದರಲ್ಲೂ ನಿಸ್ಸೀಮರು. ಮಗನ ಜತೆ ತುಮಕೂರಿನಲ್ಲಿ ಈಗ ವಾಸಿಸುತ್ತಿದ್ದಾರೆ. 9ನೇ ತರಗತಿಯ ಪಠ್ಯಪುಸ್ತಕದಲ್ಲಿ ಇವರ ಸಾಧನೆಯ ಬಗ್ಗೆ ಪಾಠ ಇದೆ.

ಸಂತಸ ತಂದಿದೆ

ಅನಾರೋಗ್ಯದ ಕಾರಣ ನರಸಮ್ಮ ಅವರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪದ್ಮಶ್ರೀ ಗೌರವಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.

* ಇವನ್ನೂ ಓದಿ...

ರಾಜ್ಯದ 9 ಸಾಧಕರಿಗೆ ಪದ್ಮ ಪುರಸ್ಕಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry